" ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ "

" ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ "

ತಲೆ ಎತ್ತುತ್ತಿರುವ ಪ್ರತಿಮಾ ಸಂಸ್ಕೃತಿ ಭಾರತೀಯ ಮೂಲ‌ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಕಳಂಕವಾಗಬಹುದಾದ ಸಾಧ್ಯತೆ ಇದೆ. ಇದು ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅತಿರೇಕ ಅಥವಾ ಅದಕ್ಕಿಂತ ಮುಂದೆ ಸಾಗಿ ಅಸಹ್ಯ ಪಡುವಷ್ಟು ಬೆಳೆಯುತ್ತಲಿದೆ.

" ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ " ಎಂಬ ಶರಣರ ನುಡಿ ಯಾರಿಗೂ ಅರಿವಾಗುತ್ತಿಲ್ಲ. ವಿವಿಧ ರೂಪಗಳಲ್ಲಿ ಈ ಪ್ರತಿಮಾ ಸಂಸ್ಕೃತಿ ಪ್ರಕಟಗೊಳ್ಳುತ್ತಾ ಸಾಗುತ್ತಿದೆ. ಸ್ವಾತಂತ್ರ್ಯ ನಂತರ ಮಹಾತ್ಮಾ ಗಾಂಧಿಯವರ ಪ್ರತಿಮೆ ದೇಶದೆಲ್ಲೆಡೆ ಸಹಜವಾಗಿ ಸ್ಥಾಪಿಸಲಾಯಿತು. ಅವರ ವಿಚಾರಕ್ಕಿಂತ ಪ್ರತಿಮೆ ಪ್ರಾಮುಖ್ಯತೆ ಪಡೆಯಿತು. ನಂತರದಲ್ಲಿ ಜವಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರ ಪ್ರತಿಮೆಗಳು ಹೆಚ್ಚು ಸಂಖ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. 80 ರ ದಶಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆಗಳು ಹೆಚ್ಚು ಹೆಚ್ಚು ನಿರ್ಮಾಣವಾದವು. ಇವುಗಳ ಮಧ್ಯೆ ಸಿನಿಮಾ ನಟರ ಪ್ರತಿಮೆಗಳು ಸಹ ತಲೆ ಎತ್ತಿದವು. 

90 ರ ದಶಕದ ನಂತರದಲ್ಲಿ ಬಸವಣ್ಣ, ಶಿವಾಜಿ, ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ಗೌತಮ ಬುದ್ಧ, ಶ್ರೀರಾಮ, ಗಣೇಶ, ಆಂಜನೇಯ, ಶಿವ, ಜೀಸಸ್ ಪ್ರತಿಮೆಗಳನ್ನು ಸಾಕಷ್ಟು ಸ್ಥಾಪಿಸಲಾಯಿತು. ಈಗ ಸರ್ದಾರ್ ವಲ್ಲಭಭಾಯ್ ಪಟೇಲ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್, ಕನಕದಾಸರು, ವಾಲ್ಮೀಕಿ, ಸಾವಿತ್ರಿ ಬಾಯಿ ಪುಲೆ ಮುಂತಾದವರ ಪ್ರತಿಮೆಗಳು ತಲೆ ಎತ್ತುತ್ತಿವೆ. ಇದಲ್ಲದೆ ಇನ್ನೂ ಹಲವಾರು...

ಇವುಗಳ ಸಂಖ್ಯೆಯ ಜೊತೆಗೆ ಎತ್ತರ ಭವ್ಯತೆ ಮುಂತಾದ ವಿಷಯಗಳಲ್ಲಿ ಪೈಪೋಟಿ ನಡೆಯುತ್ತಿದೆ. ಇದು ಪ್ರತಿಮಾ ಸಂಸ್ಕೃತಿಯ ಒಂದು ಭಾಗವಾದರೆ ಮತ್ತೊಂದು… ದಲಿತರೊಬ್ಬರನ್ನು ರಾಷ್ಟ್ರಪತಿ ಮಾಡುವುದು, ಮುಸ್ಲಿಂ ಒಬ್ಬರನ್ನು ಪಕ್ಷದ ಅಧ್ಯಕ್ಷ ಅಥವಾ ಮಂತ್ರಿ ಸ್ಥಾನ ನೀಡುವುದು, ಮತ್ತೊಂದು ಸಮುದಾಯಕ್ಕೆ ನಿಗಮ ಮಂಡಳಿ ಅಥವಾ ವಿಧಾನಸಭೆ ಅಥವಾ ರಾಜ್ಯಸಭೆಯ ಸದಸ್ಯರನ್ನಾಗಿ ಮಾಡುವುದು, ಮಗದೊಂದು ಜಾತಿಯವರಿಗೆ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಕೊಡುವುದು ಹೀಗೆ ಸಾಂಕೇತಿಕವಾಗಿ ಒಂದು ಸ್ಥಾನ ಮಾನವನ್ನು ಕೊಡುವ ಮೂಲಕ ತಾವು ಅವರ ಬಗ್ಗೆ ಕಾಳಜಿ ಹೊಂದಿದ್ದೇವೆ ಎಂಬ ಭ್ರಮೆ ಮೂಡಿಸುವ ತಂತ್ರ. ಇದು ಪ್ರತಿಮಾ ಸಂಸ್ಕೃತಿಯ ಮತ್ತೊಂದು ವಿಧಾನ. ಇದಲ್ಲದೆ, ಜಾತಿಗೊಬ್ಬ ರಾಜಕೀಯ ನಾಯಕನ್ನು ಬೆಳೆಸುವುದು, ಅದೇ ಜಾತಿಗೆ ಒಂದು ಮಠ ಮತ್ತು ಒಬ್ಬ ಮಠಾಧೀಶರನ್ನು ಮಾಡಿ ಪ್ರತಿಮಾ ಸಂಸ್ಕೃತಿಯನ್ನು ಮತ್ತಷ್ಟು ವಿಸ್ತರಿಸುವುದು. 

ಇತ್ತೀಚೆಗೆ ರಸ್ತೆಗಳ, ಬೀದಿಗಳ, ಊರುಗಳ, ಕಟ್ಟಡಗಳ ಹೆಸರುಗಳನ್ನು ಬದಲಾಯಿಸಿ ಮರು ನಾಮಕರಣ ಮಾಡುವ ಮತ್ತೊಂದು ರೀತಿಯ ಪ್ರತಿಮಾ ಸಂಸ್ಕೃತಿಯೂ ಬೆಳೆಯುತ್ತಿದೆ. ಅಂದರೆ ಪ್ರತಿಮೆ - ಹೆಸರುಗಳ ಮುಖಾಂತರವೇ ಆ  ವ್ಯಕ್ತಿಗಳ ವ್ಯಕ್ತಿತ್ವವನ್ನು ಅಳೆಯುವ ಹೊಸ ಟ್ರೆಂಡ್ ನ ಕಾಲಘಟ್ಟದತ್ತ ನಾವು ಸಾಗುತ್ತಿದ್ದೇವೆಯೇ ಎಂಬ ಅನುಮಾನ ಕಾಡಲು ಶುರುವಾಗಿದೆ. ಈ ಪ್ರತಿಮಾ ಸಂಸ್ಕೃತಿ ಬಹಳ ಹಿಂದಿನಿಂದಲೂ ಇದೆ. ಅಭಿಮಾನಿಗಳ ಆರಾಧಕರ ಭಕ್ತರ ಅನುಯಾಯಿಗಳ ಒಗ್ಗೂಡುವಿಕೆಯ ನೆಪದಲ್ಲಿ ಅವರ ಪ್ರೀತಿ ಪಾತ್ರರ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ಕ್ಷೇತ್ರಗಳ ಸಾಧಕರು ಮತ್ತು ಜನಪ್ರಿಯರು ಇದರಲ್ಲಿ ಸೇರಿದ್ದಾರೆ. ಆದರೆ ಇಂದು ಇದು ಅಪಾಯಕಾರಿ ಹಂತ ತಲುಪಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಮೂರ್ತಿ ಸ್ಥಾಪನೆಯ ನಂತರ ಅದಕ್ಕಿಂತ ಎತ್ತರಕ್ಕೆ ಮತ್ತಷ್ಟು ಪ್ರತಿಮೆ ಸ್ಥಾಪಿಸುವ ಪ್ರಯತ್ನಗಳು ಹೆಚ್ಚಾಗುತ್ತಿದೆ. ಮಸೀದಿ ಚರ್ಚು ಮಂದಿರಗಳ ಸಂಖ್ಯೆ ಹೆಚ್ಚಾದಷ್ಟು ಅದರ ಶ್ರೇಷ್ಠತೆಯ ಅಮಲಿನಲ್ಲಿ ಇತರರ ಬಗ್ಗೆ ಅಸಹನೆಯೂ ಹೆಚ್ಚಾಗುತ್ತಿದೆ. ಆ ಕಟ್ಟಡಗಳ ಭವ್ಯತೆ ಹೆಚ್ಚಾದಷ್ಟು ಭಕ್ತಿಯ ಜಾಗದಲ್ಲಿ ಆಡಂಬರ ಗೋಚರಿಸುತ್ತಿದೆ. ಇದೇ ಮನೋಭಾವ ಪ್ರತಿಮೆಗಳ ವಿಷಯದಲ್ಲೂ ಪ್ರಾರಂಭವಾಗಬಹುದು.

ಆ ವ್ಯಕ್ತಿಗಳ ನಿಜವಾದ ವಿಚಾರಗಳು ಆದರ್ಶಗಳು ಹಿನ್ನೆಲೆಗೆ ಸರಿದು ಕೇವಲ ಒಣ ಪ್ರತಿಷ್ಠೆ ಜೊತೆಯಾಗಬಹುದು. ಪ್ರತಿಮೆಗಳ ಎತ್ತರವೇ ನಾವು ಆ ಸಾಧಕರಿಗೆ ತೋರಿಸುವ ಬಹುದೊಡ್ಡ ಗೌರವ ಎಂಬ ಮೂಢನಂಬಿಕೆ ಶುರುವಾಗುತ್ತದೆ. ಇದಕ್ಕಾಗಿ ಮಾಡುತ್ತಿರುವ ಸಾವಿರಾರು ಕೋಟಿಗಳ ಹಣವೂ ಮತ್ತೊಂದು ಆಯಾಮದ ಆರ್ಥಿಕ ದುಂದು ವೆಚ್ಚದ ಚರ್ಚೆಗೆ ಕಾರಣವಾಗುತ್ತಿದೆ. ಹಿಂದೆ ನಡೆದ ಪ್ರತಿಮೆಗಳ ಸ್ಥಾಪನೆಯ ದುರುಪಯೋಗದ ಉದಾಹರಣೆಯನ್ನು ಸಮರ್ಥನೆಗೆ ನೆಪವಾಗಿ ಬಳಸುತ್ತಾ ಇನ್ನೂ ಮುಂದುವರಿಸಿದರೆ ಇದೊಂದು ಕೆಟ್ಟ ಸಂಪ್ರದಾಯವಾಗಬಹುದು.

" ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ " ಎಂಬ ಬಸವಣ್ಣನವರ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಅದ್ದೂರಿ ವೆಚ್ಚದ ಪ್ರತಿಮೆಗಳ ನಿರ್ಮಾಣಕ್ಕೆ ಪ್ರೋತ್ಸಾಹ ಸಹಕಾರ ಮತ್ತು ಹಣಕಾಸಿನ ನೆರವು ನೀಡುವುದನ್ನು ಜನರು ನಿಲ್ಲಿಸಬೇಕು. ಇನ್ನೂ ಬಡತನ ಅಜ್ಞಾನ ಅಪೌಷ್ಟಿಕತೆ ರೈತರ ಆತ್ಮಹತ್ಯೆ ಹಸಿವಿನ ಸಾವಿನ ಪ್ರಕರಣಗಳು ನಡೆಯುತ್ತಿರುವ ನಮ್ಮ ಸಮಾಜದಲ್ಲಿ ಎತ್ತರದ ಪ್ರತಿಮೆಗಳ ಸ್ಥಾಪನೆ ಒಂದು ಹುಚ್ಚು ಹೆಚ್ಚಿಸುವ ಪ್ರಕ್ರಿಯೆ ಎಂದು ಕರೆಯಬಹುದು.

ಪ್ರತಿಮಾ ಸಂಸ್ಕೃತಿ ಕೇವಲ ಓಟಿನ ರಾಜಕೀಯ ಮತ್ತು ಧಾರ್ಮಿಕ ಮೌಡ್ಯತೆ ಮಾತ್ರ. ಇಡೀ ಜನ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗದೆ ಕೇವಲ ಆ ಸಮುದಾಯದ ಒಬ್ಬ ನಾಯಕನನ್ನು ಹಾಡಿ ಹೊಗಳುವುದು ಜನರನ್ನು ಮೈ ಮರೆಸುವ ತಂತ್ರ. ಆದ್ದರಿಂದ ಈ ಹಂತದಲ್ಲಿ ಎಲ್ಲರೂ ಎಚ್ಚೆತ್ತುಕೊಂಡರೆ ಉತ್ತಮ ಎಂಬ ಆಶಯದೊಂದಿಗೆ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ