ಸ್ತ್ರೀಯಾನ

ಸ್ತ್ರೀಯಾನ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ ಆರ್ ಆನಂದ
ಪ್ರಕಾಶಕರು
ಮೈಸೂರು ಸಾಹಿತ್ಯ ದಾಸೋಹ, ವಿವೇಕಾನಂದ ನಗರ, ಮೈಸೂರು
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ ೨೦೨೨

ಲೇಖಕರಾದ ಎಂ ಆರ್ ಆನಂದ ಅವರು ಬರೆದ ಸುಮಾರು ನಾಲ್ಕುನೂರು ಚಿಲ್ಲರೆ ಪುಟಗಳ ಸರಳ ಶೈಲಿಯ ಕೃತಿಯೇ ‘ಸ್ತ್ರೀಯಾನ'. ಇಲ್ಲಿ “ವೈದೇಹಿ ಮತ್ತು ಮಾನಸಿಯರಂತೂ ನಿಜವಾದ ಅರ್ಥದಲ್ಲಿ ಶೋಷಿತರು. ಶಿಕ್ಷಣ ಮತ್ತು ಉದ್ಯೋಗವಿದ್ದರೂ ಇವರಿಬ್ಬರು ತಮಗಾದ ಅನ್ಯಾಯ ಮತ್ತು ಮಾನಭಂಗಗಳನ್ನು ಪ್ರತಿಭಟಿಸದೇ ಮೌನವಾಗಿ ಪುರುಷ ದಬ್ಬಾಳಿಕೆಯನ್ನು ಸಹಿಸಿ ಕಣ್ಣೀರು ಹಾಕುತ್ತಾರೆ. ಕಾದಂಬರಿಯ ಆ ಕಾಲಮಾನವೇ ಹಾಗೆ: 'ಪ್ರಾಣಕ್ಕಿಂತ ಮಾನ ದೊಡ್ಡದು' ಎಂಬುದು ಆಗಿನ ಮೌಲ್ಯವಾಗಿತ್ತು,” ಎನ್ನುವುದು ಕಾದಂಬರಿಗೆ ಮುನ್ನುಡಿಯನ್ನು ಬರೆದ ಲೇಖಕ ಹೆಚ್.ಎನ್. ಮಂಜುರಾಜ್ ಅವರ ಅಭಿಪ್ರಾಯ. ಅವರ ಮುನ್ನುಡಿಯ ಇನ್ನಷ್ಟು ಸಾಲುಗಳು ನಿಮ್ಮ ಓದಿಗಾಗಿ...

“ಆನಂದರ ಬರೆವಣಿಗೆಯ ಬದ್ಧತೆಯನ್ನು ನಾನು ತುಂಬ ಮೆಚ್ಚಿದವನು ಜೊತೆಗೆ ಯಾವುದೇ ಬಾಹ್ಯಾಡಂಬರಗಳಿಲ್ಲದ ಅವರ ಸರಳ ಸಾದಾಸೀದ ಶೈಲಿಯನ್ನು ಇಷ್ಟಪಟ್ಟವನು. ಮಾತೆತ್ತಿದರೆ ಅವರು ನಿಮ್ಮಗಳ ಹಾಗೆ ಕಲಾತ್ಮಕವಾಗಿ ಮತ್ತು ಸಾಹಿತ್ಯಾಗಿ ಅಲಂಕಾರಗಳಿಂದ ಬರೆಯಲು ಬಲ್ಲವನಲ್ಲ; ನಾನು ಕಂಡದ್ದು ಮತ್ತು ಕಾಣಿಸಬೇಕೆಂಬ ತುಡಿತಗಳಿಂದಾಗಿ ಹಾಗೆಯೇ ಬರೆಯುವವನು' ಎಂದು ಹೇಳುತ್ತಿರುತ್ತಾರೆ. ಓರ್ವ ನಿವೃತ್ತ ಬ್ಯಾಂಕ್ ಅಧಿಕಾರಿಯು ಬದುಕಿನ ಒಂದು ಕಾಲಘಟ್ಟದ ಸಂದರ್ಭದಲ್ಲಿ ತಮ್ಮ ಬಿಡುವಿನ ಅವಧಿಯನ್ನು ಹೀಗೆ ಕ್ರಿಯಾಶೀಲತೆಯತ್ತ ಮುಖ ಮಾಡಿಕೊಂಡು, ಸಾಹಿತ್ಯಕ್ಕೆ ತಮ್ಮನ್ನು ತೆತ್ತುಕೊಂಡು, ಅದರ ಸಹವಾಸದಲ್ಲಿ ಜೀವನಪ್ರೀತಿಯನ್ನೂ ಆಕರ್ಷಣೆಯನ್ನೂ ಹೊಂದಿ, ತಮ್ಮ ಸಹೃದಯತೆಯನ್ನು ಇತರರಿಗೂ ಹಂಚುತ್ತಾ ಪಾಸಿಟಿವಿಟಿಯನ್ನು ಪಸರಿಸುವುದಿದೆಯಲ್ಲ, ಇದೇ ಆನಂದರ ಆನಂದದ ವಿಷಯ ಮತ್ತು ಮಾದರಿ ನೀತಿ ಸಂಹಿತೆ!

ಮೊಗ್ಗರಳುವಾಗ ಮತ್ತು ಕಥಾ ಕಲರವ ಎಂಬ ತಮ್ಮ ಕೃತಿಗಳ ಬಿಡುಗಡೆ ಸಮಾರಂಭಕ್ಕೆ ನನ್ನನ್ನೂ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ, ನಾನು ಇದನ್ನು ಸ್ಪಷ್ಟಪಡಿಸಿದ್ದೆ ಕೂಡ, ಇಂಥವರು ಬರೆಯುವುದೇ ಸಾಧನೆ ಮತ್ತು ಸಾಹಿತ್ಯಕ ಸ್ಪಂದನೆ ಎಂಬುದನ್ನು ವಿಸ್ತ್ರತವಾಗಿ ಮಂಡಿಸಿದ್ದೆ. ಅದರ ಮುಂದುವರಿದ ರೂಪವಾಗಿ ನಾನು ಇವರ ಹೊಸ ಕಾದಂಬರಿಯನ್ನು ನೋಡಲು ಇಷ್ಟಪಡುತ್ತೇನೆ.

ಕಾದಂಬರಿಯ ಹೆಸರು ಸ್ತ್ರೀಯಾನ. ಅಂದರೆ ಮೂರು ತಲೆಮಾರುಗಳ ಹ೦ತ ಹ೦ತದ ಜೀವನ ಚಿತ್ರಣವು ಈ ಕೃತಿಯಲ್ಲಿ ಅಭಿವ್ಯಕ್ತವಾಗಿದೆ. ಕಾದಂಬರಿಯಲ್ಲಿ ಬರುವ ಸ್ತ್ರೀಯರೇ ಇದರ ಕೇಂದ್ರ. ಮನೆಯನ್ನೂ ಮನೆತನವನ್ನೂ ಕಟ್ಟುತ್ತಾ, ಉಳಿದವರ ಬದುಕಿಗೆ ಚಿಮ್ಮುಹಲಗೆಯಾಗುತ್ತಾ, ಸೇವೆಯೇ ತಮ್ಮ ಜೀವ-ಜೀವನದ ಸಾರ್ಥಕ್ಯವೆಂದು ಹಿರಿದಾಗಿ ಬಾಳಿದ ಮಹಿಳೆಯರು ಓದುಗರ ಅನುಕಂಪ ಮತ್ತು ಪ್ರೀತಿಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.

ಆನಂದರ ಕಥನಗಾರಿಕೆ ತುಂಬಾ ಚೆನ್ನಾಗಿಯೇ ಮೂಡಿಬಂದಿದೆ. ಸುಮಾರು ಐವತ್ತು-ಅರುವತ್ತು ವರುಷದ ಹಿಂದಿನ ಮೈಸೂರು, ಶ್ರೀರಂಗಪಟ್ಟಣ ಮೊದಲಾದ ಹಳೆಯ ಮೈಸೂರು ಪ್ರಾಂತ್ಯದ ಚಿತ್ರಣ ಅತ್ಯಂತ ವಾಸ್ತವಿಕವಾಗಿ ಮತ್ತು ಯಶಸ್ವಿಯಾಗಿ ಮೂಡಿಬಂದಿದೆ. ಕತೆಯ ಹಿನ್ನೆಲೆಗೆ ಇವು ಸಮರ್ಥ ಪೂರಕಗಳಾಗಿ ದುಡಿದಿವೆ. ಹಾಗೆಯೇ ಆ ಕಾಲಮಾನದ ಜನಜೀವನವು ಸಹಜವಾಗಿ ಮತ್ತು ನಿರಾಡಂಬರವಾಗಿ ದಾಖಲಾಗಿದೆ. ಬಡತನ ಮತ್ತು ಸಿರಿತನಗಳೆರಡೂ ಸಮವಾಗಿ ಅಷ್ಟೇ ಸಮತೂಕವಾಗಿ ಚಿತ್ರಿತವಾಗಿದೆ. ಕಥಾಭಿತ್ತಿಗೆ ಇವು ಬೇಕೇ ಬೇಕು.”