ಸ್ಟೇಟಸ್ ಕತೆಗಳು (ಭಾಗ ೯೩೬)- ಹೇಳಿದಂತೆ ಮಾಡ

ಸ್ಟೇಟಸ್ ಕತೆಗಳು (ಭಾಗ ೯೩೬)- ಹೇಳಿದಂತೆ ಮಾಡ

ಅವನೊಬ್ಬ ಅದ್ಭುತ ಪರಿಸರ ಪ್ರೇಮಿ. ತನ್ನ ಮನೆಯ ಸುತ್ತಮುತ್ತ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದವ, ಪ್ರತಿದಿನವೂ ತಾ ಮಾಡುವ ಕೆಲಸವನ್ನ ತನ್ನ ಮೊಬೈಲ್ ನಲ್ಲಿ, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಈ ವಿಚಾರಗಳನ್ನು ಹರಡುತ್ತಿದ್ದವ. ಸಿಕ್ಕಿದ ಕಡೆಗಳೆಲ್ಲ ಕಡೆ ಹೋಗಿ ಪರಿಸರನ್ನ ಉಳಿಸುವುದರ ಬಗ್ಗೆ ಮಾತುಗಳನ್ನಾಡುತ್ತಿದ್ದವ. ಒಂದಷ್ಟು ಸನ್ಮಾನ ಬಿರುದುಗಳನ್ನ ಸಂಪಾದಿಸುತ್ತ ಹಾಗೆಯೇ ಬೆಳೆಯುತ್ತಿದ್ದವನಿಗೆ ಹೊಸ ಹೊಸ ಆಸೆಗಳು ಮೂಡಲಾರಂಭಿಸಿದವು. ತನ್ನ ಮನೆಯ ಅಕ್ಕಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಜನರಿಗೆ ವಿವಿಧ ರೀತಿಯ ಗಿಡಗಳನ್ನು ಮಾರಾಟ ಮಾಡುವುದೆಂದು ತೀರ್ಮಾನ ಮಾಡಿಕೊಂಡ. ಬದುಕಿಗೊಂದು ದಾರಿ ಆಗಬೇಕು ಅನ್ನುವ ಕಾರಣಕ್ಕೆ ಎಲ್ಲಾ ವಿಧದ ಕ್ರೋಟನ್ ಗಿಡಗಳನ್ನು ತರಿಸಿ ಅವುಗಳನ್ನ ಅಲಂಕರಿಕವಾಗಿ ಜೋಡಿಸಬಹುದು ಎಂದುಕೊಂಡ. ತನ್ನ ಕೆಲಸಕ್ಕೆ ತೊಂದರೆ ಆಗುತ್ತೆ ಎನ್ನುವ ಕಾರಣಕ್ಕೆ ಮನೆಯ ಹಿಂದಿನ ಎಲ್ಲ ಮರಗಳನ್ನ ಕಡಿದು ಸಣ್ಣದಾದ ಹಸಿರಿನ ತೋಟ ಒಂದನ್ನ ನಿರ್ಮಾಣ ಮಾಡಿಯೇ ಬಿಟ್ಟ. ಮನೆ ಮುಂದೆ ಸಣ್ಣದಾಗಿ ಹರಿಯುತ್ತಿದ್ದ ನೀರಿನ ತೊರೆಯನ್ನ ಮುಚ್ಚಿ ಹಾಕಿ ತನ್ನಂಗಳವನ್ನ ವಿಸ್ತರಿಸಿಕೊಂಡಿದ್ದ. ಮನೆ ಹಿಂದೆ ಪರಿಸರದ ಚಿತ್ರವನ್ನು ಬಿಡಿಸುವುದಕ್ಕೆ ಒಂದಷ್ಟು ಸ್ಥಳಾವಕಾಶದ ಕೊರತೆ ಇದೆ ಎನ್ನುವ ಕಾರಣಕ್ಕೆ ಹಬ್ಬಿನಿಂತಿದ್ದ ಮನೆ ಅಡುಗೆಗೆ ಪೂರಕವಾಗಿದ್ದ ಗಿಡಗಳನ್ನೆಲ್ಲ ಕಡಿದು ಹಾಕಿದ್ದ. ಎಷ್ಟು ಕೆಲಸವನ್ನ ಮಾಡಿಯೂ ಆತ ಮತ್ತೆ ಊರು ತಿರುಗುತ್ತಿದ್ದಾನೆ .ಪರಿಸರ ಉಳಿಸುವುದರ ಬಗ್ಗೆ ದೊಡ್ಡ ಭಾಷಣವನ್ನು ಕೊರೆಯುತ್ತಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ