ಸ್ಟೇಟಸ್ ಕತೆಗಳು (ಭಾಗ ೯೬) - ಅವಳು
ಅನಾಥಳೋ, ದಿಕ್ಕುತಪ್ಪಿದವಳೋ, ಎಲ್ಲಿಂದ ತಪ್ಪಿಸಿಕೊಂಡಳೋ ಗೊತ್ತಿಲ್ಲ .ಮುಖದಲ್ಲಿ ಗಾಬರಿ, ಕಣ್ಣಲ್ಲಿ ಹಸಿವು, ಮಣ್ಣಾದ ಬಟ್ಟೆ. ಆಗಾಗ ಹಿಂತಿರುಗಿ ನೋಡುತ್ತಾ ಏದುಸಿರು ಬಿಡುತ್ತಾ ಓಡುತ್ತಾ ನಡೆಯುತ್ತಿದ್ದಾಳೆ. ವೇಗವಾಗಿದ್ದ ಪಾದಗಳು ತಡೆದು ನಿಲ್ಲಿಸಿ ರಸ್ತೆಬದಿಯಲ್ಲಿ ಕೂರಲು ಅಣತಿ ಮಾಡಿದವು. ದುಃಖ ಬೆಟ್ಟದಷ್ಟಿತ್ತು, ಕಣ್ಣೀರಿಗೆ ಹರಿಯೋಕು ದೇಹದಲ್ಲಿ ನೀರಿಲ್ಲ. ದಾರಿಹೋಕರ ಹೆಜ್ಜೆಗಳೆಲ್ಲ ಚಲಿಸಿದರೂ ತಿರುಗಿ ನೋಡುವ ಕಣ್ಣುಗಳಿಲ್ಲ. ದಾನಶೂರ ವಂಶದ ಕೆಲವು ಕೈಗಳು ಚಿಲ್ಲರೆ ಚೆಲ್ಲಿ ತ್ಯಾಗ ಮನೋಭಾವದ ನಗು ಹೊತ್ತು ಸಾಗಿದವು. ಎಲ್ಲಿದ್ದವು ಕ್ಯಾಮರಾ? ಜಾಗವನ್ನು ಆಕ್ರಮಿಸಿ ಮೈಕು ಹಿಡಿದು ಮಾತಾಡಲಾರಂಭಿಸಿದವು. ಹೊಟ್ಟೆಗೇನೂ ನೀಡದೆ ಪ್ರಶ್ನೆಗಳ ಸುರಿಮಳೆ. ಉತ್ತರ ಸಿಗದಿದ್ದಾಗ ತಮ್ಮದೇ ಸರಣಿಯ ವ್ಯಾಖ್ಯಾನ. ಸಾಮಾಜಿಕ ಕಾರ್ಯಕರ್ತರ ಭಾಷಣ, ಘೋಷಣೆಗಳು ಕ್ಯಾಮರದ ಮುಂದೆ. ಕ್ಯಾಮರಾ ಮಾಯವಾದಾಗ ಜನರ ಸುಳಿವೇ ಇಲ್ಲ. ಅವಳ ಹಸಿವು ನೀಗಲಿಲ್ಲ. ಮತ್ತದೆ ಅನಾಥ ಭಾವ. ದೂರದ ಕಸದಬುಟ್ಟಿಯಲ್ಲಿ ಕಂಡ ಕೊಳೆತ ಬಾಳೆಹಣ್ಣಿನ ಕಡೆಗೆ ಓಡಿದಳು… ಇದ್ಯಾವ ಕ್ಯಾಮರಾವೂ ಸೆರೆಹಿಡಿಯಲಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ