ಸ್ಟ್ರಾಬೆರಿ ಬೆಳೆಗೆ ಖ್ಯಾತಿ ಪಡೆದ ಮಹಾಬಲೇಶ್ವರ.

ಸ್ಟ್ರಾಬೆರಿ ಬೆಳೆಗೆ ಖ್ಯಾತಿ ಪಡೆದ ಮಹಾಬಲೇಶ್ವರ.

ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ ಹಣ್ಣುಗಳನ್ನು ನೀಡುತ್ತದೆ. 

ನಾವೆಲ್ಲಾ ಮಾರುಕಟ್ಟೆಯಿಂದ ಖರೀದಿ ಮಾಡುವ ಸ್ಟ್ರಾಬೆರಿ ಹಣ್ಣುಗಳು ಬರುವುದು ಮಹಾರಾಷ್ಟ್ರದ ಮಹಾಬಲೇಶ್ವರ ಎಂಬ ಊರಿನಿಂದ. ಇಲ್ಲಿ ಇದನ್ನು ಮಹಾಬಲೇಶ್ವರ ಸ್ಟ್ರಾಬೆರಿ ಎಂಬ ಹೆಸರಿನಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ಬೇರೆ ಬೇರೆ ಪ್ರದೇಶಗಳಿಗೆ ಕಳುಹಿಸಿಕೊಡುತ್ತಾರೆ. ಅಲ್ಲಿ ಅದನ್ನು ಪಾರದರ್ಶಕ ಪ್ಲಾಸ್ಟಿಕ್ ಕಂಟೈನರ್‌ನಲ್ಲಿ ತುಂಬಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಾರೆ. ಬೆಳಗಾವಿ, ಕೊಲ್ಲಾಪುರ, ಸತಾರ ಮೂಲಕ ಪುಣೆ, ಮುಂಬೈಗೆ ಪ್ರಯಾಣಿಸುವಾಗ ಸತಾರ ಪಟ್ಟಣದ ಸಮೀಪ ಎರಡು  ಪ್ರೇಕ್ಷಣೀಯ ಸ್ಥಳಗಳು ದೊರೆಯುತ್ತವೆ. ಒಂದು ದಾರಿ ಸಜ್ಜನ ಘಡ ಎಂಬ ಶಿವಾಜಿ ಮಹಾರಾಜರ ಗುರು ಶ್ರೀ ಸಂತ ರಾಮದಾಸರ ತಪೋಸಿದ್ದಿ ಮಾಡಿದ ಪರ್ವತ ಪ್ರದೇಶದತ್ತ ಸಾಗುತ್ತದೆ. ಇನ್ನೊಂದು ಮಹಾಬಲೇಶ್ವರ ಎಂಬ ಉತ್ತಮ ಪ್ರವಾಸೀ ತಾಣಕ್ಕೆ ಹೋಗುತ್ತದೆ. ಎರಡು ಪ್ರದೇಶಗಳೂ ಎತ್ತರದ ಗುಡ್ಡಗಾಡು ಪ್ರದೇಶಗಳಾಗಿದ್ದು ಸಜ್ಜನಘಡ ಸಮುದ್ರ ಮಟ್ಟದಿಂದ ೩,೫೦೦ ಅಡಿಯಷ್ಟು ಎತ್ತರಕ್ಕೆ ಇದ್ದರೆ ಮಹಾಬಲೇಶ್ವರವೂ ಸುಮಾರು ೩,೭೫೦ ಅಡಿ ಎತ್ತರಕ್ಕೆ ಇದೆ. ಮಹಾಬಲೇಶ್ವರ ಎಂಬುದು ಕೃಷ್ಣಾ ನದಿಯ ಹುಟ್ಟಿನ ಸ್ಥಳ. ಇಲ್ಲಿ ಹುಟ್ಟಿ ಅದು ಕರ್ನಾಟಕ. ಆಂದ್ರ ಪ್ರದೇಶ, ತೆಲಂಗಾಣ ಮೂಲಕ ಅದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕೃಷ್ಣೆಯು ಹಳೆ ಮಹಾಬಲೇಶ್ವರ ಎಂಬ ಸ್ಥಳದ ಮಹಾದೇವ ದೇವಸ್ಥಾನದ ನಂದಿಯ ಬಾಯಿಯಿಂದ ಹುಟ್ಟುತ್ತದೆ. ಈ ನದಿಗೆ ಕೃಷ್ಣವೇಣಿ  ಎಂಬ ಹೆಸರೂ ಇದೆ. ನಮ್ಮ ದೇಶದ ಪ್ರಮುಖ ನದಿಗಳಲ್ಲಿ ನಾಲ್ಕನೇ ಸ್ಥಾನ ಪಡೆದ ನದಿ ಇದು. ಈ ನದಿಯ ನೀರು ಇಡೀ ಮಹಾಬಲೇಶ್ವರ ಊರಿನ ಕೃಷಿಗೆ ಆಧಾರ. ಮಹಾಬಲೇಶ್ವರ ಊರು ಸಹ್ಯಾದ್ರಿ ಬೆಟ್ಟ ಶ್ರೇಣಿಗಳ ಊರು. ಇಲ್ಲಿ ದಿನಾ ಸಾವಿರಾರು ಜನ ಪ್ರವಾಸಿಗರು ಬರುತ್ತಲೇ ಇರುತ್ತಾರೆ.

ಮಹಾಬಲೇಶ್ವರದ  ಊರಿನಾದ್ಯಂತ ಸ್ಟ್ರಾಬೆರಿ ಬೆಳೆಸುತ್ತಾರೆ. ಬರೇ ರೈತರು ಮಾತ್ರವಲ್ಲ, ಹೊಟೇಲುಗಳ ವಠಾರದಲ್ಲೂ ಸಹ ಸ್ಟ್ರಾಬೆರಿ ಬೆಳೆ ಒಂದು ಆಕರ್ಷಣೆ. ದೊಡ್ಡ ಪ್ರಮಾಣದ ಕೃಷಿ ಇಲ್ಲ. ಬಹುತೇಕ ಕಾಲು ಎಕ್ರೆ, ಅರ್ಧ ಎಕ್ರೆ ಪ್ರಮಾಣದಲ್ಲಿ ಬೆಳೆಸುವವರು. ಕೆಲವೇ ಕೆಲವರು ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಬೆಳೆಸುತ್ತಾರೆ. 

ಇದು ನವೆಂಬರ್ ನಿಂದ ಪ್ರಾರಂಭವಾಗಿ ಎಪ್ರೀಲ್ ತನಕದ ಬೆಳೆ. ಅಲ್ಪ ಸ್ವಲ್ಪ ಮೇ ತನಕವೂ ಇರುತ್ತದೆ, ಜೂನ್ ತಿಂಗಳಿಗೆ ಇಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಗಾಲದಲ್ಲಿ ಬೆಳೆ ಇರುವುದಿಲ್ಲ. ಚಳಿಗಾಲದ ವಾತಾರಣದಲ್ಲಿ ಸ್ಟ್ರಾಬೆರಿ ಹಣ್ಣು ಉತ್ತಮವಾಗಿ  ಬರುತ್ತದೆ. ಭಾರತದಲ್ಲಿ ಹರ್ಯಾಣ,  ಜಮ್ಮು ಕಾಶ್ಮೀರ ಬಿಟ್ಟರೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಹಾಬಲೇಶ್ವರ ಸ್ಟ್ರಾಬೆರಿ ಹಣ್ಣಿಗೆ ಹೆಸರುವಾಸಿ. ಉಳಿದ ಎಲ್ಲಾ ಪ್ರದೇಶಗಳಿಗಿಂತ ಮಹಾಬಲೇಶ್ವರದಲ್ಲೇ ಅಧಿಕ ಪ್ರಮಾಣದಲ್ಲಿ ಸ್ಟ್ರಾಬೆರಿ ಬೆಳೆಸಲ್ಪಡುವುದು. ಮುಂಬೈ, ಪುಣೆ ಮೂಲಕ ಬೇರೆ ಬೇರೆ ಊರಿಗೆ ಹೋಗುವ ಬಸ್ಸುಗಳಲ್ಲಿ , ಲಾರಿಗಳಲ್ಲಿ ಮಹಾಬಲೇಶ್ವರದ ಸ್ಟ್ರಾಬೆರಿ ಪ್ಯಾಕೇಟುಗಳು ರವಾನೆಯಾಗುತ್ತದೆ. ಸುಮಾರು ೨೦೦೦ ಎಕ್ರೆ ಪ್ರದೇಶದಲ್ಲಿ ಸುಮಾರು ೩೦೦೦ ಕ್ಕೂ ಹೆಚ್ಚು ರೈತರು ಸ್ಟ್ರಾಬೆರಿ ಬೆಳೆಸುತ್ತಾರಂತೆ. ವಾರ್ಷಿಕ ೨೦,೦೦೦ ಟನ್ ಉತ್ಪಾದನೆ ಆಗುತ್ತದೆ, ಎಕ್ರೆಗೆ ೭-೮ ಟನ್ ಇಳುವರಿ ದೊರೆಯುತ್ತದೆ ಎಂಬ ಲೆಕ್ಕಾಚಾರ ಇದೆ. ಸ್ಟ್ರಾಬೆರಿ ಬೆಳೆಯುವ ರೈತರು ಒಟ್ಟು ಸೇರಿ ಸ್ಟ್ರಾಬೆರಿ ಬೇಸಾಯಗಾರರ ಸಂಘವನ್ನು ಮಾಡಿಕೊಂಡಿದ್ದಾರೆ.

ಸ್ಟ್ರಾಬೆರಿಯನ್ನು ಇಲ್ಲಿ ಕೆಲವರು ಥರ್ಮೋಕಾಲ್ ಕುಂಡಗಳಲ್ಲಿ ಬೆಳೆಸುತ್ತಾರೆ, ಇನ್ನು ಕೆಲವರು ಫ್ಲೆಕ್ಸ್ ಬ್ಯಾನರ್ ಮಾಡಿ  ಹಾಳಾಗುವ ಪ್ಲಾಸ್ಟಿಕ್ ಹಾಳೆಗಳನ್ನು ಮಡಚಿ ಅದರೊಳಗೆ ಬೆಳೆಸುತ್ತಾರೆ, ಇದೆಲ್ಲಾ ಹೆಚ್ಚಾಗಿ ಹೋಟೇಲುಗಳಲ್ಲಿ. ಹೊಟೇಲುಗಳಿಗೆ ಹೋದರೆ ಅಲ್ಲಿ ನಿಮಗೆ ಅಲ್ಲೇ ಬೆಳೆದ ತಾಜಾ ಸ್ಟ್ರಾಬೆರಿ ಹಣ್ಣಿನ ರಸವನ್ನು ಕ್ರೀಂ ಜೊತೆಗೆ ಮಿಶ್ರಣ ಮಾಡಿ ಕೊಡುತ್ತಾರೆ. ಕಡಿಮೆ ಸ್ಥಳಾವಕಾಶದಲ್ಲಿ ಬಹು ಅಂತಸ್ತುಗಳಲ್ಲಿ ಬೆಳೆಸುವುದನ್ನು ಕಾಣಬಹುದು. ಒಂದು ಗಿಡಕ್ಕೆ ಬೀಳುವ ನೀರನ್ನು ಇತರ ಗಿಡಗಳಿಗೂ ಬೀಳುವಂತೆ ವ್ಯವಸ್ಥೆ ಮಾಡಿ ಬೆಳೆಸುವವರು ಇದ್ದಾರೆ.

ರೈತರು ಮಾತ್ರ ಹೀಗೆ ಬೆಳೆಯುವುದಿಲ್ಲ. ನೆಲವನ್ನು ಇತರ ತರಕಾರಿ ಬೆಳೆಗೆ ಹೊಲದ ಸಿದ್ಧತೆ ಮಾಡಿದಂತೆ ಮಾಡಿಕೊಂಡು, ಸಾಕಷ್ಟು ಕೊಟ್ಟಿಗೆ ಗೊಬ್ಬರವನ್ನು ಸೇರಿಸಿ ೪ ಅಡಿಯ ಎತ್ತರಿಸಿದ ಸಾಲು ಮಾಡಿ ಅದಕ್ಕೆ ಮಲ್ಚಿಂಗ್ ಶೀಟು ಹಾಕಿ ಅದರಲ್ಲಿ ಎರಡು ಸಾಲುಗಳಲ್ಲಿ ಸಸಿಯಿಂದ ಸಸಿಗೆ  ೪೫ ಸೆಂ. ಮೀ. ಅಂತರ ಸಸಿ ನೆಟ್ಟು ಬೆಳೆ ಬೆಳೆಸುತ್ತಾರೆ. ಹನಿ ನೀರಾವರಿಯನ್ನು  ಮಾಡುತ್ತಾರೆ. ಇಲ್ಲಿ ರಾಯಲ್ ಸಾವರಿನ್, ದಿಲ್ ಪಸಂದ್, ಬೆಂಗಳೂರು (ಬೆಂಗಳೂರು ಸುತ್ತಮುತ್ತ ಬೆಳೆಯುವ ತಳಿ) ತಳಿಯನ್ನು ಅಲ್ಲದೆ ಕ್ಯಾಲಿಫೋರ್ನಿಯಾದಿಂದ ತರಿಸಿದ ತಳಿಗಳಾದ Torrey, Tioga and Solana ಇದನ್ನೂ  ಯಶಸ್ವಿಯಾಗಿ ಬೆಳೆಸುತ್ತಾರಂತೆ. ಸಸ್ಯಾಭಿವೃದ್ದಿಯನ್ನು ಹಬ್ಬು ಚಿಗುರುಗಳನ್ನು ಕತ್ತರಿಸಿ ನೆಡುವ ಮೂಲಕ ಮಾಡುತ್ತಾರೆ. ಸ್ಟ್ರಾಬೆರಿ ಸಸ್ಯ ಒಂದು ಹಬ್ಬು ಸಸ್ಯವಾಗಿದ್ದು, ವಿಸ್ತಾರಕ್ಕೆ ಬೆಳೆದಂತೆ ಗಂಟುಗಳಲ್ಲಿ ಬೇರು ಬರುತ್ತದೆ. ಬೇರು ಬಂದ ಸಸ್ಯವನ್ನು÷ ಬೇರ್ಪಡಿಸಿ ಸಸ್ಯಾಭಿವೃದ್ದಿ ಮಾಡಲಾಗುತ್ತದೆ. ಒಂದು ಬೆಳೆದ ಗಿಡ ೧೨- ೧೮ ರನ್ನರ್ ಗಳನ್ನು ಒಳಗೊಂಡಿರುತ್ತದೆ. ಸ್ಟ್ರಾಬೆರಿಯ ಸಸಿಗಳನ್ನು ಮಾರಾಟ ಮಾಡುವ ನರ್ಸರಿಗಳೂ ಇಲ್ಲಿ ಇವೆ. ಮಲ್ಚಿಂಗ್ ಶೀಟು ಹಾಕಲು ಪ್ರಾರಂಬಿಸಿದ ಮೇಲೆ ಚಳಿಗಾಲದ ಚಳಿ ಸಸ್ಯಗಳಿಗೆ ಹೆಚ್ಚಾಗದಂತೆ ಮಾಡಲು ಅನುಕೂಲವಾಗಿದೆಯಂತೆ. ಹಿಂದೆ ಹನಿ ನೀರಾವರಿ ಮಾಡುತ್ತಿದ್ದಾಗ ಬರುತ್ತಿದ್ದ ಗುಣಮಟ್ಟದ ಹಣ್ಣುಗಳಿಗಿಂತ ಈಗ ಬರುವ ಹಣ್ಣು ಉತ್ತಮವಾಗಿದೆಯಂತೆ.  

ತಾವು ಬೆಳೆದ ಬೆಳೆಯನ್ನು ಮಹಾಬಲೇಶ್ವರ ಸ್ಟ್ರಾಬೆರಿ ಎಂಬ ಬ್ರಾಂಡ್ ಮೇಲೆ ಪ್ಯಾಕ್ ಮಾಡಿ ಬೇರೆ ಬೇರೆ ಊರುಗಳಿಗೆ  ಕಳುಹಿಸಿಕೊಡುತ್ತಾರೆ. ವಿದೇಶಗಳಿಗೂ ರಫ್ತು ಮಾಡುತ್ತಾರಂತೆ. ಅಲ್ಪ ಸ್ವಲ್ಪ ಸ್ಥಳೀಯವಾಗಿಯೇ ಮಾರಾಟ ಮಾಡುತ್ತಾರೆ. ಕೆಲವು ರೈತರು ರಸ್ತೆ ಬದಿಯಲ್ಲಿ ಸುಮಾರು ೨೫೦ ಗ್ರಾಂ ತೂಗುವಷ್ಟು ಹಣ್ಣನ್ನು ಆಕರ್ಷಕವಾಗಿ ಕಾಣುವಂತೆ ತಟ್ಟೆಗಳ ಮೇಲೆ ಪೇರಿಸಿ ಮಾರಾಟಕ್ಕೆ ಇಡುತ್ತಾರೆ.

ಸ್ಟಾçಬೆರಿ ಹಿಂದೆ ಪಂಚಗನಿ (Panchgani) ಎಂಬ ಸ್ಥಳದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲಾಗುತ್ತಿತ್ತಂತೆ. ಈಗ ಹಾಗಿಲ್ಲ, ಅದಕ್ಕೆ ತಾಗಿಕೊಂಡಿರುವ ಉಳಿದ ಸುತ್ತಮುತ್ತಲ ಜಾಗದಲ್ಲೂ ಬೆಳೆಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿಯೂ ಸ್ಟ್ರಾಬೆರಿ ಉತ್ಪಾದ್ದನೆ ಕುಂಠಿತವಾಗಲಾಂಭಿಸಿದೆ. ಇಲ್ಲಿನ ಸ್ಟ್ರಾಬೆರಿ ಬೆಳೆಗಾರರ ಸಂಘದ ಪ್ರಮುಖರಾದ ಬಾಲಾಸಾಹೇಬ್ ಬಿಲಾರೆ ಅವರ ಪ್ರಕಾರ ಮಳೆ ಕಡಿಮೆ ಆದುದು ಮತ್ತು ಹಾವಾಮಾನದ ವ್ಯತ್ಯಾಸ ಸ್ಟ್ರಾಬೆರಿ ಬೇಸಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆಯಂತೆ. ಈಗ ಹಿಂದಿನಂತೆ ಇಳುವರಿ ಬರುತ್ತಿಲ್ಲ. ಕೀಟಗಳ ಸಮಸ್ಯೆ, ರೋಗ ಸಮಸ್ಯೆ ಅತಿಯಾಗುತ್ತಿದೆ. ಆದರೂ ರೈತರು ಈ ಪ್ರದೇಶದ ಘನತೆಯನ್ನು  ಉಳಿಸಿಕೊಳುವುದಕ್ಕೋಸ್ಕರ ಸ್ಟ್ರಾಬೆರಿ ಬೆಳೆಸುತ್ತಿದ್ದಾರಂತೆ. ಈಗ ರೈತರು ನೀರಾವರಿಗಾಗಿ ಮಲ್ಚಿಂಗ್ ಶೀಟು ಹಾಕುತ್ತಿದ್ದಾರೆ, ಹನಿ ನೀರಾವರಿ ಮಾಡುತ್ತಿದ್ದಾರೆ. ಇದು ೬೦ % ಕ್ಕೂ ಹೆಚ್ಚಿನ ನೀರಿನ ತೃಷೆಯನ್ನು ಕಡಿಮೆ ಮಾಡಿದೆ. ಆದರೂ ಅಂತರ್ಜಲದ ಕೊರತೆ ಇದೆ. ಅತಿಯಾದ ಚಳಿ ಸಹ ಬೆಳೆಗೆ ಉತ್ತಮವಲ್ಲ. ಕಳೆದ ಎರಡು ವರ್ಷಗಳಿಂದ ಚಳಿ ಹೆಚ್ಚಾಗಿ ಗುಣಮಟ್ಟದ ಸ್ಟ್ರಾಬೆರಿ ಉತ್ಪಾದಿಸಲು ಕಷ್ಟವಾಗುತ್ತಿದೆ. ಚಳಿ ಕಳೆದ ಮೇಲೆ ಬರುವ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಉತ್ಪಾದನೆಯೂ ಹೆಚ್ಚು ಇರುತ್ತದೆ.

ಸ್ಟ್ರಾಬೆರಿಗೆ ಫಲವತ್ತಾದ ಸಾವಯವ ಅಂಶ ಉಳ್ಳ ನೀರು ಬಸಿಯಲು ಅನುಕೂಲ ಇರುವ ಮಣ್ಣು ಬೇಕು. ಸಾಕಷ್ಟು ರಾಸಾಯನಿಕ ಗೊಬ್ಬರಗಳೂ ಬೇಕು. ಒಂದು ಎಕ್ರೆಗೆ ೨೦- ೨೫ ಟನ್ ಸಾವಯವ ಗೊಬ್ಬರ, ೪೫ ಕಿಲೊ ಸಾರಜನಕ, ೩೦ ಕಿಲೋ ರಂಜಕ, ಮತ್ತು ೪೦ ಕಿಲೋ ಪೊಟ್ಯಾಶಿಯಂ ಗೊಬ್ಬರ ಬೇಕಾಗುತ್ತದೆ. ಈಗ ಹೆಚ್ಚಿನವರು ಈ ಪ್ರಮಾಣದ ಗೊಬ್ಬರಗಳನ್ನು  ನೀರಿನಲ್ಲಿ ಕರಗುವ ಗೊಬ್ಬರವಾಗಿ ನೀಡುತ್ತಾರೆ. ಸಾರಜನಕ ಗೊಬ್ಬರಗಳನ್ನು  ಕೊಡುವುದರಿಂದ  ಸಸ್ಯ ಬೆಳವಣಿಗೆ ಉತ್ತಮವಾಗಿ ಇಳುವರಿ ಹೆಚ್ಚು ಬರುತ್ತದೆಯಂತೆ. ಇದಲ್ಲದೆ ಸಾಕಷ್ಟು ಬೆಳವಣಿಗೆ ಪ್ರಚೋದಕಗಳನ್ನೂ ಬಳಕೆ ಮಾಡುತ್ತಾರೆ.

ಬೆಳೆಗೆ ಸಾಕಷ್ಟು ಕೀಟ – ರೋಗ ಸಮಸ್ಯೆಗಳೂ ಇದೆ. ಸಾಮಾನ್ಯವಾಗಿ  ಮೈಟ್‌ಗಳು ಇದ್ದೇ ಇರುತ್ತದೆ. ಎಲೆ ತಿನ್ನುವ ಹುಳು, ಕಾಯಿ ತಿನ್ನುವ ಹುಳುಗಳು ಮಮೂಲಿ. ಇದಕ್ಕಾಗಿ ಇಲ್ಲಿ  ರೈತರು ಮೋನೋಕ್ರೋಟೋಫೋಸ್ ಕೀಟನಾಶಕವನ್ನು ಸಿಂಪಡಿಸುತ್ತಾರೆ. ನೀರಿನಲ್ಲಿ ಕರಗುವ ಗಂಧಕವನ್ನೂ  ಧೂಳೀಕರಿಸುತ್ತಾರಂತೆ. ಸಸಿ ಕೊಳೆಯುವ ಫೈಟೋಪ್ಥೆರಾ ಶಿಲೀಂದ್ರ ರೋಗ , ಬೇರು ಕೊಳೆಯುವ ರೋಗ ಇರುತ್ತದೆ. ಇದಕ್ಕೆ ಕ್ಯಾಫ್ಟನ್, ಮ್ಯಾಂಕೋಜೆಬ್ ಮುಂತಾದ ಶಿಲೀಂದ್ರ ನಾಶಕವನ್ನು  ಬಳಕೆ ಮಾಡುತ್ತಾರೆ. ಸಸಿ ನೆಟ್ಟು ೩ ತಿಂಗಳಿಗೆ ಹೂ ಬರಲು ಪ್ರಾರಂಭವಾಗುತ್ತದೆ. ಸುಮಾರು ೬ ತಿಂಗಳ ತನಕವೂ ಹಣ್ಣು ಬಿಡುತ್ತಿರುತ್ತದೆ. 

ಪಂಚಗನಿಯ ಮಾಪ್ರೋ ಗಾರ್ಡನ್ ಸ್ಟ್ರಾಬೆರಿ ಮೂಲ ಸ್ಥಳವಾಗಿದ್ದು ಇಲ್ಲಿ ಎಪ್ರೀಲ್ ಎರಡನೇ ವಾರ ಸ್ಟ್ರಾಬೆರಿ ಹಬ್ಬ ನಡೆಯುತ್ತದೆಯಂತೆ. ಇಲ್ಲಿ ಸ್ಟ್ರಾಬೆರಿ ಬೆಳೆಸುತ್ತಾರೆ, ಮಾರಾಟ ಮಾಡುತ್ತಾರೆ. ಮಾಲಾಸ್ ಪ್ರೂಟ್ಸ್ ಎಂಬ ಹೆಸರಿನಲ್ಲಿ ಹಣ್ಣಿನ ಬೇರೆ ಬೇರೆ ಉತ್ಪನ್ನಗಳನ್ನೂ ತಯಾರಿಸುತ್ತಾರೆ. ಇಲ್ಲಿಯ ರೆಸ್ಟೋರೆಂಟ್‌ಗಳಲ್ಲಿ ತಾಜಾ ಸ್ಟ್ರಾಬೆರಿಯ ರಸ ಸವಿಯಲು ದೊರೆಯುತ್ತದೆ. ಇಲ್ಲಿ ಎಲ್ಲಿ ನೊಡಿದರೂ ಸ್ಟ್ರಾಬೆರಿಯ ಚಿತ್ರಗಳನ್ನೇ ನೊಡಬಹುದು. ಮಕ್ಕಳು ಆಡುವ ಆಟಿಕೆಗಳಿಂದ ಹಿಡಿದು, ಗಾಡಿ, ಎಲ್ಲರಲ್ಲೂ ಸ್ಟ್ರಾಬೆರಿ ಹಣ್ಣಿನ ಚಿತ್ರಣ. ಮಹಾಬಲೇಶ್ವರಕ್ಕೆ ಹೋದರೆ ಅಲ್ಲಿ ನಿಮಗೆ ಸ್ಟ್ರಾಬೆರಿ ತೋಟಗಳಿಗೇ ಭೇಟಿಕೊಡಬೇಕಾದರೆ ಅದಕ್ಕೂ ಸಹ ಟೂರ್ ಪ್ಯಾಕೇಜ್‌ಗಳು ಇವೆ. ಇದಕ್ಕಾಗಿಯೇ ದೇಶ ವಿದೇಶಗಳಿಂದ ಜನ ಬರುತ್ತಿರುತ್ತಾರೆ. ಇಲ್ಲಿ ಬರೇ ಸ್ಟ್ರಾಬೆರಿ ಮಾತ್ರವಲ್ಲ. ತರಕಾರಿ ಬೆಳೆಸುವವರೂ ಇದ್ದಾರೆ. ಹಿಪ್ಪುನೇರಳೆ (ಮಲ್ಬೆರಿ) ಹಣ್ಣೂ ಸಹ ಗರಿಷ್ಟ ಪ್ರಮಾಣದಲ್ಲಿ ಮಾರಲ್ಪಡುತ್ತದೆ. ರೈತರು ಹೊಲ ಸುತ್ತ ಹಣ್ಣು ಕೊಡುವ ಹಿಪ್ಪುನೇರಳೆ ಸಸಿಯನ್ನು ಬೆಳೆಸಿರುತ್ತಾರೆ. ಪ್ರವಾಸಿ ತಾಣ ಅದ ಕಾರಣ ಇಲ್ಲಿಯ ರೈತರಿಗೆ ಸ್ವಲ್ಪ ಮಟ್ಟಿಗೆ ಸ್ಥಳೀಯವಾಗಿಯೇ ಮಾರಾಟ ಮಾಡಲು ಅನುಕೂಲವಾಗಿದೆ. ಪ್ರವಾಸಿಗರ ಪ್ರಚಾರ ಸಹ ಇಲ್ಲಿನ ಬೆಳೆಗೆ ಅನುಕೂಲವಾಗಿದೆ.

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ