ಸ್ಟೇಟಸ್ ಕತೆಗಳು (ಭಾಗ ೯೫೦)- ದಾರಿಗ
ನಿನಗೆ ತಲುಪಬೇಕಾದ ವಿಳಾಸ ಗೊತ್ತಿಲ್ಲ. ಆದರೆ ಆ ಊರಿನ ಹೆಸರು ಗೊತ್ತು. ಅಂತಹ ಒಬ್ಬರನ್ನ ನೇಮಿಸಿದ್ದಾರೆ ಅವರು ನಿನ್ನ ಬಳಿ ಮಾತನಾಡಿದ ಹಾಗೆ ನಿನಗೆ ಅರಿವಾದದ್ದು ಅವರಿಗೆ ದಾರಿಯ ಬಗ್ಗೆ ಸಂಪೂರ್ಣ ಜ್ಞಾನವಿದೆ ಅಂತ. ಹಾಗಾಗಿ ನೀನು ಅವರನ್ನು ಅವರು ಹೇಳಿದ ಕೆಲಸವನ್ನ ಚಾಚು ತಪ್ಪದೇ ಮಾಡ್ತಾ ಇದ್ದೀಯಾ. ಅವರನ್ನು ನಿನ್ನ ನಾಯಕ ಅಂತಾನು ಅಂದುಕೊಂಡಿದ್ದೀಯಾ. ಹಾಗಾಗಿ ಸಾಗುವ ಕೆಲಸ ಆರಂಭವಾಗಿದೆ. ಹಾಗೆ ಮುಂದೆ ಸಾಗುತ್ತಾ ಹೋದವನಿಗೆ ದಾರಿ ತಪ್ಪಿ ಎಷ್ಟೇ ದೂರ ಬಂದರೂ ನಿನಗೆ ಧಾರಿ ತಪ್ಪಿದೆ ಅನ್ನೋದು ಗೊತ್ತಾಗ್ಲೇ ಇಲ್ಲ ಯಾಕೆಂದರೆ ನಿನಗೆ ಆ ದಾರಿಯ ಪರಿಚಯವಿರಲಿಲ್ಲ. ಒಂದಷ್ಟು ದೂರ ತಲುಪಿದ ನಂತರ ಅದೇ ದಾರಿಯಲ್ಲಿ ಸಾಗಬೇಕಾದವರು ಯಾರೂ ನಿನ್ನ ಜೊತೆಗೆ ಇಲ್ಲದ ಕಾರಣ ನೀನು ದಾರಿ ತಪ್ಪಿದಿಯ ಅನ್ನೋದು ನಿನ್ನ ಅರಿವಿಗೆ ಬಂತು. ಆನಂತರ ತಿಳಿದವರನ್ನು ಹುಡುಕಿಕೊಂಡು ಹೋಗಿ ಅವರನ್ನು ಹಿಂಬಾಲಿಸಿ ನಿನಗೆ ಬೇಕಾದ ವಿಳಾಸವನ್ನು ತಲುಪಿದ್ದೀಯಾ. ಇಲ್ಲಿ ತಪ್ಪು ನಿನ್ನದಲ್ಲ. ದಾರಿ ತೋರಿಸಬೇಕಾದವನು ಸರಿಯಾದ ವಿಳಾಸವನ್ನು ತಿಳಿದುಕೊಂಡಿರಬೇಕು. ಇಲ್ಲವಾದರೆ ನೀನು ಗುರಿ ಸೇರಿಸುವುದಿಲ್ಲ ತಾನು ಗುರಿ ಮುಟ್ಟುವುದಿಲ್ಲ. ಹಾಗಾಗಿ ದಾರಿ ಸಾಗುವಾಗ ಆ ದಾರಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಂಡು ಜೊತೆಗೆ ದಾರಿ ತೋರಿಸುವವನಿಗೂ ದಾರಿಯ ಬಗ್ಗೆ ಮಾಹಿತಿ ಇರುವುದನ್ನು ಖಚಿತಪಡಿಸಿಕೊಂಡು ಮುಂದುವರೆದರೆ ಒಳ್ಳೆಯದು. ಇಷ್ಟೆಲ್ಲ ದೊಡ್ಡ ಮಾತುಗಳನ್ನು ಹೇಳುವುದಕ್ಕ ಕಾರಣ ನೀನಿನ್ನು ಶಿಕ್ಷಣವನ್ನ ಮುಗಿಸಿ ಬದುಕಿನ ಕಡೆಗೆ ಕಾಲಿಡುತ್ತಾ ಇದ್ದೀಯಾ ಹಾಗಿರುವಾಗ ದಾರಿ ತೋರಿಸ್ತೇನೆ ಅಂತ ಬರುವವರು ನೂರು ಜನ ಕಣ್ಣ ಮುಂದೆ ಇರುತ್ತಾರೆ. ಯಾರನ್ನು ಆರಿಸಿಕೊಳ್ಳಬೇಕು ಅನ್ನುವ ಎಚ್ಚರ ನಿನ್ನಲ್ಲಿರಲಿ ಎನ್ನುವುದಕ್ಕೆ ಈ ಮಾತನ್ನು ಹೇಳಿದೆ. ಹೀಗಂದ ಲೋಕೇಶ್ ಮಾಷ್ಟ್ರು ಸುಮ್ಮನಾಗಿ ಬಿಟ್ರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ