ಸ್ಮಾರ್ಟ್ ಸಾಧನಗಳು ನಮ್ಮನ್ನೂ ಸ್ಮಾರ್ಟ್ ಆಗಿಸಿವೆ..
ಟ್ವಿಟರ್,ಫೇಸ್‌ಬುಕ್ಕಿನಲ್ಲಿ ಆಕಾಶವಾಣಿ ಸುದ್ದಿಗಳು
ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜತೆ ಸಂಪರ್ಕ ಏರ್ಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಕಂಪೆನಿಗಳು ಮತ್ತು ಸಂಸ್ಥೆಗಳು ಇಳಿದಿವೆ. ಇದಕ್ಕೆ ಆಕಾಶವಾಣಿಯೂ ಹೊರತಾಗುವುದು ಸಾಧ್ಯವೇ?ಈಗ ಪೇಸ್‌ಬುಕ್ ಮತ್ತು ಟ್ವಿಟರ್ ತಾಣಗಳಲ್ಲಿ ಆಕಾಶವಾಣಿ ಪ್ರಸಾರ ಮಾಡಿದ ಸುದ್ದಿಗಳ ಮುಖ್ಯಾಂಶಗಳನ್ನು ಪಡೆಯಬಹುದು. ಫೇಸ್‌ಬುಕ್ಕಿನಲ್ಲಿ http://www.facebook.com/pages/All-India-Radio-News ಮತ್ತು ಟ್ವಿಟರಿನಲ್ಲಿ https://twitter.com/airnewsalerts ವಿಳಾಸದಲ್ಲಿ ಈ ಸೇವೆ ಲಭ್ಯ.
ಸುಲಭ ದರದಲ್ಲಿ ಸೌರವಿದ್ಯುತ್
ಸೌರವಿದ್ಯುತ್ ಸ್ಥಾವರ ಸ್ಥಾಪನಾ ವೆಚ್ಚ ಬಹು ದುಬಾರಿ. ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಘಟಕಕ್ಕೆ ಸುಮಾರು ಎಂಟರಿಂದ ಒಂಭತ್ತು ಕೋಟಿ ರೂಪಾಯಿ ವೆಚ್ಚ ಬರುತ್ತದೆ . ಇದೀಗ ಹೈದರಾಬಾದ್ ಮೂಲದ ಸುರಾನಾ ಎಂಬ ಕಂಪೆನಿಯು ಸೌರವಿದ್ಯುತ್ ಘಟಕವನ್ನು ಆರುಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಿದ್ಧವಿದೆ. ಹೈದರಾಬಾದಿನಿಂದ ಆರುನೂರು ಕಿಲೋಮೀಟರ್ ದೂರದವರೆಗೆ ಸೌರ ಪ್ಯಾನೆಲುಗಳ ಸಾಗಾಣಿಕಾ ವೆಚ್ಚವನ್ನೂ ಇದು ಒಳಗೊಂಡಿದೆ. ಆರ್ಥಿಕ ಹಿನ್ನಡೆಯಿಂದ ಮುಚ್ಚಿದ ಜರ್ಮನ್ ಕಂಪೆನಿ ಸ್ಕೋಟ್ ಸೋಲಾರ್ ಎನ್ನುವ ಕಂಪೆನಿಯ ತಂತ್ರಜ್ಞಾನವನ್ನು ಸುರಾನಾ ಬಳಸುತ್ತಿದೆ. ಹಳೆಯ ಕಂಪೆನಿಯಿಂದದು ನೂರನಲ್ವತ್ತು ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಘಟಕಗಳನ್ನು ತನ್ನದಾಗಿಸಿಕೊಂಡಿದೆ. ಸದ್ಯ ಕಂಪೆನಿಯು ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳಿಗೆ ಬೇಡಿಕೆ ಪಡೆಯಲು ಸಮರ್ಥವಾಗಿಲ್ಲ. ಆದರೂ ತಿಂಗಳಿಗೆ ಕನಿಷ್ಠ ಮುನ್ನೂರು ಘಟಕಗಳನ್ನದು ಮಾರುತ್ತಿದೆ. ವಿದ್ಯುತ್‌ದರವು ಪ್ರತಿ ಕಿಲೋವ್ಯಾಟಿಗೆ ಏಳೂವರೆ ರೂಪಾಯಿಗಳಷ್ಟು ವಿಧಿಸಬೇಕಾಗುತ್ತದೆ. ಆದರೆ ಸೌರವಿದ್ಯುತ್ ಪರಿಸರಸ್ನೇಹಿ ಮತ್ತು ನಿರ್ವಹಣಾ ವೆಚ್ಚ ಅತ್ಯಲ್ಪ ಎನ್ನುವುದು ಗಮನಿಸತಕ್ಕ ಅಂಶಗಳಾಗಿವೆ.
ಟ್ವಿಟರ್ ತತ್ತರ
ಟ್ವಿಟರ್ ತಾಣಕ್ಕೂ ಹ್ಯಾಕರುಗಳ ಕಾಟ ಬಾಧಿಸಿದೆ. ಈ ವಾರದಲ್ಲಿ ಅದ್ಯಾರೋ ಪರಿಣತ ಹ್ಯಾಕರುಗಳು ಟ್ವಿಟರ್ ಬಳಕೆದಾರರ ಖಾತೆಯ ವಿವರಗಳನ್ನು ಕದಿಯಲು ಸಮರ್ಥರಾದರು. ಅದು ಗಮನಕ್ಕೆ ಬಂದ ನಿಮಿಷಗಳ ನಂತರ ಟ್ವಿಟರ್ ತಾಣವು ಪರಿಹಾರ ಕ್ರಮಗಳನ್ನು ಕೈಗೊಂಡರೂ, ಎರಡೂವರೆ ಲಕ್ಷ ಬಳಕೆದಾರರರ ಖಾತೆಗಳು ಬಾಧಿತವಾಗಿವೆಯೆಂದು ಅಂದಾಜಿಸಲಾಗಿದೆ. ಖಾತೆಯ ವಿವರಗಳು ಸೋರಿಕೆಯಾಗಿರಲಿ, ಇಲ್ಲದಿರಲಿ, ಬಳಕೆದಾರರು ತಮ್ಮ ಖಾತೆಗಳ ಗುಪ್ತಪದಗಳನ್ನು ಬದಲಿಸುವುದು ಸೂಕ್ತವೆಂದು ಟ್ವಿಟರ್ ಪ್ರಕಟಿಸಿದೆ. ಮಾತ್ರವಲ್ಲದೆ ಹೊಸ ಗುಪ್ತಪದಗಳನ್ನು ಊಹಿಸಲು ಕಠಿನವಾಗುವಂತೆ,ಗುಪ್ತಪದವನ್ನು ಅಂಕೆ-ಅಕ್ಷರ-ಸಂಕೇತಗಳ ಮಿಶ್ರಣದಿಂದ ಏರ್ಪಡಿಸಲು ಸೂಚಿಸಿದೆ.
ತ್ರೀಡಿ ಪ್ರಿಂಟರ್‌ಗಳ ಮೂಲಕ ಚಂದಿರನ ಮೇಲೆ ಕಟ್ಟೋಣ
ಚಂದ್ರಯಾನಗಳನ್ನು ಕೈಗೊಳ್ಳಲು ಯೋಜಿಸಿರುವ ಖಾಸಗಿ ಕಂಪೆನಿಗಳು ಯಾನಿಗಳಿಗಾಗಿ, ಚಂದ್ರನ ನೆಲದ ಮೇಲೆ ನಿರ್ಮಿಸಲಿರುವ ವಸತಿಕಟ್ಟಡಗಳ ವಿನ್ಯಾಸವನ್ನು ಅಭಿವೃದ್ಧಿ ಪಡಿಸಿದ್ದಾರೆ. ಉಬ್ಬಿಸಿ ಹಿರಿದಾಗಿಸಬಲ್ಲ, ರಚನೆಯ ಮೇಲೆ ಚಂದ್ರನ ಮೇಲ್ಮೈಯ ಮಣ್ಣನ್ನು ಹಚ್ಚಿ, ವಸತಿನಿಲಯವನ್ನು ರಚಿಸಲು ರೊಬೋಟ್ ನಿಯಂತ್ರಿತ ತ್ರೀಡಿ ಮುದ್ರಕಗಳನ್ನು ಬಳಸುವ ಯೋಜನೆಯಿದೆ. ನಾಲ್ಕು ಜನರ ವಸತಿಗೆ ಈ ಕಟ್ಟಡ ನಿರ್ಮಿಸಲಾಗುವುದು. ಚಂದ್ರನ ದಕ್ಷಿಣಧ್ರುವ ಪ್ರದೇಶದಲ್ಲಿ ವಸತಿ ನಿರ್ಮಿಸುವ ನಿರ್ಧಾರಕ್ಕೆ ಬರಲಾಗಿದೆ. ಚಂದ್ರನ ಮೇಲ್ಮೈಯ ಮಣ್ಣು ಸಿಲಿಕಾನ್,ಅಲ್ಯುಮಿನೀಯಂ,ಕಬ್ಬಿಣ,ಕ್ಯಾಲ್ಸಿಯಂ,ಮೆಗ್ನೇಸಿಯಂ ಮುಂತಾದ ಧಾತುಗಳಿರುವುದರಿಂದ,ಅದು ತ್ರೀಡಿ ಮುದ್ರಕಕ್ಕೆ ಸೂಕ್ತವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ತೀಡಿ ಮುದ್ರಕವನ್ನು,ಇದೀಗಲೇ ಭೂಮಿಯಲ್ಲಿ ನಿರ್ವಾತ ಪ್ರದೇಷದಲ್ಲಿ,ದೊಡ್ಡ ರಚನೆಗಳನ್ನು ನಿರ್ಮಿಸಲು ಬಳಸಿ ಪರೀಕ್ಷಿಸಲಾಗಿದೆ. ಚಂದ್ರನ ಮಣ್ಣು-ರಿಗೋಲಿತ್ ಹೋಲುವ ಮಿಶ್ರಣವನ್ನೇ ಬಳಸಿ ಪರೀಕ್ಷಿಸಲಾಗಿದೆ.
ಸ್ಮಾರ್ಟ್‌ಸಾಧನಗಳು ನಮ್ಮನ್ನೂ ಸ್ಮಾರ್ಟ್ ಆಗಿಸಿವೆ..
ಸ್ಮಾರ್ಟ್ ಸಾಧನಗಳು ನಕಾಶೆ,ಶೋಧ ಸೇವೆ,ಮಾಹಿತಿಗಳನ್ನು ಜನರಿಗೆ ತತ್‌ಕ್ಷಣ ಒದಗಿಸುತ್ತವೆ. ಹಾಗಾಗಿ ಜನರು ಮೊದಲಿಗಿಂತ ಹೆಚ್ಚು ಸ್ಮಾರ್ಟ್ ಅನಿಸಿಕೊಳ್ಳುತ್ತಿದ್ದಾರೆ. ಸಾಧನಗಳನ್ನು ಬಳಸುವಾಗ ಜನರ ಐಕ್ಯೂ ಶೇಕಡಾ ಇಪ್ಪತ್ತರಷ್ಟು ಹೆಚ್ಚಾದಂತೆ ಕಂಡುಬರುತ್ತದೆ. ಆದರೆ ಸಾಧನಗಳು ಕೈಕೊಟ್ಟಾಗ,ಜನರು ಪೆಚ್ಚಾಗ ಬೇಕಾಗುತ್ತದೆ. ಹಾಗೆಯೇ ಇಂಟರ್‌ನೆಟ್ ಸಂಪರ್ಕವಿಲ್ಲದಾಗಲೂ ಅಷ್ಟೆ. ಸ್ಮಾರ್ಟ್ ನಗರಗಳು,ಸ್ಮಾರ್ಟ್ ಕಾರುಗಳು,ಸ್ಮಾರ್ಟ್ ಫ್ರಿಜ್‌ಗಳು,ಸ್ಮಾರ್ಟ್ ಕನ್ನಡಕಗಳ ಬಳಕೆ ಹೆಚ್ಚಾದಂತೆ ಜನರೂ ಹೆಚ್ಚು ಚೂಟಿ ಎನಿಸಿಕೊಳ್ಳಲು ಸಮರ್ಥರಾದಾರು.
ಸೋನಿ ಯ ಮಿನಿಡಿಸ್ಕ್ ಇನ್ನು ಸಿಗದು
ಸಿಡಿ, ಡಿವಿಡಿಗಳು ಜನಪ್ರಿಯವಾಗುವ ಮೊದಲು ಸೋನಿ ಕಂಪೆನಿಯು ತಯಾರಿಸಿದ ಸಾಧನವೇ ಮಿನಿಡಿಸ್ಕ್. ಧ್ವನಿಕಡತವನ್ನು ಕೇಳಿಸುವ ಸಾಧನವಾದ ಮಿನಿಡಿಸ್ಕ್ ತೊಂಭತ್ತರ ದಶಕದ ಆರಂಭದಲ್ಲಿ ಜನಪ್ರಿಯವಾದದ್ದು ಜಪಾನಿನಲ್ಲಿ ಮಾತ್ರಾ. ಮುಂದೆ ಮುದ್ರಿಸಲು ಅವಕಾಶ ನೀಡುವ ಸಿಡಿ,ಡಿವಿಡಿಗಳು ಲಭ್ಯವಾದ ಮೇಲೆ ಇದು ಮೂಲೆಗೆ ಸರಿಯಿತು. ಎಂಭತ್ತು ನಿಮಿಷಗಳ ಧ್ವನಿಯನ್ನದು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿತ್ತು. ಕೊನೆಗೂ ಈ ಸಾಧನಕ್ಕೆ ವಿದಾಯ ಹೇಳಲು ಸೋನಿ ಕಂಪೆನಿಯು ನಿರ್ಧರಿಸಿದೆ.
ಫೇಸ್‌ಬುಕ್:ಮೊಬೈಲ್ ಮೂಲಕ ಬಳಸುವವರೇ ಹೆಚ್ಚು
ಫೇಸ್‌ಬುಕ್ ಸಾಮಾಜಿಕ ಜಾಲತಾಣವನ್ನು ಡೆಸ್ಕ್‌ಟಾಪ್,ಲ್ಯಾಪ್‌ಟಾಪ್,ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್ ಹೀಗೆ ಹಲವು ಸಾಧನಗಳ ಮೂಲಕ ಜನರು ಸಂಪರ್ಕಿಸುತ್ತಾರೆ ತಾನೇ?ಈಗ ಮೊದಲಬಾರಿಗೆ ಪೇಸ್‌ಬುಕ್ ಬಳಕೆದಾರರಲ್ಲಿ ಮೊಬೈಲ್ ಮೂಲಕ ಬಳಸುವವರ ಸಂಖ್ಯೆಯೇ ಹೆಚ್ಚಿದೆ. ಅರುವತ್ತೊಂದು ಕೋಟಿ ಬಳಕೆದಾರರು ಫೇಸ್‌ಬುಕ್ಕನ್ನು ದಿನಾಲೂ ಬಳಸುತ್ತಾರೆ. ಅವರ ಪೈಕಿ ಸುಮಾರು ಹದಿನಾರು ಕೋಟಿ ಜನರು ಮೊಬೈಲ್ ಮೂಲಕವೇ ಸಂಪರ್ಕಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ,ಮೊಬೈಲ್ ಮೂಲಕ ಸಂಪರ್ಕಿಸುವ ಬಳಕೆದಾರರ ಸಂಖ್ಯೆ ಅತಿ ಹೆಚ್ಚು. ಹಾಗೆಂದು ಫೇಸ್‌ಬುಕ್ಕಿನ ಹೊಸ ಶೋಧ ಸೇವೆಯಾದ ಗ್ರಾಫ್‌ಸರ್ಚನ್ನು ಮೊಬೈಲ್ ಮೂಲಕ ಇನ್ನೂ ಲಭ್ಯವಾಗಿಸಬೇಕಿದೆ. ಫೇಸ್‌ಬುಕ್ ಸದ್ಯ ನೂರು ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ.
ಟ್ಯಾಬ್ಲೆಟ್ ಮಟ್ಟಿಗೆ ಆಂಡ್ರಾಯಿಡ್ ಬಳಕೆಯೇ ಹೆಚ್ಚು
ಆಪಲ್ ಕಂಪೆನಿಯ ಐಪ್ಯಾಡ್ ಟ್ಯಾಬ್ಲೆಟ್ ಜಗತಿನಲ್ಲೇ ಅಧಿಕ ಮಾರಾಟವಾಗುವ ಟ್ಯಾಬ್ಲೆಟ್ ಸಾಧನವಾಗಿದೆ. ಆದರೆ ಗೂಗಲ್ ತನ್ನ ಆಪರೇಟಿಂಗ್ ವ್ಯವಸ್ಥೆಯಾದ ಆಂಡ್ರಾಯಿಡನ್ನು ಇತರ ಕಂಪೆನಿಗಳ ಸಾಧನಗಳಲ್ಲೂ ಬಳಸಲು ಅನುವು ಮಾಡಿರುವುದರಿಂದ ಒಟ್ಟಿನಲ್ಲಿ ನೋಡಿದಾಗ, ಟ್ಯಾಬ್ಲೆಟ್ ಸಾಧನಗಳಲ್ಲಿ ಹೆಚ್ಚು ಬಳಕೆಯಾಗುವುದು ಆಂಡ್ರಾಯಿಡ್ ವ್ಯವಸ್ಥೆಯೇ ಆಗಿದೆ.
ತಲೆಬುರುಡೆ ಮೂಲಕ ಕಿವಿಗೊಡು!
ಗೂಗಲ್ ಹೊಸ ನಮೂನೆಯ ಹೆಡ್‌ಸೆಟ್‌ಗಳಿಗೆ ಹಕ್ಕುಸ್ವಾಮ್ಯ ಪಡೆಯಲನುವಾಗಿದೆ. ಸಂಗೀತವನ್ನೋ ಮಾತನ್ನೋ ಆಲಿಸಲು ಹೆಡ್‌ಫೋನನ್ನು ಕಿವಿಯ ರಂಧ್ರದಲ್ಲಿ ತುರುಕಬೇಕಷ್ಟೇ? ಆದರೆ ಗೂಗಲ್‌ನ ಹೊಸನಮೂನೆ ಹೆಡ್‌ಫೋನುಗಳಲ್ಲಿ ತಲೆಯ ಎಲುಬುಗಳಿಗೆ ಹೆಡ್‌ಫೋನನ್ನು ತಗಲಿಸಬೇಕು. ಹೆಡ್‌ಪೋನು ಉಂಟು ಮಾಡುವ ಕಂಪನವು ಎಲುಬನ್ನೂ ಕಂಪಿಸುವಂತೆ ಮಾಡಿ, ಕಿವಿಯ ಕೋಕ್ಲಿಯಾದಲ್ಲಿ ತುಂಬಿರುವ ದ್ರವವೂ ಕಂಪಿಸುವಂತೆ ಹೆಡ್‌ಫೋನ್ ಧರಿಸಿದವನು ಧ್ವನಿಯನ್ನಾಲಿಸಲು ಸಾಧ್ಯವಾಗುತ್ತದೆ. ಹೆಡ್‌ಫೋನ್ ವೈ-ಫೈ ಮತ್ತು ಬ್ಲೂಟೂತ್ ಸೌಲಭ್ಯ ಹೊಂದಿದೆ. ಹಾಗಾಗಿ,ಇದನ್ನು ಸಂಗೀತ ನುಡಿಸುವ ಸಾಧನಕ್ಕೆ ತಂತಿಯ ಮೂಲಕ ಸಂಪರ್ಕಿಸಬೇಕಿಲ್ಲ.
ಇಂಟರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.comನಲ್ಲಿ ಲಭ್ಯ.
UDAYAVANI
EPAPER
*ಅಶೋಕ್‌ಕುಮಾರ್ ಎ
Comments
ವಾವ್!!
"ಸೋನಿಯ ಮಿನಿಡಿಸ್ಕ್ ಇನ್ನು ಸಿಗದು
In reply to "ಸೋನಿಯ ಮಿನಿಡಿಸ್ಕ್ ಇನ್ನು ಸಿಗದು by bhalle
:D