ಸ್ಟೇಟಸ್ ಕತೆಗಳು (ಭಾಗ ೯೪೧)- ಸಂಭ್ರಮ

ಸ್ಟೇಟಸ್ ಕತೆಗಳು (ಭಾಗ ೯೪೧)- ಸಂಭ್ರಮ

ಅಕ್ಕ ಪಕ್ಕದ ಮನೆಗಳು ಅವರವರ ಬದುಕು ಅವರವರ ದಾರಿಯಲ್ಲಿ ಸಾಗುತ್ತಿದೆ. ಅಕ್ಕಪಕ್ಕ ನೋಡಿ ಜೀವನ ಸಾಗಿಸುವವರು ಅವರಲ್ಲ. ಒಂದು ಮನೆ ಸ್ವಲ್ಪ ದೊಡ್ಡದಾಗಿ ಒಂದಷ್ಟು ಶ್ರೀಮಂತರಂತೆ ಕಾಣುತ್ತಿದ್ದಾರೆ. ಪಕ್ಕದ ಮನೆಯ ಪರಿಸ್ಥಿತಿ ಆ ದಿನದ ದುಡಿಮೆಯೇ ಅವರ ಅನ್ನದ ಬಟ್ಟಲನ್ನ ರೂಪಿಸುತ್ತದೆ. ಆ ದಿನ ಶ್ರೀಮಂತರ  ಮನೆಯಲ್ಲಿ ಮದುವೆ ವಾರ್ಷಿಕೋತ್ಸವದ ಸಮಾರಂಭ. ದೊಡ್ಡ ಶಾಮಿಯಾನುಗಳನ್ನ ಹಾಕಿ ದೂರದೂರಿನ ವಿಶೇಷ ಅಡುಗೆಯವರನ್ನು ಕರೆಸಿ ಹಲವಾರು ಬಗೆಯ ಭಕ್ಷ ಭೋಜನಗಳನ್ನ ಬಡಿಸಿ ಧ್ವನಿ ವರ್ಧಕಗಳನ್ನ ಅಳವಡಿಸಿ ನೃತ್ಯ ಹಾಡು ಕುಡಿತಗಳ ಅಮಲಿನಲ್ಲಿ ಬಂದವರು ಎಲ್ಲರೂ ಫೋಟೋಗಳನ್ನು ತೆಗೆದುಕೊಂಡು ಅವರವರ ಮನೆಗೆ ನಡೆದೇಬಿಟ್ರು. ಸಂಭ್ರಮ ಹಾಗೆ ಮುಗಿದು ಹೋಯಿತು. ಪಕ್ಕದ ಮನೆಯಲ್ಲೂ ಸಂಭ್ರಮ. ಹೊರಗಡೆಯಿಂದ ಬರುವವರು ಯಾರು ಇಲ್ಲ. ಗೆಳೆಯರು ಕುಟುಂಬಸ್ಥರು ಮನೆ ಅಂಗಳದಲ್ಲಿ ಜೊತೆಯಾದವರು, ಪ್ರೀತಿಯಲ್ಲಿ ಕುಳಿತು ಮನೆಯ ಅಂಗಳದಲ್ಲಿ ದಿನವೂ ಧರಿಸುವ ಬಟ್ಟೆಗಳನ್ನೇ ಧರಿಸಿ ಹಾರಗಳನ್ನು ಬದಲಾಯಿಸಿಕೊಂಡು ನೆನಪು ಮೂಟೆಗಳನ್ನು ಬಿತ್ತಿ ಒಬ್ಬರಿಗೊಬ್ಬರು ಹಂಚಿಕೊಂಡರು. ಬಂದವರ ಮುಂದೆ ತಮ್ಮ ಮನಸ್ಸಿನ ಭಾವನೆಗಳನ್ನು ಬಿಚ್ಚಿಟ್ಟರು. ಎಲ್ಲರೂ  ಅವರವರು ಕಂಡುಕೊಂಡ ಇವರ ಕಥೆಗಳನ್ನ ಹೇಳಿದರು. ಮನೆಯೊಳಗೆ ತಯಾರಾದ ಆಹಾರವೇ ಎಲ್ಲರ ಬಟ್ಟಲಲ್ಲೂ ಕುಣಿಯುತ್ತಿತ್ತು. ಹಾಗೆ ತಿಂದು ಹೊರಟವರು ಆಶೀರ್ವಾದ ಮಾಡಿ ಹಾರೈಸಿ ಮುಂದುವರೆದು ಬಿಟ್ರು. ಸಂಭ್ರಮ ಎರಡೂ ಕಡೆ ಇತ್ತು ಕೆಲವು ತೋರಿಕೆಗಾದ್ರೆ ಕೆಲವು ಮನಸ್ಸಿಗೆ ನಾಟುತ್ತವೆ. ಆಚರಿಸುವ ಸಂಭ್ರಮದ ಕಾರಣದಿಂದ ಆಚರಿಸುವ ವಿಧಾನಗಳು ಬದಲಾಗುತ್ತವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ