ಸ್ಟೇಟಸ್ ಕತೆಗಳು (೪) - ಅವಕಾಶ

ಸ್ಟೇಟಸ್ ಕತೆಗಳು (೪) - ಅವಕಾಶ

ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ, ಜಾರಿಹೋಗುವ ತೊಂದರೆ ಇಲ್ಲ, ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ. ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛಂದದ ಹಾರಾಟಕ್ಕೆ ಅನುಮತಿ ಇಲ್ಲ. ನೋಡುವ ಕಣ್ಣಿಗೆ ಯಾವುದೇ ಬೇಲಿ ಕಾಣದಿದ್ದರೂ ಮಾತಿನ ಬೇಲಿ ತುಂಬಾ ಬಿಗಿಯಾಗಿದೆ. ಹಕ್ಕಿ ಹಾರೋಕೆ ಪ್ರಯತ್ನಿಸಿ ಆಗಸಕ್ಕೆ ನೆಗೆದು ಒಂದಷ್ಟು ಸಂಭ್ರಮ ಪಡೆಯಿತು. ಅಲ್ಲಿ ಸ್ವಾತಂತ್ರವಿದೆ ಆದರೆ ನೆಮ್ಮದಿ ಇಲ್ಲ. ಗೂಡಿನಲ್ಲಿ ನೆಮ್ಮದಿ ಸ್ವಾತಂತ್ರ್ಯವಿಲ್ಲದಿದ್ದರೂ ಭದ್ರತೆ ಇದೆ. "ಹಕ್ಕಿ ಅಂದಮೇಲೆ ಕಾಳು ಹೆಕ್ಕಬೇಕು , ಹೊಟ್ಟೆ ತುಂಬಿಸಬೇಕು" ಇದಿಷ್ಟೇ ಅಂತ ಸಮಾಜ ನಂಬಿರುವುದು. ಇದಲ್ಲದೆ ಬದುಕು ನಮ್ಮಿಂದ ಸಾಧ್ಯವಿದೆ ಅಂತ ನಂಬಿದ್ದು ಈ ಹಕ್ಕಿ. ಸಾಧಿಸಲು ಹಾರಿದ ರಕ್ಕೆಗೆ ಬಲ ತುಂಬೋರು ಬೇಕಲ್ಲವೆ?. ಎಲ್ಲರೂ ಹಗ್ಗವಿಡಿದು ಎಳೆದು ನಿಂತರೆ ಮುಗಿಲ ತುದಿಯಂಚಿಗೆ ಸಾಗುವುದೆಂತು. ನಿಂತಲ್ಲಿ ಕಣ್ಣು ಕಂಡ ಜಗತ್ತೇ ಅಂತಿಮ ಎನ್ನುವ ಭ್ರಮೆಯನ್ನು ಸೀಳಿ ನಭಕ್ಕೆ ನೆಗೆದಾಗಲೇ ಸುಂದರತೆಯ ಅರಿವಾಗೋದು. ಹಕ್ಕಿ ಪ್ರಯತ್ನಿಸಿದೆ ಆಕಾಶದಲ್ಲಿ ಅವಕಾಶಗಳಿದ್ದಾಗ ಮಾತ್ರ ಹಾರೋಕೆ ಸಾಧ್ಯ. ಗಾಳಿಯ ಗೆಳೆತನವೂ ಬೇಕಲ್ಲವೆ?. ನಿಧಾನವಾಗಿ ರೆಕ್ಕೆ ಬಡಿಯುತ್ತಿದೆ. ನಮಗೆ ಹಕ್ಕಿಯನ್ನ ಏರಿಸಲಾಗದಿದ್ದರೂ ನಿಂತು ಚಪ್ಪಾಳೆ ತಟ್ಟೋಣ. ಏರಲಿ ಮುಗಿಲಾಚೆಗೆ ಸಾಗಿ ತಾರೆಗಳ  ಮಾತಾಡಿಸಿ ಬರಲಿ ನಮಗಲ್ಲಿ ತಲುಪಲಾಗದೇ ಇದ್ದರೂ ನಮ್ಮ ಹಕ್ಕಿಯ ಜನಾಂಗವೊಂದರಿಂದ ಅಲ್ಲಿಗೆ ತಲುಪಿಸಿದ ಸಾರ್ಥಕ್ಯವಾದರೂ ಸಿಗಬಹುದಲ್ಲವೇ .ಗಾಳಿ ಬೀಸಲಾರಂಭಿಸಿದೆ… ಅವಕಾಶವೂ ಕೂಡ ..

-ಧೀರಜ್ ಬೆಳ್ಳಾರೆ

ಇಂಟರ್ನೆಟ್ ಚಿತ್ರ ಕೃಪೆ