ಸ್ಟೇಟಸ್ ಕತೆಗಳು (ಭಾಗ ೯೮೪)- ನಾಯಿ

ಸ್ಟೇಟಸ್ ಕತೆಗಳು (ಭಾಗ ೯೮೪)- ನಾಯಿ

ಆ ರಸ್ತೆ ಬದಿಯಲ್ಲಿ ನಿಂತ ನಾಯಿ ಬೊಗಳುತ್ತಿತ್ತು. ಯಾವತ್ತೂ ಒಂದು ದಿನ ಬೊಗಳಿದರೆ ಅದು ಮಾಮೂಲಿ ವಿಷಯ ಅಂದುಕೊಳ್ಳಬಹುದು, ಆದರೆ ಪ್ರತಿದಿನ ಅದೇ ಸಮಯಕ್ಕೆ ಸಂಜೆಯಾಗುವಾಗ ಬಂದು ನಿಂತು ಮಧ್ಯರಾತ್ರಿಯವರೆಗೂ ಅತ್ತ ಕಡೆ ಇತ್ತ ಕಡೆ ನೋಡಿ ಬೊಗಳುತ್ತಿರುತ್ತದೆ. ಇಲ್ಲಿಯವರೆಗೆ ಆ ನಾಯಿ ಯಾರಿಗೂ ಮನುಷ್ಯರಿಗೆ ಬೊಗಳಲಿಲ್ಲ. ಕಚ್ಚಲೂ ಇಲ್ಲ. ಅಲ್ಲೇ ಸುತ್ತಮುತ್ತ ಹಾದು ಹೋಗುವ ಎಲ್ಲಾ ನಾಯಿಗಳಿಗೂ ಬೊಗಳಿ ಹೆಮ್ಮೆಟ್ಟಿಸುತ್ತಿದೆ. ಆ ದಾರಿಯಲ್ಲಿ ಹಾದುಹೋಗದಂತೆ ಎಚ್ಚರಿಸುತ್ತಿದೆ. ಪ್ರತಿ ಸಲವೂ ಅಲ್ಲಿ ಬಂದ ನಾಯಿಗಳು ಇದನ್ನ ಕಂಡು ಮತ್ತೆ ತಿರುಗಿ ಬೇರೆ ದಾರಿ ಹಿಡಿಯುತ್ತವೆ. ಹಲವು ಸಮಯದ ನಂತರ ಆ ದಾರಿಯಲ್ಲಿ ಯಾವುದೇ ನಾಯಿಗಳು ಹಾದು ಹೋಗದಂತಾಗಿಬಿಟ್ಟಿದೆ.  ಇದ್ಯಾಕೆ ಹೀಗೆ ಅಂತ ಅಲ್ಲೇ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯಲ್ಲಿ  ಕೇಳಿದಾಗ "ಆ ನಾಯಿಯ ಸಣ್ಣ ಮರಿ ಒಂದಷ್ಟು ಸಮಯದ ಹಿಂದೆ ಇಲ್ಲೇ ರಸ್ತೆ ದಾಟುವಾಗ ಅಪಘಾತಕ್ಕೆ ಈಡಾಗಿ ಸತ್ತು ಹೋಗಿತ್ತು. ಅದಾದ ನಂತರ ತನ್ನ ಮರಿಗಾದ ಸಮಸ್ಯೆ ಬೇರೆ ಯಾವ ನಾಯಿಗಳಿಗಾಗಬಾರದು ಅಂದುಕೊಂಡು ತಾನು ಹಾಗೆ ಬೊಗಳುತ್ತಿದೆ. ನಾನು ಮೌನವಾದೆ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ