ಸ್ಟೇಟಸ್ ಕತೆಗಳು (ಭಾಗ ೯೭೦)- ಅಧಿಕಾರ

ಸ್ಟೇಟಸ್ ಕತೆಗಳು (ಭಾಗ ೯೭೦)- ಅಧಿಕಾರ

ಅಧಿಕಾರ ಯಾರದ್ದು? ಹಾಗೆ ಸುಲಭದಲ್ಲಿ ಅಧಿಕಾರ ಸಿಗೋದಿಲ್ಲ. ಅದನ್ನ ಪಡೆದುಕೊಳ್ಳಬೇಕು. ಅದಕ್ಕೆ ಒಂದಷ್ಟು ಅರ್ಹತೆಗಳು ಇರಬೇಕು. ಆ ಮರದಲ್ಲಿರುವ ಹಣ್ಣುಗಳನ್ನು ಹಕ್ಕಿಗಳು ಬಂದು ತಿನ್ನುತ್ತವೆ. ಅರ್ಧಂಬರ್ಧ ತಿಂದ ಹಣ್ಣುಗಳು ನೆಲಕ್ಕುರುಳಿದರೆ, ದನಗಳು ಕೆಲವನ್ನು ತಿಂದರೆ, ಹುಳಗಳು ಇನ್ನು ಕೆಲವನ್ನು ತಿನ್ನುತ್ತಿವೆ. ಅಲ್ಲಿ ಹಾರುತ್ತಿರುವ ಹಕ್ಕಿಗಳಿಗೆ, ಮಕರಂದ ಹೀರುವ ದುಂಬಿಗಳಿಗೆ ಎಲ್ಲದಕ್ಕೂ ಅಧಿಕಾರವಿದೆ. ಯಾಕೆಂದರೆ ಎಲ್ಲೋ ಇದ್ದ ಮಾವಿನ ಬೀಜ ಒಂದನ್ನು ತಂದು ನೆಲದ ಮೇಲೆ ಹಾಕಿದ ಹಕ್ಕಿಗೆ ಹಣ್ಣು ತಿನ್ನುವ ಸ್ವಾತಂತ್ರ್ಯವಿದೆ, ಹೂವಿನಿಂದ ಕಾಯಾಗಿಸಿದ ಎಲ್ಲ ದುಂಬಿಗಳಿಗೆ, ಆಗಾಗ ಮಳೆ ನೀರು ಸುರಿಸಿದ ಮೋಡಕ್ಕೆ, ನೀರು ಹರಿಯುವುದಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲ ಜೀವಿಗಳಿಗೂ ಹಣ್ಣು ತಿನ್ನುವ ಸ್ವಾತಂತ್ರ್ಯವಿದೆ. ಅಧಿಕಾರವೂ ಇದೆ. ಆದರೆ ನಾವು ನೀರು ಹಾಕಿದವರಲ್ಲ, ಒಂದು ಗಿಡ ನೆಟ್ಟವರಲ್ಲ, ಇದ್ದದ್ದನ್ನೇ ಹಾಳು ಮಾಡುವ ಯೋಚನೆ ಮಾಡಿದವರು, ಪರಿಸರಕ್ಕೆ ಇನ್ನೊಂದಷ್ಟು ತೊಂದರೆ ನೀಡಿದವರು, ಹೀಗಿರುವಾಗ ನಮಗೆ ಯಾವ ಅಧಿಕಾರವಿದೆ ಈ ಪರಿಸರವನ್ನು ಉಪಯೋಗ ಮಾಡುವುದಕ್ಕೆ. ಹಾಗಾಗಿ ಪರಿಸರ ಕೋರ್ಟಿನಲ್ಲಿ ದಾವೇ ಹೂಡಿದೆ. ಈ ಮನುಷ್ಯ ನಮ್ಮ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾನೆ. ಆತನನ್ನ ನಮ್ಮಿಂದ ಬೇರ್ಪಡಿಸಿ ಎಂದು ಪರಿಸರ ವಾದಿಸುತ್ತಿದೆ. ನಾವಿಲ್ಲದೆ ಪರಿಸರ ಖಂಡಿತವಾಗೂ ಬದುಕುತ್ತದೆ. ಆದರೆ ನಮ್ಮ ಜೀವನ ತುಂಬಾ ಕಷ್ಟ ಇದೆ... ಹಾಗಾಗಿ ನಮಗೆ ಅಧಿಕಾರವಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ