ಸ್ಟೇಟಸ್ ಕತೆಗಳು (ಭಾಗ ೯೮) - ಅವನು

ಸ್ಟೇಟಸ್ ಕತೆಗಳು (ಭಾಗ ೯೮) - ಅವನು

ನಾನವನ ಜೊತೆ ಮಾತನಾಡದೆ ಹಲವು ವರ್ಷಗಳೇ ದಾಟಿದ್ದವು. ನನ್ನೊಳಗೆ ಆಲೋಚನಾ ಬುದ್ಧಿ ನಡೆದಾಡಿದ ದಿನದಿಂದ ಅವನ ಜೊತೆ ಮಾತಾಡಿಲ್ಲ. ಈ ದಿನ ಎಲ್ಲ ಕೆಲಸ ಬಿಟ್ಟು ಅಲ್ಲೊಂದು ಕುರ್ಚಿ ಮೇಲೆ ಕೂತು ಮಾತುಕತೆ ಆರಂಭ ಮಾಡಿದೆವು. ಅವನು ತುಂಬಾ ಸಲ ಪ್ರಯತ್ನಪಟ್ಟಿದ್ದ, ನಾನೇ ತಿರಸ್ಕರಿಸಿದ್ದೆ‌. ಆ ನೋವು ಅವನೊಳಗಿದ್ದರೂ ಈಗ ಉತ್ಸಾಹದಿಂದಲೇ ಮಾತಾರಂಭಿಸಿದ್ದ. ನಾನಾರಂಭ ಮಾಡಿದೆ,

"ಹೇಗಿದ್ದೀಯಾ? ತುಂಬಾ ಸಮಯ ಆಯ್ತು ಅಂತ ಕಾಣುತ್ತೆ"

"ನೀನು ಕಣ್ಣು ಬಿಡಲೇ ಇಲ್ಲ ನಾನೇಗೆ ಕಾಣೋದು ನಿನಗೆ"

"ನೀನು ತುಂಬಾ ಸಲ ಕಿರುಚಾಡಿ ಅಮೇಲೆ ಮೌನವಾಗ್ತಿದ್ದೆ"

"ಲೋ, ಪ್ರತಿ ಸಲನೂ ನಾನೇ ಮಾತಾಡುತ್ತೇನೆ, ನಿನಗೆಲ್ಲೋ ಕೇಳುತ್ತೆ? ಬೇರೆಯವರ ಮಾತನ್ನೇ ತಲೆಮೇಲೆ ಹೊರ್ತಿಯಾ!, ಒಂದಿನಾದ್ರೂ ನನ್ನ ಮಾತಿಗೆ ಹು ಅಂದಿದಿಯಾ? ಆ ದಿನ ರಸ್ತೆಯಲ್ಲಿ ಕುಸಿದುಬಿದ್ದ ರಾಜಣ್ಣನನ್ನು ನೋಡಿದ ಕೂಡಲೇ ಉಪಚರಿಸಿದ್ದರೆ ಇವತ್ತು ಸ್ಮಶಾನದ ಬದಲು ಮನೆಯಲ್ಲಿರುತ್ತಿದ್ದರು, ನಾ ಹೇಳಿದೆ ನೀ ಕೇಳಿಲ್ಲ. ಊರಲ್ಲಿ ಬ್ಯಾಂಕಲ್ಲಿ ಸಿಕ್ಕಿದ ಕೆಲಸಕ್ಕೆ ಸೇರು ಅಂದಾಗ ಕೇಳದೆ ದೊಡ್ಡ ಊರಿಗೆ ಬಂದು ನಿರುದ್ಯೋಗಿಯಾಗಿದ್ದಿಯಾ? ರಾತ್ರಿ ಬೇಗ ಮಲಗು, ಬೇಗ ಏಳು, ಅಪ್ಪನಿಗೆ ಸಹಾಯ ಮಾಡು, ತಪ್ಪಾದಾಗ ನೇರವಾಗಿ ಒಪ್ಪಿಕೋ, ಇನ್ನಷ್ಟು ಸುಳ್ಳಿನ ಮಾಲೆ ಕಟ್ಟಬೇಡ,

ಇದ್ಯಾವುದು ಕೇಳದಿದ್ದರೆ ನಾನೇನು ಮಾಡ್ಲಿ? ಈಗ ನಿನ್ನ ಸ್ಥಿತಿ ಯೋಚಿಸು! ಯಾರನ್ನು ಯಾಕೆ ದೂರ್ತಿಯಾ.? ಇನ್ನಾದರೂ ಮಾತು ಕೇಳೋ. ನಾನೇ ನಿನ್ನ  ನಿಜದ ಹಿತೈಷಿ.

ಅವನು ಹೇಳ್ತಾ ಇದ್ದರೆ, ಹೌದಲ್ವಾ! ನಾ  ಕೇಳಬೇಕು ಅನ್ನಿಸ್ತು. ನನ್ನೊಳಗಿನ ಅವನ ಮಾತು, ನಾ ಹೊರಗಿನ ಮಾತಿಗಿಂತ ನನ್ನಂತರಂಗದ ಪಿಸುಮಾತನ್ನ ಮೌನವಹಿಸಿ ಆಲಿಸಬೇಕು. ಅವನು ನಿಜದ ದಾರಿ ತೋರಿಸುತ್ತಾನೆ. ದಿನಕ್ಕೊಮ್ಮೆ ನಾವಿಬ್ಬರೂ ಮಾತಾಡೋಣ ಅಯ್ತಾ? ಅವನಿಗೋ ಸಂಭ್ರಮ. ಒಪ್ಪಿಗೆಯ ಮುದ್ರೆ ಬಿದ್ದಾಗ ಕತ್ತಲು ನಗುತ್ತಿತ್ತು.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ