ಸ್ಟೇಟಸ್ ಕತೆಗಳು (ಭಾಗ ೯೪೯)- ಹನಿ 2
ಇವತ್ತಿನ ಕಥೆ ಓದುವವರು ನಿನ್ನೆಯ ಕಥೆಯನ್ನು ಒಮ್ಮೆ ಓದ್ಕೊಂಡು ಬನ್ನಿ. ಅದರ ಮುಂದುವರಿದ ಭಾಗ ನಿಮಗೆ ಹೇಳ್ತಾ ಹೋಗ್ತೇನೆ. ನೆನ್ನೆ ಮಳೆರಾಯನಲ್ಲಿ ಒಂದು ಬೇಡಿಕೆ ಇಟ್ಟಿದ್ದೆ. ನಾನು ಒಡಂಬಡಿಕೆಯ ಪತ್ರ ರವಾನಿಸಿದ್ದೆ. ಅದನ್ನ ದೊಡ್ಡವರು ಯಾರೋ ನೋಡಿ ಮಳೆರಾಯನಲ್ಲಿ ಒಂದಷ್ಟು ಮಾತುಕತೆ ನಡೆಸಿದ್ದರು. ಇವತ್ತು ಆ ಮಳೆರಾಯ ನನ್ನ ಮುಂದೆ ನಿಂತು ಅವನ ಯೋಚನೆಗಳನ್ನು ನನ್ನ ಮುಂದೆ ಇಡಲಾರಂಭಿಸಿದ. ನೀನು ಮಾತು ಕೇಳುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಇಂತಹ ಒಡಂಬಡಿಕೆಗಳನ್ನ ಸಾವಿರ ಸಲ ಮಾಡಿ ಬಂದಿದ್ದೀಯಾ? ಆದರೆ ಒಂದು ಸಲವು ಅದನ್ನ ನೆರವೇರಿಸಿದವನು ನೀನಲ್ಲ. ಪ್ರತಿಸಲನೂ ತೊಂದರೆ ಆದಾಗ ನಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಅಂತ ದೊಡ್ಡ ದೊಡ್ಡ ಪಟ್ಟಿಗಳನ್ನು ಹೇಳಿ ನನ್ನಲ್ಲಿ ಅತ್ತು ಕರೆದು ನನ್ನನ್ನ ಒಲಿಸಿಕೊಂಡು ನಿನ್ನೂರಿಗೆ ಕರೆದುಕೊಂಡು ಹೋಗ್ತೀಯಾ. ಆದರೆ ನಾನು ಬಂದ ತಕ್ಷಣ ನನ್ನನ್ನು ಅಲ್ಲಿ ಶೇಖರಿಸುವ ಯಾವ ಯೋಜನೆಯನ್ನು ನೀನು ಮಾಡುವುದಿಲ್ಲ. ಹೀಗಿದ್ದಾಗ ನಾನು ನಿನಗೆ ಕೈ ಕೊಡುವ ಪರಿಸ್ಥಿತಿ ನಿರ್ಮಾಣ ಆಗುತ್ತೆ .ಇದರಲ್ಲಿ ನನ್ನ ತಪ್ಪಿಲ್ಲ ನನಗಂತೂ ನಿನ್ನ ಮೇಲೆ ನಂಬಿಕೆ ಇಲ್ಲ. ನಂಬಿಕೆ ಬರಿಸುವ ಕೆಲಸ ಮಾಡಿದರೆ ನಾನು ಉಳಿಯುವ ಯೋಚನೆ ಮಾಡುತ್ತೇನೆ. ನಿನ್ನ ಕಡೆಗೆ ಬರುವ ಚಿಂತನೆಯನ್ನು ಮಾಡುತ್ತೇನೆ. ಮೊದಲು ಅದನ್ನು ನಿನ್ನ ತಪ್ಪನ್ನು ತಿದ್ದುಕೋ. ಆಗ ನಾನು ಬಂದರೂ ಬರಬಹುದು. ಹೀಗೆ ಮಳೆರಾಯ ಮಾತನಾಡಿದ್ದ. ಅವನ ಯೋಚನೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಇನ್ನೇನು ಮಾಡಬಹುದು ನೀವೇ ಹೇಳಿ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ