ಸ್ಟೇಟಸ್ ಕತೆಗಳು (ಭಾಗ ೯೭೧)- ಎಲ್ಲಿ ಸಿಗುತ್ತೆ ?

ಸ್ಟೇಟಸ್ ಕತೆಗಳು (ಭಾಗ ೯೭೧)- ಎಲ್ಲಿ ಸಿಗುತ್ತೆ ?

ಆ ಕನ್ನಡಿ ಎಲ್ಲಿ ಸಿಗುತ್ತೆ ? ಅದನ್ನಾದರೂ ಹೇಳಿ ಮಾರಾಯರೇ!. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೇನೆ. ಮೊನ್ನೆ ಕೂದಲು ಕಟ್ ಮಾಡೋ ಅಂಗಡಿಗೆ ಹೋಗಿದ್ದೆ. ಎಲ್ಲಾ ಆದ್ಮೇಲೆ ಕೊನೆಯಲ್ಲಿ ನನ್ನ ಮುಖವನ್ನು ನಾನೇ ಕನ್ನಡಿಯಲ್ಲಿ ನೋಡಿದಾಗ ಮತ್ತೊಂದು ಅದ್ಭುತ ಕ್ಷಣ. ನನ್ನ ಮುಖದ ಸೌಂದರ್ಯವನ್ನು ನೋಡಿ ನನ್ನ ಹಿಂದೆ ಎಲ್ಲರೂ ಬರಲೇಬೇಕಿತ್ತು. ಸಂತೂರ್ ಮಮ್ಮಿಗಿಂತ ಇನ್ನೂ ಒಂದು ಗುಲಗಂಜಿಯಷ್ಟು ಹೆಚ್ಚಿಗೆ ಚೆನ್ನಾಗಿ ಕಾಣ್ತಾ ಇದ್ದೆ. ಅಂದು ಸಂಜೆ ಹೊಸ ಬಟ್ಟೆ ಖರೀದಿಸುವುದಕ್ಕೆ ಬಟ್ಟೆ ಅಂಗಡಿ ಹೋಗಿದ್ದಾಗ ಅಲ್ಲಿ ನೋಡಿದ ಬಟ್ಟೆ ನನ್ನ ನನಗೆ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗ್ತಾ ಇತ್ತು. ಆ ಕನ್ನಡಿಯಲ್ಲಿ ರಾಜಕುಮಾರನೇ ಭೂಮಿಗೆ ಇಳಿದು ಬಂದಂತೆ ಅನ್ನಿಸಿತು. ಈ ಎರಡು ಘಟನೆ ನಡೆದ ನಂತರ ಮನೆಗೆ ಬಂದ ಮೇಲೆ ಎಲ್ಲವೂ ತದ್ವಿರುದ್ಧ. ಸ್ನಾನ ಮಾಡಿದ ನಂತರ ನನ್ನ ಮುಖ ನೋಡಿದರೆ ಪ್ರತಿ ದಿನಕ್ಕಿಂತಲೂ ಇನ್ನೊಂದಷ್ಟು ವಿರೂಪವಾಗಿ ಕಾಣ್ತಾ ಇದ್ದೆ. ಆ ಬಟ್ಟೆಯು ನನಗೆ ಹೊಂದಾಣಿಕೆ ಆಗ್ತಾ ಇಲ್ಲ. ಇದು ಯಾಕೆ ಈ ಬದಲಾವಣೆ?ನಾನು ಚಂದ ಕಾಣಬೇಕಲ್ವಾ? ಅದಕ್ಕೆ ಆ ಎರಡು ಕನ್ನಡಿಗಳನ್ನ ಮನೆಗೆ ತಂದಿಡಬೇಕು. ಅದನ್ನು ನೋಡಿದಾಗಲೂ ನಾನು ಇನ್ನೊಂದಷ್ಟು ಚೆನ್ನಾಗಿ ಕಾಣಬಹುದೇನೋ? ಹಾಗಾಗಿ ನಿಮಗೆ ಆ ಕನ್ನಡಿ ಸಿಗುವ ವಿಳಾಸ ಗೊತ್ತಿದ್ರೆ ಹೇಳಿ, ನಾನು ಹೋಗಿ ಎರಡು ಕನ್ನಡಿ ತೆಗೆದು ಮನೆಯಲ್ಲಿ ಇಟ್ಟುಬಿಡುತ್ತೇನೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ