ಸ್ಮರಣ ಶಕ್ತಿ ವರ್ಧಕ-ಒಂದೆಲಗ

ಸ್ಮರಣ ಶಕ್ತಿ ವರ್ಧಕ-ಒಂದೆಲಗ

ಬೇಸಿಗೆಯಲ್ಲಿ ಮಧ್ಯಾಹ್ನದ ಹೊತ್ತು ಯಾರಾದರೂ ಹಳ್ಳಿಗಳಲ್ಲಿನ ಮನೆಗಳಲ್ಲಿ ಊಟ ಆಯ್ತಾ..ಏನಿತ್ತು ಪದಾರ್ಥ ಎಂದು ಕೇಳಿದರೆ ನಿಮಗೆ ಹೆಚ್ಚಾಗಿ ದೊರಕುವುದು ಒಂದೇ ಉತ್ತರ "ಒಂದೆಲಗ ಚಟ್ನಿ". ಇತ್ತೀಚೆಗೆ ಇದರ ಹೆಸರು ಅಪರೂಪವಾಗಿದ್ದರೂ ಕೆಲವೊಂದು ಕಡೆ ಹುಡುಕಿಕೊಂಡು ಹೋಗಿ ತಂದು ಅವುಗಳನ್ನು ಉಪಯೋಗಿಸುವವರು ಈಗಲೂ ಇದ್ದಾರೆ. ತೋಟ, ಗದ್ದೆ, ತಂಪಾದ ಗುಡ್ಡಗಳಲ್ಲಿ ಕಾಣಸಿಗುವ ಈ ಬಳ್ಳಿಗಳು ಆಹಾರ, ಔಷಧಿ ಹೀಗೆ ಬಹುಪಯೋಗಿ. ಅಲ್ಲದೆ ನೋಡಲೂ ಹಸಿಹಸಿರಾಗಿ ಸುಂದರವಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮನೆಯ ಹಿತ್ತಲಲ್ಲಿ, ತೋಟದಲ್ಲಿ ಈ ಬಳ್ಳಿಗಳನ್ನು ನಾವು ಹೆಚ್ಚಾಗಿ ಕಾಣಬಹುದು.

ಆಯಾ ಭಾಷೆಗನುಗುಣವಾಗಿ ಇದರ ಹೆಸರೂ ಹಲವಾರು. ತುಳುವಿನಲ್ಲಿ "ತಿಮರೆ", ಕನ್ನಡದಲ್ಲಿ "ಒಂದೆಲಗ", ಬ್ರಾಹ್ಮಿ, ಉರಗ, ಇಂಗ್ಲಿಷಿನಲ್ಲಿ Centella asiatica, ಇತ್ಯಾದಿ. ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಲು ಒಂದೆಲಗ ಸೊಪ್ಪಿನ ಚಟ್ನಿ,ಜತೆಗೆ ಊಟಕ್ಕೆ ಅಪ್ಪೆ ಮಿಡಿ ಉಪ್ಪಿನಕಾಯಿ, ಮಜ್ಜಿಗೆ ಇವುಗಳಿದ್ದರೆ ಬೊಂಬಾಟ್ ಭೋಜನ. ಇದರ ಮುಂದೆ ಅತ್ಯಾಧುನಿಕ ಹೊಟೇಲ್ಗಳ ತಿನಿಸುಗಳು ಲೆಕ್ಕಕ್ಕೇ ಇಲ್ಲದಂತಾಗುತ್ತದೆ. (ಅದರ ರುಚಿ ತಿಳಿದಿರುವವರಿಗೆ)
ಹೆಚ್ಚಾಗಿ ನೀರಿನ ಅಂಶವಿರುವ ಪ್ರದೇಶದಲ್ಲಿ ನೆಲದ ಮೇಲೆ ಶೀಘ್ರ ಹಬ್ಬಿ ಬೆಳೆಯುವ ಒಂದೆಲಗದ ಬಳ್ಳಿ, ಎಲೆ, ಕಾಂಡ ಇವುಗಳನ್ನು ಚಟ್ನಿ, ತಂಬುಳಿ, ಹಾಗೂ ತಲೆಗೆ ಹಚ್ಚುವ ಎಣ್ಣೆಯ ತಯಾರಿಕೆಗಾಗಿ ಉಪಯೋಗವಾಗುವ ಗಿಡಮೂಲಿಕೆಯಾಗಿದೆ. ಇದೊಂದು ಉತ್ತಮ ಸ್ಮರಣಶಕ್ತಿ ವರ್ಧಕ ಔಷದೀಯ ಗುಣಗಳುಳ್ಳ ಬಳ್ಳಿ. ಒಂದೆಲಗ ಅಥವಾ ಉರಗದ ಸೊಪ್ಪಿನ ರಸವನ್ನು ಒಂದು ಚಮಚ  ಶುದ್ಧ ಜೇನು ತುಪ್ಪ ಬೆರೆಸಿ ನಿತ್ಯವೂ ಮಕ್ಕಳಿಗೆ ನೀಡಿದರೆ ಮಕ್ಕಳ ಸ್ಮರಣಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಅಲ್ಲದೆ ರಕ್ತಹೀನತೆಯನ್ನೂ ನಿವಾರಿಸುತ್ತದೆ. ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಅರ್ಧ ಚಮಚದಿಂದ ನಾಲ್ಕು ಚಮಚದವರೆಗೆ ಜೇನು ತುಪ್ಪ ಬೆರೆಸಿ ನೀಡುವುದರಿಂದ ದೇಹ ಮನಸ್ಸು ಎರಡರ ಆರೋಗ್ಯವೂ ವೃದ್ಧಿಸುತ್ತದೆ. ಅಲ್ಲದೆ ಮನಸ್ಸನ್ನು ಶಾಂತಗೊಳಿಸಲು, ಸ್ಥಿರಗೊಳಿಸಲು, ಏಕಾಗ್ರತೆ, ಹೆಚ್ಚಿಸಲು ಹಾಗೂ ಸಾತ್ವಿಕತೆ ವರ್ಧಿಸಲು ಒಂದೆಲಗ ಸಹಕಾರಿ ಹಾಗಾಗಿ ಆಧ್ಯಾತ್ಮ ಸಾಧಕರು ಪ್ರಾಚೀನದಿಂದಲೂ ಬಳಸುತ್ತಿರುವ ಈ ಗಿಡಮೂಲಿಕೆಗೆ ದಿವ್ಯಾ, ಸರಸ್ವತೀ ಎಂಬ ಹೆಸರುಗಳೂ ಇವೆಯಂತೆ.

ಉಪಯೋಗಗಳು:
೧. ಬೇಸಿಗೆಯಲ್ಲಿ ದೇಹ ತಂಪಾಗಿಸಲು ಊಟದೊಂದಿಗೆ ಒಂದೆಲಗದ ಚಟ್ನಿ ಸೇವಿಸುವುದು ಆರೋಗ್ಯಕ್ಕೆ ಹಿತಕರ.
೨. ನಿದ್ರಾಹೀನತೆಯಿಂದ ಬಳಲುತ್ತಿರುವವರು ಒಂದೆಲಗದಿಂದ ತಯಾರಿಸಿದ ಗುಳಿಗೆಗಳನ್ನು ಸೇವಿಸಿದರೆ ಸುಖ ನಿದ್ದೆಯನ್ನು ನಮ್ಮದಾಗಿಸಿಕೊಳ್ಳಬಹದು. (ಒಂದೆಲಗದ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದರೊಂದಿಗೆ ಹುರಿದ ಗಸೆಗಸೆಯನ್ನು ಬೆರೆಸಬೇಕು, ಬಳಿಕ ಕಲ್ಲುಸಕ್ಕರೆಯ ಎಳೆಪಾಕ ಮಾಡಿ ಅದರಲ್ಲಿ ಈ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಕಲಕಬೇಕು ನಂತರ ತುಪ್ಪವನ್ನು ಸೇರಿಸಿ ಗಟ್ಟಿಯಾಗುತ್ತಲೇ ಒಲೆಯಿಂದ ಕೆಳಗಿಳಿಸಬೇಕು. ಮಿಶ್ರಣವು ಆರಿದ ಬಳಿಕ ಅಂದಾಜು ಗಾತ್ರದ ಗುಳಿಗೆಯನ್ನು ತಯಾರಿಸಬೇಕು. ನಿತ್ಯವೂ ಮಲಗುವ ಮುನ್ನ ಇದನ್ನು ಸೇವಿಸಿ ಹಾಲು ಕುಡಿದು ಮಲಗಿದರೆ ನಿದ್ರಾಹೀನತೆ ನಿವಾರಣೆಯಾಗುತ್ತದೆ.)
೩. ಒಂದೆಲಗದ ತೈಲವೂ ನಿದ್ರಾಹೀನತೆಗೆ ಪರಿಣಾಮಕಾರಿ. ಒಂದೆಲಗದ ತೈಲದಿಂದ ನಿತ್ಯವೂ ಶಿರೋಭಾಗವನ್ನು ಮಾಲೀಶು ಮಾಡಿ ಮಲಗಿದರೆ ಹಿತಕರ.(ಒಂದೆಲಗದ ರಸ ಒಂದು ಕಪ್‌, ಅಷ್ಟೇ ಪ್ರಮಾಣದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು. ಎರಡನ್ನೂ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ ನೀರಿನ ಅಂಶ ಇಂಗುವವರೆಗೆ ಕಾಯಿಸಬೇಕು. ಈ ತೈಲ ನಿತ್ಯ ಹಚ್ಚಿದರೆ "ಕೇಶ್ಯ'ವೂ ಹೌದು-ಅಂದರೆ ಕೂದಲು ಸೊಂಪಾಗಿ ಬೆಳೆಯುತ್ತದೆ, ಹೊಟ್ಟು ನಿವಾರಣೆಯಾಗುತ್ತದೆ.)
೪. ನರದೌರ್ಬಲ್ಯ, ಆತಂಕ, ಒತ್ತಡ ನಿವಾರಣೆಗೆ ಹಾಗೂ ತಲೆನೋವು ನಿವಾರಣೆಯಾಗಲು ಒಂದೆಲಗದ ಕಷಾಯ ಹಿತಕರ. ಒಂದೆಲಗದ ಎಲೆಗಳನ್ನು ಒಂದು ಮುಷ್ಟಿಯಷ್ಟು ತೆಗೆದುಕೊಂಡು ಚೆನ್ನಾಗಿ ಅರೆದು ನೀರು ಸೇರಿಸಿ ಕುದಿಸಬೇಕು. ಆರಿದ ಬಳಿಕ ಜೇನು ಹಾಗೂ ಮೆಣಸಿನಕಾಳಿನ ಹುಡಿ ಬೆರೆಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ಹಿತಕರ.
೫. ಅಪೌಷ್ಟಿಕತೆ ಹಾಗೂ ಪಿತ್ತದೋಷದ ದೃಷ್ಟಿಯಿಂದ ಅಧಿಕ ಕೂದಲು ಉದುರುವವರು ಒಂದೆಲಗದ ಕಾಂಡ ಸಹಿತ ಇಡೀ ಬಳ್ಳಿಯನ್ನು ತೊಳೆದು ಅರೆದು ಅದರ ರಸವನ್ನು ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಒಂದೆಲಗದ ತೈಲವನ್ನು ಕೂದಲಿಗೆ ಲೇಪಿಸುವುದೂ ಹಿತಕರ.
೬.ಮಕ್ಕಳಿಗೆ ಉಪಯುಕ್ತ ಆರೋಗ್ಯವರ್ಧಕ ಪೇಯಗಳು. ಚಹಾ ಕಾಫಿಯ ಬದಲಾಗಿ, ಈ ರುಚಿಕರ ಪೇಯವನ್ನು ನೀಡಿದರೆ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ಹಿತಕರ.
(ಒಂದು ಕಪ್‌ ಹಸುವಿನ ತುಪ್ಪಕ್ಕೆ ಅಷ್ಟೇ ಪ್ರಮಾಣದಲ್ಲಿ ಒಂದೆಲಗದ ಎಲೆಯ ರಸವನ್ನು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ನೀರಿನ ಅಂಶ ಆರಿಬರುತ್ತಲೇ "ಪಟಪಟ' ಸದ್ದು ನಿಂತು, ತುಪ್ಪ ಮತ್ತು ಒಂದೆಲಗದ ರಸದ ಘೃತಪಾಕವು ಉಂಟಾಗುತ್ತದೆ. ಈ ತುಪ್ಪದ ನಿತ್ಯಸೇವನೆ ಮನಸ್ಸಿನ ದುಗುಡ, ಆತಂಕ, ಖನ್ನತೆಗಳನ್ನು ನಿವಾರಿಸಿ ಮನಸ್ಸನ್ನು ಶಾಂತಗೊಳಿಸುವುದು. ಸ್ಮರಣಶಕ್ತಿ, ಬುದ್ಧಿಶಕ್ತಿ ಪ್ರಚೋದಕ. 1-2 ಚಮಚದಷ್ಟು ಈ ತುಪ್ಪವನ್ನು (ಮಕ್ಕಳ ಅಥವಾ ವಯಸ್ಕರ ವಯಸ್ಸಿಗೆ ತಕ್ಕಂತೆ) ಬಿಸಿ ಹಾಲಲ್ಲಿ ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಪರಿಣಾಮಕಾರಿ.)
೭. ಒಂದೆಲಗದ ಎಲೆಗಳನ್ನು ತೊಳೆದು, ನೆರಳಲ್ಲಿ ಒಣಗಿಸ ಬೇಕು. ಅಷ್ಟೇ ಪ್ರಮಾಣದ ಬಾದಾಮಿಯನ್ನು ಹುರಿದು ಇಡಬೇಕು. ಬಳಿಕ ಎರಡನ್ನೂ ಮಿಕ್ಸರ್‌ನಲ್ಲಿ ಪುಡಿಮಾಡಿ, ಸ್ವಲ್ಪ ಯಾಲಕ್ಕಿ ಹುಡಿ, ಶುದ್ಧ ಕೇಸರಿ ದಳಗಳನ್ನು ಬೆರೆಸಬೇಕು. ಈ ಪುಡಿಯನ್ನು 2 ಚಮಚದಷ್ಟು 1 ಕಪ್‌ ಹಾಲಿಗೆ ಬೆರೆಸಿ ಸ್ವಲ್ಪ ಕಲ್ಲುಸಕ್ಕರೆ ಅಥವಾ ಬೆಲ್ಲ ಬೆರೆಸಿ ನೀಡಬೇಕು. ಕಾದಾರಿದ ಹಾಲು ಅಥವಾ ತಂಪಾದ ಹಾಲಿಗೆ ಈ ಪುಡಿಯನ್ನು ಬೆರೆಸುವುದಾದರೆ ಕಲ್ಲುಸಕ್ಕರೆ ಅಥವಾ ಬೆಲ್ಲದ ಬದಲು ತಾಜಾ ಜೇನುತುಪ್ಪ ಬೆರೆಸಬಹುದು. ನಿತ್ಯ ಬೆಳಿಗ್ಗೆ ಈ ಪೇಯ ಬೆಳೆಯುವ ಮಕ್ಕಳಿಗೆ ನೀಡಿದರೆ ಉತ್ತಮ ಆರೋಗ್ಯವರ್ಧಕ ಪೇಯ.

ಹೀಗೆ ಹಿತ್ತಲ ಬಳ್ಳಿಯ ಔಷಧೀಯ ಗುಣಗಳು ವೈದ್ಯಕೀಯ ಲೋಕದಲ್ಲೂ ಪ್ರಸಿದ್ಧಿಯನ್ನು ಪಡೆದಿವೆ. ನಮ್ಮಲ್ಲಿ ಇಂದಿಗೂ ಸಣ್ಣ ಮಕ್ಕಳಿಗೆ ಮುಂಜಾನೆ ಖಾಲಿ ಹೊಟ್ಟೆಗೆ ಒಂದು ಚಮಚ ಒಂದೆಲಗ ರಸ ಹಾಗೂ ಆಗಾಗ ತುಳಸಿ ರಸವನ್ನು ನೀಡುವ ಪದ್ದತಿ ಇದೆ. ಹಿಂದೆ ಎಲ್ಲಡೆ ಕಾಣ ಸಿಗುತ್ತಿದ್ದ ಈ ಬಳ್ಳಿಗಳು ಇಂದು ಅಲ್ಲಲ್ಲಿ ಮಾತ್ರ ಕಾಣ ಸಿಗುತ್ತವೆ.
(ವಿಧಾನಗಳನ್ನು ಮಾಡುವ ಬಗೆ ಅಲ್ಲಲ್ಲಿ ಓದಿದ್ದು ಹಾಗೂ ಹಿರಿಯರಿಂದ ಕೇಳಿ ಸಂಗ್ರಹಿಸಿದ್ದು)

ಚಿತ್ರಕೃಪೆ: http://kn.wikipedia.org/wiki/%E0%B2%92%E0%B2%82%E0%B2%A6%E0%B3%86%E0%B2%B2%E0%B2%97
 

Comments

Submitted by ಗಣೇಶ Mon, 02/18/2013 - 00:06

>>>ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಲು ಒಂದೆಲಗ ಸೊಪ್ಪಿನ ಚಟ್ನಿ,ಜತೆಗೆ ಊಟಕ್ಕೆ ಅಪ್ಪೆ ಮಿಡಿ ಉಪ್ಪಿನಕಾಯಿ, ಮಜ್ಜಿಗೆ ಇವುಗಳಿದ್ದರೆ ಬೊಂಬಾಟ್ ಭೋಜನ. ಇದರ ಮುಂದೆ ಅತ್ಯಾಧುನಿಕ ಹೊಟೇಲ್ಗಳ ತಿನಿಸುಗಳು ಲೆಕ್ಕಕ್ಕೇ ಇಲ್ಲದಂತಾಗುತ್ತದೆ. (ಅದರ ರುಚಿ ತಿಳಿದಿರುವವರಿಗೆ)---- ೯/೧೦. ಮಜ್ಜಿಗೆ ಬದಲು ಮೊಸರಾದರೆ ೧೦/೧೦. ಯಾವ ಸ್ಟಾರ್ ಹೋಟಲ್ ಊಟನೂ ನನಗೆ ಬೇಡ. ಉತ್ತಮ ಲೇಖನ. ಹಿಂದೆ ನಾನೂ ಒಮ್ಮೆ ಅಲ್ಲಿಲ್ಲಿಂದ ಸಂಗ್ರಹಿಸಿ ಒಂದೆಲಗದ ಬಗ್ಗೆ ಬರೆದಿದ್ದೆ- http://sampada.net/…
Submitted by ಮಮತಾ ಕಾಪು Mon, 02/18/2013 - 10:02

In reply to by ಗಣೇಶ

ಗಣೇಶ್ ಅಣ್ಣಾ ಮೊಸರಾದರೆ ಇನ್ನೂ ರುಚಿ ಹೌದು. ನಾವು ಮಜ್ಜಿಗೆ ಅನ್ನೋದು ಒಗ್ಗರಣೆ ಹಾಕಿದ ಮಜ್ಜಿಗೆ, ನೀರು ಮಜ್ಜಿಗೆ ಅಲ್ಲ. ಒಗ್ಗರಣೆ ಹಾಕಿದ ಮಜ್ಜಿಗೆಯೂ ಸಕತ್ ಟೇಸ್ಟ್. ಪ್ರತಿಕ್ರಿಯೆಗೆ ಧನ್ಯವಾದಗಳು.
Submitted by ಮಮತಾ ಕಾಪು Mon, 02/18/2013 - 10:26

In reply to by Shobha Kaduvalli

ಹೌದು ಶೋಭಾ ಅವರೆ ಅದೇ ಮಜ್ಜಿಗೆ. ನೀರು ಮಜ್ಜಿಗೆ ಅನ್ನೋದು ಕೆಲಸ ಮಾಡಿ ದಣಿದವರು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನೀರು ತುಂಬಾ ಸೇರಿಸಿ ಕುಡಿಯುತ್ತಾರೆ. ಮೊಸರನ್ನು ಕಡೆದು ಬೆಣ್ಣೆ ತೆಗೆದ ಮಜ್ಜಿಗೆಗೆ ತುಂಬಾ ನೀರು ಬೆರೆಸದೆ, ಹದವಾದ ದಪ್ಪದಲ್ಲಿ, ಬೆಳ್ಳುಳ್ಲಿ, ಉಪ್ಪು ಹಾಕಿ ಒಣಗಿಸಿದ ಕಾಯಿ ಮೆಣಸು, ಒಗ್ಗರಣೆ ಸೊಪ್ಪು, ಸಾಸಿವೆ, ಬೇಕಿದ್ದರೆ ಈರುಳ್ಳಿ ಹಾಕಿ ಒಗ್ಗರಣೆ ಹಾಕಿದರೆ ಊಟ ಮಾಡಲು ಸಕತ್ ರುಚಿ. ಪಲ್ಯದ ಜತೆಗೆ ಇನ್ನೂ ಚೆನ್ನಾಗಿರತ್ತೆ. ಹಾಗೇ ಕುಡಿಯಲೂಬಹುದು.
Submitted by makara Mon, 02/18/2013 - 10:16

ಮಮತಾ ಅವರೆ, ನಿಮ್ಮ ಬರಹವನ್ನು ಓದಿ ಒಂದೆಲಗದ ಮಹಾತ್ಮ್ಯೆಯ ಸವಿಯನ್ನು ಅನುಭವಿಸಬೇಕಷ್ಟೇ; ಏಕೆಂದರೆ ಮುಂಚೆ ಬಯಲು ಸೀಮೆಯಲ್ಲೂ ಇದು ಹೇರಳವಾಗಿ ಸಿಗುತ್ತಿತ್ತು ಎಂದು ಕೇಳಿದ್ದೇನೆ; ಆದರೆ ಈಗ ಮಲೆನಾಡಿನಲ್ಲಿಯೇ ಇದು ಅಪರೂಪವಾಗಿರುವಾಗ ಇನ್ನು ಅದನ್ನು ಸವಿಯುವ ಭಾಗ್ಯವಂತೂ ದೂರದ ಮಾತು. ಇಂತಹ ಒಂದು ಹಿತ್ತಲುಗಿಡವನ್ನು ಪರಿಚಯಿಸುವುದರ ಮೂಲಕ ನಮ್ಮ ಜೈವಿಕ ಸಂಪತ್ತನ್ನು ಕಾಪಾಡಿಕೊಳ್ಳಬೇಕೆಂಬ ತಿಳುವಳಿಕೆ ಉಂಟು ಮಾಡುತ್ತದೆ, ಅದಕ್ಕಾಗಿ ಧನ್ಯವಾದಗಳು.
Submitted by ಮಮತಾ ಕಾಪು Mon, 02/18/2013 - 10:32

In reply to by makara

ಶ್ರೀಧರ್ ಅವರೆ ಧನ್ಯವಾದಗಳು ಪ್ರತಿಕ್ರಿಯೆಗೆ. ನೀವು ಹೇಳೋದು ನಿಜ. ನಮ್ಮ ತೋಟದಲ್ಲೂ ಇದು ತುಂಬಾ ಸಿಗುತ್ತಿತ್ತು. ನಾವು ಪ್ರೈಮರಿ ಸ್ಕೂಲ್ಗೆ ಹೋಗುವ ಸಂದರ್ಭದಲ್ಲಿ, ಅಂದರೆ ಹತ್ತು ವರ್ಷಗಳ ಹಿಂದೆ. ಈಗ ಅಲ್ಲೊಂದು ಇಲ್ಲೋಂದು ಇದೆ. ಅಮ್ಮನ ಜತೆ ಹೇಳಿ ಹೋತೋಟದಲ್ಲಿ ಒಂದೆಲಗ ಬಳ್ಳಿ ತಂದು ನೆಟ್ಟಿದ್ದೇವೆ. ಬೇಕಾದಾಗ ಅದರ ಚಟ್ನಿ ಮಾಡುವುದು. ಅಲ್ಲದೆ ಅಕ್ಕನ ಮಗಳಿಗೆ ಸಣ್ಣದಿಂದಲೂ ಇದರ ರಸ ಕುಡಿಸುವುದರಿಂದ ನಮ್ಮಲ್ಲಿ ಇದು ಇನ್ನೂ ಇದೆ.
Submitted by sasi.hebbar Mon, 02/18/2013 - 10:40

In reply to by makara

ಒಂದೆಲಗವು ಮಾರಾಟಕ್ಕೆ ಸಿಗುವಂತಾಗಿರುವುದು ಈಚಿನ ದಶಕದ ಬೆಳವಣಿಗೆ. ಬೆಂಗಳೂರಿನಲ್ಲಿ ಒಂದೆಲಗ ಮಾರಾಟಕ್ಕೆ ಸಿಗುತ್ತಿದ್ದು, ಪಾರಂಪರಿಕವಾಗಿ ಇದರ ಪರಿಚಯವಿಲ್ಲದವರು, ಸೊಪ್ಪನ್ನು ಖರೀದಿಸಿ ಬಳಸಬಹುದು. ಸರಿಯಾಗಿ ನಾಲಗೆ ಹೊರಡದ ಮಕ್ಕಳಿಗೆ,ಇದನ್ನು ತಿನ್ನಿಸಿದರೆ ಸ್ಪಷ್ಟವಾಗಿ ಮಾತು ಬರುತ್ತದೆ. ನಮ್ಮ ಗೆಳೆಯರ ಮಗನೊಬ್ಬನಿಗೆ (ಆಂಧ್ರದವರು) ಎರಡು - ಮೂರು ವರ್ಷವಾಗಿದ್ದರೂ, ಸರಿಯಾಗಿ ಅಕ್ಷರಗಳು ಬರುತ್ತಿರಲಿಲ್ಲ. ನಾಲ್ಕಾರು ಅಕ್ಷರಗಳನ್ನು ಮಾತ್ರ ಹೇಳುತ್ತಿದ್ದ. ಅವರು ಹಲವಾರು ವೈದ್ಯರ ಬಳಿ ಟೆಸ್ಟ್ ಮಾಡಿಸಿದ್ದರು,ಮತ್ತು ನರಗಳ ಪರೀಕ್ಷೆ ಮಾಡಿಸಿದ್ದರು. ನಾನು ಊಹೆಯ ಮೇರೆಗೆ, ಒಂದೆಲಗವನ್ನು ಬಳಸಲು ಹೇಳಿದೆ. ಉಡುಪಿಯಿಂದ ಸಾಕಷ್ಟು ಸೊಪ್ಪನ್ನು ತರಿಸಿಕೊಂಡು (ಆಗ ಸೊಪ್ಪಿನ ಅಂಗಡಿಗಳಲ್ಲಿ ಇದು ದೊರೆಯುತ್ತಿರಲಿಲ್ಲ), ಪ್ರಿಜ್ ನಲ್ಲಿ ಇಟ್ಟುಕೊಂಡು, ದಿನಾ ಅದರ ರಸವನ್ನು ಜೇನು ತುಪ್ಪಡೊಂ ದಿಗೆ ತಿನ್ನಿಸಿ ಎಂದು ಹೇಳಿದ್ದೆ. ಸುಮಾರು ಹದಿನೈದು ದಿನಗಳಲ್ಲಿ, ಅ ಆ ಇ ಈ ಎಲ್ಲಾ ಅಕ್ಷರಗಳು, ಎ, ಬಿ, ಸಿ, ಡಿ ಎಲ್ಲಾ ಅಕ್ಷರಗಳನ್ನು ಮತ್ತು ಸಾಕಷ್ಟು ಸ್ಪಷ್ಟವಾಗಿ ಮಾತನಾಡಲು ಕಲಿತ. ಒಂದೆಲಗವು ಮಿದುಳಿಗೆ ಮತ್ತು ನರಗಳಿಗೆ ತುಂಬಾ ಶಕ್ತಿಯನ್ನು ತುಂಬುತ್ತದೆ ಎಂಬುದನ್ನು ನಾನು ಕಣ್ಣಾರೆ ಕಂಡ ಘಟನೆ ಇದು. ಒಳ್ಳೆಯ ಲೇಖನ ನೀಡಿದ ಮಮತಾ ಅವರಿಗೆ ಧನ್ಯವಾದಗಳು.
Submitted by ಮಮತಾ ಕಾಪು Mon, 02/18/2013 - 10:50

In reply to by sasi.hebbar

ಶಶಿಧರ್ ಅವರೆ ತುಂಬಾ ಧನ್ಯವಾದಗಳು. ಒಂದೆಲಗ ಬೆಂಗಳೂರಲ್ಲಿ ಮಾರುತ್ತಾರೆಂದು ತಿಳಿದಿರಲಿಲ್ಲ. ಮಾರ್ಕೆಟ್‌ಗೆ ಹೋದಾಗ ಕಂಡದ್ದೂ ನೆನಪಿಲ್ಲ. ಎಲ್ಲಿ ಮಾರುತ್ತಾರೆ ಎಂದು ಗೊತ್ತಿದ್ದರೆ, ತಿಳಿಸಿದರೆ ಬಹಳ ಉಪಕಾರವಿತ್ತು. ಊರಿಗೆ ಹೋಗುವುದು ಯಾವತ್ತೋ..ಅದರ ಮೊದಲು ಒಂದೆಲಗ ಚಟ್ನಿಯಲ್ಲಿ ಊಟ ಮಾಡುವ ಯೋಗ ಬರಬಹುದೇನೋ. ಒಂದೆಲಗವು ಮಿದುಳಿಗೆ ಮತ್ತು ನರಗಳಿಗೆ ತುಂಬಾ ಶಕ್ತಿಯನ್ನು ತುಂಬುತ್ತದೆ..ಈಗಿನ ಬೂಸ್ಟ್ ಹಾರ್ಲಿಕ್ಸ ಗಿಂತ ಸಣ್ಣ ಮಕ್ಕಳಿಗೆ ಇದನ್ನು ನೀಡಿದರೆ ಬಹಳ ಪರಿಣಾಮಕಾರಿ.
Submitted by sasi.hebbar Mon, 02/18/2013 - 11:04

In reply to by ಮಮತಾ ಕಾಪು

ರಾಜಾಜಿನಗರದ ಸೊಪ್ಪು ಮಾರುವವರೊಬ್ಬರು ಒಂದೆಲಗದ ಕಟ್ಟನ್ನು ಮಾರುತ್ತಿದ್ದರು. ನಾನು ಕೇಳಿದೆ-" ತುಂಬಾ ಜನ ಖರೀದಿಸುತ್ತಾರೊ?" ಅದಕ್ಕವರು, ಇಲ್ಲ, ಕೆಲವರು ಹೇಳಿ ತರಿಸಿಕೊಳ್ಳುತ್ತಾರೆ, ಮಾರಾಟಕ್ಕೆ ಸಿಗುತ್ತದೆ, ಎಂದು ಉತ್ತರಿಸಿದರು.
Submitted by sasi.hebbar Mon, 02/18/2013 - 11:07

In reply to by ಮಮತಾ ಕಾಪು

<<ಈಗಿನ ಬೂಸ್ಟ್ ಹಾರ್ಲಿಕ್ಸ ಗಿಂತ ಸಣ್ಣ ಮಕ್ಕಳಿಗೆ ಇದನ್ನು ನೀಡಿದರೆ ಬಹಳ ಪರಿಣಾಮಕಾರಿ.>> ಬೂಸ್ಟ್ ಹಾರ್ಲಿಕ್ಸ್ ಮತ್ತು ಒಂದೆಲಗದ ಹೋಲಿಕೆ ಯಾಕೆ? ಒಂದೆಲಗನವನ್ನು, ಆಗಾಗ ಅಥವಾ ದಿನವೂ ಮಕ್ಕಳಿಗೆ (ಮತ್ತು ಎಲ್ಲರಿಗೂ) ನೀಡುವ ಸಲಹೆ ಒಳ್ಳೆಯದು.
Submitted by hpn Sun, 12/21/2014 - 10:27

In reply to by savithru

ಒಂದೆಲಗದ ಸಸಿ ನೆಟ್ಟರೆ ಸಾಕು. ಒಂದು ಸಸಿ ನೆಟ್ಟರೂ ಬಹುಬೇಗ ಹರಡಿಕೊಳ್ಳುತ್ತದೆ.
ಬೆಂಗಳೂರಲ್ಲಿ ವಿಶ್ವವಿದ್ಯಾಲಯದ ಬಳಿ ಇರುವ ॑ಧನ್ವಂತರಿವನ॑ದಲ್ಲಿ ಸಸಿಗಳು ಸಿಗುತ್ತವೆ.