ಸ್ಟೇಟಸ್ ಕತೆಗಳು (ಭಾಗ ೯೭೨)- ಅಜೇಯ
ಅರ್ಥಮಾಡಿಕೊಳ್ಳಬೇಕಾದ್ದು ಯಾರು? ತಾಯಿಯೋ ಮಗನೋ? ಇಬ್ಬರ ಮನಸ್ಸಿನಲ್ಲಿಯೂ ತಾವು ಸರಿ ಅವರು ತಪ್ಪು. ಅವರವರ ನೆಲೆಯಲ್ಲಿ ಅವರವರ ಯೋಚನೆ ವಿಧಾನವನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಒಮ್ಮೆ ಅವರು ತಮ್ಮ ಸ್ಥಳವನ್ನು ಬಿಟ್ಟು ಅವರ ಸ್ಥಳವನ್ನು ಆಶ್ರಯಿಸಿಕೊಂಡು ಅಲ್ಲಿಂದ ಯೋಚಿಸಬೇಕಾಗಿದೆ. ಆಗ ನಿಜದ ನಿಲುವು ತಿಳಿಯುತ್ತದೆ. ಅವನಿಗೆ ಒಂತರಾ ಕಸಿವಿಸಿ ತನ್ನ ಪ್ರೀತಿ ಬೇರೆಲ್ಲಿಯೋ ಸಾಗುತ್ತಿದೆ ಎನ್ನುವ ಸಂಕಟ. ತನಗೆ ತನ್ನ ಮನೆಯಲ್ಲಿ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎನ್ನುವ ವ್ಯಥೆ, ತನ್ನನ್ನು ಬರಿಯ ಬೈಗುಳಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಚಿಂತೆ ,ಹೀಗೆ ಆತ ಮುದುಡಿ ಹೋಗುವ ದಾರಿಯಲ್ಲಿ ಸಾಗಿದ್ದಾನೆ. ಹಾಗಾಗಿ ಎಲ್ಲದಕ್ಕೂ ಸಿಟ್ಟುಗೊಳ್ಳುವ, ಅಧಿಕಾರ ಚಲಾಯಿಸುವ ತನ್ನ ನೆಲೆಯನ್ನ ಕಂಡುಕೊಳ್ಳುವ ವ್ಯರ್ಥ ಪ್ರಯತ್ನಕ್ಕೆ ಪ್ರಯತ್ನ ಪಡುತ್ತಿದ್ದಾನೆ. ಆಕೆ ಕೆಲಸಗಳ ನಡುವೆ ಮನೆಗೊಂದಿಷ್ಟು ಸಮಯ ನೀಡುತ್ತಿದ್ದಾಳೆ ,ಅವಳ ಎಲ್ಲ ಪರಿಧಿಗಳನ್ನ ದಾಟಿಕೊಂಡು ಮನೆಯನ್ನ ಕಟ್ಟಿ ನಿಲ್ಲಿಸುವುದಕ್ಕೆ ಪರಿಶ್ರಮ ಪಡುತ್ತಿದ್ದಾಳೆ ,ಮಗನು ತಾಯಿಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅಮ್ಮನ ಯೋಚನೆ, ಅಮ್ಮನ ಕಷ್ಟ ,ಇವೆಲ್ಲವೂ ಆತನ ಅರಿವಿಗೆ ಬಂದಾಗ ಆತ ಖಂಡಿತ ಬದಲಾಗುತ್ತಾನೆ. ಇಲ್ಲಿ ಅವನು ತಪ್ಪೋ ಅವರು ತಪ್ಪೋ ಗೊತ್ತಿಲ್ಲ. ಅವರಿಬ್ಬರೂ ಸಮಯ ಕಳೆಯಬೇಕು, ಹೆಚ್ಚು ಸಮಯ ಜೊತೆಗಿರಬೇಕು, ಅವರೇ ಅವನನ್ನು ಪಾಲಿಸಬೇಕು. ಆಗ ಅವನು ಅಮ್ಮನನ್ನು ಇನ್ನೊಂದಷ್ಟು ಹೆಚ್ಚು ಆಪ್ಯಾಯಮಾನವಾಗಿ ಕಾಣುತ್ತಾನೆ. ಪ್ರೀತಿಸುತ್ತಾನೆ ಮತ್ತು ಬದಲಾಗುತ್ತಾನೆ. ಇಲ್ಲಿ ಇಬ್ಬರು ಬದಲಾಗಬೇಕಾಗಿದೆ .ಇಬ್ಬರೂ ಬದಲಾದರೆ ಮನೆ ನಂದನವನವಾಗುತ್ತದೆ. ಮನೆಯ ಮುದ್ದು ತಾರೆ ಅಜೇಯವಾಗಿ ಬೆಳಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ