ಸ್ಟೇಟಸ್ ಕತೆಗಳು (ಭಾಗ ೯೮೦)- ತೊರೆಯುವುದು

ಸ್ಟೇಟಸ್ ಕತೆಗಳು (ಭಾಗ ೯೮೦)- ತೊರೆಯುವುದು

ತೊರೆದು ಹೋಗುವುದೆಂದರೆ ಭಯವು ತಾನೆ? ಇಷ್ಟರವರೆಗೂ ಆ ಭಾವನೆ ನನ್ನ ಕಾಡಿರಲಿಲ್ಲ. ಆದರೆ ಇತ್ತೀಚೆಗೆ ಮೊದಲಿದ್ದ ಕೋಣೆಯನ್ನು ತೊರೆದು ಹೊಸತೊಂದು ಆಶ್ರಯವನ್ನು ಸೇರಬೇಕಾಗಿತ್ತು. ಅದಕ್ಕೆ ಮೊದಲಿದ್ದ ಸ್ಥಳವನ್ನು ತೊರೆಯುವುದಕ್ಕೆ ಎಲ್ಲ ತಯಾರಿಯನ್ನು ಮಾಡಿಟ್ಟುಕೊಂಡಿದ್ದೆ. ಅಲ್ಲಿದ್ದ ತೆರೆದಿಟ್ಟ ಎಲ್ಲವನ್ನು ಜೋಡಿಸಿಕೊಂಡು ಮತ್ತೆ ಗಂಟು ಕಟ್ಟಿ ಹೊರಡುವುದಕ್ಕೆ ಸಿದ್ಧತೆ ಮಾಡಿಕೊಂಡೆ. ಹರಡಿಟ್ಟ ನೆನಪುಗಳನ್ನೆಲ್ಲ ಗಂಟು ಹಾಕಿ ಎಲ್ಲವನ್ನು ಒಂದು ಕಡೆಗೆ ಸೇರಿಸಿ ತಲೆಯ ಮೇಲೆ ಹೊತ್ತು ಸಾಗುವುದಕ್ಕೆ ಆರಂಭ ಮಾಡಿದೆ. ಹಾಗೆ ಹೊರಟವನಿಗೆ ಇಷ್ಟು ದಿನ ಬದುಕು ನೀಡಿದ್ದ ಪುಟ್ಟ ಕೋಣೆಯೊಂದು ಏಕಾಂಗಿಯಾಗಿ ತೊರೆದು ಹೋಗಿರುವುದಕ್ಕೆ ಬೇಸರಿಸಿದಂತೆ ಕಾಣುತ್ತಿತ್ತು. ಅಲ್ಲಿ ಕಳೆದ ಅದ್ಭುತ ನಿಮಿಷಗಳೆಲ್ಲವೂ ಹಾಗೆಯೇ ನೆನಪಿನೊಂದಿಗೆ ಉಳಿದುಬಿಟ್ಟವು. ಆ ಕೋಣೆಯನ್ನು ತೊರೆದು ಬರುವಾಗಲೇ ಮನಸ್ಸಿಗೊಂದಿಷ್ಟು ಕಸಿವಿಸಿ ಉಂಟಾಗುವುದಾದರೆ ಜೀವನವನ್ನೇ ತೊರೆದು ಹೋಗುವಾಗ ಹೇಗಾಗಬಹುದು? ಅಥವಾ ನಮ್ಮ ಆತ್ಮೀಯರು ನಮ್ಮನ್ನು ತೊರೆದು ಹೋದರೆ ನಮ್ಮ ಪರಿಸ್ಥಿತಿ ಹೇಗಿರಬಹುದು? ಹಾಗಾಗಿ ತೊರೆಯುವುದೆಂದರೆ ತುಂಬಾ ಭಯ ಅಂತ ನನ್ನ ಅನಿಸಿಕೆ ... ಅಲ್ವಾ? 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ