ಸ್ಟೇಟಸ್ ಕತೆಗಳು (ಭಾಗ ೯೯೮)- ಭಾರ

ಸ್ಟೇಟಸ್ ಕತೆಗಳು (ಭಾಗ ೯೯೮)- ಭಾರ

ಅವತ್ತು ಸಂಜೆ ಮನೆ ತಲುಪಿದ ಕೂಡಲೇ ಅಪ್ಪ ಕೇಳಿದರು, ನೀನು ಭಾರವಾಗ್ತಾ ಇದ್ದೀಯಾ? ಹಗುರಾಗ್ತಾ ಇದ್ದೀಯಾ? ಅಂತ ನನಗೆ ಅರ್ಥ ಆಗ್ಲಿಲ್ಲ. ಮೊನ್ನೆ ತಾನೆ ನನ್ನನ್ನು ಕನ್ನಡೀಲಿ ನೋಡಿಕೊಂಡಾಗ ಹೊಟ್ಟೆ ಸ್ವಲ್ಪ ದಪ್ಪ ಆಗಿರೋದು ಕಾಣಿಸ್ತು. ಅದಕ್ಕೆ ಅಪ್ಪನಲ್ಲಿ ಹೇಳಿದೆ. ಹೌದಪ್ಪಾ ಈಗ ತಿನ್ನೋದು ಜಾಸ್ತಿಯಾಗಿದೆ.ಹಾಗಾಗಿ ಭಾರ ಆಗ್ತಾ ಇದ್ಡೇನೆ ಅಂತ. ದೇಹದ ಭಾರ ಅಲ್ಲಾ, ಮನಸ್ಸಿನ ಭಾರ. ಅದು ಹಗುರಾಗ್ತಾಯಿದೆಯಾ? ಜಾಸ್ತಿ ಆಗ್ತಾಯಿದೆಯಾ? ಅಂತ. ನನಗೆ ಅರ್ಥ ಆಗ್ಲಿಲ್ಲ. ಅಪ್ಪ ಮುಂದುವರೆಸುತ್ತಾ ನಾವು ಇನ್ನೊಬ್ಬರಿಂದ ಪ್ರೀತಿಯನ್ನು ಪಡೆದುಕೊಳ್ಳುತ್ತೇವೆ, ಸಹಾಯವನ್ನು ಪಡೆದುಕೊಳ್ತೇವೆ. ಹೊಸ ಹೊಸ ಉಡುಗೊರೆಗಳನ್ನು ಸ್ವೀಕರಿಸುತ್ತೇವೆ. ಒಳ್ಳೆಯ ಮಾತುಗಳನ್ನು ಪಡೆದುಕೊಳ್ಳುತ್ತೇವೆ. ಇವೆಲ್ಲವೂ ಕೂಡ ನಮ್ಮನ್ನು ಭಾರ ಮಾಡುತ್ತ ಹೋಗುತ್ತವೆ. ಯಾವತ್ತೂ ನಾವು ವಾಪಾಸು ನೀಡಲೇ ಬೇಕು. ನಾವು ಭಾರವೂ ಆಗಬೇಕು, ಹಗುರವೂ ಆಗಬೇಕು. ಅದೇ ಕ್ಷಣದಲ್ಲಿ ಭಾರ ಹೆಚ್ಚಾದರೆ ಅಥವಾ ಹಗುರಾಗ್ತಾನೇ ಇದ್ದರೆ ನಾವು ಒಳ್ಳೆಯ ದಾರಿಯಲ್ಲಿಲ್ಲ ಎಂದರ್ಥ.ನೀನು ಭಾರ ಆಗ್ತಾ ಇದ್ದೀಯಾ? ಅನ್ನೋದನ್ನ ಸರಿಯಾಗಿ ಯೋಚಿಸಿ ವಿವೇಚನೆ ಮಾಡಿ ಹೇಳು ಅಂತಂದ್ರು. ಈಗ ನಾನು ಕುಳಿತು ನನ್ನ ಭಾರ ಮತ್ತು ಹಗುರವನ್ನು ಲೆಕ್ಕ ಹಾಕ್ತಾ ಇದ್ದೇನೆ. ಮತ್ತು ನೀವು..?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ