ಸ್ನೇಕ್ ಟ್ಯಾಟು

ಸ್ನೇಕ್ ಟ್ಯಾಟು

ಪುಸ್ತಕದ ಲೇಖಕ/ಕವಿಯ ಹೆಸರು
ಬಿ. ಎಂ. ಗಿರಿರಾಜ್
ಪ್ರಕಾಶಕರು
ಕಾಂಕೇವ್ ಮೀಡಿಯಾ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೨

ಲೇಖಕ ಗಿರಿರಾಜ ಬಿ ಎಂ ಅವರ ಕಥಾ ಸಂಕಲನ ಸ್ನೇಕ್ ಟ್ಯಾಟು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ೨೨ ವರ್ಷಗಳ ನಡುವೆ, ಆಗಾಗ ಬರೆದ ಇಲ್ಲಿನ ಕಥೆಗಳು ನನ್ನ ಬದುಕು, ಬದಲಾವಣೆ, ಬೆಳವಣಿಗೆಗೆ ಸಾಕ್ಷಿಯಾಗಿವೆ. ದಾಖಲೀಕರಣದ ವಿಷಯದಲ್ಲಿ ತುಂಬ ಸೋಂಬೇರಿಯಾಗಿರುವುದರಿಂದ ಹಲವಾರು ಕಥೆಗಳು ಕಳೆದುಹೋಗಿವೆ. ಅದ್ಹೇಗೊ ಇಲ್ಲಿನವು ಉಳ್ಕೊಬಿಟ್ಟವು. ಈಗ ಓದಿದರೆ ಕೆಲವು ವಾಕ್ಯಗಳು, ಈಡಿಯಂಗಳು ಬಾಲಿಶ ಅನಿಸಿದರೂ ಅವು ಅವತ್ತಿನ ನನ್ನ ನಿಜ ಅನಿಸಿಕೆಗಳಾದ್ದರಿಂದ, ಅದನ್ನು ತಿದ್ದಿ ಹಾಳೆ ಹಾಳು ಮಾಡುವ ಕೆಲಸಕ್ಕೆ ನಾನು ಕೈ ಹಾಕಿಲ್ಲ. ಮೊದಮೊದಲು ಬರೆಯಲು ಶುರು ಮಾಡಿದಾಗ ಮನ್ನಣೆಯ ಬಯಕೆಗಾಗೇ ಬರೆದದ್ದಿದೆ. ಹೆಚ್ಚೆಚ್ಚು ಓದುತ್ತ ತಿಳಿಯುತ್ತ ಬದುಕುತ್ತ ಹೋದ ಹಾಗೆ ನಂತರ ಬರೆದ ಕಥೆಗಳು, ಬರೆದು ಹೊರಗೆ ಹಾಕದೇ ಇದ್ದರೆ ಏನೋ ಪಾಪಪ್ರಜ್ಞೆ ಕಾಡಲು ಶುರುವಾದ್ದರಿಂದ ಹುಟ್ಟಿದವು. ಮೊದಲೆಲ್ಲ, ಹೆಚ್ಚಿನವರ ಹಾಗೆ, ಓ ಹೆನ್ರಿ, ಮೊಪಾಸ ಕಥೆಗಳ ಹಾಗೆ ಕೊನೆಗೊಂದು ಟ್ವಿಸ್ಟಿನಿಂದ ಓದುಗನನ್ನು ಬೆಚ್ಚಿಸಬೇಕೆಂಬ ಅಹಂಕಾರದ ಸುಖಕ್ಕೆ ಬರೆದೆ. ಅವು ಯಾವ ಕಥೆಗಳು ಅನ್ನುವುದು ನಿಮಗೆ ಓದಿದರೆ ಗೊತ್ತಾಗುತ್ತೆ. ಮೊದಲು ಪತ್ರಿಕೆಗಳಲ್ಲಿ ಪ್ರಕಟ ಆದರೆ ಎಲ್ಲರಿಗೂ ತೋರಿಸಿ ಸಂಭ್ರಮಿಸುತ್ತಿದ್ದೆ. ಈಗಲೂ ಪ್ರಕಟ ಆದರೆ ಹಂಚ್ಕೊಳ್ಳಲ್ಲ ಅಂತ ಅಲ್ಲ. ಆದರೆ ಬಲವಂತವಾಗಿ ಓದಿಸಿ ಹೇಗಿದೆ ಅಂತ ತಿಳ್ಕೊಳ್ಳೋ ತೆವಲುಗಳು ಹೋಗಿವೆ. ಪತ್ರಿಕೆಯಲ್ಲಿರುವ ಗೆಳೆಯರು ವಿಶೇಷಾಂಕಕ್ಕೋ ಸಂಚಿಕೆಗೋ ಕಥೆ ಕೊಡಿ ಅಂತ ಹೇಳಿದಾಗೆಲ್ಲ, ಕಥೆ ಬರೆದು ಕಳಿಸಿದರೆ ಅವರು ಓದಿ, ಓದಲಿಕ್ಕೆ ತುಂಬ ಚೆನ್ನಾಗಿದೆ ಆದರೆ ಇದನ್ನ ಪ್ರಕಟಿಸಲಿಕ್ಕಾಗಲ್ಲ ಅಂತ ನಯವಾಗೇ ಹೇಳಿದ್ದಿದೆ. ಅದು ಕಥೆಯ ಯೋಗ್ಯತೆಯೋ ಅಥವಾ ಓದುಗರ ಮೇಲಿರುವ ಅಪನಂಬಿಕೆಯೊ ಗೊತ್ತಿಲ್ಲ. ಅದರಲ್ಲೂ ‘ಪ್ರೀತಿಗೊಂದು ಆಯುರ್ವೇದಿಕ್ ಮದ್ದು’ ವಿಜಯ ಕರ್ನಾಟಕದವರು ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸಿದಾಗ ನನಗೆ ಆಶ್ಚರ್ಯವೇ ಆಯಿತು. ‘ಅವರ ಓದುಗ ವರ್ಗ’ ಅಂತ ಅನಿಸಿಕೊಂಡವರನ್ನ ಗಮನದಲ್ಲಿಟ್ಟು ಈ ಕಥೆ ಓದಿದಾಗ ನನ್ನ ಪಕ್ವಗೊಂಡ ಮನಸ್ಥಿತಿ ನಿಮಗೆ ಅರಿವಾಗಬಹುದು.

ಸಿನಿಮಾ ನಿರ್ದೇಶಕ, ರಂಗಕರ್ಮಿ, ಲೇಖಕ ಬಿ.ಎಂ. ಗಿರಿರಾಜ್ ಅವರು ಉಡುಪಿಯವರು. `ಅಮರಾವತಿ, ನವಿಲಾದವರು, ಅದ್ವೈತ, ಜಟ್ಟಾ, ಮೈತ್ರೀ' ಮುಂತಾದ ಪ್ರಯೋಗಾತ್ಮಕ ಚಿತ್ರಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ, ಸಾಹಿತ್ಯ ಕೃತಿಗಳ ಮೂಲಕವು ಹೆಸರು ಗಳಿಸಿದ್ದಾರೆ. ಅವರ ಮೊದಲು ನಿರ್ದೇಶಿಸಿದ ಚಿತ್ರ ’ಜಟ್ಟ’. ಇದು ೨೦೧೨ರ ಎರಡನೇ ಅತ್ಯುತ್ತಮ ಚಿತ್ರ ವಾಗಿ ರಾಜ್ಯ ಪ್ರಶಸ್ತಿಯನ್ನು ಗಳಿಸಿತು. ‘ಕಾಡ ಬೆಳಕು’ ಅವರ ನಾಟಕ ಕೃತಿ, ಹಾಗೇ ಅವರ 'ಕಥೆಗೆ ಸಾವಿಲ್ಲ' ಎಂಬ ಕಾದಂಬರಿಗೆ- ೨೦೦೮-೦೯ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ  ಲಭಿಸಿದೆ