ಸ್ಟೇಟಸ್ ಕತೆಗಳು (ಭಾಗ ೯೯) - ಹೀಗಾದರೆ...

ಸ್ಟೇಟಸ್ ಕತೆಗಳು (ಭಾಗ ೯೯) - ಹೀಗಾದರೆ...

ಕಲ್ಲಿನೊಳಗಿನ ಮೂರ್ತಿ ನಿಧಾನವಾಗಿ ಕಾಣಲಾರಂಭಿಸಿದೆ. ಸತೀಶನ ಕೈಚಳಕವೇ ಅಂತಹುದು. ಮನಸ್ಸಿನಲ್ಲಿ ಧ್ಯಾನಿಸಿ ಉಳಿ ಸುತ್ತಿಗೆ ಹಿಡಿದು ಕೆತ್ತನೆ ಆರಂಭಿಸಿದರೆ ಮೂರ್ತಿಯಾಗದೆ ನಿಲ್ಲುವವನಲ್ಲ. ಶುದ್ಧ ಆಚಾರ-ವಿಚಾರಗಳೊಂದಿಗೆ  ತನ್ಮಯತೆಯ ಚಿನ್ಮಯ ಮೂರ್ತಿ ಕಣ್ಣೆದುರು ನಿಲ್ಲುತ್ತದೆ. ಅದನ್ನು ದೇವಾಲಯಕ್ಕೆ ಹಸ್ತಾಂತರಿಸಿ ಇನ್ನೊಂದೂರಿಗೆ ಹೊರಡುತ್ತಾನೆ. ಗಿಡಗಳೆದ್ದು ಮರವಾದವು, ಮಳೆನೀರಿಗೆ ಮಣ್ಣು ಕೊಚ್ಚಿ ಸಮುದ್ರ ಸೇರಿತು. ಗತಿಸಿತು ಕಾಲ. ಯೌವ್ವನ ಕಳೆದು ಮುಪ್ಪಿಗೆ ಕಾಲಿಟ್ಟ ಸತೀಶ. ಅವನ ತೇಜಸ್ಸು ಕುಂದಲಿಲ್ಲ. ತೀರ್ಥಕ್ಷೇತ್ರಗಳ ಪ್ರದಕ್ಷಿಣೆ ಹಾಕಲು ಯೋಚಿಸಿ ಹೊರಟ. ಕೈಮುಗಿದು ಬೇಡಿದ ಎಲ್ಲಾ ದೇವಾಲಯದ ಮೂರ್ತಿಗಳು ಇವನ ನೋಡಿ ನಕ್ಕು ಹರಸಿದವು. ಕೊನೆಗೆ ಕದಂಬಪುರದ ಕೃಷ್ಣನ ದೇವಾಲಯದಲ್ಲಿ ನಿಂತಾಗ ಮೂರ್ತಿ ಮಾತಾಡಿತು "ಅಯ್ಯಾ ವತ್ಸಾ, ಕಲ್ಲೊಳಗಿದ್ದ ನನ್ನ ಕಲ್ಮಶವೆಲ್ಲ ಕಿತ್ತು ಮೂರ್ತಿ ಮಾಡಿದೆ. ಜಡ ರೂಪಿಗೆ ಚೈತನ್ಯ ನೀಡಿದವ ನೀನು. ಆದರೆ ಇಲ್ಲಿ ಬಂದು ಬೇಡುವವರು ಕಲ್ಮಶಗಳನ್ನು ತುಂಬಿ ಬಿಡುತ್ತಿದ್ದಾರೆ. ನಿನ್ನ ಸುತ್ತಿಗೆ ಉಳಿಗಳಿಂದ ಅವರ ಮೌಡ್ಯ ಕಲ್ಮಶಗಳನ್ನು ಕಿತ್ತು ಹೃತ್ಕಮಲ ತೆರೆದು ಪ್ರಾರ್ಥಿಸುವ ಹಾಗೆ ಮಾಡುವೆಯಾ?"

"ಅಥವಾ ಇದನ್ನು ಅವರಿಗೆ ತಿಳಿಸು "ನಾನೇ ರೂಪುಗೊಂಡದ್ದು ಕಲ್ಮಶ ತೊರೆದು, ನೀವು ನಾನಾಗದಿದ್ದರೂ ನನ್ನ ಅಂಶವಾಗಲು ನಿಮ್ಮ ದುರಹಂಕಾರ, ದುರಾಸೆ, ಈರ್ಷೆಗಳ ತೊರೆದು ಬರಬೇಕು. ಕೈ ಮುಗಿಯೋ ಮುನ್ನ ನಿನ್ನೊಳಗೆ ನೋಡಿ ನನ್ನ ಕಾಣೋ"

ಸತೀಶ ಅಯೋಮಯನಾಗಿ ನಿಂತುಬಿಟ್ಟ…

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ