ಸ್ಥಿತಪ್ರಜ್ಞರು

ಸ್ಥಿತಪ್ರಜ್ಞರು

ಸ್ಥಿತಪ್ರಜ್ಞರು

 

                            ಈ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಯಾವಾಗಲೂ ಇದ್ದೆ ಇರುತ್ತದೆ.  ಒಳ್ಳೆಯದು ಬಂದಾಗ ಸರಿಯೆಂದು ಸಂತೋಷದಿಂದ ಉಬ್ಬಿ ಬಿಡುವುದು, ಕೆಟ್ಟದ್ದು ಆದಾಗ ದುಃಖದಿಂದ ಛೀ! ಇದು ನಮಗೇ ಏಕೆ ಆಯಿತು? ಎಂದು ಗೋಳಿಡುವುದು- ಇದು ಸಾಮಾನ್ಯರಾದ ನಮ್ಮ ಎಲ್ಲರ ಸ್ವಭಾವ. ಆದರೆ ಸ್ಥಿತಪ್ರಜ್ಞರು ಇಂತಹ ಸಮಯದಲ್ಲಿ ಬಹಳ ಸಂಯಮದಿಂದ ಇರುತ್ತಾರೆ.  ಅವರಿಗೆ ಕೆಟ್ಟದ್ದು ಒಳ್ಳೆಯದು ಎಂಬ ವಿಭಾಗವೇ ಕಾಣಿಸುವುದಿಲ್ಲ. ಏಕೆಂದರೆ, ಅವರ ದೃಷ್ಟಿಯಲ್ಲಿ ಎರಡೂ ಭಗವಂತನ ಸೃಷ್ಟಿಯೇ!  ಎಲ್ಲವನ್ನೂ ಪರಮಾತ್ಮನ ಸೃಷ್ಟಿಯೆಂದೆ ಭಾವಿಸುವವರಿಗೆ ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? ಹಿಗ್ಗು ಯಾವುದು ? ಕುಗ್ಗು ಯಾವುದು ? ಒಳ್ಳೆಯದು ಮತ್ತು ಕೆಟ್ಟದ್ದು ಎಂದು  ಎಲ್ಲವೂ  ಆಗುವುದು ಮನಸ್ಸಿಗೆ ಎಂದು ಅವರು ಚೆನ್ನಾಗಿ ತಿಳಿದಿರುತ್ತಾರೆ.  ಇದನ್ನು ಹೇಳುವುದು ಸುಲಭ, ಆದರೆ ನಿಜ ಜೀವನದಲ್ಲಿ ಇಂತಹ ಸಂಧರ್ಭಗಳು ಬಂದಾಗ ನಾವು ಇದನ್ನು ಪಾಲಿಸಲು ಸಾಧ್ಯವೇ? ಎಂಬ ಪ್ರಶ್ನೆ ಸಹಜವಾಗಿ ನಮ್ಮೊಳಗೆ ಬರುತ್ತದೆ.  

 

                            ಇದನ್ನು ಸಾಧ್ಯಮಾಡಿ ತೊರಿಸಿದ್ದನ್ನು ನಾನು   ನನ್ನ ಆತ್ಮೀಯ ಮಿತ್ರರಾಗಿದ್ದ ಶ್ರೀ ಶರ್ಫುದ್ದೀನ್ ಸಾಹೇಬರಲ್ಲಿ ಕಂಡಿದ್ದೇನೆ .  ನಮ್ಮ ವಿದ್ಯಾಲಯದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಅತ್ಯಂತ ಸಂಭಾವಿತರು, ಸರಳ ಮತ್ತು ಸಜ್ಜನರು.  ಮುಸ್ಲಿಂ ಸಂಪ್ರದಾಯಕ್ಕೆ ಸೇರಿದ ಇವರು ತಮ್ಮ  ಧರ್ಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಿದ್ದರು ಮಾತ್ರವಲ್ಲದೆ ಇತರ ಧರ್ಮವನ್ನು ಅಷ್ಟೇ ಗೌರವ ಭಾವದಿಂದ ಕಾಣುತ್ತಿದ್ದ ಅಪರೂಪದ ಧರ್ಮ ಸಹಿಷ್ಣು.  ನನ್ನ ಮತ್ತು ಸಾಹೇಬರ  ಭಾಂದವ್ಯ ಹೆಚ್ಚು ಹತ್ತಿರವಾಗಲು ಇದೂ ಒಂದು ಮುಖ್ಯ ಕಾರಣವಾಗಿತ್ತು.  ನಾನು ಮತ್ತು ಶರ್ಫುದ್ದೀನ್ ಸಾಹೇಬರು ಅದೆಷ್ಟೋ ಬಾರಿ ಧರ್ಮದ ಮತ್ತು ಸಂಪ್ರದಾಯದ ವಿಚಾರವಾಗಿ ಮಾತನಾಡುತ್ತಿದ್ದೆವು. ಒಮ್ಮೆಯೂ ಅವರು ಇತರ ಧರ್ಮ ಸಂಪ್ರದಾಯಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದನ್ನು ನಾನು ಕಾಣೆ.  ಅವರಿಗೆ ಇತರ ಧರ್ಮಗಳ ವಿಷಯದಲ್ಲಿ ಬಂದ ಸಂಶಯಗಳನ್ನು ಕೂತು ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದರು. ತಮ್ಮ ಧರ್ಮಕ್ಕೂ ಇತರ ಧರ್ಮಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸವನ್ನು ಅವರು ಮೂಲ ಗ್ರಂಥದಲ್ಲಿ ಅಭ್ಯಾಸ ಮಾಡುತ್ತಿದ್ದರು.  ಇಸ್ಲಾಂ ಮತ್ತು ಅದ್ವೈತ ಈ ಎರಡೂ ಒಂದನ್ನೇ ಪ್ರತಿಪಾದಿಸುತ್ತದೆ ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಿದ್ದ ಆ ರಸ ಘಳಿಗೆಗಳನ್ನು ನಾನು ಎಂದೂ  ಮರೆಯಲಾರೆ. ಅವರು ಈ ವಿಚಾರದಲ್ಲಿ ಆಕಾಶವಾಣಿಯಲ್ಲಿ ನೀಡಿರುವ ಚಿಂತನೆಗಳೇ ಇದಕ್ಕೆ ಸಾಕ್ಷಿ. 

                             ಇವರ ಜೀವನದಲ್ಲಿ ಒಂದು ಸಂಕಟದ ಸಮಯ ಬಂದಿತು.  ಆ ಸಮಯದಲ್ಲಿ ಶರ್ಫುದ್ದೀನ್ ಸಾಹೇಬರು ತೋರಿಸಿದ ಸ್ಥಿತಪ್ರಜ್ಞತೆ ಮನನೀಯ.  ಸಾಹೇಬರ ಅತ್ಯಂತ ಪ್ರೀತಿಯ ಒಬ್ಬನೇ ಮಗ ದೈವಾದೀನನಾದ.  ಈ  ಸುದ್ದಿ ಕೇಳಿ ನಮ್ಮೆಲ್ಲರಿಗೂ ಅತ್ಯಂತ ದುಃಖವಾಯಿತು. ಅವರನ್ನು ಈ ಸಮಯದಲ್ಲಿ ನೋಡಿ ಮಾತನಾಡಿಸಿ ಸಂತಾಪ ಸೂಚಿಸಿ ಬರಲು  ಅವರ ಮನೆಗೆ ಹೋಗಿದ್ದೆ.  ಆಗ ಮನೆಯಲ್ಲಿ ದುಃಖದ ವಾತಾವರಣ.  ಸಾಹೇಬರು ಮನೆ ಬಾಗಿಲಲ್ಲೇ ನಿಂತು ಬಂದವರಿಗೆ ಹೇಗೆ ಈ ಸಾವು ಸಂಭವಿಸಿತು ಎಂದು ವಿವರಿಸುತ್ತಿದ್ದರು.  ಅ ಸಮಯದಲ್ಲಿ  ಸಾಹೇಬರ ಸಂಬಂಧಿಕರೊಬ್ಬರು ಬಂದು, ಉರ್ದುವಿನಲ್ಲಿ " ಈ ಹೂವು ಅರಳುವ ಮುಂಚೆಯೇ ಬಾಡಿಹೊಯಿತಲ್ಲ ಎಂದು ಅತೀವ ದುಃಖ ಆಗುತ್ತಿದೆ. ದೇವರು ಅದೆಷ್ಟು ಕಠಿಣ, ಅಲ್ಲವೇ?" ಎಂದರು.  ತಕ್ಷಣ ಹಾವಿನ ಮೇಲೆ ಕಾಲಿಟ್ಟವರಂತೆ " ಇಲ್ಲಾ !  ತಪ್ಪು ಮಾತಾಡುತ್ತಿದ್ದಿರಿ.  ದೇವರು ಅಪಾರ ದಯಾಮಯ. ಇಷ್ಟು ಸಮಯ ಈ ಮಗುವನ್ನು ನಮ್ಮೊಂದಿಗೆ ಇರಲು ಆಜ್ಞೆ ಮಾಡಿ ನಮಗೆ ಅತೀವ ಸಂತೋಷ ನೀಡಿರುತ್ತಾರೆ.  ನಾವು ಈ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಸಂತೋಷವಾಗಿ  ಈ ಕಂದನೊಂದಿಗೆ ಕಾಲಕಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಈಗ ಅವರು ತಮ್ಮ ಆಸ್ತಿಯನ್ನು ವಾಪಸ್ಸು ಪಡೆದಿದ್ದಾರೆ, ಇದಕ್ಕೆ ಅಲ್ಲಾಹುವನ್ನ ನಿಂದಿಸಬಾರದು. ತಪ್ಪು ತಪ್ಪು". ಎಂದು ಅತ್ಯಂತ ವಿನಯಭಾವದಿಂದ  ನುಡಿದರು.  ಈ ಮಾತು ಕೇಳಿ ನನ್ನ ಅರಿವಿಗೆ ಬಾರದಂತೆ ಕಣ್ಣಲ್ಲಿ ನೀರಾಡಿತು.  ಶ್ರೀ ಕೃಷ್ಣ ಅರ್ಜುನನಿಗೆ " ಪಂಡಿತರು ಸತ್ತವರಿಗಾಗಿ ಶೋಕಿಸುವುದಿಲ್ಲ " ಎಂದು ಗೀತೆಯಲ್ಲಿ ಹೇಳಿದ ಮಾತು ತಕ್ಷಣಕ್ಕೆ ಜ್ಞಾಪಕಕ್ಕೆ ಬಂತು.

    

                             ಸ್ವಲ್ಪ ಸಮಯದ ನಂತರ ಶರ್ಫುದ್ದೀನ್ ಸಾಹೇಬರು ತಮ್ಮ ಚಪ್ಪಲಿ ಧರಿಸಿಕೊಂಡು ಹೊರಡಲು ಅನುವಾಗುತ್ತಿದ್ದಂತೆ ಅವರ ಸಂಬಂಧಿಕರೊಬ್ಬರು ಎಲ್ಲಿಗೆಂದು ಪ್ರಶ್ನಿಸಿದರು.  ಅವರು " ನಮಾಜ್ ಸಮಯ ಆಯಿತು, ಪ್ರಾರ್ಥನೆ ಮಾಡಲು ಮಸೀದಿಗೆ ಹೋಗುತ್ತಿದ್ದೇನೆ." ಎಂದು ಸಹಜವಾಗಿ ಹೇಳಿದರು.  ಈ ಸಮಯದಲ್ಲಿಯೂ ಹೋಗಬೇಕಾ? ಎನ್ನುವಂತೆ ಪ್ರಶ್ನಾರ್ಥಕವಾಗಿ ಎಲ್ಲರೂ ಅವರನ್ನೇ ನೋಡುವಾಗ ಅವರೇ ಮುಂದುವರೆದು " ನಾವು ಯಾವುದನ್ನು ಬಿಡುತ್ತೇವೆ? ಊಟ, ತಿಂಡಿ, ನಿದ್ದೆ ಯಾವುದನ್ನು ಬಿಡದ ನಾವು ದೇವರ ಪ್ರಾರ್ಥನೆ ಯಾಕೆ ಬಿಡಬೇಕು? " ಎಂದು ಹೇಳುತ್ತಾ ಯಾರ ಉತ್ತರಕ್ಕೂ ಕಾಯದೇ ಮಸೀದಿಯತ್ತ ಹೆಜ್ಜೆ ಹಾಕಿದರು.  ಅಲ್ಲಿದ್ದವರಿಗೆ    ಈ ನಡವಳಿಕೆ ಅಷ್ಟು ಇಷ್ಟವಾಗದೇ,ಇದು  ಅತಿಯಾಯಿತೆಂದು ಅಂದುಕೊಂಡವರಿದ್ದಾರೆ.  ಆದರೆ, ಅವರು ಜನ ಮೆಚ್ಚಿಸಲು ಏನನ್ನೂ ಹೇಳದೆ, ಮಾಡದೆ ತಮ್ಮ  ಪ್ರಾಮಾಣಿಕ ಸಾಧನೆಯನ್ನು ಬಿಡದೆ ಅಂದು ಮುಂದುವರಿಸಿದರು. ಈ ಒಂದು ಪ್ರಸಂಗ ಮಾತ್ರವಲ್ಲ, ಹಲವಾರು ಸಂಧರ್ಭಗಳಲ್ಲಿ ಸಾಹೇಬರು ನ್ಯಾಯ ಮತ್ತು ಧರ್ಮ ಪ್ರವರ್ತಕರೆ ಆಗಿದ್ದರು. 

 

                             ಇಂದಿಗೆ ಸಾಹೇಬರು ನಮ್ಮೊಂದಿಗೆ ಇಲ್ಲದಿರಬಹುದು.   ಆದರೆ,  ಇಂತಹವರು ನಮಗೆ ಎಂದಿಗೂ ಆದರ್ಶವಲ್ಲವೇ..... 

Comments

Submitted by kavinagaraj Thu, 02/19/2015 - 15:02

ಸ್ಥಿತಪ್ರಜ್ಞತೆ ಸಾಧಕರ ಗುಣವಾಗಿದೆ. ಧನ್ಯವಾದ, ಪ್ರಕಾಶರೇ.