ಸ್ಟೇಟಸ್ ಕತೆಗಳು (ಭಾಗ ೯೪) - ಬೂದಿ
ಅವರವರು ಅವರ ಧರ್ಮ ಕರ್ಮಗಳನ್ನು ನಿಯಮದಿಂದ ಮಾಡಿದರೆ ಯಾರಿಗೂ ನೋವಿಲ್ಲ. ಆದರೆ ನನಗೇಕೋ ನನ್ನ ಕಾರ್ಯದ ಮೇಲೆ ಇವತ್ತು ಅಸಹ್ಯ ಹುಟ್ಟಿದೆ. ನಾ ಆ ಕಾರ್ಯ ಕೈಗೊಳ್ಳಬಾರದಿತ್ತು. ನಿಮಗೆ ಅರ್ಥವಾಗುತ್ತಿಲ್ಲ? ಅಲ್ವಾ. ಸರಿ ವಿವರಿಸುತ್ತೇನೆ. ನಾನು ಧಗಿಸೋ ಜೀವ. ಅವಕಾಶ ಸಣ್ಣದಾದರೂ ನನ್ನ ಪ್ರತಾಪದ ಶಾಖ ಬೆಳೆಯುತ್ತಲೇ ಇರುತ್ತದೆ. ಅವರ ಮನೆಯ ಒಲೆಯಲ್ಲಿ ಅನ್ನ ಬೆಸುತ್ತಿದ್ದೆ. ಮನೆ ಹೊರಗಡೆ ಮಾತಿನ ಕಿಚ್ಚು ಉರಿಯಲಾರಂಭಿಸಿತ್ತು. ನಾನಿದ್ದ ಮನೆಯೂ ಮಹಲ್ ಅಲ್ಲ. ಇಟ್ಟಿಗೆಯ ಗೋಡೆಯ ಮೇಲೆ ಹಂಚುಗಳು ಮಲಗಿ ಒಂದು ಚೂರು ಆಶ್ರಯ ನೀಡಿದೆ . ಮನೆಯಲ್ಲಿರೋದು ಗಂಡ-ಹೆಂಡತಿ ಇಬ್ಬರು ಮಕ್ಕಳು. ಆದರೆ ಈಗ ಜಗಳದ ಜಟಾಪಟಿಯ ಸಂದರ್ಭ ಹೆಣ್ಣುಮಕ್ಕಳು ಮನೆಯಲ್ಲಿಲ್ಲ. ಅಪ್ಪ ಅಮ್ಮ ಇಬ್ಬರೂ ರೋಸಿಹೋಗಿದ್ದಾರೆ. ಯಾರದು ಹಣವಂತನ ಒತ್ತಾಯಕ್ಕೆ ಇವರ ಕೈಯಲ್ಲಿದ್ದ ಜಾಗ ಅತಿಕ್ರಮಣವಾಗಿ ಇನ್ನೊಬ್ಬರಿಗೆ ಒತ್ತುವರಿಯಾಗಿದೆ. ಪೊಲೀಸ್ ಸ್ಟೇಷನ್ ಇವರ ಹೆಜ್ಜೆಗೆ ಸಿಗುತ್ತಿಲ್ಲ. ನ್ಯಾಯ ಅನ್ನೋದು ಆಕಾಶಕ್ಕೆ ಏರುತ್ತಿದೆ. ಬಿಡುವಿಕೆಯ ಕಣ್ಣೀರು ಪಾದಗಳನ್ನು ನೆನಿಸಿದರೂ ತಳ್ಳುವಿಕೆ ಕೊನೆಯಾಗಲಿಲ್ಲ. ಎಲ್ಲದಕ್ಕೂ ಮುಕ್ತ ಎಂಬಂತೆ ಮನೆಯೊಳಗಿಂದ ಸೀಮೆಎಣ್ಣೆ ಹೊರಗೆ ಬಂತು. ಇಬ್ಬರು ತಬ್ಬಿಕೊಂಡು ತಮ್ಮ ಮೇಲೆ ಸುರಿದುಕೊಂಡರು. ಲೈಟರ್ ಒಳಗಿರುವ ನನ್ನ ಕರೆದರು. ನಾ ಮನಸ್ಸಿಲ್ಲದಿದ್ದರೂ ಕಾರ್ಯಾರ್ತಿಯಾಗಿ ಹೊರಬಂದೆ. ಸುಡುವುದು ಒಂದೇ ಕೆಲಸವಾಗಿತ್ತು. ಇಷ್ಟುದಿನದ ನೋವಿನ ನಡುವೆ ನನ್ನ ಬಿಸಿ ಅವರನ್ನು ಮುಟ್ಟಲಿಲ್ಲ. ಅರಚಿ ಅಲ್ಲೇ ಕುಸಿದು ಬಿದ್ದರೂ ಒಂದಷ್ಟು ಕ್ಯಾಮರ ಕನಿಕರ ದೃಷ್ಟಿಗಳು ನೋಡಿದರೆ ಹೊರತು ಹತ್ತಿರ ಸುಳಿಯಲಿಲ್ಲ. ಮಕ್ಕಳಿಬ್ಬರ ಕಣ್ಣುಗಳೊಳಗೆ ನಾ ಮಿಂಚುತ್ತಿದೆ. ಬೆಂಕಿಯ ಕಣ್ಣೀರು ಇಳಿಯುತ್ತಿತ್ತು. ನಾನು ಸುಡುತ್ತಿದ್ದೆ ಜೀವಂತ ನೋವುಗಳನ್ನು. ಬೂದಿ ಉಳಿಯಿತು. ಮಕ್ಕಳಿಬ್ಬರ ಹೊರತು ಅಲ್ಲಾರಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ