ಸ್ಟೇಟಸ್ ಕತೆಗಳು (ಭಾಗ ೯೮೬)- ಮನೆ

ಸ್ಟೇಟಸ್ ಕತೆಗಳು (ಭಾಗ ೯೮೬)- ಮನೆ

ಬದುಕು ಕಣ್ಣಲ್ಲಿ ಕಾಣುತ್ತೆ, ನಾನು ಅವರವರ ಬದುಕಿನ ರೀತಿಯಲ್ಲಿ ಅವರ ಬದುಕು ನಮಗೆ ಅರ್ಥವಾಗುತ್ತೆ ಅಂತ ಅಂದುಕೊಂಡಿದ್ದೆ. ಆದರೆ ಇವತ್ತು ಅವರ ಕಣ್ಣಲ್ಲಿ ಅವರ ಬದುಕು ಕಾಣುತ್ತಿತ್ತು. ತಂದೆ ತಮ್ಮ ಆರಂಭದ ದಿನದಲ್ಲಿ ಕಟ್ಟಿದ ಮನೆ. ಮಣ್ಣಿನ ಮುದ್ದೆಗಳನ್ನು ಸೇರಿಸಿ ಅದರ ಮೇಲೊಂದು ಹಂಚನ್ನ ಹಾಕಿ ಮನೆ ಒಳಗೆ ನಾಲ್ಕು ಜನ ಬದುಕುತ್ತಿದ್ದ ಪುಟ್ಟ ಕುಟುಂಬ. ಮಕ್ಕಳು ಬೆಳೆದು ದೊಡ್ಡವರಾದರು ಆಗಾಗ ಮನೆಯನ್ನ ಹೊಸತು ಮಾಡಬೇಕು ಅನ್ನುವ ಯೋಚನೆಯನ್ನು ಬಿತ್ತಿದ್ರು. ಕನಸುಗಳನ್ನು ಬಿತ್ತುವುದೇನೋ ನಿಜ ,ಆದ್ರೆ ಅದನ್ನ ನನಸು ಮಾಡಿಕೊಳ್ಳುವಷ್ಟು ಶಕ್ತಿ ಇರಬೇಕಲ್ವಾ ?ಅದಕ್ಕಾಗಿ ಶ್ರಮವಹಿಸಿ ಓದಿದ್ರು. ಪರಿಶ್ರಮಕ್ಕೆ ತಕ್ಕ ಹಾಗೆ ಕೆಲಸವನ್ನು ಸಂಪಾದಿಸಿ ಜೀವನದ ಅದ್ಭುತ ಅಂತಿಮ ಗುರಿ ಅಂದ್ರೆ ಅಂದವಾದ ಮನೆಯೊಂದ ಕಟ್ಟುವುದು ಅನ್ನೋದನ್ನ ಇಬ್ರೂ ನಿರ್ಧರಿಸಿದ್ದರು. ಕನಸಿನಂತೆ ಮನೆ ಕಟ್ಟುವುದಕ್ಕೆ ಇಳಿದಾಗ ದುಡ್ಡಿನ ಹೊಂದಾಣಿಕೆಗಾಗಿ ಸುತ್ತಮುತ್ತ ಹುಡುಕಾಡಿ  ಕೆಲವು ಲಕ್ಷವಿದ್ದದ್ದು ಹಲವು ಲಕ್ಷವಾದರೂ ಮನೆಯನ್ನ ಸುಂದರ ಗೊಳಿಸುವುದನ್ನು ನಿಲ್ಲಿಸಲೇ ಇಲ್ಲ. ರಾತ್ರಿ ಹಗಲೆನ್ನದೇ ಮನೆಯ ನಾಲ್ವರು ಪರಿಶ್ರಮಪಟ್ಟು ಮನೆಯೊಂದನ್ನು ಒಪ್ಪವಾಗಿ ಕಟ್ಟಿ ಆ ದಿನ ಗ್ರಹ ಪ್ರವೇಶವನ್ನು ಮಾಡಿ ಹೃದಯದ ಕುಟೀರದ ಒಳಗೆ ನೆಮ್ಮದಿಯಾಗಿ ನೆಲೆಸಿದರು. ಆ ದಿನ ಬಂದ ಬಳಗವೆಲ್ಲವೂ ಮನೆಯ ನೋಡಿ ಆಸ್ವಾದಿಸಿದಾಗ ಅವರ ಬದುಕು ಅವರ ಕಣ್ಣಲ್ಲಿ ಕಾಣ್ತಾ ಇತ್ತು. ನೆಮ್ಮದಿ ಉಸಿರಾಡ್ತಾ ಇತ್ತು. ಸಾರ್ಥಕ ಮನೆಯ ತುಂಬೆಲ್ಲ ಓಡಾಡ್ತಾ ಇತ್ತು. ಕನಸು ಕಂಡವರು ನಾಲ್ಕು ಜನರು ಒಟ್ಟಿಗೆ ಒಂದೇ ಮನಸ್ಸಿನಿಂದ ದುಡಿದ ಕಾರಣ ಮನೆಯೊಂದು ನೆಲದಿಂದ ಮೇಲೆದ್ದು ನಿಂತಿದೆ. ಇವತ್ತು ಬದುಕಿಗೂ ತುಂಬಾ ಸಂತಸವಾಗಿದೆ ಕನಸಿಗೂ ಕೂಡ. ತನ್ನನ್ನ  ಕಂಡವರು ನನಸು ಮಾಡಿದಿರಲ್ಲಾ ಅನ್ನುವ ಖುಷಿಗೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ