ಸ್ಟೇಟಸ್ ಕತೆಗಳು (ಭಾಗ ೯೭೫)- ಚಂದಿರ

ಸ್ಟೇಟಸ್ ಕತೆಗಳು (ಭಾಗ ೯೭೫)- ಚಂದಿರ

ಮೋಡದ ಮರೆಯಿಂದ ಚಂದಿರ ಇಣುಕುತ್ತಿದ್ದ. ಕೆಲವು ಕ್ಷಣಗಳ ಹಿಂದೆ ಈ ಭೂಮಿಗೆ ಒಂದಷ್ಟು ಮಳೆಯನ್ನು ಸುರಿಸಿ ಜನ ಸಂಭ್ರಮವನ್ನು ಹೇಗೆ ಅನುಭವಿಸುತ್ತಿದ್ದಾರೆ ಅನ್ನೋದನ್ನ ನೋಡೋದಿಕ್ಕೆ ಚಂದಿರ ಪ್ರಯತ್ನಿಸಿದರೆ ಮೋಡಗಳು ಅವನಿಗೆ ಆಗಾಗ ಮರೆ ಮಾಡಿ ಇಡೀ ಭೂಮಿಯ ಸೌಂದರ್ಯವನ್ನು ಬೇರೆ ಬೇರೆ ವಿನ್ಯಾಸದಲ್ಲಿ ತೋರಿಸೋದಕ್ಕೆ ಪ್ರಾರಂಭ ಮಾಡಿದವು. ಕೆಲವೊಂದು ಕಡೆ ಬಂದ ಮಳೆಯನ್ನು ಕಣ್ಮುಚ್ಚಿ ಸ್ವಾಗತಿಸಿದವರು ಹಾಗೆ ಮಾತನಾಡುತ್ತಾ ನಿಂತಿದ್ರು, ಕೆಲವೊಬ್ಬರು ಅಯ್ಯಾ ಬದುಕೋದು ಹೇಗೆ ಅಂತ ಬೇಡಿಕೊಂಡರು, ಕೆಲವೊಂದು ಕಡೆ ಭೂಮಿ ತಂಪಿನಿಂದ ಇನ್ನೊಂದಷ್ಟು ಮಳೆಯನ್ನು ಬೇಡಿಕೊಳ್ಳುತ್ತ ಕತ್ತೆತ್ತಿ ನೋಡ್ತಾ ಇತ್ತು. ಗಿಡ ಮರಗಳು ಮೈಕೊಡವಿ, ನಾಳೆ ಬದುಕಲು ಬೆಳಗಾಗುವುದಕ್ಕೆ ಕಾಯ್ತಾಯಿತ್ತು. ಬೆಳಕಿಲ್ಲದ ಮನೆಗಳು ಮೌನವಾದರೆ, ಸೋರುತ್ತಿರುವ ಮನೆಗಳು ಕೆಲಸದಲ್ಲಿ ಮುಳುಗಿವೆ. ಹೀಗೆ ಮುಗಿಲ ಮೇಲೆ ರಾರಾಜಿಸುತ್ತಿರುವ ಚಂದ್ರನಿಗೆ ನೆಲದ ಮೇಲಿನ ವಿವಿಧ ಬಗೆಯ ಊರುಗಳು ರಂಜನೆಯನ್ನು ನೀಡ್ತಾ ಇದ್ದವು. ಚಂದ್ರ ಉಳಿದವರಿಗೆ ಆಜ್ಞೆ ಮಾಡಿದ ನೀವಿನ್ನು ಬೇರೆ ಬೇರೆ ಊರುಗಳಿಗೆ ಹೋಗಿ ಮಳೆಯನ್ನು ಸುರಿಸಿ, ಅವರ ಬದುಕಿನ ಬದಲಾವಣೆಗೆ ನೀವು ಭೂಮಿಗೆ ಹೋಗುವ ಅನಿವಾರ್ಯತೆ ಇದೆ ಅನ್ನೋದನ್ನ ಮೋಡಗಳಿಗೆ ತಿಳಿಸಿದವು. ಮೋಡದಿಂದ ದಿನಾಂಕ ಮತ್ತು ಸಮಯ ನಿಗದಿ ಪಡಿಸಿ ಗಾಳಿಗೆ ಸಂದೇಶ ರವಾನೆಯಾಯಿತು. ಊರೊಂದು ಇನ್ನೊಂದು ಮಳೆಗಾಗಿ ಕಾಯ್ತಾಯಿತ್ತು. ಮೋಡಗಳು ಅತ್ತ ಕಡೆ ಹೊರಡುವುದಕ್ಕೆ ತಯಾರಾಗಿ ನಿಂತವು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ