ಸ್ಟೇಟಸ್ ಕತೆಗಳು (ಭಾಗ ೯೮೨)- ಸೇತುವೆ

ಸ್ಟೇಟಸ್ ಕತೆಗಳು (ಭಾಗ ೯೮೨)- ಸೇತುವೆ

ಅಲ್ಲೊಂದು ಗುಂಪು ಜನ ಸೇರಿ ಬಿಟ್ಟಿದ್ದಾರೆ. ಅವರು ತುಂಬಾ ಗಹನವಾದದ್ದನ್ನು ಏನನ್ನೋ ಮಾತನಾಡುತ್ತಿದ್ದಾರೆ ಅಂದುಕೊಂಡು ಅವರ ಹತ್ತಿರ ನಿಂತು ಕಿವಿಯಾಲಿಸಿದೆ. ಇಲ್ಲ ಅಷ್ಟೇನೂ ಗಹನವಾದದ್ದಲ್ಲ. ಅವರೆಲ್ಲರೂ ಹಾಗೆ ದಾರಿಯಲ್ಲಿ ನಡೆದು ಹೋಗ್ತಾ ಇರುವಾಗ ಒಂದು ಸೇತುವೆಯನ್ನು ದಾಟಬೇಕಿತ್ತಂತೆ. ಆ ಸೇತುವೆಯನ್ನು ದಾಟುವ ಮೊದಲು ಅಲ್ಲಿ ದಾರಿಯಲ್ಲಿ ಹೋಗುತ್ತಿದ್ದವರು ಆ ಸೇತುವೆಯ ಇತಿಹಾಸವನ್ನು ಹೇಳಿದ್ದಾರೆ, ಕೆಲವರು ಅದರಿಂದಾಗಿರುವ ತಮ್ಮ ಅದ್ಭುತ ಕ್ಷಣಗಳನ್ನು ವಿವರಿಸಿದ್ದಾರೆ, ಹಾಗಾಗಿ ಅವರು ಆ ಸೇತುವೆ ಮೂಲಕ ದಾಟಿ ಮುಂದಿನ ದಾರಿಯನ್ನು ಹಿಡಿದುಕೊಂಡಿದ್ದಾರೆ. ಅವರ ನಿರ್ಧಾರಗಳು, ಅವರ ಕೆಲವೊಂದು ಯೋಚನೆಗಳಿಂದ ಅವರಿಗೆ ಮುಂದೆ ದಾರಿ ಬದಲಿಯಾಗಿ ಹೊಸ ದಾರಿಯನ್ನು ಹಿಡಿದು ಹೊರಟು ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಸ್ವಂತ ಸಾಮರ್ಥ್ಯದಿಂದ ಸರಿಯಾದ ದಾರಿಯನ್ನು ನಿರ್ಮಿಸಿಕೊಳ್ಳುವಲ್ಲೂ ಅವರು ವಿಫಲರಾಗಿದ್ದಾರೆ. ಈಗ ಅವರೆಲ್ಲರೂ ಸೇರಿಕೊಂಡು ಸೇತುವೆಯನ್ನು ನಿಂದಿಸುವುದಕ್ಕೆ ಆರಂಭ ಮಾಡಿದ್ದಾರೆ. ಸೇತುವೆಯ ಕೆಲಸ ದಾಟಿಸುವುದಷ್ಟೇ. ದಾಟುವ ಮೊದಲು ಯೋಚಿಸಬೇಕಿತ್ತು. ಯೋಚಿಸಿ ದಾಟಿದ ಮೇಲೆ ಮುಂದಿನ ಜಾಗದಲ್ಲಿ ಬದುಕಬೇಕಿತ್ತು. ತಮ್ಮಿಂದ ಸಾಧ್ಯವಾಗದ ಮೇಲೆ ಹಿಂದೆ ನಿಂತ ಸೇತುವೆಗೆ ಬಯ್ಯುವುದೆಷ್ಟು ಸರಿ? ನನಗೆ ಅರ್ಥವಾಗಲಿಲ್ಲ, ಅವರಿಗೆ ಏನು ಹೇಳೋದು ಗೊತ್ತಾಗಲಿಲ್ಲ. ಅದಕ್ಕೆ ನಿಮ್ಮಲ್ಲಿ ಕೇಳ್ತಾ ಇದ್ದೇನೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ