ಸ್ಟೇಟಸ್ ಕತೆಗಳು (ಭಾಗ ೯೮೭)- ನೀರು

ಸ್ಟೇಟಸ್ ಕತೆಗಳು (ಭಾಗ ೯೮೭)- ನೀರು

ಪುಟ್ಟ ಮಕ್ಕಳು ನೀರಿನ ಆಟ ಆಡುವುದಕ್ಕೆ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ. ಅಪ್ಪ ಹೇಳಿದ್ದರು ಇವತ್ತು ನಮ್ಮ ತೋಟಕ್ಕೆ ಬೋರ್ ವೆಲ್ ಬರುತ್ತೆ. ಅದು ಭೂಮಿಯ ಆಳಕ್ಕೆ ಇಳಿದಾಗ ಅಲ್ಲಿಂದ ಜಿಮ್ಮುವ ನೀರು ನಮ್ಮ ಬದುಕನ್ನ ಬದಲಾಯಿಸುತ್ತೆ. ನಮ್ಮ ಇಷ್ಟು ದಿನದ ಎಲ್ಲ ಕಷ್ಟಗಳು ಪರಿಹಾರವಾಗುತ್ತೆ. ಗಿಡಗಳು ನಗುತ್ತವೆ ನೆಲ ತಂಪಾಗುತ್ತೆ ಹೊಟ್ಟೆ ತಣ್ಣಗಾಗುತ್ತೆ ಅಂತ. ಅದಕ್ಕೆ ಮಕ್ಕಳು ಬೆಳಗ್ಗೆಯಿಂದಲೇ ಕಾಯುತ್ತಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಆಗುವಾಗ ಒಂದಿಷ್ಟು ನೀರು ಒಮ್ಮೆಲೇ ಚಿಮ್ಮಿ ಬಿಟ್ಟಿತು. ಮಕ್ಕಳಿಗೆ ಅದೊಂದು ಅದ್ಭುತ ಖುಷಿ. ಆ ನೀರು ಹರಿದು ಹೋಗುವುದಕ್ಕೆ ಅವಕಾಶ ಮಾಡಿಕೊಡುತ್ತಾ ಅದೇ ಆಟದಲ್ಲಿ ಮುಳುಗಿಹೋಗಿಬಿಟ್ರು. ಬೋರ್ ವೆಲ್ ಕೊರಿಯೋದನ್ನ ನಿಲ್ಲಿಸಲೇ ಇಲ್ಲ, ಯಾಕೆಂದರೆ ಅದು ಅಂತರಾಳದ ನೀರಲ್ಲ ಹಾಗಾಗಿ ಮತ್ತೆ ಕೊರೆಯುವಿಕೆ ಆರಂಭವಾಗಿದೆ. ನೀರು ಸಿಕ್ತಾನೇ ಇಲ್ಲ. ಅಪ್ಪನ ಮುಖದಲ್ಲಿ ಭಯ ನೋವು ಯಾತನೆ ಕಾಡುತ್ತಿದೆ. ಮಕ್ಕಳಿಗೆ ನೀರಾಟ ಕೆಸರಾಟದ ಖುಷಿಯೇ ಜೀವನವಾಗಿ ಬಿಟ್ಟಿದೆ. ರಾತ್ರಿಯಾದರೂ ಅಪ್ಪ ಹೇಳಿದ ನೀರು ಬರಲೇ ಇಲ್ಲ. ಅಪ್ಪ ಮೌನವಾಗಿ ಬಿಟ್ರು. ಬೋರ್ ವೆಲ್ ಗಿಂತ ಹೆಚ್ಚಾಗಿ ಅಪ್ಪನ ಕಣ್ಣಲ್ಲಿ ಕಣ್ಣೀರು ಇಳಿಯುತ್ತಿತ್ತು. ಅವತ್ತು ರಾತ್ರಿ ಅಪ್ಪನಿಗೆ ನಿದ್ದೆ ಬರಲೇ ಇಲ್ಲ, ಮಕ್ಕಳಿಗೆ ಕೆಸರಿನ ಕನಸಲ್ಲಿ ನಿದ್ದೆ ಬಂದದ್ದು ತಿಳಿಯಲೇ ಇಲ್ಲ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ