ಸ್ಯಾಕ್ಸೋಫೋನ್ ಸಾಮ್ರಾಟ ಕದ್ರಿ ಗೋಪಾಲನಾಥ್ ಇನ್ನಿಲ್ಲ

ಸ್ಯಾಕ್ಸೋಫೋನ್ ಎಂದೊಡನೆ ಮನದಲ್ಲಿ ಮೂಡಿ ಬರುವ ಹೆಸರು ಕದ್ರಿ ಗೋಪಾಲನಾಥ್ ಅವರದು. ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನಿನಿಂದ ನಮ್ಮ ದೇಶದ ಶಾಸ್ತ್ರೀಯ ಕರ್ನಾಟಕ ಸಂಗೀತ ಸುಶ್ರಾವ್ಯವಾಗಿ ಹೊರಹೊಮ್ಮುವಂತೆ ಮಾಡಿದ ಮಹಾ ಸಾಧನೆ ಅವರದು.
ಅವರೀಗ ೧೧ ಅಕ್ಟೋಬರ್ ೨೦೧೯ರಂದು ನಮ್ಮನ್ನಗಲಿ, ಮರಳಿ ಬಾರದ ಲೋಕಕ್ಕೆ ನಡೆದಿದ್ದಾರೆ. ಸ್ಯಾಕ್ಸೋಫೋನ್ ವಾದನದಿಂದ ಜಗತ್ತಿನಲ್ಲೆಲ್ಲ ಹೆಸರು ಗಳಿಸಿದ ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥರಿಗೆ ಇದೊಂದು ನುಡಿನಮನ.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಸಜಿಪಮೂಡದಲ್ಲಿ ೬ ಡಿಸೆಂಬರ್ ೧೯೪೯ರಂದು ಕದ್ರಿ ಗೋಪಾಲನಾಥರ ಜನನ. ಅವರ ಪೂರ್ವಿಕರು ಮಂಗಳೂರಿನ ಕದ್ರಿಯವರು. ಹಾಗಾಗಿ ಅವರ ಹೆಸರಿನೊಂದಿಗೆ ಕದ್ರಿ ಸೇರಿಕೊಂಡಿತು.
ಗೋಪಾಲನಾಥರ ತಂದೆ ತನಿಯಪ್ಪನವರು ನಾಗಸ್ವರ ವಾದಕರು. ತಂದೆಯಿಂದ ನಾಗಸ್ವರ ವಾದನ ಕಲಿತಿದ್ದ ಗೋಪಾಲನಾಥರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಅದೊಮ್ಮೆ ಮೈಸೂರು ಅರಮನೆಯ ಬ್ಯಾಂಡ್ ಸೆಟ್ನಲ್ಲಿ ಸ್ಯಾಕ್ಸೋಫೋನ್ ವಾದನ ಕೇಳಿದ ಗೋಪಾಲನಾಥರು ಆ ವಾದ್ಯಕ್ಕೆ ಮನಸೋತರು. ಆಗಲೇ ಅವರಿಂದ ಅದರ ವಾದನ ಕಲಿಯುವ ಸಂಕಲ್ಪ.
ಅವರ ಸಂಕಲ್ಪ ಸಾಧನೆಗೆ ಒದಗಿ ಬಂದ ಗುರು ಎನ್. ಗೋಪಾಲಕೃಷ್ಣ ಅಯ್ಯರ್. ಗೋಪಾಲನಾಥರ ಗೆಳೆಯ ಮಾಧವಶೆಟ್ಟಿ ಮಂಗಳೂರಿನ ಕಲಾನಿಕೇತನದಲ್ಲಿ ಸಂಗೀತ ಕಲಿಯುತ್ತಿದ್ದರು; ಇವರು ಕಲಾನಿಕೇತನದ ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಸ್ಯಾಕ್ಸೋಫೋನ್ ಕಲಿಯಲು ಗೋಪಾಲನಾಥರಿಗೆ ಅನುವು ಮಾಡಿಕೊಟ್ಟರು. ತಮ್ಮ ಮೊದಲ ಗುರುಗಳಾದ ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸೋಫೋನಿನಲ್ಲಿ ಕರ್ನಾಟಕ ಸಂಗೀತ ನುಡಿಸುವುದನ್ನು ಚೆನ್ನಾಗಿ ಕಲಿತರು.
ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಗ್ಗೆ ಕದ್ರಿ ಗೋಪಾಲನಾಥರಿಂದ ಸ್ಯಾಕ್ಸೋಫೋನ್ ವಾದನದ ಅಭ್ಯಾಸ. ಕ್ರಮೇಣ ಅವರಿಗೆ ಇನ್ನಷ್ಟು ಕಲಿಯಬೇಕೆಂದು ಮನಸ್ಸಾಯಿತು. ತಂಜಾವೂರಿಗೆ ಹೋಗಿ, ಬಾಲಕೃಷ್ಣ ಪಿಳ್ಳೈ ಅವರಲ್ಲಿ ಸತತ ಐದು ವರುಷ ವಾದನದ ಕಲಿಕೆ. ಅನಂತರ ಟಿ.ವಿ. ಗೋಪಾಲಕೃಷ್ಣನ್ ಅವರಲ್ಲಿ ಸಂಗೀತ ಕಲಿಕೆ ಮುಂದುವರಿಸಿದರು. ಇವರ ಅಗಾಧ ಪ್ರತಿಭೆ ಹಾಗೂ ಪರಿಶ್ರಮ ಗುರುತಿಸಿದ ಗೋಪಾಲಕೃಷ್ಣನ್, ಇವರು ಅಂತರರಾಷ್ಟ್ರೀಯ ಮಟ್ಟದ ಸಂಗೀತಗಾರರಾಗಿ ಬೆಳೆಯಲು ಮಾರ್ಗದರ್ಶನ ನೀಡಿದರು. ತಮ್ಮ ಗುರುಗಳ ಅನುಗ್ರಹವೇ ತಮ್ಮ ಸಾಧನೆಗೆ ಪ್ರೇರಣೆ ಎಂದು ಗೋಪಾಲನಾಥರು ಆಗಾಗ ನೆನೆಯುತ್ತಿದ್ದರು.
“ಶಿಷ್ಯರಿಗೆ ಗುರುಗಳ ಹೆದರಿಕೆ ಇರಬೇಕು. ಗುರುಗಳ ಬಗ್ಗೆ ಭಯ, ಭಕ್ತಿ, ಗೌರವವಿದ್ದರೆ ಯಾವುದೇ ವಿದ್ಯೆ ಒಲಿಯುತ್ತದೆ. ಭಯವೇ ಭಕ್ತಿಗೆ ಮೂಲ. ಮನುಷ್ಯನಿಗೆ ಯಾವ ವಿದ್ಯೆಯನ್ನೇ ಆದರೂ ಅದನ್ನು ಕಲಿಯಬೇಕೆಂಬ ಹಸಿವು, ಶ್ರದ್ಧೆ, ಆಸಕ್ತಿ ಇದ್ದರೆ ಅದು ಸುಲಭವಾಗಿ ಒಲಿಯುತ್ತದೆ. ನಾಮ್ಕೇವಾಸ್ತೆ ಎಂಬಂತೆ ಕಲಿಯಬೇಕಲ್ಲ ಎಂಬ ಮನೋಭಾವವಿದ್ದರೆ ವಿದ್ಯೆ ಒಲಿಯದು. ಕಲಿತ ನಂತರ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು” ಎಂಬ ಕದ್ರಿ ಗೋಪಾಲನಾಥರ ಮಾತನ್ನು ಸಂಗೀತ ಕ್ಷೇತ್ರಕ್ಕೆ ಅಂಬೆಗಾಲಿಡುವವರೆಲ್ಲ ನೆನಪಿಟ್ಟುಕೊಳ್ಳಬೇಕು.
ಕದ್ರಿ ಗೋಪಾಲನಾಥರ ಮೊದಲ ಸ್ಯಾಕ್ಸೋಫೋನ್ ಕಚೇರಿ ಜರಗಿದ್ದು ಮಂಗಳೂರಿನ ಕದ್ರಿಯಲ್ಲೇ. ಅವರ ಮೊದಲ ಸಾರ್ವಜನಿಕ ಕಚೇರಿ ನಡೆದದ್ದು ಮದ್ರಾಸಿನ ಚೆಂಬೈ ಸ್ಮಾರಕ ಟ್ರಸ್ಟಿನ ವೇದಿಕೆಯಲ್ಲಿ. ಈ ಕಚೇರಿ ದೊಡ್ಡ ಸುದ್ದಿಯಾಯಿತು. ಮುಂದೆ ಕರ್ನಾಟಕ, ತಮಿಳ್ನಾಡು, ಆಂಧ್ರ ಹಾಗೂ ಕೇರಳದ ಹಲವೆಡೆಗಳಲ್ಲಿ ಹಲವಾರು ಕಚೇರಿಗಳನ್ನು ನಡೆಸಿದರು.
ಪ್ರಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಪ್ಯಾರಿಸಿನ ಹೈಲ್ ಫೆಸ್ಟಿವಲ್, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಬಿಬಿಸಿ ಆಹ್ವಾನದ ಮೇ॑ರೆಗೆ ರಾಯಲ್ ಆಲ್ಬರ್ಟ್ ಹಾಲ್ ಇತ್ಯಾದಿ ಜಾಗತಿಕ ಮಟ್ಟದ ಸಂಗೀತ ಉತ್ಸವ ಹಾಗೂ ವೇದಿಕೆಗಳಲ್ಲಿ ತಮ್ಮ ಸ್ಯಾಕ್ಸೋಫೋನ್ ವಾದನದಿಂದ ಸಂಗೀತಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ಖ್ಯಾತಿ ಕದ್ರಿ ಗೋಪಾಲನಾಥ ಅವರದು. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಸಿಂಗಾಪುರ, ಮಲೇಷ್ಯಾ, ಶ್ರೀಲಂಕಾ, ಗಲ್ಫ್ ದೇಶಗಳು- ಅಲ್ಲೆಲ್ಲ ಸ್ಯಾಕ್ಸೋಫೋನ್ ಮೊಳಗಿಸಿ ಜನಮನ ಗೆದ್ದವರು.
ಪದ್ಮಶ್ರೀ ಪುರಸ್ಕೃತರಾದ ಕರ್ನಾಟಕ ಕರಾವಳಿಯ ಏಕೈಕ ಸಂಗೀತಗಾರರೆಂಬ ಹೆಗ್ಗಳಿಕೆ ಅವರದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಅವರ ಮುಡಿಗೇರಿದೆ. ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಅವರನ್ನು ಗೌರವಿಸಿದೆ.
ಅದೊಂದು ಕಾಲವಿತ್ತು – ಆಕಾಶವಾಣಿಯಲ್ಲಿ ಸ್ಯಾಕ್ಸೋಫೋನ್ ವಾದನಕ್ಕೆ ಅವಕಾಶವಿಲ್ಲದ ಕಾಲ. ಇದರಿಂದ ನೊಂದಿದ್ದ ಕದ್ರಿ ಗೋಪಾಲನಾಥರು ಮಹಾನ್ ಸಂಗೀತಗಾರ ಬಾಲಮುರಳಿ ಕೃಷ್ಣರಿಗೆ ಈ ವಿಷಯ ತಿಳಿಸಿದ್ದರು. ಅವರು ನೇರವಾಗಿ ಆಕಾಶವಾಣಿಯ ದೆಹಲಿಯ ಕೇಂದ್ರ ಕಚೇರಿಯನ್ನೇ ಸಂಪರ್ಕಿಸಿ, ಈ ಲೋಪ ಸರಿಪಡಿಸ ಬೇಕೆಂದು ಆಗ್ರಹಿಸಿದರು. ಅನಂತರ, ಆಕಾಶವಾಣಿಯಲ್ಲಿ ಆಹ್ವಾನಿತ ಸಂಗೀತಗಾರರ ಸಮ್ಮುಖದಲ್ಲಿ ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನ್ ವಾದನ ನಡೆಸಿದಾಗ ಅವರನ್ನು “ಬಿ – ಹೈ” ಗ್ರೇಡ್ ಕಲಾವಿದರಾಗಿ ಗುರುತಿಸಲಾಯಿತು. ಮುಂದಿನದೆಲ್ಲ ಚರಿತ್ರೆ.
“ರಾಗ್ ರಂಗ್” ಸಂಗೀತ ಆಲ್ಬಮ್ ಕದ್ರಿ ಗೋಪಾಲನಾಥ್ ಮತ್ತು ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿಯವರ ಸುಪ್ರಸಿದ್ಧ ಆಲ್ಬಮ್. ಇದಲ್ಲದೆ ಹಲವಾರು ವಿಖ್ಯಾತ ಸಂಗೀತಗಾರರೊಂದಿಗೆ ಜುಗಲ್ಬಂಧಿ ನಡೆಸಿದವರು ಕದ್ರಿ ಗೋಪಾಲನಾಥ್. ಇಂತಹ ಜಗದ್ವಿಖ್ಯಾತ ಸಂಗೀತಗಾರ ಯಾವುದೇ ಸಂಗೀತ ಕಚೇರಿಗೆ ಒಂದು ತಾಸು ಮುಂಚಿತವಾಗಿಯೇ ಬಂದು ತಯಾರಾಗುತ್ತಿದ್ದರು. ಅಷ್ಟೊಂದು ಪೂರ್ವಸಿದ್ಧತೆ ಅವರದು.
ಇಂದು ಅವರಿಲ್ಲವಾದರೂ ಅವರ ಸಂಗೀತ ನಮ್ಮೊಂದಿಗಿರುತ್ತದೆ. ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನ್ ವಾದನ ಕಚೇರಿಯೆಂದರೆ ಕ್ಷಣಕ್ಷಣವೂ ಮನಮೀಟುವ ಸಂಗೀತಧಾರೆ. ಯಾರೂ ನಡೆಯದ ಹಾದಿಯಲ್ಲಿ ನಡೆದು, ನುಡಿದಂತೆ ಬಾಳಿದವರು. ವಿದೇಶಿ ವಾದ್ಯವೊಂದನ್ನು ಒಲಿಸಿಕೊಂಡು, ಅದಕ್ಕೆ ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ಗೌರವದ ಸ್ಥಾನ ತಂದಿತ್ತ ಮಹಾನ್ ಸಂಗೀತಗಾರ ಕದ್ರಿ ಗೋಪಾಲನಾಥರಿಗೆ ನಮೋ.
ಫೋಟೋ ಕೃಪೆ: "ದ ಹಿಂದೂ" ದಿನಪತ್ರಿಕೆ