ಸ್ತಬ್ಧಚಿತ್ರಗಳೆಡೆ ಚಿತ್ರವಿಚಿತ್ರ ನಡೆ!

ಸ್ತಬ್ಧಚಿತ್ರಗಳೆಡೆ ಚಿತ್ರವಿಚಿತ್ರ ನಡೆ!

ಬರಹ

 

  * "ವೀಕ್ಷಕರೇ, ನಿಮಗೆಲ್ಲ ಸ್ವಾಗತ, ಸುಸ್ವಾಗತ."
  * "......ಆದಂಥ ಡಾ......ಅವರು ಜನರತ್ತ ಕೈಬೀಸ್ತಾ ಇದ್ದಾರೆ. ನಿಜಕ್ಕೂ ಒಂದು ಆನಂದದ ಕ್ಷಣ."
  * "ಡಾ.....ಅವರು ಪ್ರೇಕ್ಷಕರತ್ತ ಕೈಬೀಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರೇಕ್ಷಕರು ಅತೀ ಆನಂದದಿಂದ ಇದನ್ನು ನೋಡ್ತಾ ಇದ್ದಾರೆ."
  - ಹೀಗೆ ದೂರದರ್ಶನದ ’ಚಂದನ’ ವಾಹಿನಿಯ ನಿರೂಪಕರಿಂದ ಪರಾಕು ಹೇಳಿಸಿಕೊಳ್ಳುತ್ತ, ಸುಮ್ಮಸುಮ್ಮನೇ ಜನರ ಕೈಲುಕುತ್ತ, ಕಲಾವಿದರ ಬೆನ್ನು ತಟ್ಟುತ್ತ, ಈ ಸಲದ ಮೈಸೂರು ದಸರಾ ಜಂಬೂ ಸವಾರಿಯ ನೇರ ಪ್ರಸಾರದಲ್ಲಿ (ಪ್ರತಿ ವರ್ಷದಂತೆ ಈ ವರ್ಷವೂ) ಅತಿ ಹೆಚ್ಚು ಚೌಕಟ್ಟುಗಳಲ್ಲಿ ವೀಕ್ಷಕರಿಗೆ ದರ್ಶನ ಕೊಟ್ಟ ಅತಿ ಗಣ್ಯ ವ್ಯಕ್ತಿ ಅದೇ ’ಚಂದನ’ ವಾಹಿನಿಯ ಮುಖ್ಯಸ್ಥ ಡಾ. ಮಹೇಶ ಜೋಶಿ!
  -*-
  * "ವೀಕ್ಷಕರೇ, ಈಗ ಒಂದು ವಾಣಿಜ್ಯ ಬ್ರೇಕ್."
  * "ನಮ್ಮ ಕ್ಯಾಮರಾದವರು ಅಡ್ವಾಂಟೇಜಿಯಸ್ ಪೊಜಿಷನ್‌ನಲ್ಲಿ ಕ್ಯಾಮರಾ ಇಟ್ಟು ನಮಗೆ ಈ ದೃಶ್ಯ ತೋರಿಸ್ತಾ ಇದ್ದಾರೆ."
  * "ವಿ ಆರ್ ಗೋಯಿಂಗ್ ಟು ಟೇಕ್ ಎ ಷಾರ್ಟ್ ಬ್ರೇಕ್ ನೌ."
  * "ಲೆಟ್ ಅಸ್ ಟೇಕ್ ಎ ಕಮರ್ಷಿಯಲ್ ಬ್ರೇಕ್."
  * "ಹೋಸ್ಟ್ ಟ್ಯಾಬುಲೋ ಲಾಸ್ಟ್ ಬರುತ್ತೆ."
  * "ನೀವೆಲ್ಲ ನೇರಪ್ರಸಾರ ಎಂಜಾಯ್ ಮಾಡಿದೀರಿ ಅನ್ಸುತ್ತೆ. ನಮಸ್ಕಾರ."
  - ಹೀಗೆ ಕನ್ನಡನಾಡಿನ ಹಬ್ಬದಲ್ಲಿ ಆಂಗ್ಲ ಆಣಿಮುತ್ತುಗಳನ್ನು ಉದುರಿಸುತ್ತಿದ್ದುದು ಶಂಕರ್ ಪ್ರಕಾಶ್, ನಾಗಣ್ಣ, ಜಗದೀಶ್ ಈ ನಿರೂಪಕ ತ್ರಿಮೂರ್ತಿ ತಂಡ. ಕನ್ನಡಕ್ಕಾಗಿ ಕೈಯೆತ್ತುವುದು ದಂಡ!
  -*-
  * "ಆನೆ ಬಲರಾಮ ತನ್ನ ಸಹಪಾಠಿ(!)ಗಳೊಂದಿಗೆ ಬರ್‍ತಾ ಇದ್ದಾನೆ."
  * "ದಸರಾ ವೈಭವ ಆಹೋ(!)ರಾತ್ರಿ ಇರುವಂಥದು."
  * "ದಸರಾ ಸಂದರ್ಭದ ಸಂದರ್ಭದಲ್ಲಿ..."
  * "ಈಗ ಒಂದು ಷಿಪ್ ನೋಡ್ತಾ ಇದೀವಿ. ದೋಣಿಯನ್ನ ನೋಡ್ತಾ ಇದೀವಿ."
  * "ಅಣ್ಣಿಗೇರಿಯ ದೇವಸ್ಥಾನದಲ್ಲಿ ಪಂಪಕವಿಯ ಪ್ರೌಢಿಮೆಯನ್ನು(?)(!) ನೋಡಿದಿವಿ."
  - ಇವು ವಿರೂಪಕ, ಕ್ಷಮಿಸಿ, ನಿರೂಪಕ ಶಂಕರ್ ಪ್ರಕಾಶರ ಪ್ರಕಾಶಮಾನ ನುಡಿಗಳು. ಅರ್ಥಶುದ್ಧಿ, ಭಾಷಾಶುದ್ಧಿ, ವ್ಯಾಕರಣ? ಲೇಕರ್ ಕ್ಯಾ ಕರ್‌ನಾ?
  -*-
  * "ಜಿಲ್ಲಾ ಪಂಚಾಯತ್ ಉಡುಪಿಯನ್ನು ನೋಡುತ್ತಿದ್ದೇವೆ. ಜಿಲ್ಲಾ ಪಂಚಾಯತ್ ಕೊಪ್ಪಳವನ್ನು ನೋಡುತ್ತಿದ್ದೇವೆ..."
  - ಇದು ಶಂಕರ ಉವಾಚ. ಆದರೆ ನಾವು ಅಲ್ಲಿ ನೋಡುತ್ತಿದ್ದುದು ಸ್ತಬ್ಧಚಿತ್ರರೂಪಿ ದೇವಸ್ಥಾನ, ಕೋಟೆ...! ಶಂಭೋ ಶಂಕರ!
  -*-
  * ’ಚಂದನ’ ನಿರೂಪಕನ ಅಳತೆಗೋಲಿನ ಪ್ರಕಾರ ಜಂಬೂ ಸವಾರಿ ಮೆರವಣಿಗೆಯ ಉದ್ದ ನಾಲ್ಕು ಕಿಲೋಮೀಟರ್.
  - ’ಟಿವಿ ೯’ ನಿರೂಪಕನ ಅಳತೆಗೋಲಿನ ಪ್ರಕಾರ ಮೆರವಣಿಗೆಯ ಉದ್ದ ಎರಡು ಕಿಲೋಮೀಟರ್!
  -*-
  * ಶಂಕರ್ ಪ್ರಕಾಶ್ ಅವರು ವೀಕ್ಷಕ ವಿವರಣೆಯುದ್ದಕ್ಕೂ "ಬಹುಶಃ, ಬಹುಶಃ" ಎನ್ನುತ್ತಿದ್ದರು.
  - ಬಹುಶಃ ಅವರಿಗೆ ತಮ್ಮ ಮಾತಿನಮೇಲೇ ನಂಬಿಕೆಯಿರಲಿಲ್ಲ! ಇಂತಹವರನ್ನು ಹೊಂದಿರುವ ಭಾರತ ನಿಜಕ್ಕೂ ಪ್ರಕಾಶಿಸುತ್ತಿದೆ.
  -*-
  * ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈದು ವೇದಿಕೆಯಿಂದ ಕೆಳಗಿಳಿದು ಹೋದ ಮುಖ್ಯಮಂತ್ರಿಗಳು ಮಾಧ್ಯಮದವರ ಕೋರಿಕೆಯಂತೆ ಅವರ ಕ್ಯಾಮೆರಾಗಳಿಗಾಗಿ ಮತ್ತೊಮ್ಮೆ ವೇದಿಕೆ ಹತ್ತಿ ಮತ್ತೊಮ್ಮೆ ಪುಷ್ಪಾರ್ಚನೆ ಮಾಡಿದರು!
  - ಮಾಧ್ಯಮವು ನಿಜಕ್ಕೂ ಶಕ್ತಿಶಾಲಿ.
  -*-
  * ’ನವಭಾರತ ರಥ’ ಎಂಬ ಹೆಸರು ಹೊತ್ತ, ಲೋಕಸಭೆ ಕಟ್ಟಡದ ಸ್ತಬ್ಧಚಿತ್ರವನ್ನು ಯಂತ್ರದೋಷದಿಂದಾಗಿ ಒಂದಷ್ಟು ದೂರದವರೆಗೆ ಜನರು ತಳ್ಳಬೇಕಾಯಿತು!
  - ಎಷ್ಟು ಅರ್ಥಪೂರ್ಣ!
  - ಪ್ರಿಯ ವೀಕ್ಷಕರೇ, ಅಲ್ಲ, ಪ್ರಿಯ ಓದುಗರೇ, ಇದು ಈ ಸಲದ ಮೈಸೂರು ದಸರಾ ಜಂಬೂಸವಾರಿಯ ಸ್ತಬ್ಧಚಿತ್ರಗಳ ಎಡೆ(ಯಲ್ಲಿ) ನಾನು ಗಮನಿಸಿದ ಚಿತ್ರ ವಿಚಿತ್ರ ನಡೆ.