ಸ್ಟೇಟಸ್ ಕತೆಗಳು (ಭಾಗ ೯೬೯)- ಪಶ್ಚಾತ್ತಾಪ

ಸ್ಟೇಟಸ್ ಕತೆಗಳು (ಭಾಗ ೯೬೯)- ಪಶ್ಚಾತ್ತಾಪ

ಆ ಮನೆ ಮಗನಿಗೆ ಆಗಾಗ ಅನಿಸುತ್ತಿತ್ತು. "ಅಲ್ಲಾ ನಾವು ಕೇಳಿದ್ದನ್ನ ಯಾವುದನ್ನೂ ಕೂಡ ಈ ಅಪ್ಪ ಅಮ್ಮ ಕೊಡಿಸುವುದಿಲ್ಲ. ಎಲ್ಲದಕ್ಕೂ ಅವರಿಷ್ಟದಂತೆ ನಮ್ಮನ್ನು ನಡೆಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಿದ್ದಾಗ ನಮ್ಮ ಜೀವನದಲ್ಲಿ ಅವರು ಮಾಡಿದ್ದೇನು? ನಮ್ಮ ಶಾಲೆಯ ಫೀಸ್ ಕಟ್ಟೋದು, ಬಟ್ಟೆ ಕೊಡಿಸೋದು, ತಿಂಡಿ ಕೊಡೋದು ಇದು ಮಾತ್ರ ಅವರ ಸಾಧನೆನಾ? ಅಪ್ಪ ಅಮ್ಮನನ್ನು ಎದುರಿಸಿ ಮಾತನಾಡಬೇಕು ಅಂತ ರಮೇಶ ತೀರ್ಮಾನ ಮಾಡಿ ಇಟ್ಟುಕೊಂಡಿದ್ದ. ಅವನ ಮುಖದಲ್ಲಿದ್ದ ಸಿಟ್ಟಿನ ಭಾವ ಗಮನಿಸಿದ ಇತಿಹಾಸ ಮೇಷ್ಟ್ರು ವೇದವ್ಯಾಸರು ಕೇಳೇಬಿಟ್ಟರು "ಏನಿವತ್ತು ರಮೇಶ ತುಂಬಾ ಸಿಟ್ಟಿನಲ್ಲಿ ಇರೋ ಹಾಗಿದೆ" "ಹೌದು ಸರ್ ಅಂತ ವಿಷಯವನ್ನು ಅವರ ಮುಂದೆ ಹೇಳಿಬಿಟ್ಟ ,ಅದಕ್ಕೆ ಮೇಷ್ಟ್ರು ರಮೇಶನ್ನ  ಸ್ವಲ್ಪ ಹೊತ್ತು ಕುರ್ಚಿ ಮೇಲೆ ಕುಳ್ಳಿರಿಸಿ ಮಾತನಾಡುತ್ತಾ ಕುಡಿಯೋದಕ್ಕೆ ನೀರು ಕೊಟ್ಟರು. ಸ್ವಲ್ಪ ಸಮಯದ ನಂತರ ಕುರ್ಚಿಯನ್ನ ತೆಗೆದು ಕುರ್ಚಿಯಲ್ಲಿ ಕುಳಿತ ಹಾಗೆ ಕುಳಿತುಕೊಳ್ಳುವುದಕ್ಕೆ ಹೇಳಿದರು. ರಮೇಶನಿಗೆ ಸ್ವಲ್ಪ ಇರಿಸುಮುರಿಸಾದರು ಹಾಗೆ ಮಾಡಿ ನೋವಿನಿಂದ ಎದ್ದು ನಿಂತ. ವೇದವ್ಯಾಸರು ಹೇಳಿದರು ನೀನಾಗ ಕುಳಿತ ಕುರ್ಚಿ ಇದೆಯಲ್ಲ , ಶಾಲೆಯಲ್ಲಿರುವ ಬೆಂಚು, ಆಟವಾಡಲು ಮನೆಯಲ್ಲಿರುವ ಒಂದಷ್ಟು ವಸ್ತುಗಳು ನಿನ್ನ ಪ್ರತೀ ಕ್ಷಣವನ್ನು ದಾಟಿಸುತ್ತಿರುವ ಪ್ರತಿ ಸಣ್ಣ ವಸ್ತುಗಳು ಕೂಡ ನಿನ್ನ ತಂದೆ ತಾಯಿಯ ಸಂಪಾದನೆ. ನಿನ್ನ ಇವತ್ತಿನ ಬದುಕಿಗೆ ಕಾರಣ. ನೀನು ಕುರ್ಚಿ ಇಲ್ಲದೆ ಕುಳಿತಾಗ ನಿನಗಾದ ನೋವಿದೆಯಲ್ಲ ಅದು ತಂದೆ ತಾಯಿಗಳಿಗೆ ಪ್ರತಿದಿನವೂ ಆಗ್ತಾಯಿರುತ್ತೆ. ಹಾಗಾಗಿ ನಿನ್ನ ಕಾಲ ಮೇಲೆ ನಿಲ್ಲುವ ದಿನ ನಿನಗೆ ಅರ್ಥ ಆಗುತ್ತೆ ಅವರ ನೋವು ಏನು ಅಂತ. ಹಾಗಾಗಿ ಆ ಕಾರಣಕ್ಕೆ ಅನಗತ್ಯ ಪ್ರಶ್ನೆ ಮಾಡಬೇಡ? ಅವರಿಗೂ ನಿನ್ನ ಬದುಕೇ ಕನಸಾಗಿರುತ್ತದೆ. ಅರ್ಥ ಆಯ್ತು ಅಂದುಕೊಳ್ಳುತ್ತೇನೆ. ರಮೇಶ ಸುಮ್ಮನೆ ಕುಳಿತು ಕಣ್ಣೀರಿಡುತ್ತಾ ತನ್ನ ಸಣ್ಣತನಕ್ಕೆ ಪಶ್ಚಾತಾಪ ಪಟ್ಟುಕೊಂಡ... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ