ಸ್ಟೇಟಸ್ ಕತೆಗಳು (ಭಾಗ ೯೭) - ಕನ್ನಡಿ

ಸ್ಟೇಟಸ್ ಕತೆಗಳು (ಭಾಗ ೯೭) - ಕನ್ನಡಿ

ಒಡೆದ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿದೆ. ಪ್ರತಿಯೊಂದು ತುಂಡಿನಲ್ಲೂ ಅವಳ ಕಣ್ಣೀರು ಇಳಿಯುತ್ತಿದೆ. ಗಾರೆ ಕೆಲಸದ ದುಡಿಮೆ ಅನಿವಾರ್ಯ. ಊರುಬಿಟ್ಟು ಊರಿಗೆ ಬಂದು, ನೆಲದ ಮೇಲೆ ಬೀಳುವ ಪರಿಸ್ಥಿತಿಯಲ್ಲಿರುವ ಗೋಡೆಯ ಒಳಗೆ ಜೀವಿಸಿದ್ದಾಳೆ. ಕೆಲಸದ ಸಮಯ ಕೆಲವು ಕೈಗಳು ದೇಹ ಸವರಿ, ಹಲವು ಕಣ್ಣುಗಳು ಕಾಮ-ಕೇಳಿ ನಡೆಸುತ್ತವೆ. ಅವಡುಗಚ್ಚಿ ಜಲ್ಲಿ ಹೊರುತ್ತಾಳೆ ಸಿಮೆಂಟ್ ಕಲಸುತ್ತಾಳೆ. ಬಲಿಷ್ಠವಾದ ಕೈಗಳು ಮೈಮೇಲೆ ಬಿದ್ದಾಗ ಪ್ರತಿಭಟಿಸಿದರೂ, ದೂರು ನೀಡೋದ್ದನು ಕೇಳುವರ್ಯಾರು. ಅವಳ ಮೇಲೆ ಯಾವಾಗ ವ್ಯಕ್ತಿಗಳ ಕೈ ಸವರಿದಿಯೋ, ಒತ್ತಾಯದಿ ಬಟ್ಟೆ ಜಾರಿದಿಯೋ ಅಂದಿನಿಂದ ಆ ದೊಡ್ಡ ಕಟ್ಟಡದಲ್ಲಿ ಸಾವುಗಳು ಹೆಚ್ಚಾಗುತ್ತಿದೆ. ಭಯ ಜಾಸ್ತಿಯಾದರೂ, ವಾಂಛೆ ಕಡಿಮೆಯಾಗುತ್ತಿಲ್ಲ. ಕತ್ತಲಲ್ಲಿ ಕೆಲವರ ಮರ್ಮಾಂಗ ತುಂಡಾಯಿತು, ಕಬ್ಬಿಣದ ರಾಡು ದೇಹದೊಳಗೆ ನುಗ್ಗಿತು, ತಲೆ ಒಡೆಯಿತು, ಕೈ ಮರಿಯಿತು. ಆದರೆ ಇದನ್ನೆಲ್ಲಾ ಮಾಡುತ್ತಿರುವವರು ಯಾರು ? ಜೊತೆಗಿದ್ದ ಅಪ್ಪ ರಾಕ್ಷಸರ ಸಂಹಾರ ಮಾಡುತ್ತಿದ್ದಾನೆಯೇ?

ಅವಳೇ ಸೇಡು ತೀರಿಸಿಕೊಳ್ಳುತ್ತಿದ್ದಾಳೋ… ಮೂಲೆಯಲ್ಲಿ ಸಿಮೆಂಟ್ ಹಾಕುತ್ತಾ ಅವಳನ್ನ ಪ್ರೀತಿಸಿದ  ಹುಡುಗ  ಅವಳಿಗೆ ಕಾವಲಾಗಿದ್ದಾನೋ..? ಗೊತ್ತಿಲ್ಲ. ಒಟ್ಟಿನಲ್ಲಿ ಯಾರೋ ಒಬ್ಬರಿದ್ದಾರೆ. ದಿನವೂ ನೋವಿನಿಂದ ಏಳೋಳಿಗೆ ನೆಮ್ಮದಿಯ ನಿದ್ದೆ ಸಿಗುತ್ತಿದೆ. ನಗುವಿನ ಮುಂಜಾವು ಕಾಯುತ್ತಿದೆ... ಹೊಸ ಕನ್ನಡಿ ಗೋಡೆಯಲ್ಲಿ ನೇತುಬಿದ್ದಿದೆ....

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ