ಸ್ಥಿತ್ಯಂತರ ಕಾಲ

ಸ್ಥಿತ್ಯಂತರ ಕಾಲ

ಬದಲಾವಣೆಯು ಜಗದ ನಿಯಮ. ಪ್ರತಿಯೊಬ್ಬ ಮನುಷ್ಯನೂ ಎಷ್ಟೇ ಕಷ್ಟವೆಂದರೂ ಬದಲಾವಣೆಯನ್ನು ಒಪ್ಪಲೇಬೇಕು. ನಮಗೆ ತಿಳಿದಿಲ್ಲದ ಯಾವುದೇ ವಿಷಯದ ಅಧ್ಯಯನವು ನಮಗೆ ಅಚ್ಚರಿಯನ್ನುಂಟುಮಾಡುವುದು ಸಹಜ. ಬದಲಾವಣೆಯೋ, ಕ್ರಾಂತಿಯೋ ಅಥವಾ ಪ್ರಗತಿಯೋ ಒಟ್ಟಾರೆ ಸಂಶೋಧನೆ ಮತ್ತು ಅನ್ವೇಷಣೆ ಉಂಟು ಮಾಡುವ ಅಚ್ಚರಿಯು ಮತ್ತಾವುದೇ ವಿಷಯದಲ್ಲಿಯೂ ಸಿಗಲಾರದು. ವಿಜ್ಞಾನವು ಉಂಟುಮಾಡುವಷ್ಟೇ ಆಶ್ಚರ್ಯ ಇತಿಹಾಸದ ಅಧ್ಯಯನ ಮತ್ತು ಸಂಶೋಧನೆ ಕೂಡ ಕೊಡುತ್ತದೆ ಎಂಬುದು ಅಕ್ಷರಸಹ ಸತ್ಯ.

ಸಂಸ್ಕೃತಿಯಲ್ಲೇ ಆಗಲಿ, ನಾಗರೀಕತೆಯಲ್ಲೇ ಆಗಲಿ ಕ್ರಾಂತಿಯ ಕಾಲ ಅಥವಾ ಒಂದು ಸ್ಥಿತ್ಯಂತರದ ಕಾಲವು ಬಹಳ ಸಮಯವನ್ನು ಕಬಳಿಸುತ್ತದೆ. ಸಂಸ್ಕೃತಿಯ ಸಮಾಧಿಯ ಮೇಲೆಯೇ ನಾಗರೀಕತೆಯ ಸೌಧದ ನಿರ್ಮಾಣ ಸಾಧ್ಯವೆಂದು ನಂಬಿರುವವನು ನಾನು. ಆದರೆ ಸಂಸ್ಕೃತಿಯು ಮನುಷ್ಯನ ಜೀವನದ ಮೇಲೆ ಬೀರುವ ಪರಿಣಾಮ, ಅದರಿಂದ ಉಂಟಾಗುವ ಸಂಸ್ಕಾರ ಇವು ನಮಗೆ ಪ್ರಯೋಜನಕಾರಿಯೇ ಅಲ್ಲವೇ ಎಂಬುದು ಮತ್ತು ನಾಗರೀಕತೆಯಿಂದ ಬರುವ ಸಂಸ್ಕಾರ ಅಥವಾ ಅಹಂಕಾರ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದು ಅವರವರ ಅಭಿಪ್ರಾಯಕ್ಕೆ ಬಿಟ್ಟದ್ದು.

ಪ್ರಾಗೈತಿಹಾಸ ಕಾಲದ ಮಾಹಿತಿಗಳಿಗೆ ನಿಖರವಾದ ಆಧಾರಗಳು ಬಹಳ ವಿರಳ. ಅಥವಾ ಇಲ್ಲವೇ ಇಲ್ಲ ಎಂದರೂ ತಪ್ಪಾಗದು. ಉದಾಹರಣೆಗೆ, ಕೇವಲ ಪುರಾತತ್ವ ಆಧಾರಗಳ ಮೇಲೆ ರಚಿತವಾಗಿರುವುದು ನಮ್ಮ ಪ್ರಾಗೈತಿಹಾಸ. .೮೮.೦೦೦ ವರ್ಷಗಳ ಕಾಲ ಒಂದೇ ರೀತಿಯ, ಹೆಚ್ಚು ಕಡಿಮೆ ಯಾವುದೇ ಬದಲಾವಣೆಗಳಿಲ್ಲದ ಜೀವನವನ್ನು ನಡೆಸಿದ್ದಾನೆ ಎಂಬುದು ನಮಗೆ ಇತಿಹಾಸದಿಂದ ತಿಳಿಯುತ್ತದೆ. ಇತಿಹಾಸವನ್ನು ಓದಿ ನಾನು ಅರ್ಥೈಸಿಕೊಂಡ ರೀತಿಯ ಆಧಾರದ ಮೇಲೆ ಯಾವುದೇ ಬದಲಾವಣೆಗೆ ಮೂಲ ಕಾರಣ 'ಹೊಟ್ಟೆ ಪಾಡು' ಎಂದೆನಿಸುತ್ತದೆ. ಇದಕ್ಕೆ ಕೆಲವು ಉದಾಹರಣೆಗಳೆಂದರೆ, ಮನುಷ್ಯನು ಬೇಟೆ ಆಡುವುದನ್ನು ಕಲಿತದ್ದು, ಗೆಡ್ಡೆ ಗೆಣಸು ತಿಂದದ್ದು, ಬೇಟೆಗಾಗಿ ಆಯುಧಗಳನ್ನು ಕಂಡು ಹಿಡಿದದ್ದು, ಆಹಾರ ಸಂಗ್ರಹಣೆಗಾಗಿ ತನ್ನ ಅಲೆಮಾರಿ ಜೀವನವನ್ನು ತ್ಯಜಿಸಿ ಒಂದೆಡೆ ನೆಲೆ ನಿಲ್ಲಲು ಪ್ರಾರಂಭಿಸಿದ್ದು, ನೆಲೆ ನಿಂತಮೇಲೆ ಆಹಾರವನ್ನು ಸಂಗ್ರಹಣೆ ಮಾಡಲು ಕೃಷಿಯನ್ನು ಅವಲಂಬಿಸಿದ್ದು, ಪಶುಪಾಲನೆಯಲ್ಲಿ ತೊಡಗಿದ್ದು... ಹೀಗೆ ಪ್ರಕೃತಿದತ್ತವಾಗಿ ಬಂದಂತಹ ಸಂಸ್ಕೃತಿಯು ನಾಶವಾಗುತ್ತಾ ನಾಗರಿಕತೆಯ ಆರಂಭ ಶುರುವಾಯಿತು. ನಾನು ಹೀಗೆ ಭಾವಿಸಲು ಕಾರಣವೇನೆಂದರೆ, ಸೃಷ್ಟಿಯ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಆದರೆ, ಮಾನವನು ಸೃಷ್ಟಿಯ ನಿಯಮಕ್ಕೆ ವಿರೋಧವಾಗಿ (ತನ್ನ ಹೊಟ್ಟೆ, ಬಟ್ಟೆ) ಪ್ರಾಣಿಯನ್ನು ಕೊಲ್ಲಲು ಆರಂಭಿಸಿದ. ಅರಣ್ಯವನ್ನು ನಾಶಗೊಳಿಸಿ ಕೃಷಿ ಪ್ರಾರಂಭಿಸಿದ.

ಮುಖ್ಯವಾದ ವಿಷಯವೆಂದರೆ, ಸ್ಥಿತ್ಯಂತರದ ಕಾಲದಲ್ಲಿ ಮನುಷ್ಯನ ಆಲೋಚನೆಗಳು ಯಾವ ರೀತಿಯದಾಗಿದ್ದವು? ಎಂಬುದು. ಉದಾಹರಣೆಗೆ, ೨೦೦೦ ವರ್ಷಗಳ ನಿಖರವಾದ ಇತಿಹಾಸವನ್ನು ಸ್ಥೂಲವಾಗಿಯಾದರೂ ತಿಳಿದಿರುವ ನಮಗೆ ಯಾವುದೇ ಒಂದು ಬದಲಾವಣೆ ಆಗುವ ಮೊದಲು ನಮ್ಮ ಆಂತರ್ಯದಲ್ಲಿ ಮತ್ತು ಸಮಾಜದ ನಡುವೆ ಆಗುವಂತಹ ಸಂಘರ್ಷ ತಿಳಿದಿದೆ. ಕೇವಲ ಉದಾಹರಣೆಗಾಗಿ ತೆಗೆದುಕೊಳ್ಳುವುದಾದರೆ, ಸತೀ ಪದ್ಧತಿ. ಗಂಡನ ಶವದ ಮೇಲೆ ಹೆಂಡತಿ ತಾನೂ ದಹಿಸಿಕೊಳ್ಳುವುದು ಮಾನವ ವಿರೋಧಿ ಅಥವಾ ಮಹಿಳಾ ವಿರೋಧಿ ಪದ್ಧತಿ ಎಂದು ಎಲ್ಲರೂ ಒಪ್ಪಿ ವಿರೋಧವನ್ನು ಅನುಷ್ಠಾನಕ್ಕೆ ತರಲು ನೂರಾರು ವರ್ಷಗಳೇ ಹಿಡಿಯಿತು. ಪುರೋಹಿತಶಾಹೀ ಮತ್ತು ಪ್ರಗತಿಪರ ಹೋರಾಟಗಾರರ ನಡುವೆ ನಡೆದ ಸಂಘರ್ಷಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಮನುಷ್ಯನು ನಿತ್ಯೋಪಯೋಗಿ ಅವಶ್ಯಕತೆಗಳಾದ ಆಹಾರ ವಸತಿ ಇತ್ಯಾದಿಗಳೆಲ್ಲವನ್ನೂ ತಿಳಿದಿದ್ದ ನಾಗರೀಕ ಸಮಾಜದಲ್ಲಿ ಇಂತಹ ಬದಲಾವಣೆಯನ್ನು ಅನುಷ್ಠಾನಕ್ಕೆ ತರಲು ನೂರಾರು ವರ್ಷ ತೆಗೆದುಕೊಂಡನೆಂದರೆ, ಇನ್ನು ನಾಗರೀಕತೆಯ ಗಂಧ ಗಾಳಿ ಗೊತ್ತಿಲ್ಲದ ಶಿಲಾಯುಗದ ಜನ ಒಂದು ಬದಲಾವಣೆಯನ್ನು ತರಲು ಲಕ್ಷಾಂತರ ವರ್ಷ ತೆಗೆದುಕೊಂಡರು ಎಂಬುದರಲ್ಲಿ ಯಾವುದೇ ಆಶ್ಚರ್ಯದ ಸಂಗತಿಯಲ್ಲ.

ಆದರೆ, ಶಿಲಾಯುಗವು ಲಕ್ಷಾಂತರ ವರ್ಷಗಳಿದ್ದವು ಎಂಬುದಕ್ಕೆ ಪುರಾತತ್ವ ದಾಖಲೆಯನ್ನು ಬಿಟ್ಟು ಬೇರಾವುದೇ ಆಧಾರಗಳನ್ನು ಹೊಂದದ ನಮಗೆ ಅಂದಿನ ಮಾನವನ ಯೋಚನಾ ಲಹರಿ, ಅವನಿಗೆ ಉಂಟಾದ ಮಾನಸಿಕ ಸಂಘರ್ಷಗಳನ್ನು ಊಹೆ ಮಾಡಲು ಸಹ ಸಾಧ್ಯವಿಲ್ಲ.

ಇತಿಹಾಸಕಾರರ ಹೇಳಿಕೆಯ ಪ್ರಕಾರ ೪೬೦೦ ದಶ ಲಕ್ಷ ವರ್ಷಗಳ ಹಿಂದೆ ಭೂಮಿಯು ಹುಟ್ಟಿತು (ವಿಜ್ಞಾನಿಗಳ ಅಭಿಪ್ರಾಯವೂ ಇದೇ). ಮೊದಲು ಹುಟ್ಟಿದ್ದು ಏಕಕೋಶ ಬ್ಯಾಕ್ಟೀರಿಯಾಗಳಾದ ಪ್ರೋಕ್ಯಾರಿಯೋಟ್. ನಂತರ ಸುಮಾರು ೪೦೦೦ ದಿಂದ ೨೫೦೦ ದಶ ಲಕ್ಷ ವರ್ಷಗಳ ಹಿಂದೆ ಶೈವಲ ಅಥವಾ ಆಲ್ಗೆಗಳು ಕಾಣಿಸಿಕೊಂಡವು. ಇವು ಮುಂದೆ ಸಸ್ಯ ಮತ್ತು ಜೀವಿಗಳ ವಿಕಾಸಕ್ಕೆ ಕಾರಣವಾದವು.

ಇನ್ನು ಜೀವಿಗಳ ಪ್ರಪಂಚಕ್ಕೆ ಬಂದರೆ, ೩೫೦೦ ದಶ ಲಕ್ಷ ವರ್ಷಗಳ ಹಿಂದಿಂದ ಸೂಕ್ಷ್ಮ ಜೀವಕಣಗಳು (ಪಳಿಯುಳಿಕೆ) ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿವೆ. ೫೭೦ ದಶ ಲಕ್ಷ ವರ್ಷಗಳ ಹಿಂದೆ ಮೀನು ಮತ್ತು ಇತರ ಜಲಚರಗಳು, ೪೩೮ ರಿಂದ ೪೦೮ ದಶ ಲಕ್ಷ ವರ್ಷಗಳ ನಡುವೆ ಕೀಟಗಳು, ೪೦೮ ರಿಂದ ೩೬೦ ದಶ ಲಕ್ಷ ವರ್ಷಗಳ ನಡುವೆ ಉಭಯವಾಸಿಗಳು, ಸುಮಾರು ೩೨೦ ದಶ ಲಕ್ಷ ವರ್ಷಗಳ ಹಿಂದೆ ಸರೀಸೃಪಗಳು, ೨೪೮ ದಶ ಲಕ್ಷ ವರ್ಷಗಳ ಹಿಂದೆ ಡೈನೋಸಾರಸ್, ೨೧೩ ದಶ ಲಕ್ಷ ವರ್ಷಗಳ ಹಿಂದೆ ಪಕ್ಷಿಗಳು ಮತ್ತು ಸಸ್ತನಿಗಳು, ೬೫ ದಶ ಲಕ್ಷ ವರ್ಷಗಳ ಹಿಂದೆ ವಾನರಗಳ ವಿಕಾಸವಾಯಿತು. ದಶ ಲಕ್ಷ ವರ್ಷಗಳ ಹಿಂದೆ ದ್ವಿಪಾದಿಗಳು, ೧.೮ ದಶ ಲಕ್ಷ ವರ್ಷಗಳ ಹಿಂದೆ ಮಾನವನ ವಿಕಾಸವಾಯಿತು.

ಯಾವುದೇ ಒಂದು ಬದಲಾವಣೆ ಅಥವಾ ಸ್ಥಿತ್ಯಂತರಕ್ಕೆ ಬಹಳ ಸಮಯ ಹಿಡಿಯುತ್ತದೆ ಎಂಬುದಕ್ಕೆ ಜೀವಿಗಳ ವಿಕಾಸವೇ ಸಾಕ್ಷಿ. ಆದರೆ, ಅದೇ ಜೀವಿಗಳ ನಾಶಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂಬುದಕ್ಕೆ ಪ್ರಕೃತಿ ವಿಕೋಪಗಳು ಆಧಾರಗಳನ್ನೊದಗಿಸಿವೆ. (ಉದಾಹರಣೆಗೆ ಇಂದಿಗೆ ಒಂದೂ ಡೈನೋಸಾರಸ್ ಗಳಿಲ್ಲ).

೨೦೦೦ ವರ್ಷಗಳ ಇತಿಹಾಸದಲ್ಲಿ ಮಾನವನ ಗುಣಗಳಲ್ಲಿ (ಬದಲಾವಣೆಯನ್ನು ಒಪ್ಪುವುದು, ಪ್ರಗತಿಯತ್ತ ಸಾಗುವುದು) ಅಂತಹ ಬದಲಾವಣೆಯನ್ನು ನಾವು ಕಂಡಿಲ್ಲ. ಪರ-ವಿರೋಧ ತತ್ವಗಳು ಪ್ರತಿಯೊಂದು ಸ್ಥಿತ್ಯಂತರದಲ್ಲೂ ಸ್ವಾಭಾವಿಕವಾಗಿ ಕಂಡು ಬಂದಿದೆ. ಹೀಗಿರುವಾಗ, ೯೦೦೦ ವರ್ಷಗಳ ಹಿಂದೆ ಮನುಷ್ಯನು ಆಧುನಿಕತೆಯನ್ನು ಅಥವಾ ನಾಗರೀಕತೆಯನ್ನು ಕಲಿಯಲು ಹೊರಟಾಗ ಇನ್ನೂ ಹೆಚ್ಚು ಸಂಘರ್ಷಗಳು ಎದುರಾಗಿರಬಹುದೆಂದು ನಾವು ಊಹಿಸಬಹುದೇ?

ಪ್ರಾಕೃತಿಕ ವಿಕಸನಕ್ಕಿಂತ ನಾಗರೀಕತೆಯು ವಿಕಾಸ ಹೊಂದುವ ವೇಗ ಬಹಳ ದೊಡ್ಡದು ಎಂದು ನಾನು ಭಾವಿಸುತ್ತೇನೆ. ಇದರರ್ಥ ಪ್ರಕೃತಿಗಿಂತ ಮನುಷ್ಯನ ಶಕ್ತಿ ದೊಡ್ಡದು ಎಂಬುದು ನನ್ನ ಭಾವನೆಯಲ್ಲ. ಏಕೆಂದರೆ, ಪ್ರಾಕೃತಿಕ ವಿಕಾಸಕ್ಕೆ ಲಕ್ಷಾಂತರ ವರ್ಷ ಹಿಡಿಯಿತು. ಆದರೆ, ನಾಗರೀಕತೆಯು ೭೦೦೦ ವರ್ಷಗಳಲ್ಲಿ ಬಹಳ ದೊಡ್ಡ ಸ್ಥಿತ್ಯಂತರವನ್ನು ಕಂಡಿತು. ಹಳೆಯ ಶಿಲಾಯುಗದಿಂದ ಹರಪ್ಪ ನಾಗರೀಕತೆಯ ಕಡೆಗೆ ಮನುಷ್ಯ ತೆಗೆದುಕೊಂಡ ಸಮಯವಿದು. ಮತ್ತು ಇಂದಿನ ಆಧುನಿಕ ನಾಗರೀಕತೆಯು ಕೇವಲ ೨೦೦ - ೩೦೦ ವರ್ಷಗಳಲ್ಲಿ ಅತ್ಯಂತ ಶೀಘ್ರಗತಿಯಲ್ಲಿ ಬದಲಾಯಿಸಿದೆ. ಇದರಿಂದ ಲೋಕ ಕಲ್ಯಾಣವಾಗುತ್ತಿದೆಯೇ ಅಥವಾ ಮನುಷ್ಯ ವಿನಾಶದ ಅಂಚಿನೆಡೆಗೆ ಸಾಗುತ್ತಿದ್ದಾನೆಯೇ ಎಂಬುದು ಕಾಲವೇ ನಿರ್ಧರಿಸಬೇಕು. ಸಂಸ್ಕೃತಿಯ ವಿನಾಶವಾಗುತ್ತಿರುವುದು ಶತಃ ಸಿದ್ಧವಾಗಿದ್ದರೂ ಸಂಸ್ಕೃತಿಯು ಬೇಕೇ ಬೇಡವೇ ಎಂಬುದು ನಮ್ಮ ನಮ್ಮ ಮನಸ್ಸಿಗೆ ಸಂಬಂಧ ಪಟ್ಟ ವಿಚಾರ.

 

                                                                                                                                                                                                                                                                                                                ಶ್ರೀನಿಧಿ. ವಿ. ಭಟ್