ಸ್ಪೆಷಲ್ ಗೋಧಿ ಲಡ್ಡು

ಸ್ಪೆಷಲ್ ಗೋಧಿ ಲಡ್ಡು

ಬೇಕಿರುವ ಸಾಮಗ್ರಿ

ಗೋಧಿ ಹಿಟ್ಟು ೧ ಕಪ್, ಬೆಲ್ಲದ ಹುಡಿ ಮುಕ್ಕಾಲು ಕಪ್, ಕಲ್ಲು ಸಕ್ಕರೆ ಕಾಲು ಕಪ್, ತುರಿದ ಕೊಬ್ಬರಿ ೨ ಚಮಚ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಕಾಲು ಕಪ್, ಏಲಕ್ಕಿ ಹುಡಿ ಅರ್ಧ ಚಮಚ, ಗಸಗಸೆ ೧ ಚಮಚ, ತುಪ್ಪ.

ತಯಾರಿಸುವ ವಿಧಾನ

ದಪ್ಪ ತಳವಿರುವ ಪ್ಯಾನ್ (ಬಾಣಲೆ) ತೆಗೆದುಕೊಂಡು ಬಿಸಿ ಮಾಡಿ, ನಂತರ ಒಂದು ಚಮಚ ತುಪ್ಪ ಹಾಕಿ, ತುಪ್ಪ ಕರಗಿದಾಗ ತುಂಡರಿಸಿದ ಬಾದಾಮಿ, ಗೋಡಂಬಿ ಹಾಕಿ ಹುರಿದು ಒಂದು ಕಪ್ ಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿರಿ. ಒಣ ಹಣ್ಣುಗಳನ್ನು ತರಿತರಿಯಾಗಿ ರುಬ್ಬಿದ ನಂತರ ಅದಕ್ಕೆ ಕೊಬ್ಬರಿ ಹಾಕಿ ಮತ್ತೆ ಪ್ಯಾನ್ ನಲ್ಲಿ ೨ ನಿಮಿಷ ಹುರಿಯಿರಿ.

ಈಗ ನೀವು ಕಾಲು ಕಪ್ ತುಪ್ಪ ಹಾಕಿ, ಅದಕ್ಕೆ ಕಲ್ಲು ಸಕ್ಕರೆ, ನಂತರ ಹುಡಿ ಮಾಡಿಟ್ಟ ಒಣ ಹಣ್ಣುಗಳು ಹಾಕಿ ಸ್ವಲ್ಪ ಹುರಿದು ಒಲೆ ಆರಿಸಿ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ಹಾಕಿಡಿ. ಈಗ ಮತ್ತೆ ಪ್ಯಾನ್ ಬಿಸಿ ಮಾಡಿ ಮತ್ತೆ ಮೂರು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಅದಕ್ಕೆ ಮೊದಲೇ ಮಾಡಿಟ್ಟ ಮಿಶ್ರಣವನ್ನು ಸೇರಿಸಿ. ನಂತರ ಏಲಕ್ಕಿ, ಬೆಲ್ಲದ ಹುಡಿ ಹಾಕಿ ಮಿಶ್ರಣ ಮಾಡಿ. ಈಗ ಆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಕಟ್ಟಿ. ಅದಕ್ಕೆ ಒಣ ದ್ರಾಕ್ಷೆಗಳಿಂದ ಅಲಂಕಾರ ಮಾಡಿ.