ಸ್ಟೇಟಸ್ ಕತೆಗಳು (ಭಾಗ ೯೮೯)- ನದಿ ನೆಲ

ಸ್ಟೇಟಸ್ ಕತೆಗಳು (ಭಾಗ ೯೮೯)- ನದಿ ನೆಲ

ನದಿಗೆ ಮತ್ತು ನೆಲಕ್ಕೆ ಯಾಕೋ ಇಂದು ಬೇಸರವಾಗಿದೆ. ಯಾರು ಅಷ್ಟಾಗಿ ತನ್ನನ್ನು ಗಮನಿಸುತ್ತಿಲ್ಲ ಎನ್ನುವ ಬೇಸರವೇನೊ ಅನ್ನಿಸುತ್ತಿದೆ. ಈ ದಿನ ಪರಿಸರ ದಿನಾಚರಣೆ ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ಸ್ಥಳಗಳನ್ನ ಹುಡುಕಿ ಗಿಡಗಳನ್ನು ನೀಡುತ್ತಿದ್ದಾರೆ. ಎಲ್ಲಾ ಕಡೆಗೆ ಗಿಡಗಳನ್ನು ನೆಟ್ಟು ನಾವು ಅದ್ಭುತ ಪರಿಸರ ಪ್ರೇಮಿ ಎನ್ನುವುದನ್ನು ಜಗತ್ತಿಗೆ ಸಾರೋದಕ್ಕೆ ಹೊರಟಿದ್ದಾರೆ. ಆದರೆ ಅವರು ಸಾಗಿ ಬರ್ತಾ ಇದ್ದ ದಾರಿಯಲ್ಲಿ ಬಿದ್ದಿರುವ ಕಸ ಯಾರಿಗೂ ಕಾಣಲೇ ಇಲ್ಲ. ಊರ ನದಿ ಕಲುಷಿತಗೊಂಡು ಹರಿಯೋದಕ್ಕಾಗದೆ ಒದ್ದಾಡುತ್ತಿದ್ದರು ಕೆಸರು ತುಂಬಿ ನೀರಿಗೆ ಇಂಗುವುದಕ್ಕೆ ಸ್ಥಳಾವಕಾಶವಿಲ್ಲದಿದ್ದರೂ ಅಗಲವಾಗಿ ಹರಿಯುತ್ತಿದ್ದ ನೀರನ್ನು ಅಡ್ಡ ಕಟ್ಟಿ ಇನ್ನೊಂದಷ್ಟು ಜಾಗವಿಲ್ಲದಂತೆ ಮಾಡಿದ್ದರು ಕೂಡ ಅದ್ಯಾವುದೋ ಯಾರಿಗೂ ನೆನಪಾಗ್ತಾ ಇಲ್ಲ. ಹಾಗಾಗಿ ನದಿ ಮತ್ತು ನೆಲಕ್ಕೆ ಬೇಸರವಾಗಿದೆ. ಪರಿಸರ ದಿನಾಚರಣೆ ಅನ್ನುವುದು ಪರಿಸರದ ಎಲ್ಲ ವಸ್ತುಗಳಿಗೂ ಎಲ್ಲಾ ಜೀವಿಗಳಿಗೂ ಒಪ್ಪಿತವಾಗಬೇಕಾದ್ದು. ಬರಿಯ ಗಿಡ ನೆಡುವುದರಿಂದ ಪರಿಸರ ದಿನಾಚರಣೆ ಸಾಧ್ಯವಾಗುವುದಿಲ್ಲ. ಇದನ್ನಾದರೂ ಅರ್ಥಮಾಡಿಕೊಳ್ಳಿ ಅಂತ ನದಿ ಮತ್ತು ನೆಲ ಜೋರು ಮಾತಿನಲ್ಲಿ ಹೇಳುತ್ತಿದ್ದವು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ