ಸ್ಟೇಟಸ್ ಕತೆಗಳು (ಭಾಗ ೯೪೪)- ಗೊಂಬೆ

ಸ್ಟೇಟಸ್ ಕತೆಗಳು (ಭಾಗ ೯೪೪)- ಗೊಂಬೆ

ಸಣ್ಣದಾದ ಅಳುವಿನ ಸ್ವರ ಕೇಳುತ್ತಿದೆ. ಒಳಗೆ ಮನುಷ್ಯರ ಓಡಾಟವಿಲ್ಲ. ಅಳುವವರು ಯಾರೆಂದು ತಿಳಿಯುತ್ತಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತುಂಬಾ ನೋವಿನ ಕೂಗು ಅದು. ಇಷ್ಟು ದಿನ ಜೊತೆಗಿದ್ದು ಈಗ ತೊರೆದು ಹೋಗುವ ಮನಸ್ಥಿತಿಯ ಯಾತನೆಯ ಅಳುವಿನಂತೆ ಬಾಸವಾಗುತ್ತಿದೆ. ಅಳುವ ಹುಡುಕ ಹೊರಟವನಿಗೆ ಮನೆಯ ಮೂಲೆಯಲ್ಲಿ ದೂಳು ತಿನ್ನುತ್ತಾ  ಬಿದ್ದಿದ್ದ ಹಲವಾರು ಗೊಂಬೆಗಳ ಒಳಗಿನಿಂದ ಹೊರಟ ಸ್ವರವೆಂದು ಅರ್ಥವಾಯಿತು. ವಿಶೇಷ ಅನ್ನಿಸಿ ಅವುಗಳ ಮಾತು ಕೇಳಲಾರಂಬಿಸಿದೆ. ಇಷ್ಟು ದಿನ ಅಪ್ಪಿ ಮುದ್ದಾಡಿದವರು, ನಾನೇ ಸರ್ವಸ್ವ ಎಂದು ಎಲ್ಲರೆದುರು ಜಂಭ ಕೊಚ್ಚಿಕೊಂಡವರು, ನನ್ನ ಬಿಟ್ಟು ಕ್ಷಣವೂ ಇಲ್ಲದವರು, ಎಲ್ಲೆಲ್ಲಿಂದಲೂ ನಮ್ಮೆಲ್ಲರನ್ನು ಆಯ್ದು ಹುಡುಕಿ ತಂದು ಮುದ್ದು ಮಾಡಿದವರು, ಆದರೆ ಈಗ ನಾವ್ಯಾರೂ ಅವರಿಗೆ ಬೇಡವಾಗಿದ್ದೇವೆ. ಕೈಯಲ್ಲೊಂದು ಮೊಬೈಲ್ ಹಿಡಿದು ಅದರೊಳಗೆ ಮುಳುಗಿ ಹೋಗಿದ್ದಾರೆ.  ನಾವು ತಿರಸ್ಕೃತಗೊಂಡಿದ್ದೇವೆ. ಅವರು ಹಿಡಿದಿರುವ ವಸ್ತು ಅವರನ್ನು ಕೊಲ್ಲುತ್ತಿದೆ ಅಂದರೂ ಅವರಿಗೆ ಭಯವಿಲ್ಲ. ನಾವೇನೂ ತೊಂದರೆ ಮಾಡಿದವರಲ್ಲ. ಆದರೆ ನಮ್ಮನ್ಯಾಕೆ ದೂರ ಇಟ್ಟಿದ್ದೀರಾ. ಪ್ಲೀಸ್ ಹತ್ತಿರ ಸೇರಿಸಿ... ನೋವು ಹೆಚ್ಚಾಗಿದೆ, ಕೇಳುವವರಿಲ್ಲದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ