ಸ್ನೇಹ ಎಂದರೆ...

ಸ್ನೇಹ ಎಂದರೆ...

ಈ ಸ್ನೇಹ ಎಂಬುದಿದೆಯಲ್ಲ ಕೆಲವೊಮ್ಮೆ ಹೇಗೆ ನೆರೆದು ಬಿಡುತ್ತದೆ ಎಂಬುದೇ ಆಶ್ಚರ್ಯ ಸಂಗತಿ. ನೆರಮನೆಯ ಜನಗಳು, ಕಚೇರಿಯ ಸಹವರ್ತಿಗಳು, ಕಾಲೇಜು ಸಹಪಾಠಿಗಳು ಯಾರೂ ಅಲ್ಲ.‌ ಅಲ್ಲವೇ ಅಲ್ಲ. ಇನ್ಯಾರೋ ಊರ ಜಾತ್ರೆಯಲ್ಲಿ ಸಿಕ್ಕ ಕಡ್ಲೆಪುರಿ ಮಾರಾಟ ಮಾಡುವ ಅಲೆಮಾರಿ ವ್ಯಾಪಾರಿಯೋ ಅಥವಾ ಪ್ರವಾಸ ಹೋದಾಗ ಹೊಸದಾಗಿ ಸಿಕ್ಕ ಸಹ ಪ್ರಯಾಣಿಕನೋ, ಗುಜರಿ ಸಾಮಾನು ಕೇಳಿಕೊಂಡು ಬಂದ ಸಾಬ್ರವನೋ ತುಂಬಾ ಆಪ್ತನಾಗಿ, ಸ್ನೇಹಿತನಾಗಿ ಗಳಸ್ಯ ಕಂಠಸ್ಯ ಎಂಬಂತೆ ಅವರ ನಡುವೆ ಸ್ನೇಹ ಬೆಳೆದು ಬಿಟ್ಟಿರುತ್ತದೆ.‌ಯಾವ ಸುಡ್ಗಾಡ್ ಕಾರಣವಾಗಲೀ, ಹಾಗೆ ಸ್ನೇಹಿತರಾಗಬೇಕೆಂಬ ಯಾವುದೇ ಪ್ರಬಲವಾದ ವಾಂಛೆಯಾಗಲೀ ಇದ್ದಿರುವುದೇ ಇಲ್ಲ.‌ಎಲ್ಲವೂ ಅಚಾನಕ್ ಎಂಬಂತೆ ಆಗಿ , ಕೆಲವೊಮ್ಮೆ ಬಾವಿಗೆ ಬಿದ್ದವನಿಗೆ ಹುಲುಕಡ್ಡಿ ಸಿಕ್ಕಂತೆ ಸಿಕ್ಕಿ ಸ್ನೇಹ‌ ಕುದುರಿ ಬಿಟ್ಟಿರುತ್ತದೆ. ಒಂದಷ್ಟು ಸಮಯ ಒಬ್ಬರಿಗೊಬ್ಬರು ಕೃಷ್ಣಾರ್ಜುನರನ್ನು ಮೀರಿಸುವಂತಹ ಸ್ನೇಹದ ಕಡಲಿನಲ್ಲಿ ಮುಳುಗೆದ್ದಿರುತ್ತಾರೆ. ತಮ್ಮ ಸಂಬಂಧಿಕರು, ತಮ್ಮ ಇತರೆ ಸ್ನೇಹಿತರು ಆಶ್ಚರ್ಯಪಡುವಷ್ಟು‌ ಮತ್ತು ಅವರೆಲ್ಲಾ ಹೊಗಳಿ ಹರಸುವಷ್ಟು ಒಳ್ಳೆಯ, ಸುಂದರ, ಆದರ್ಶ ಸ್ನೇಹ‌ ಅವರ ನಡುವೆ ಬೆಳೆದುಬಿಟ್ಟಿರುತ್ತದೆ. 

ಆದರೆ... ಯಾವುದೋ ಸಣ್ಣ ಕಾರಣಕ್ಕೆ ಒಮ್ಮೆಲೇ ಆ ಸ್ನೇಹ ಬ್ರೇಕಪ್‌ ಆಗಿರುತ್ತದೆ. ಮತ್ತೆಲ್ಲೂ  ಮತ್ತೆಂದೂ ಅವರು ಭೇಟಿ ಆಗಿರುವುದೂ ಇಲ್ಲ, ಯಾರ ಕಣ್ಣಿಗೂ  ಒಟ್ಟಿಗೆ ಉಭಯತರು ಬಿದ್ದಿರುವುದೂ ಇಲ್ಲ. ಯಾರೂ ಕಂಡಿರುವುದೂ ಇಲ್ಲ. ಅಲ್ಲದೇ ಅವರೂ ಯಾರೊಂದಿಗೂ ಹೇಳಿಕೊಂಡಿರುವುದಿಲ್ಲ.‌ ಅವರೂ ಕೂಡ ಒಂದು ಬಗೆಯ ಮೌನ ಸಿದ್ದಾಂತಕ್ಕೆ ಕಟ್ಟುಬಿದ್ದವರಂತೆ ವಿರಾಗಿಗಳಂತೆ ಕಂಡುಬರುತ್ತಾರೆ.‌

ಸ್ನೇಹ‌ ಬೆಳೆಯುವಾಗ ಜನ ಹೇಗೆ ಗಮನಿಸಿರುತ್ತರೋ, ಅದೇ ಸ್ನೇಹ ಬ್ರೇಕಪ್ ಆಗಿ ಹಳ್ಳ ಹಿಡಿಯುತ್ತಿರುವುದನ್ನೂ ಅಷ್ಟೇ ಆಸಕ್ತಿಯಿಂದ ಗಮನಿಸಿರುತ್ತಾರೆ.‌ ಆಶ್ಚರ್ಯವೆಂದರೆ ಸ್ನೇಹ ಕೆಡುವುದಕ್ಕೆ ಕಾರಣ ಏನು ಅಂತ‌ ಒಮ್ಮೆಯೂ‌ ಯಾರೂ ಕೂಡಾ ನೇರವಾಗಿ ಪ್ರಶ್ನೆ ಮಾಡಿರುವುದಿಲ್ಲ. ತಿಳಿದಿದ್ದರೂ ತಿಳಿಯದವರಂತೆ ಇದ್ದು ಬಿಡುವವರೇ ಹೆಚ್ಚು. ಕೆಲವರಂತೂ ಯಾರ್ಯಾರನ್ನೋ ಪ್ರಶ್ನೆ ಮಾಡಿ ಕಾರಣ ತಿಳಿಯುವ ಚಪಲತೆ ತೋರಿಸುತ್ತಿರುತ್ತಾರೆ! ಅದೂ ವಿನಾಕಾರಣ! ಅದರಿಂದ ಅವರಿಗೇನೂ ಆಗಬೇಕಾದದ್ದೂ ಇರುವುದಿಲ್ಲ!

ನಾನು ಹೇಳ ಹೊರಟದ್ದು ಅದಲ್ಲ.  ಯಾಕೆ ಇವರ ಸ್ನೇಹ ಬ್ರೇಕಪ್ ಆಯ್ತು? ಏನು‌ ಕಾರಣವಿರಬಹುದು? ತಾನ್ಯಾಕೆ ಅವರನ್ನೇ ಪ್ರಶ್ನೆ ಮಾಡಿ ಮತ್ತೆ ಅವರ ಸ್ನೇಹ ಬೆಸೆಯುವುದಕ್ಕೆ ಪ್ರಯತ್ನಪಡಬಾರದು! ಛೆ, ಇವರ‌ ಸ್ನೇಹಕ್ಕೆ ಯಾರ ಹಾಳು ಕಣ್ಣು‌ ಬಿತ್ತೋ ಏನೋ. ಯಾರಿಗೂ ಕೂಡಾ  ಈ ರೀತಿ ಆಗಬಾರದು ಅಂತ ಪರಿತಪಿಸುವವರು ಒಬ್ಬರೂ ಕೂಡಾ ಇಲ್ಲವೇ‌ ಇಲ್ಲ ಅಂತ ನನ್ನ ಅನಿಸಿಕೆ. ಯಾಕೆಂದರೆ ನನಗೆ ಈವರೆಗೆ ಯಾರೂ ಅಂತವರು ಸಿಕ್ಕಿಲ್ಲ. ಮುಂದೆ ಸಿಗುತ್ತಾರೆಂಬ ಭರವಸೆಯೂ ಇಲ್ಲ.

ಆ ಇಬ್ಬರನ್ನು ಕರೆದು ಹತ್ತಿರ ಕೂರಿಸಿ "ಏನು ನಿಮ್ಮಳಗಿನ ಸಮಸ್ಯೆ?!  ಯಾಕೆ ನೀವು ಮೊದಲಿನಂತೆ ಸ್ನೇಹಿತರಾಗಿ ಇರಬಾರದು?! ನಾನು ನಿಮ್ಮೊಳಗಿನ‌ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಬಹುದೆ?!" ಅಂತ ಸ್ವ ಇಚ್ಚೆಯಿಂದ ಮುಂದೆ ಬಂದು ಪ್ರಶ್ನಿಸಿ  ಸ್ನೇಹ ಬೆಸೆಯುವ ಜವಾಬ್ದಾರಿ ಹೊರುವುದಿದೆಯಲ್ಲಾ?! ಅದು ನಿಜವಾದ ಮಾನವೀಯತೆ, ಅದು ನಿಜವಾದ ಔದಾರ್ಯ, ಅದೇ ನಿಸ್ವಾರ್ಥ ಮನಸ್ಸು. ಅದೇ ತನ್ನವರಿಗಾಗಿ ಜವಾಬ್ದಾರಿಯನ್ನು ಎಳೆದುಕೊಂಡು ಹೆಗಲಿಗೇರಿಸಿಕೊಳ್ಳುವವರ ಸಲ್ಲಕ್ಷಣ. ಇಂತಹವರ ಸಾಲಿನಲ್ಲಿ ನಾವೂ ನಿಲ್ಲಬಾರದೇಕೆ?! 

ಆದರೆ... ಇಂದಿನ ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರೂ ಅವರವರ ಸಮಸ್ಯೆಯೇ ಹೆಚ್ಚಾಗಿದೆ ಎಂಬಂತೆ ಬದುಕುತ್ತಿರುತ್ತಾರೆ. ಇನ್ನೊಬ್ಬರ ಸ್ನೇಹ ಸಂಬಂಧದ ವಿಷಯದ ಉಸಾಬರಿ ತಮ್ಗೆ ಯಾಕೆ ಬೇಕು?! ಅದರಿಂದ ತಮಗೇನು ಲಾಭ?! ಅಂತ ಜಿಪುಣರಂತೆ ಯೋಚಿಸಿ ದೂರವಿದ್ದು ದೂರದಿಂದಲೇ ಪ್ರತಿಯೊಂದನ್ನೂ ಮೈಯೆಲ್ಲಾ‌ ಕಿವಿಯಾಗಿ‌ ಆಲಿಸುತ್ತಿರುವುದಕ್ಕಷ್ಟೇ ಆಸಕ್ತಿಯನ್ನು ಸೀಮಿತಗೊಳಿಸಿ ನಿರಾಳತೆಯ‌ ನಿರುಮ್ಮಳ ಉಸಿರು ಬಿಡುವವರೇ ಹೆಚ್ಚು! ಅದುವೇ ಆ ಸ್ನೇಹಿತರಾಗಿದ್ದವರ ನಿಜವಾದ ದುರಾದೃಷ್ಟ! ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!

-ಮೌನಮುಖಿ-

(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)