ಸ್ಟೇಟಸ್ ಕತೆಗಳು (ಭಾಗ ೯೮೧)- ಇಬ್ಬನಿ
ಇಬ್ಬನಿಗೂ ಬೆಳಗುವ ಸಾಮರ್ಥ್ಯವಿತ್ತು. ಆದರೆ ಅದರೊಳಗೆ ಸೂರ್ಯನ ಬೆಳಕು ಹಾದು ಹೋಗಬೇಕಿತ್ತು ಅಷ್ಟೇ. ಇಬ್ಬನಿಯು ಯಾರ ಗಮನಕ್ಕೂ ಬಂದಿರಲಿಲ್ಲ. ಹಲವು ವರ್ಷಗಳಿಂದ ಎಲೆಯ ತುದಿಯಿಂದ ಇಳಿದು ಭೂಮಿಯನ್ನು ತಲುಪಿದರೂ ಗಮನಿಸುವವರಿಲ್ಲ. ಆ ಇಬ್ಬನಿಯ ಮನೆಯವರು ಅದರ ಆಸೆಗೆ ಯಾವತ್ತೂ ಅವಕಾಶವನ್ನೇ ನೀಡಲಿಲ್ಲ. ಮನೆಯವರ ಆಸೆಗಳೇ ಇಬ್ಬನಿಯ ಬದುಕಾಗಿತ್ತು. ಮನೆಯವರು ಹೇಳಿದಂತೆ ಕೇಳುವ ಕೆಲಸದಾಳಿನ ಬದುಕು ಇಬ್ಬನಿಯದಾಗಿತ್ತು. ಇಬ್ಬನಿಗೂ ಆಸೆ ಬೆಳಗ್ಗೆ ತನ್ನ ನೋಡುಗರ ಎಲ್ಲರ ಮನಸ್ಸನ್ನು ಮುದಗೊಳಿಸಬೇಕು, ಎಲ್ಲರಿಗೂ ನನ್ನ ಸಾಮರ್ಥ್ಯವೇನೆಂದು ತಿಳಿಸಬೇಕು. ನನ್ನ ಕನಸಿನ ದಾರಿಯಲ್ಲಿ ಸಾಗಬೇಕು ಹೀಗೆ ಆಸೆಗಳ ಗೋಪುರಗಳನ್ನು ಕಟ್ಟಿಕೊಂಡಿದ್ದರೂ ಮಿನುಗುವ ಸೂರ್ಯನ ದರ್ಶನ ಆ ಇಬ್ಬನಿಗಾಗಿರಲಿಲ್ಲ. ಆ ದಿನ ಮಿನುಗಿದ ಸೂರ್ಯನ ದರ್ಶನ ಆ ಇಬ್ಬನಿಗಾಗಿರಲಿಲ್ಲ. ಆ ದಿನ ಮಿನುಗಿದ ಸೂರ್ಯನ ಬೆಳಕಿನಿಂದ ತನ್ನೊಳಗೆ ಕೋಲ್ಮಿಂಚು. ಬೆಳಿಗ್ಗೆ ಜಗತ್ತಿನ ತುಂಬಾ ತನ್ನ ಪರಿಚಯವಾದಾಗ ಸೂರ್ಯನ ಬೆಳಕನ್ನೇ ಬಯಸುವ ಇಬ್ಬನಿ ಪ್ರತಿದಿನ ಮುಂಜಾವಿಗಾಗಿ ಕಾಯುತ್ತಿತ್ತು. ಅಂದಿನಿಂದ ಜನ ಇಬ್ಬನಿಯ ಬೆಳಕನ್ನು ನೋಡುವುದಕ್ಕೆ ಹತ್ತಿರ ಬಂದರು. ಇಬ್ಬನಿ ಹೆಚ್ಚು ಜನರಿಗೆ ಪರಿಚಯವಾಯಿತು. ತನ್ನ ಕನಸಿನಂತೆ ಬದುಕುವ ಆಸೆ ಹೆಚ್ಚಾಯಿತು. ಇಬ್ಬನಿಗೂ ಸೂರ್ಯನ ಬೆಳಕಿನ ಅವಶ್ಯಕತೆ ಇದೆ, ಸೂರ್ಯನಿಗೂ ತನ್ನ ಬೆಳಕನ್ನ ಬಿಂಬಿಸುವುದಕ್ಕೆ ಇಬ್ಬನಿಯ ಅವಶ್ಯಕತೆ... ಒಬ್ಬರಿಗೊಬ್ಬರು ಸೇರಿಕೊಂಡರೆ ಜಗತ್ತೇ ಬೆಳಕಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ