ಸ್ಟೇಟಸ್ ಕತೆಗಳು (ಭಾಗ ೯೯೧)- ಸಂಬಂಧ

ಸ್ಟೇಟಸ್ ಕತೆಗಳು (ಭಾಗ ೯೯೧)- ಸಂಬಂಧ

ಇದೇನು ಅರ್ಥ ಆಗ್ತಾ ಇಲ್ಲ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಮನಸ್ಸು ಒಪ್ಪಿ ಹಿರಿಯರ ಆಶೀರ್ವಾದದಲ್ಲಿ ಮದುವೆಯಾದರೆ ಜೀವನಪೂರ್ತಿ ಅವರ ಜೊತೆಗೆ ಬದುಕ್ತಾ ಇದ್ವಿ. ಆದರೆ ಈಗ ಯಾವುದೋ ಪ್ರಸಿದ್ಧಿ ಪಡೆದ ಜೋಡಿಗಳು ಒಪ್ಪಿಗೆಯಾಗಿ ಬದುಕಬಹುದು ಅಂತ ಕ್ಷಣದಲ್ಲಿ ನಿರ್ಧರಿಸಿ ಮದುವೆಯಾಗಿ, ಕೆಲವು ದಿನಗಳು ದಾಟಿದ ಮೇಲೆ ಬದುಕು ಕಷ್ಟ ಅನ್ನಿಸಿ ಅವರವರ ದಾರಿಯನ್ನು ಅವರವರೇ ನೋಡಿಕೊಳ್ಳುತ್ತಾರೆ. ಹಾಗಿರುವಾಗ ಒಪ್ಪಿಕೊಳ್ಳುವ ಮೊದಲು ಒಂದು ಸಲ ಯೋಚಿಸಿ ಬದುಕು ಸಾಧ್ಯವಾ ಅಂತ ನಿರ್ಧರಿಸಿ ಒಂದಷ್ಟು ಸಮಯವಾದ ಮೇಲೆ ತೀರ್ಮಾನ ತೆಗೆದುಕೊಳ್ಳುವುದು ಒಳಿತಲ್ಲವೇ? ಪ್ರಸಿದ್ಧಿಯ ಹಂಬಲಕ್ಕೆ ಒಂದಷ್ಟು ಜನರ ನಡುವೆ ನಮ್ಮ ಹೆಸರು ಹರಿದಾಡುತ್ತೆ ಅನ್ನುವ ಕಾರಣಕ್ಕೆ ಮನಸ್ಸು ಹೇಳಿದ ತಕ್ಷಣವೇ ಕೈಗೂಡಿಸಿಕೊಳ್ಳುವುದು ಯಾಕೆ? ಮನಸ್ಸು ಒಪ್ಪಿದವರ ಜೊತೆ ಜೀವನಪೂರ್ತಿ ಬದುಕಿದರೆ ಆ ಬದುಕಿಗೊಂದು ಅರ್ಥ. ಕೆಲವೊಂದು ವಿಚಾರವನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ನಮ್ಮ ಬದುಕನ್ನು ಒಂದಷ್ಟು ಜನ ಅವರ ಬದುಕಿನ ರೀತಿ ನೋಡ್ತಾರೆ ಹಾಗಿರುವಾಗ ನಾವು ಆದರ್ಶಪ್ರಾಯರಾಗಿರೋದು ಒಳಿತಲ್ಲವೇ… ಅಜ್ಜಿಯ ಮಾತು ಖಾರವಾಗಿತ್ತು... ನಾನು ಉತ್ತರ ಕೊಡದೆ ಸುಮ್ಮನಾದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ