ಸ್ಟೇಟಸ್ ಕತೆಗಳು
ನನ್ನ ಗೆಳತಿ ಹಾಗೂ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಶ್ರೀಮತಿ ಸೀಮಾ ಗುರುದತ್ ಇವರ ವಾಟ್ಸಾಪ್ ಸ್ಟೇಟಸ್ ನಲ್ಲಿ ದಿನಾಲೂ ಒಂದು ಪುಟ್ಟ ಕತೆ ಪ್ರಕಟವಾಗುತ್ತಿತ್ತು. ಕತೆಯ ಕೊನೆಗೆ ಧೀರಜ್ ಬೆಳ್ಳಾರೆ ಎಂಬ ಹೆಸರು ಇರುತ್ತಿತ್ತು. ಪುಟ್ಟ ಪುಟ್ಟ ಕತೆಗಳನ್ನು ಓದಲು ಸುಲಭ ಆದರೆ ಬರೆಯುವುದು ಬಹಳ ಕಷ್ಟ, ಮೊಬೈಲ್ ಸ್ಕ್ರೀನ್ ನ ಒಂದು ಪುಟದಲ್ಲಿ ಕತೆ ಮುಗಿಯಬೇಕು. ಅದರಲ್ಲೇ ಕತೆಯ ವಿಷಯ, ಸಂದೇಶ ಕೊಟ್ಟು ಮುಗಿಸಬೇಕು. ಇದು ಪುಟ್ಟ ಕತೆ ಬರೆಯುವ ಕಥೆಗಾರರಿಗೆ ಇರುವ ಸವಾಲು. ಕೆಲ ಸಮಯ ಹೀಗೇ ಕತೆಗಳನ್ನು ಓದಿದೆ. ಒಂದು ದಿನ ಅವಳಲ್ಲಿ ‘ಆ ಕತೆ ಬರೆಯುವ ವ್ಯಕ್ತಿ ಯಾರು ನಿನಗೆ ಗೊತ್ತೇ?’ ಎಂದು ಕೇಳಿದೆ. ಅದಕ್ಕೆ ಅವಳು ‘ನನ್ನ ಪರಿಚಯದವರೊಬ್ಬರು ಹಂಚಿಕೊಳ್ಳುತ್ತಾರೆ, ನಾನು ಅದನ್ನು ಸ್ಟೇಟಸ್ ನಲ್ಲಿ ಬಳಸಿಕೊಳ್ಳುತ್ತಿದ್ದೇನೆ, ಬೇಕಾದರೆ ಆ ವ್ಯಕ್ತಿಯ ದೂರವಾಣಿ ಸಂಖ್ಯೆ ತೆಗೆದುಕೊಡುತ್ತೇನೆ’ ಅಂದಳು. ಹಾಗೆ ಸಿಕ್ಕ ದೂರವಾಣಿ ಮೂಲಕ ಶ್ರೀಯುತ ಧೀರಜ್ ಬೆಳ್ಳಾರೆಯವರ ಪರಿಚಯವಾಯಿತು.
‘ಸಂಪದ’ದಲ್ಲಿ ದಿನಕ್ಕೊಂದು ಕತೆಯನ್ನು ಹಂಚಿಕೊಳ್ಳಬಹುದೇ ? ಎಂದು ಕೇಳಿದಾಗ ಬಹಳ ಸಂತೋಷದಿಂದ ಒಪ್ಪಿಕೊಂಡರು. ಅವರು ಈಗಾಗಲೇ ತಮ್ಮ ಸ್ಟೇಟಸ್ ನಲ್ಲಿ ಸುಮಾರು ೪೫೦ಕ್ಕೂ ಮಿಕ್ಕಿ ಕತೆಗಳನ್ನು ದಿನಕ್ಕೊಂದರಂತೆ ಬರೆದಿದ್ದಾರೆ. ಬಹುತೇಕ ಕತೆಗಳು ಓದಿದ ನಂತರ ಬಹು ಅರ್ಥ ಕೊಡುವ ಕಥೆಗಳೇ. ಇದೇ ಸಮಯದಲ್ಲಿ ಅವರು ‘ನನ್ನ ಕತೆಗಳ ಸಂಕಲನ ಒಂದು ಸದ್ಯದಲ್ಲೇ ಪ್ರಕಟವಾಗಲಿದೆ.’ ಎಂದಿದ್ದರು. ಸಂಕಲನ ಪ್ರಕಟವಾಗಿ ಈಗ ಪುಸ್ತಕ ನನ್ನ ಕೈಸೇರಿದೆ.
ಮೊಬೈಲ್ ಆಕೃತಿಯನ್ನು ಮುಖಪುಟದಲ್ಲಿ ಹೊಂದಿರುವ ‘ಸ್ಟೇಟಸ್ ಕತೆಗಳು' ಪುಸ್ತಕವು ಪುಟಕ್ಕೆ ಒಂದರಂತೆ ನೂರಕ್ಕೂ ಮಿಕ್ಕಿದ ಕತೆಗಳನ್ನು ಹೊಂದಿದೆ. ಪುಸ್ತಕವನ್ನು ಎಲ್ಲಿಂದ ಬೇಕಾದರೂ ಪ್ರಾರಂಭಿಸಬಹುದು. ಏಕೆಂದರೆ ಪ್ರತಿಯೊಂದು ಪುಟದಲ್ಲೂ ಒಂದು ಕತೆಯಿದೆ. ‘ಹುಲಿ ಪತ್ರಿಕೆ' ಖ್ಯಾತಿಯ ಲೇಖಕರಾದ ಅನುಷ್ ಶೆಟ್ಟಿ ಇವರು ಬೆನ್ನುಡಿಯಲ್ಲಿ ಬರೆದಿರುವುದು ಹೀಗೆ “ಕತೆ ಹೇಳುವುದು ಚಂದದ ಅನುಭೂತಿ. ಅದು ಧೀರಜ್ ಗೆ ಸಿದ್ಧಿಸಿದೆ ಮತ್ತು ಬರಹದ ಮೂಲಕ ಆ ಕತೆಗಳನ್ನು ಕಾಪಿಟ್ಟ ಪ್ರೀತಿಯೊಂದೇ ಅವರನ್ನು ಈ ಪುಸ್ತಕದವರೆಗೆ ತಂದು ನಿಲ್ಲಿಸಿದೆ. ‘ಹನಿ ಹನಿ ಕೂಡಿದರೆ ಹಳ್ಳ' ಎಂಬ ಮಾತಿನಂತೆಯೇ ಧೀರಜ್ ನಿತ್ಯವೂ ಬರೆಯುತ್ತಿದ್ದ ಹನಿ ಕತೆಗಳು ಕೂಡಿ ಇಂದು ಈ ಪುಸ್ತಕದ ರೂಪ ತಾಳಿದೆ. ವರ್ಷಗಳು ಕಳೆಯುತ್ತವೆ. ಕಡೆಗೆ ಕತೆಗಳಷ್ಟೆ ಉಳಿಯುತ್ತವೆ. ಹನಿಕತೆಗಳೊಡನೆ ನಿಮ್ಮ ಸಲ್ಲಾಪ ಹೀಗೇ ಸಾಗಿ ಮುಂದೊಂದು ದೊಡ್ಡ ಸಾಗರವಾಗಲಿ ಎಂದು ಆಶಿಸುತ್ತೇನೆ ಧೀರಜ್”.
ಉಡುಪಿ ಜಿಲ್ಲೆಯ ಕಾಲೇಜ್ ಒಂದರಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಧೀರಜ್ ಬೆಳ್ಳಾರೆಯವರು ತಮ್ಮ ಮಾತಿನಲ್ಲಿ ಈ ಕತೆಗಳನ್ನು ಬರೆಯಲು ಪ್ರೇರಣೆಯಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹಾಗೆಯೇ ಈ ಕತೆಗಳು ಪುಸ್ತಕ ರೂಪದಲ್ಲಿ ಹೊರ ಬರಲು ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಪುಸ್ತಕದಲ್ಲಿನ ಕೆಲವು ಹನಿಕತೆಗಳ ಬಗ್ಗೆ ಪುಟ್ಟದಾದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರು ಮುನ್ನುಡಿಯ ಒಂದೆಡೆ ಬರೆಯುತ್ತಾರೆ “ಅವರ ನೂರು ಕತೆಗಳ ನಡುವೆ ಒಂದೆರಡು ಕತೆಗಳಲ್ಲಿ ವಸ್ತುವೋ, ಪಾತ್ರವೋ ಘಟನೆಯೋ, ಸಂಭಾಷಣೆಗಳೋ... ಅಲ್ಲಲ್ಲಿ ಕೆಲವು ಗೋಜಲುಗಳು ಗೊಂದಲಗಳು ಸೂಕ್ಷ್ಮವಾಗಿ ಕಾಣಿಸಿಲ್ಲವೆಂದೇನಲ್ಲ. ಆದರೆ ಅವೇನು ಅಷ್ಟು ಗಂಭೀರ ಸಂಗತಿಗಳಲ್ಲ. ಏಕೆಂದರೆ ತಮ್ಮ ಒಟ್ಟು ಕತೆಗಳಲ್ಲಿ ಮನುಷ್ಯ ಬದುಕಿನ ಬೇರೆ ಬೇರೆ ವಾಸ್ತವ ಮಗ್ಗುಲುಗಳನ್ನು ಧೀರಜ್ ಅವರು ಕಲಾತ್ಮಕವಾಗಿ ಸತ್ವಯುತವಾಗಿ ತಮ್ಮ ಕೆಮರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ... ಮೊದಲ ಸಂಕಲನದಲ್ಲೇ ಓದುಗರನ್ನು ಚಿಂತಿಸುವಂತೆ ಮಾಡುವ ನೈಪುಣ್ಯವನ್ನು ಸಾಧಿಸಿದ್ದಾರೆ. “
ಈ ಸಂಕಲನ ಧೀರಜ್ ಬೆಳ್ಳಾರೆಯವರ ಚೊಚ್ಚಲ ಪುಸ್ತಕ. ಪುಸ್ತಕದ ಪ್ರತೀ ಕತೆಯ ಜೊತೆಗೊಂದು ರೇಖಾ ಚಿತ್ರವೂ ಇದ್ದಿದ್ದರೆ ಇನ್ನಷ್ಟು ಸೊಗಸಿತ್ತು ಎಂದು ನನಗೆ ಅನಿಸಿತು. ಪ್ರತೀ ದಿನ ಕತೆ ಬರೆಯುವುದು ಒಂದು ಸವಾಲೇ ಸರಿ. ಕಥಾವಸ್ತುವನ್ನು ಹುಡುಕಬೇಕು. ಅದನ್ನು ಕತೆಯಾಗಿ, ಕೆಲವೇ ಪದಗಳಲ್ಲಿ ಬರುವಂತೆ ಬರೆಯಬೇಕು. ಸುಖಾಂತ್ಯವೋ, ದುಃಖದ ಅಂತ್ಯವೋ ಓದುವಾಗ ಗೊಂದಲವಾಗಬಾರದು. ಪುಟ್ಟ ಕತೆಯಾದುದರಿಂದ ಬರೆವ ಕೆಲವೇ ಪದಗಳು ಬಹಳ ಸತ್ವಯುತವಾಗಿರಬೇಕು. ಈ ಎಲ್ಲಾ ಅಂಶಗಳನ್ನು ಧೀರಜ್ ಅವರು ಯಶಸ್ವಿಯಾಗಿ ಪೂರೈಸಿದ್ದಾರೆ. ಇನ್ನಷ್ಟು ಕತೆಗಳು ಇವರ ಲೇಖನಿಯಿಂದ ಹೊರಬರಲಿ. ಇನ್ನಷ್ಟು ಪುಸ್ತಕಗಳು ಬರಲಿ. ಸುಮಾರು ೧೧೦ ಪುಟಗಳನ್ನು ಹೊಂದಿರುವ ಈ ಪುಸ್ತಕಕ್ಕೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯ ಧನ ಲಭಿಸಿದೆ.