ಸ್ಟೇಟಸ್ ಕತೆಗಳು (ಭಾಗ ೯೩೫)- ಭಾವ

ಸ್ಟೇಟಸ್ ಕತೆಗಳು (ಭಾಗ ೯೩೫)- ಭಾವ

ಮನೆ ಗೋಡೆಗಳು ಒಂದಷ್ಟು ಬಲಿಷ್ಠವಾಗಿದೆ. ವಿವಿಧ ರೀತಿಯ ಬಣ್ಣಗಳಿಂದ ತುಂಬಿಕೊಂಡು ಮಿನುಗುತ್ತಿದೆ. ಮನೆತನದ ಸ್ಥಿತಿ ಉತ್ತಮವಾಗಿದೆ ಅಂತಾನೆ ಹೇಳಬಹುದು. ಆ ದಿನ ಬೆಳಗ್ಗೆ ಮನೆಯಲ್ಲಿ ಒಂದಷ್ಟು ಜೋರು ಮಾತುಗಳು ಆರಂಭ ಆಗಿದೆ, ಪರೀಕ್ಷೆಯ ಫಲಿತಾಂಶದ ದಿನ ಇವರ ಗೆಳೆಯರ ಮಗನೊಬ್ಬ ಗಳಿಸಿದ ಅಂಕಗಿಂತ ತನ್ನ ಮಗನ ಅಂಕ ಕಡಿಮೆಯಾಗಿದೆ, ಪಕ್ಕದ ಮನೆಯವರ ಮಕ್ಕಳ ಭಾವಚಿತ್ರ ಪೇಪರ್ ನಲ್ಲಿ ರಾರಾಜಿಸುತ್ತಿದೆ, ಕೆಲವರ ಹೆತ್ತವರನ್ನು ಕರೆದು ಅವರ ಮಕ್ಕಳ ಅಂಕಗಳ ಕಾರಣಕ್ಕೆ ಸನ್ಮಾನಿಸುತಿದ್ದಾರೆ. ಇದ್ಯಾವ ಭಾಗ್ಯವೂ ಇವರಿಗೆ ಸಿಗುತ್ತಿಲ್ಲ. ಅದಕ್ಕಾಗಿ ಮಗನನ್ನು ವಿಪರೀತವಾಗಿ ದಂಡಿಸುತ್ತಿದ್ದಾರೆ. ಎಲ್ಲಾ ಮಾತುಗಳಿಂದ ಬೈದು ಆ ಮನಸ್ಸನ್ನು ಮುದ್ದೆ ಮಾಡುತ್ತಿದ್ದಾರೆ. ಅವನಿಗೆ ಎಲ್ಲೂ ಒಂದು ಕಡೆ ಗೌರವವೇ ಇಲ್ಲ ಬದುಕೇ ಹೋಯಿತು ಅನ್ನುವಂತಹ ಚಿಂತೆ ಅವರದು. ಅವರಿಗೆ ಒಂದು ದಿನವೂ ಆ ಹುಡುಗ ತನ್ನ ಮನೆಯ ಸುತ್ತಮುತ್ತ ಒಂದಷ್ಟು ಗಿಡ ಮರಗಳನ್ನ ಬೆಳೆಸುತ್ತಿರುವುದು ಕಾಣಲೇ ಇಲ್ಲ, ಮನೆಯಲ್ಲಿ ಅಪ್ಪ ಅಮ್ಮನ ಕೆಲಸಕ್ಕೆ ಪ್ರೀತಿಯಿಂದ ಸಹಾಯ ಮಾಡೋದು ಮರೆತೆ ಹೋಗಿದೆ, ಯಾರದೇ ಕಷ್ಟಕ್ಕೆ ತಕ್ಷಣ ಧಾವಿಸಿ ಬಂದು ಅವರ ಜೊತೆ ನಿಲ್ಲುವ ಧೈರ್ಯವು ಅವರಿಗೆ ನೆನಪಾಗ್ತಾ ಇಲ್ಲ, ಒಂದಷ್ಟು ಹೊಸ ಆಲೋಚನೆಗಳಿಂದ ಬೇರೆ ಬೇರೆ ಸ್ಪರ್ಧೆಗಳಲ್ಲಿ ಬಹುಮಾನ ಪಡೆದದ್ದು ಗೊತ್ತಿಲ್ಲ ,ಅವರ ಅಜ್ಜ ಮಾಡುತ್ತಿದ್ದ ಇಟ್ಟಿಗೆಯ ಕೆಲಸವನ್ನ ಈತ ಮುಂದುವರಿಸಿಕೊಂಡು ಅದನ್ನು ಮುಂದೊಂದು ದೊಡ್ಡ ಕಂಪನಿ ಮಾಡಬೇಕೆಂದು ಕನಸು ಹೊತ್ತದ್ದು ಅವರಿಗೆ ತಿಳಿಯಲೇ ಇಲ್ಲ, ದುರಭ್ಯಾಸ ಇಲ್ಲದೆ ಶುದ್ಧವಾಗಿದ್ದು ಸತ್ಯವನ್ನೇ ನುಡಿಯುವ ಅವನ ಮನಸ್ಸು ಅವರಪ್ಪನಿಗೆ ಅರ್ಥವಾಗಲೇ ಇಲ್ಲ. ಯಾಕೆಂದರೆ ಈ ಯಾವುದೇ ವಿಚಾರವನ್ನು ಪತ್ರಿಕೆಯಲ್ಲಿ ಹಾಕುವವರಿಲ್ಲ. ಎಲ್ಲರ ಮುಂದೆ ಹೆಮ್ಮೆಯಿಂದ ಜೋರಾಗಿ ಹೇಳುವವರಿಲ್ಲ. ಹಾಗಾಗಿ ಆತನ ಅಂಕದ ಮುಂದೆ ಇದೆಲ್ಲವೂ ಮಾಯವಾಗಿ ಹೋಯಿತು. ಆದರೆ ಮಗುವಿನ ಮನಸ್ಸಿನಲ್ಲಿ ಎಲ್ಲ ಕೆಲಸಗಳಿಗಿಂತ ಅಂಕವೇ ಮುಖ್ಯ ಅನ್ನುವ ಭಾವ ಗಟ್ಟಿಯಾದರೆ ಪರಿಸ್ಥಿತಿ ಏನು?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ