ಸ್ಟೇಟಸ್ ಕತೆಗಳು (ಭಾಗ ೯೭೪)- ನಿರ್ಭಾವುಕ

ಸ್ಟೇಟಸ್ ಕತೆಗಳು (ಭಾಗ ೯೭೪)- ನಿರ್ಭಾವುಕ

ನಾಯಿ ಒಂದೇ ಸಮನೆ ಅರಾಚಾಡ್ತಾ ಇದೆ. ಅದರ ಕೂಗಿಗೆ ಅಕ್ಕಪಕ್ಕದ ಮನೆಯವರಿಗೆ ಎಚ್ಚರವಾಯಿತು. ಮನೆ ಮಗ ಮನೆಯ ಹೊರಗೆ ಬಂದು ನಾಯಿಗೆ ಎರಡು ಸಲ ಜೋರು ಬೈದು, ಕೋಲಿನಲ್ಲಿ ಎರಡು ಪೆಟ್ಟುಕೊಟ್ಟು ಮತ್ತೆ ಹೋಗಿ ಮಲಗಿಕೊಂಡ. ಆತನಿಗೆ ಮನೆಯೊಳಗಿನಿಂದ ಯಾವುದೇ ಶಬ್ದವು ಕೇಳಲಿಲ್ಲ. ಬೆಳಗಾದ ಕೂಡಲೇ ಎದ್ದು ತನ್ನ ದೈನಂದಿನ ಕೆಲಸ ಮುಗಿಸಿಕೊಂಡು ಕೆಲಸಕ್ಕೆ ಹೊರಡುವಾಗ ನಾಯಿಯ ಅರುಚಾಟ ಇನ್ನೂ ನಿಂತಿರಲಿಲ್ಲ. ಅದು ತನ್ನ ಕುತ್ತಿಗೆ ಕಟ್ಟಿದ್ದ ಸರಪಳಿಯನ್ನು ಎಳೆದು ಎಳೆದು ಗಾಯವಾಗಿ ರಕ್ತ ಬರುವಂತಾಗಿತ್ತು. ಕೆಲಸಕ್ಕೆ ಹೊರಟವನಿಗೆ ಅಜ್ಜಿಯ ಕೋಣೆಯಿಂದ ಯಾವುದೇ ರೀತಿಯ ಶಬ್ದ ಬರದಿದ್ದನ್ನು ಕಂಡು ಕೋಣೆ ಬಾಗಿಲು ತೆರೆದಾಗ, ಅಜ್ಜಿಯ ದೇಹ ತಣ್ಣಗಾಗಿತ್ತು. ವೈದ್ಯರಿಗೆ ಫೋನಾಯಿಸಿದ ವೈದ್ಯರು ಬಂದು ಮಧ್ಯರಾತ್ರಿ ಪ್ರಾಣ ಹೋಗಿತ್ತು ಅನ್ನುವ ಸುದ್ದಿ ತಿಳಿಸಿದರು. ತನ್ನ ಸಂಬಂಧಿಕರಿಗೆ ಕರೆ ಮಾಡಿ ಕಾರ್ಯ ಮುಗಿಸಿ ತನ್ನ ದೈನಂದಿನ ಕೆಲಸಕ್ಕೆ ತಯಾರಾದ. ಗೂಡಿನಲ್ಲಿ ಕುಳಿತಿದ್ದ ನಾಯಿ ಮಾತ್ರ ಏನೂ ತಿನ್ನದೇ ಹಾಗೆ ಉರಿಯುತ್ತಿರುವ ಚಿತೆ ನೋಡ್ತಾ ಕಣ್ಣೀರು ಇಳಿಸ್ತಾ ತನ್ನ ಮುಂದಿನ ದಿನ ಹೇಗೆ ಅನ್ನೋದನ್ನ ಯೋಚನೆ ಮಾಡ್ತಾ ಇತ್ತು. ಭಾವನೆಗಳು ಸತ್ತು ಹೋಗಿರೋದು ಯಾರಿಗೆ? ಕೈ ಹಿಡಿದು ಬೆಳೆಸಿದವರಿಗಿಂತ ತುತ್ತು ಹಾಕಿ ಬೆಳೆಸಿದವರು ಭಾವನೆಗಳನ್ನು ಇಟ್ಟುಕೊಂಡಿದ್ದಾರೆ. ದುಡ್ಡಿನ ನಡುವೆ ಸಂಬಂಧಗಳ ಅರ್ಥಗಳನ್ನು ಕಳೆದುಕೊಂಡು ಆತ ಬದುಕಿದ್ದಾನೆ. ಕಂಪ್ಯೂಟರ್‌ನ ಮುಂದೆ ಕಣ್ಣರಳಿಸಿಕೊಂಡು ಕೆಲಸ ಮಾಡುತ್ತಿದ್ದಾನೆ. ಕಳೆದುಕೊಂಡದ್ದಕ್ಕೆ ವ್ಯಥೆ ಪಡದೆ ಸುಮ್ಮನಾಗಿದ್ದಾನೆ... ನಿರ್ಭಾವುಕ ಯಾರು?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ