ಸ್ಟೇಟಸ್ ಕತೆಗಳು (ಭಾಗ ೯೫) - ನಾಟಕೀಯ ಬದುಕು

ಸ್ಟೇಟಸ್ ಕತೆಗಳು (ಭಾಗ ೯೫) - ನಾಟಕೀಯ ಬದುಕು

ಸುತ್ತ ಒಂದು ಕಿಲೋಮೀಟರ್ ಯಾವುದೇ ಮನೆ ಇಲ್ಲ. ಕಾಡಿನ ನಡುವೆ ಅದೊಂದೇ ಬಂಗಲೆ. ಅರಚಿ ಕಿರುಚಿದರು ಪಕ್ಕ ಯಾರೂ ಸುಳಿಯೋದಿಲ್ಲ. ಆಗಲೇ ಮೂರು ಜನ ಮುಸುಕುಧಾರಿಗಳು ಒಬ್ಬನನ್ನು ಎಳೆದುತಂದು ಮನೆಯೊಳಕ್ಕೆ ನಡೆದರು. ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಮರದ ಕುರ್ಚಿಗೆ ಬಿಗಿದು ಬಾಯಿಗೆ ಬಟ್ಟೆ ತುರುಕಿ ಹೊರನಡೆದರು.

" ರಾಜು ಅವನಿಗೆ ಅನುಮಾನ ಬಂದಿಲ್ಲ  ತಾನೇ "

" ಇವತ್ತು ಅವನ ಬರ್ತಡೇ ತುಂಬಾ ಸರ್ಪ್ರೈಸ್ ಆಗಿರಬೇಕು" 

"ಲೋ ಪಾಪ ಕಣೋ ತುಂಬ ಹೆದರಿದ್ದಾನೆ, ಬೇಗ ರಿವಿಲ್ ಮಾಡೋಣ"

" ಹೂ ಸರಿ ಹೋಗಿ ಕೇಕ್ ತರೋಣ" 

" ಮನೇಲಿ "

"ನಿನ್ನ ಅಪ್ಪ ಅಮ್ಮ ಬಾಂಬೆ ಹೋಗಿದ್ದಾರೆ ಬರೋಕೆ ತಿಂಗಳಾಗುತ್ತೆ, ನಾವೀಗಲೇ ಬರೋದಿಲ್ಲವಾ"

ಬೈಕ್ ಹೊಗೆ ಉಗುಳುತ್ತಾ ಡಾಂಬಾರನ್ನ ಪರಚುತ್ತಾ ಸಾಗುತ್ತಿತ್ತು. ಗಾಳಿಗೆ ಕೂದಲು ಸರಿ ಮಾಡುತ್ತಾ ಎಕ್ಸಲೇಟರ್ ತಿರುವುತ್ತಿದ್ದ. ವೇಗದ ಮಿತಿ ಮೀರಿತ್ತು. ನಿಯಂತ್ರಣ ತಪ್ಪಿತು. ಎದುರಿನಿಂದೊಂದು ಬಸ್. ಚಕ್ರ ತಿರುಗುತಿತ್ತು ದೇಹದೊಳಗಿನ ಮಾಂಸದ ತುಂಡುಗಳೆಲ್ಲಾ ರಕ್ತದ ಜೊತೆ ಬೆರೆತು ಅಲ್ಲಲ್ಲಿ ಚಲನೆಯಿಲ್ಲದೆ ಬಿದ್ದಿದ್ದವು. ಅಮ್ಮಾ ಅನ್ನುವ ಸಮಯವೇ ಸಿಗದೇ ಮರಣ ಪ್ರಾಪ್ತಯಾಗಿತ್ತು. 

ಆ ಕಾಡಿನ ನಡುವೆ ಕತ್ತಲ ಕೋಣೆಯಲ್ಲಿ ಸಣ್ಣ ಅರಚಾಟ ಕೇಳುತ್ತಿತ್ತು. ಅದು ಹೊರಗೆ ತಲುಪುತ್ತಿಲ್ಲ. ಅಲ್ಲೊಬ್ಬನಿದ್ದಾನೆ ಎನ್ನೋ ವಿಚಾರ ಗೊತ್ತಿರುವವರು ಮಾಂಸದ ತುಂಡುಗಳಾಗಿ ವಿಭಾಗವಾಗಿದ್ದಾರೆ. ಸಂಭ್ರಮವೊಂದು ಸಾವಿನ ಕದವ ಬಡಿದು ಒಳನುಗ್ಗಿತ್ತು.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ