ಸ್ಪೈಡರ್ ಮ್ಯಾನ್ ಗೆ ಸ್ಪೂರ್ತಿಯಾದ ‘ಬಲೂನಿಂಗ್'

ಸ್ಪೈಡರ್ ಮ್ಯಾನ್ ಗೆ ಸ್ಪೂರ್ತಿಯಾದ ‘ಬಲೂನಿಂಗ್'

ಮಕ್ಕಳಿಗೆ ಮಾತ್ರವಲ್ಲ ದೊಡ್ದವರಿಗೂ ಸ್ಪೈಡರ್ ಮ್ಯಾನ್ ಇಷ್ಟ. ಅದು ಕಾರ್ಟೂನ್ ಚಿತ್ರ ಆಗಿರಬಹುದು ಅಥವಾ ನೈಜ ಪಾತ್ರಗಳ ಚಲನಚಿತ್ರವಾಗಿರಬಹುದು ಎಲ್ಲವೂ ಎಲ್ಲಾ ವಯಸ್ಸಿನವರಿಗೆ ಅಚ್ಚುಮೆಚ್ಚು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ಸ್ಪೈಡರ್ ಮ್ಯಾನ್ ಎನ್ನುವ ಹಾಲಿವುಡ್ ಚಿತ್ರದ ಹಲವಾರು ಭಾಗಗಳು ಒಂದರ ಹಿಂದೆ ಒಂದರಂತೆ ಈಗಾಗಲೇ ತೆರೆಕಂಡಿವೆ. ಈ ಕಾರಣದಿಂದ ಈ ಸ್ಪೈಡರ್ ಮ್ಯಾನ್ ಚಿತ್ರಗಳ ಸರಣಿಗಳು ಯಶಸ್ವೀ ಚಿತ್ರಗಳ ಸಾಲಿಗೆ ಸೇರುತ್ತದೆ ಎಂದಾಯಿತು. ಆದರೆ ನಾವಿಲ್ಲಿ ಹೇಳ ಹೊರಟಿರುವುದು ಈ ಚಿತ್ರದ ಬಗ್ಗೆ ಅಲ್ಲ. ನಿಜವಾದ ಸ್ಪೈಡರ್ ಅರ್ಥಾತ್ ಜೇಡ ಎನ್ನುವ ನಿಗೂಢ ಜೀವಿಯ ‘ಬಲೂನಿಂಗ್’ ಎನ್ನುವ ಹಾರಾಟದ ಕುರಿತು.

ನಿಮಗೆ ತಿಳಿದೇ ಇರುವಂತೆ ಗಾಳಿಯಲ್ಲಿ ಹಾರಾಡಲು ರೆಕ್ಕೆಗಳು ಬೇಕು. ಈ ಕಾರಣದಿಂದಲೇ ಅನಾದಿ ಕಾಲದಿಂದ ಮಾನವ ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡುವ ಕನಸು ಕಂಡಿದ್ದ. ಈ ಕನಸನ್ನು ನನಸು ಮಾಡಲು ಮರದ, ಲೋಹದ ರೆಕ್ಕೆಗಳನ್ನು ಕಟ್ಟಿಕೊಂಡು ಎತ್ತರದ ಜಾಗದಿಂದ ಕೆಳಕ್ಕೆ ಹಾರಿ ಪ್ರಯತ್ನ ಪಟ್ಟ. ಕೆಲವರು ಕೈಕಾಲು ಮುರಿದುಕೊಂಡರು ಮತ್ತು ಕೆಲವು ಮಂದಿ ಜೀವವನ್ನೇ ತೆತ್ತರು. ಆದರೆ ಈ ರೀತಿಯ ಪ್ರಯತ್ನಗಳನ್ನು ಜೀವ ಭಯದ ಕಾರಣದಿಂದ ನಿಲ್ಲಿಸಲು ಹೋಗಲಿಲ್ಲ, ಈ ಕಾರಣದಿಂದಲೇ ಕ್ರಮೇಣ ವಿಮಾನಗಳ ಆವಿಷ್ಕಾರವಾಯಿತು. ಈಗಂತೂ ವಿಮಾನ, ರಾಕೆಟ್, ಹೆಲಿಕಾಪ್ಟರ್ ಮುಂತಾದ ಸಾಧನಗಳಿಂದ ಕ್ಷಣ ಮಾತ್ರದಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಬಹುದಾಗಿದೆ. 

ತಮ್ಮ ರೆಕ್ಕೆಗಳನ್ನು ಚಾಚಿ ಹಾರಾಡುವ ಹಕ್ಕಿಗಳು, ಸಣ್ಣ ಪುಟ್ಟ ಕೀಟಗಳು, ದುಂಬಿಗಳು ಕೇವಲ ವಿಮಾನಗಳಿಗೆ ಮಾತ್ರವಲ್ಲದೇ ಹೆಲಿಕಾಪ್ಟರ್ ಮತ್ತೆ ಈಗ ಡ್ರೋನ್ ಗಳಿಗೂ ಸ್ಪೂರ್ತಿ ಕೊಟ್ಟವು. ಈಗಂತೂ ಡ್ರೋನ್ ಹಾರಾಟ ಜನಜನಿತವಾಗಿದೆ. ಡ್ರೋನ್ ಕ್ಯಾಮರಾ ಮೂಲಕ ಹತ್ತು ಹಲವು ವಿಷಯಗಳನ್ನು ಕೆಳಗಡೆ ಇದ್ದುಕೊಂಡೇ ತಿಳಿಯಬಹುದಾಗಿದೆ. ಇದು ರೆಕ್ಕೆ ಇರುವ ಜೀವಿಗಳ ಮಾತಾದರೆ ರೆಕ್ಕೆಯೇ ಇಲ್ಲದ ಜೀವಿಗಳೂ ಆಕಾಶದಲ್ಲಿ ಹಾರಾಡಲು ಸಾಧ್ಯವೇ? ಎಂಬ ಪ್ರಶ್ನೆ ಮನುಷ್ಯನ ತಲೆಯೊಳಗೆ ಹೊಕ್ಕಿದ್ದು ಜೇಡ ಎಂಬ ಜೀವಿಯನ್ನು ಕಂಡಾಗ!

ಹೋ, ಜೇಡ ಎಲ್ಲಿ ಹಾರಾಡುತ್ತದೆ? ಸುಮ್ಮನೇ ಸುಳ್ಳು ಹೇಳಬೇಡಿ ಎನ್ನುತ್ತೀರಾ? ಇದು ಸಂಪೂರ್ಣ ಸುಳ್ಳು ಅಲ್ಲ. ಹಾಗಂತ ಜೇಡ ರೆಕ್ಕೆ ಬಿಚ್ಚಿ ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡುವುದೂ ಇಲ್ಲ. ಕಂಬಳಿ ಹುಳು ಮತ್ತು ಜೇಡಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ‘ಬಲೂನಿಂಗ್' ಎನ್ನುವ ಕ್ರಿಯೆಯಿಂದ ಸಾಗುತ್ತವೆ. ಈ ಜೇಡಗಳು ಬಲು ಹುಷಾರಿ. ಅವುಗಳು ವಾತಾವರಣದಲ್ಲಿರುವ ವಿದ್ಯುತ್ ಅಂಶವನ್ನು ಲೆಕ್ಕ ಹಾಕಿ, ಅದು ತಮ್ಮ ಹಾರಾಟಕ್ಕೆ ಅನುಕೂಲವಾಗುವಷ್ಟಿದೆ ಎಂಬುದು ಖಚಿತವಾದಾಗ ಮಾತ್ರ ಎತ್ತರದ ಸ್ಥಳಗಳಿಗೆ ಹೋಗಿ ತಮ್ಮ ದೇಹದಿಂದ ಬಲೆಯ ಎಳೆಗಳನ್ನು ಹೊರಚಿಮ್ಮಿಸಿ, ಆ ಎಳೆಗಳು ಬಿಡಿಸಿಟ್ಟ ಹೆರಳಿನಂತೆ ಗಾಳಿಯಲ್ಲಿ ಹರಡಿಕೊಂಡಾಗ ಅದರ ಬಲದಿಂದ ತಾವೂ ಗಾಳಿಗೆ ನೆಗೆದು, ಹಾರತೊಡಗುತ್ತವೆ ! ಹೀಗೆ ಅವು ಕೆಲವೇ ಮೀಟರ್ ಗಳಷ್ಟು ದೂರವನ್ನು ಕ್ರಮಿಸಬಹುದು ಅಥವಾ ನೂರಾರು ಮೈಲಿಗಳಷ್ಟು ದೂರ ಕ್ರಮಿಸಿ, ಸಮುದ್ರಗಳನ್ನೇ ದಾಟಿ ಬೇರೊಂದು ಜಾಗಕ್ಕೆ ಹೋಗಿ ಇಳಿಯಬಹುದು ! ಒಂದು ರೀತಿಯಲ್ಲಿ ಇದು ಹ್ಯಾರಿ ಪಾಟರ್ ಎಂಬ ಹುಡುಗ ಯಕ್ಷಿಣಿಯ ಬಲದಿಂದ ಹಾರುವ ಪೊರಕೆ ಹತ್ತಿ ಆಕಾಶದಲ್ಲಿ ಹಾರಿಕೊಂಡು ಹೋದಂತೆ !

ಗಾಳಿಯಲ್ಲಿ ತೇಲಿಹೋಗುವ ಬಲೂನ್ ಗಳಂತೆ ಜೇಡಗಳು ತಮ್ಮ ಬಲೆಯ ಬಲದಿಂದ ಗಾಳಿಯಲ್ಲಿ ಹಾರಿಕೊಂಡು ಹೋಗುವುದನ್ನು “ಬಲೂನಿಂಗ್" ಅನ್ನುತ್ತಾರೆ. ಕೆಲವು ಜಾತಿಯ ಕೀಟಗಳು ಮತ್ತು ಜೇಡಗಳು ಈ ರೀತಿಯಾಗಿ ಹಾರಾಡಲು ಕಾರಣವೇನು ಎಂದು ಅಧ್ಯಯನ ಮಾಡಿ ಮಾನವ ತನ್ನ ಆಗಸದಲ್ಲಿನ ಹಾರಾಟವನ್ನು ಇನ್ನಷ್ಟು ಪರಿಷ್ಕರಿಸಲು ಪ್ರಯತ್ನಿಸುತ್ತಿದ್ದಾನೆ. ಇದೇ ತಂತ್ರವನ್ನು ‘ಸ್ಪೈಡರ್ ಮ್ಯಾನ್' ಎಂಬ ಕಾಲ್ಪನಿಕ ವ್ಯಕ್ತಿಯ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಮುಂದೊಂದು ದಿನ ಈ ತಂತ್ರವನ್ನು ಮಾನವ ಬಳಸಿಕೊಂಡು ಜೇಡಗಳಂತೆ ಆಕಾಶಕ್ಕೆ ಹೈಜಂಪ್ ಮಾಡಿ ನೂರಾರು ಮೀಟರ್ ಗಳನ್ನು ಕ್ರಮಿಸುವ ಸಾಧ್ಯತೆ ಇದೆ.

ಜೇಡಗಳ ಬಲೆಯ ಮತ್ತೊಂದು ವಿಶೇಷತೆ ಗೊತ್ತೇ? ನಿಮಗೆ ಟೈಟಾನಿಕ್ ಎಂಬ ಬೃಹತ್ ಹಡಗು ಕಡಲಿನಲ್ಲಿ ಮುಳುಗಿದ ಕಥೆ ಗೊತ್ತೇ ಇದೆಯಲ್ಲ. ದೋಣಿ ಮತ್ತು ಹಡಗುಗಳನ್ನು ಮೀನಿನ ಚಲನೆಯಿಂದ ಪ್ರೇರೇಪಿತಗೊಂಡು ನಿರ್ಮಾಣ ಮಾಡಲಾಯಿತು. ಆದರೆ ದುರಂತಗಳಾದಾಗ ಹಡಗುಗಳು ಮುಳುಗುತ್ತವೆ. ಅದನ್ನು ಮುಳುಗದಂತೆ ಮಾಡಲು ಜೇಡನ ಬಲೆಯನ್ನು ಬಳಸಿಕೊಳ್ಳುವ ನೂತನ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ್ದಾರೆ. ಜೇಡನ ಬಲೆ ನೀರಿನಲ್ಲಿ ತೇಲುತ್ತದೆ ಮತ್ತು ಕರಗುವುದಿಲ್ಲ. ಈ ಕುರಿತಾಗಿ ರೋಚೆಸ್ಟರ್ ವಿಶ್ವವಿದ್ಯಾನಿಲಯದವರು ಪ್ರಯೋಗಗಳನ್ನು ಮಾಡಿ ಜೇಡನ ಬಲೆಯ ಸಹಾಯದಿಂದ ಹೊಸದಾದ ಒಂದು ಲೋಹವನ್ನೇ ಸೃಷ್ಟಿಸಿದ್ದಾರೆ. ಇದರ ಮೇಲೆ ಎಷ್ಟು ಭಾರವನ್ನು ಹಾಕಿದರೂ ಅದು ಮುಳುಗುವುದಿಲ್ಲವಂತೆ. ಇದನ್ನು “ಸೂಪರ್ ಹೈಡ್ರೋಫೋಬಿಕ್ ಮೆಟಲ್" ಎನ್ನುತ್ತಾರೆ. ಮುಂದೊಂದು ದಿನ ಈ ತಂತ್ರಜ್ಞಾನ ಯಶಸ್ವಿಯಾಗಿ ಯಾವ ದುರ್ಘಟನೆಗಳಾದರೂ ಹಡಗುಗಳು ಮುಳುಗದೇ ಇರುವ ಸಾಧ್ಯತೆಗಳು ಇವೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ