ಸ್ಲಂ ಡಾಗ್ ... ಯಶಸ್ಸು

ಸ್ಲಂ ಡಾಗ್ ... ಯಶಸ್ಸು

ಬರಹ

ಆಸ್ಕರ್ ಪ್ರಶಸ್ತಿಗಳನ್ನು “ಸ್ಲಂ ಡಾಗ್ ಮಿಲಿಯನಯರ್” ಒಂದರ ಮೇಲೊಂದರಂತೆ ಕೊಳ್ಳೆ ಹೊಡೆಯುತ್ತಿದ್ದಾಗ ನೆನಪಾಯಿತು “ಭಗವಾನ್ ನಹೀ ದೇತಾ, ದೇತಾ ತೋ ಥಪ್ಪಡ್ ಮಾರ್ ದೇತಾ” ಅದು ನಿಜವೋ ಅನ್ನಿಸಿತು! ದೇವರು ಜಿಪುಣ, ಆದರೆ ಕೊಟ್ಟರೆ ಭರಪೂರ ಕೊಡುತ್ತಾನೆ!

ಅಲ್ಲ, ಇದು ತನಕ ಎಷ್ಟೊಂದು ಬಾರಿ ಆಸ್ಕರ್ ಪ್ರಶಸ್ತಿಗೆ ನಮ್ಮ ಚಿತ್ರಗಳು ಹೋಗಿಲ್ಲ. ಕೊನೆಯ ಸುತ್ತಿನ ತನಕವೂ ಬಂದು ಬಂದು ಮುಗ್ಗರಿಸುತ್ತಿದ್ದುವು. ಆದರೆ ಈ ಬಾರಿ ಹಾಗಾಗಲಿಲ್ಲ - ಪ್ರಶಸ್ತಿಯ ಮೇಲೆ ಪ್ರಶಸ್ತಿಗಳು ಬಂದು ಬಿಟ್ಟಿವೆ. ಭಾರತೀಯ ಸಾಕ್ಷ್ಯ ಚಿತ್ರ- “ಸ್ಮೈಲ್ ಪಿಂಕೀ” ಕೂಡ ತಣ್ಣಗೆ ಆಸ್ಕರ್‌ನನ್ನು ಮುಡಿಗೇರಿಸಿಕೊಂಡು ಅಚ್ಚರಿ ಮೂಡಿಸಿದೆ.
ಇದೊಂದು ಖುಷಿಯ ಕ್ಷಣ. ಮುಕ್ತವಾಗಿ ಆನಂದಿಸುವ ಹೊತ್ತು.

ನಾನು ಚಲನ ಚಿತ್ರಗಳ ವಿಮರ್ಶಕನಲ್ಲ. ಸದಭಿರುಚಿಯ ಚಿತ್ರಗಳನ್ನು ಸವಿಯುವ ಒಬ್ಬ ಸಾಮಾನ್ಯ ಪ್ರೇಕ್ಷಕ ಮಾತ್ರ. ಈ ನೆಲೆಯಲ್ಲಿ ನೋಡಿದಾಗ ಅಮೀರ್ ಖಾನ್ ಚಿತ್ರಗಳು - “ಲಗಾನ್” ಆಸ್ಕರ್ ಪ್ರಶಸ್ತಿ ಪ್ರಾಯಶ: ಪಡೆಯಬಹುದಾಗಿತ್ತು ಎಂದು ಅನ್ನಿಸಿದರೂ, ಚಿತ್ರದ ಕೆಲವು ಭಾಗಗಳ ಹಾಡುಗಳು ಮತ್ತು ತೀರ ನಾಟಕೀಯತೆ ಆಸ್ಕರ್ ಪ್ರಶಸ್ತಿಯಿಂದ ಚಿತ್ರವನ್ನು ದೂರ ಇಟ್ಟವೇನೋ. ಇದು ಪ್ರಾಯಶ: “ರಂಗ್ ದೇ ಬಸಂತೀ”ಗೂ ಅನ್ವಯಿಸುತ್ತದೆ. ಹಾಗಾಗಿ ಈ ಬಾರಿ ಕೂಡ ಹಾಗೆಯೇ ಆಗಬಹುದೆಂದು ನನಗನ್ನಿಸಿತ್ತು. ಆದರೆ ನನ್ನೆಣಿಕೆ ತಪ್ಪಾದದ್ದು ತುಂಬ ಖುಷಿಯಾಯಿತು.

ಜಾಗತಿಕವಾಗಿ ನೋಡಿದರೆ ಭಾರತೀಯ ಚಲನ ಚಿತ್ರರಂಗ ಅತ್ಯಂತ ಸಮೃದ್ಧ. ಇಲ್ಲಿ ಎಷ್ಟೊಂದು ಭಾಷೆಗಳಲ್ಲಿ ಎಷ್ಟೊಂದು ಬಗೆಗಳಲ್ಲಿ ಚಲನ ಚಿತ್ರಗಳು ಬರುತ್ತಿವೆ. ಇಷ್ಟು ವೈವಿಧ್ಯತೆಯ ಚಲನ ಚಿತ್ರಗಳು ತೆರೆಯ ಮೇಲೇರುವ ಬೇರೆ ರಾಷ್ಟ್ರಗಳಿವೆಯೇ? ನನಗೆ ತಿಳಿಯದು.

ಸತ್ಯಜಿತ್ ರೇ , ಮೃಣಾಲ್‌ಸೇನ್, ಶ್ಯಾಮ್ ಬೆನೆಗಲ್, ಗೋವಿಂದ್ ನಿಹಲಾನಿ, ಅಡೂರ್ ಗೋಪಾಲಕೃಷ್ಣ .. ಹೀಗೆ ನಮ್ಮ ಶ್ರೇಷ್ಠ ನಿರ್ದೇಶಕರು ಭಾರತೀಯ ಚಲನಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಘನತೆಯನ್ನು ಒದಗಿಸಿದ್ದಾರೆ. ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೂ ಗಿರೀಶ್‌ಕಾಸರವಳ್ಳಿ, ನಾಗಾಭರಣರಂಥ ಪ್ರತಿಭಾನ್ವಿತ ನಿರ್ದೇಶಕರು ನಮ್ಮಲ್ಲಿದ್ದಾರೆ. ಇವರ ಚಲನ ಚಿತ್ರಗಳು ಬದುಕಿನ ವಾಸ್ತವತೆಯನ್ನು ಗಾಢವಾಗಿ ಚಿತ್ರಿಸುತ್ತವೆ. ಹಾಗಾಗಿಯೇ ಅವು ನಮಗೆ ಆಪ್ತವಾಗುತ್ತವೆ.

ನಮ್ಮಲ್ಲಿ ಅದ್ವಿತೀಯ ನಟ ನಟಿಯರಿದ್ದಾರೆ. ಆದರೆ ಆಶ್ಚರ್ಯ. ಆಸ್ಕರ್ ಒಂದು ಮರೀಚಿಕೆಯಾಗಿಯೇ ಉಳಿದಿತ್ತು ಈ ತನಕ. ಪ್ರತಿ ಬಾರಿಯೂ ಆಸ್ಕರ್ ಪ್ರಶಸ್ತಿ ಘೋಷಣೆಯಾಗುವಾಗಲೂ ಒಂದು ಬಗೆಯ ಹತಾಶ ಭಾವ, ಕೀಳರಿಮೆ ಕಾಡುತ್ತಿತ್ತು ಚಲನಚಿತ್ರರಂಗದ ಮಂದಿಗೆ ಮಾತ್ರವಲ್ಲ ಭಾರತೀಯ ಪ್ರೇಕ್ಷಕರಿಗೂ ಕೂಡ. ಆದರೆ ಈ ಬಾರಿ ಸ್ಲಂಡಾಗ್ ಮಿಲಿಯನಯರ್ ಅಂಥ ಕೀಳರಿಮೆಯಿಂದ ಹೊರ ಬರುವುದಕ್ಕೆ ಅವಕಾಶ ನೀಡಿದೆ. ಚಿತ್ರದ ಸಿನಿಮೀಯ ಕಥೆಯೇ ಒಂದು ಬಗೆಯಲ್ಲಿ ವಾಸ್ತವವಾಗಿಬಿಟ್ಟಿತು.

ಚಿತ್ರದ ನಿರ್ದೇಶಕ ಡ್ಯಾನಿ ಬೋಯ್ಲೆಗೆ ಪ್ರಾಯಶ: ಆಸ್ಕರ್ ಪ್ರಶಸ್ತಿಗೆ ಯಾವ ಬಗೆಯಲ್ಲಿ ಚಿತ್ರವನ್ನು ನೀಡಬೆಕೆನ್ನುವ ತಂತ್ರಗಳು ನಮ್ಮಲ್ಲಿನ ನಿರ್ದೇಶಕರಿಗಿಂತ ಹೆಹ್ಚು ಗೊತ್ತಿವೆ ಎಂದು ನನಗನ್ನಿಸುತ್ತದೆ. ಅದು ತಪ್ಪಲ್ಲ. ಚಲನ ಚಿತ್ರ ಇರಬಹುದು, ಸಾಹಿತ್ಯ ಕೃತಿ ಇರಬಹುದು .. ಮಂಡನೆಯ ಬಗೆಯೂ ವಸ್ತುವಿನಷ್ಟೇ ಪ್ರಾಮುಖ್ಯವಾಗುತ್ತದೆ. ತೀವ್ರವಾಗಿ ಬದಲಾಗುತ್ತಿರುವ ವರ್ತಮಾನದ ಧಾವಂತದ ಈ ಯುಗದಲ್ಲಿ ಇದು ಇನ್ನಷ್ಟು ಮಹತ್ವ ಮತ್ತು ಆಯಾಮ ಪಡೆಯುತ್ತದೆ. ರೆಹೆಮಾನ್ ಸಂಗೀತವೇ ಇದಕ್ಕೊಂದು ನಿದರ್ಶನ.

ಇಂದಿನದು ಡಿಜಿಟಲ್ ಯುಗ. ಹೊಸ ಹೊಸ ತಂತ್ರ ವಿನ್ಯಾಸಗಳು ಚಲನಚಿತ್ರರಂಗಕ್ಕೆ ಬಂದಿವೆ ಮತ್ತು ಬರುತ್ತಿವೆ. ಭಾರತೀಯ ಚಲಚಿತ್ರರಂಗ ಇಂದು ಹಿಂದೆಂದಿಗಿಂತಲೂ ಇವುಗಳಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳತೊಡಗಿದೆ - ಜಾಹಿರಾತು ಮಾರುಕಟ್ಟೆಗೆ ಅನುಗುಣವಾಗಿ. ವಾಸ್ತವತೆಯನ್ನು ಪ್ರತೀಕಿಸುವ, ಮನಸ್ಸಿನಾಳವನ್ನು ತಟ್ಟುವ, ನಮ್ಮ ಅರಿವಿಗೆ ಮತ್ತು ಅನುಭವಕ್ಕೆ ಹೊಸ ಆಯಾಮ ನೀಡುವ ಚಲನ ಚಿತ್ರಗಳನ್ನು ವರ್ತಮಾನದ ಡಿಜಿಟಲ್ ತಂತ್ರಗಾರಿಕೆಯನ್ನು ಸಮರ್ಥವಾಗಿ ಬಳಸಿಕೊಂಡರೆ ಜಾಗತಿಕ ಮಟ್ಟದಲ್ಲಿ ಯಶಸ್ಸನ್ನು ಗಳಿಸಿಕೊಳ್ಳಲು ಸಾಧ್ಯ.

ಸ್ಲಂಡಾಗ್ ಮಿಲಿಯನಯರಿನ ಯಶಸ್ಸು ನಮ್ಮ ಎಳೆಯ ನಿರ್ದೇಶಕರಿಗೆ ಸ್ಪೂರ್ತಿಯ ಸೆಲೆಯಾಗಿ ಭವಿಷ್ಯದಲ್ಲಿ ಇನ್ನಷ್ಟು “ಆಸ್ಕರ್” ಭಾರತೀಯ ಚಲನ ಚಿತ್ರಗಳಿಗೆ ಬಂದರೆ ಅಚ್ಚರಿ ಇಲ್ಲ.