ಸ್ವಚ್ಛತೆಯ ಪಾಠ ಕಲಿಸಿದ ‘ಪ್ಲೇಗ್'

ಸ್ವಚ್ಛತೆಯ ಪಾಠ ಕಲಿಸಿದ ‘ಪ್ಲೇಗ್'

ನಿಮಗೆ ನೆನಪಿದೆಯೋ ಇಲ್ಲವೋ, ೧೯೯೪ರಲ್ಲಿ ಗುಜರಾತ್ ನ ಸೂರತ್ ನಗರವನ್ನು ಪ್ಲೇಗ್ ರೋಗ ಕಾಡಿತ್ತು. ಮಹಾಮಾರಿ ಪ್ಲೇಗ್ ರೋಗಕ್ಕೆ ತುತ್ತಾಗಿ ಹಲವಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಪ್ಲೇಗ್ ರೋಗಕ್ಕೆ ಪ್ರಮುಖ ಕಾರಣ ಇಲಿಗಳು. ಈ ಇಲಿಗಳು ಹಾಗೂ ಹೆಗ್ಗಣಗಳು ಬೆಳೆಯಲು ಸೂಕ್ತವಾದ ವಾತಾವರಣ ಸೂರತ್ ನಗರದಲ್ಲಿತ್ತು. ಅಂದು ಬಹುದೊಡ್ಡ ಕೊಳಚೆ ಪ್ರದೇಶವಾಗಿ ನಾರುತ್ತಿದ್ದ ಸೂರತ್ ನ ಗಲ್ಲಿಗಲ್ಲಿಗಳಲ್ಲಿ ಕಸದ ಸಾಮ್ರಾಜ್ಯವಿತ್ತು. ಆ ಸಮಯ ಸೂರತ್ ನಗರದಲ್ಲಿ ಒಳ ಚರಂಡಿ ಎಂಬ ವ್ಯವಸ್ಥೆಯೇ ಇರಲಿಲ್ಲ. ತ್ಯಾಜ್ಯ ವಿಲೇವಾರಿಯ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಸೊಳ್ಳೆಗಳು, ನೊಣಗಳು, ಇಲಿ, ಜಿರಳೆ ಇವುಗಳದ್ದೇ ಸಾಮ್ರಾಜ್ಯವಾಗಿ ಹೋಗಿತ್ತು. ಜನರಿಗೂ ತಮ್ಮ ನಗರ ಸ್ವಚ್ಛವಾಗಿರಬೇಕು ಎಂಬ ಆಸೆಯೇ ಇರಲಿಲ್ಲ. ಆದರೆ ಕಾಲ ಕೇಳಬೇಕಲ್ಲವೇ?

ಸೂರತ್ ಗೆ ಪ್ಲೇಗ್ ಮಹಾ ಮಾರಿ ಅಪ್ಪಳಿಸಿದಾಗ ಜನರಿಗೆ ಸ್ವಚ್ಛತೆಯ ಮಹತ್ವ ಗೊತ್ತಾಯಿತು. ಸಾವು ನೋವುಗಳ ಸಂಖ್ಯೆ ಹೆಚ್ಚಾಗತೊಡಗಿದಾಗ ಅಲ್ಲಿಯ ನಗರಾಡಳಿತ ಕೈಗೊಂಡ ಕಠಿಣ ಕ್ರಮಗಳಿಂದ ಪ್ಲೇಗ್ ಮಹಾಮಾರಿ ನಿಯಂತ್ರಣಕ್ಕೆ ಬಂತು. ಈಗಂತೂ ಸೂರತ್ ನಗರ ದೇಶದ ಎರಡನೇ ಸ್ವಚ್ಛ ನಗರ ಎಂಬ ಖ್ಯಾತಿಗೆ ಕಾರಣವಾಗಿದೆ. ಒಂದು ಸಮಯದಲ್ಲಿ ಸೂರತ್ ಗೆ ಕಾಲಿಡಲೂ ಹೆದರುತ್ತಿದ್ದ ಜನರು ಈಗ ಓಡೋಡಿ ಭೇಟಿ ನೀಡುತ್ತಿದ್ದಾರೆ. ಸೂರತ್ ಸೀರೆಗಳು ಹಾಗೂ ವಜ್ರದ ವ್ಯಾಪಾರಕ್ಕೆ ಬಹಳ ಖ್ಯಾತಿಯನ್ನು ಪಡೆದಿದೆ. ಈಗ ಅಗಲವಾದ ರಸ್ತೆಗಳು, ಉತ್ತಮ ಸಾರಿಗೆ ವ್ಯವಸ್ಥೆ, ತ್ಯಾಜ್ಯಗಳು ಹರಿದು ಹೋಗಲು ಚರಂಡಿ ಸೌಕರ್ಯ ಇವೆಲ್ಲಾ ಸೂರತ್ ಅನ್ನು ‘ಖೂಬ್' ಸೂರತ್ ನಗರವನ್ನಾಗಿ ಮಾಡಿದೆ.

ಈ ಬದಲಾವಣೆಗೆ ಕಾರಣ ಅಂದು ಕಾಡಿದ ಸಾಂಕ್ರಾಮಿಕ ರೋಗ. ಆ ಸಮಯ ಪ್ಲೇಗ ಮಹಾಮಾರಿ ಕಾಡದೇ ಇದ್ದಿದ್ದರೆ ಸೂರತ್ ಇಂದೂ ಕೊಳಗೇರಿಯಾಗಿಯೇ ಉಳಿಯುತ್ತಿತ್ತೇನೋ? ನಾವು ಹಿಂದೆ ತಿರುಗಿ ಇತಿಹಾಸದ ಪುಟಗಳನ್ನು ಗಮನಿಸುವಾಗ ಈ ರೀತಿಯ ಹಲವಾರು ದೃಷ್ಟಾಂತಗಳು ಕಾಣಸಿಗುತ್ತವೆ. ಪ್ಲೇಗ್ ಮಹಾಮಾರಿ ಮೊದಲ ಬಾರಿ ಕ್ರಿ.ಶ.೫೪೧ರಲ್ಲಿ ಈಜಿಪ್ಟ್ ದೇಶದಲ್ಲಿ ಕಾಣಿಸಿಕೊಂಡಾಗ ಹತ್ತಿರದ ಪಾಲೆಸ್ತೀನ್ ಹಾಗೂ ಸಂಪೂರ್ಣ ಮೆಡಿಟರೇನಿಯನನ್ನು ಆವರಿಸಿ, ರೋಮನ್ ಸಾಮ್ರ್ಯಾಜ್ಯಕ್ಕೂ ಹಬ್ಬಿತ್ತು. ರೋಮನ್ ಸಾಮ್ರಾಜ್ಯವನ್ನು ಒಗ್ಗೂಡಿಸುವ ಕನಸು ಕಾಣುತ್ತಿದ್ದ ಜಸ್ಟಿನಿಯನ್ ನ ಆಡಳಿತವನ್ನು ಈ ಪಿಡುಗು ಬುಡಮೇಲು ಮಾಡಿಹಾಕಿತು. ಆ ಸಮಯ ಈ ಮಹಾಮಾರಿಗೆ ಯಾವುದೇ ಲಸಿಕೆ ಇಲ್ಲದೇ ಇದ್ದ ಕಾರಣದಿಂದಾಗಿ ಸುಮಾರು ಎರಡು ಶತಮಾನಗಳವರೆಗೆ ಇದರ ಉಪಟಳ ಮುಂದುವರಿದಿತ್ತು. ಕ್ರಮೇಣ ಪ್ರಪಂಚದ ವಿವಿಧ ಭಾಗಗಳಿಗೆ ನಿಧಾನವಾಗಿ ಹಬ್ಬಿ ಪ್ರಪಂಚದ ಜನಸಂಖ್ಯೆಯ ಶೇಕಡಾ ೨೬ರಷ್ಟು ಜನರನ್ನು ಬಲಿಪಡೆದುಕೊಂಡಿತು.

ಪ್ಲೇಗ್ ನ ಎರಡನೇ ಅಲೆ ಕ್ರಿ,ಶ. ೧೩೫೦ರಲ್ಲಿ ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶದಲ್ಲಿ ಬಾಧಿಸಲು ಪ್ರಾರಂಭವಾಯಿತು. ಈ ಮಹಾಮಾರಿಯನ್ನು ‘ದಿ ಬ್ಲಾಕ್ ಡೆತ್' ಎಂದೇ ಕರೆಯಲಾಗಿತ್ತು. ಯುರೋಪ್ ನ ದೇಶಗಳ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆ ಬದಲಾಗಿದ್ದು ಈ ಪ್ಲೇಗ್ ಕಾಣಿಸಿಕೊಂಡ ಬಳಿಕವೇ. ಪ್ಲೇಗ್ ಬಂದ ಬಳಿಕ ಇಂಗ್ಲೆಂಡ್ ಮತ್ತು ಫ್ರಾನ್ಸ್ ತನ್ನ ನಡುವೆ ನಡೆಯುತ್ತಿದ್ದ ಯುದ್ಧವನ್ನು ಕೊನೆಗಾಣಿಸಿ, ಶಾಂತಿಯ ಮಾತುಕತೆಗೆ ಮುನ್ನುಡಿ ಬರೆಯಿತು. ಇಂಗ್ಲೆಂಡ್ ನಲ್ಲಿ ಜಾರಿ ಇದ್ದ ಊಳಿಗಮಾನ್ಯ ಪದ್ಧತಿಯು ಈ ಮಹಾಮಾರಿಯ ಕಾರಣದಿಂದ ಕೊನೆಗೊಂಡಿತು. ಪ್ಲೇಗ್ ಗೆ ಬಲಿಯಾಗುತ್ತಿದ್ದವರಲ್ಲಿ ಬಹುತೇಕರು ಬಡವರು, ಕೂಲಿ ಕಾರ್ಮಿಕರು. ಈ ಮಹಾಮಾರಿಯಿಂದ ಕಾರ್ಮಿಕರ ಸಂಖ್ಯೆ ಕಡಿಮೆಯಾಗತೊಡಗಿತು. ಬದುಕಿ ಉಳಿದ ಕಾರ್ಮಿಕರು ಹೆಚ್ಚಿನ ಸಂಭಾವನೆಯನ್ನು ಕೇಳತೊಡಗಿದರು. ನಿರ್ವಾಹವಿಲ್ಲದೇ ಅವರಿಗೆ ಹೆಚ್ಚಿನ ಸಂಬಳ ದೊರೆಯಲಾರಂಭಿಸಿತು. ಪ್ಲೇಗ್ ಕಾರಣದಿಂದಾಗಿ ಬಡವರ್ಗದ ಜನರಿಗೆ ಉತ್ತಮ ಸಂಬಳ, ಸೌಕರ್ಯ ದೊರೆಯಲಾರಂಬಿಸಿತು. ಈ ಸಮಯದಲ್ಲೇ ರೋಗಬಾಧಿತರನ್ನು ಸಾರ್ವಜನಿಕರಿಂದ ಪ್ರತ್ಯೇಕಿಸಿ ಬೇರೆ ಇಡುವ ‘ಕ್ವಾರಂಟೈನ್' ಎಂಬ ವಿಧಾನ ಜಾರಿಗೆ ಬಂತು. 

ಮೂರನೇ ಅಲೆ ಕಂಡು ಬಂದದ್ದು ಕ್ರಿ,ಶ.೧೮೫೫ರಲ್ಲಿ. ಈ ವರ್ಷ ಸ್ಪೇನ್ ದೇಶದ ನಾವಿಕರ ಮೂಲಕ ಆಫ್ರಿಕಾದ ದೇಶಗಳಿಗೆ ಹಬ್ಬಿತು. ಪ್ಲೇಗ್ ನಂತಹ ಮಹಾಮಾರಿಯ ಬಗ್ಗೆ ಕಂಡು ಕೇಳರಿಯದ ಕೆರೆಬಿಯನ್ ಮೂಲ ನಿವಾಸಿಗಳಿಗೆ ಇದು ದೊಡ್ದ ಅಘಾತವನ್ನು ನೀಡಿತು. ಇವು ಹಲವಾರು ಜನರ ಬದುಕನ್ನು ಕಸಿದುಕೊಂಡಿತು. ಉತ್ತರ ಮತ್ತು ದಕ್ಷಿಣ ಅಮೇರಿಕದ ಮೂಲ ನಿವಾಸಿ ಜನರಲ್ಲಿ ಶೇಕಡ ೯೦ ರಷ್ಟು ಜನ ಈ ಸಾಂಕ್ರಾಮಿಕಗಳಿಂದಾಗಿ ಪ್ರಾಣ ಕಳೆದುಕೊಳ್ಳಬೇಕಾಯಿತು. ೨೦೧೯ರಲ್ಲಿ ಪ್ರಕಟವಾದ ಒಂದು ಸಂಶೋಧನಾ ವರದಿಯ ಪ್ರಕಾರ ೧೬ ಮತ್ತು ೧೭ ನೇ ಶತಮಾನದಲ್ಲಿ ಸುಮಾರು ೫೭ ಮಿಲಿಯನ್ ಜನರು ಈ ಪ್ಲೇಗ್ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. 

ಬದಲಾದ ಹವಾಮಾನದ ಕಾರಣದಿಂದ ಕ್ರಮೇಣ ಕಾಡುಗಳ ಸಂಖ್ಯೆ ಅಧಿಕವಾಯಿತು. ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ನ ಪ್ರಮಾಣ ಇಳಿಕೆಯಾದುದರಿಂದ ಭೂಮಿಯ ಬಿಸಿ ಕಡಿಮೆಯಾಯಿತು. ಮೂರನೇ ಅಲೆಯ ಪ್ರಮಾಣ ಅತ್ಯಧಿಕವಾಗಿ ಬಾಧಿಸಿದ್ದು ದಕ್ಷಿಣ ಏಷ್ಯಾದ ದೇಶಗಳಿಗೆ. ಕೊರೋನಾ ಮಹಾಮಾರಿಯಂತೆ ಈ ಪ್ಲೇಗ್ ಕೂಡಾ ಚೀನಾದಿಂದಲೇ ಭಾರತಕ್ಕೆ ಪ್ರಸಾರವಾಯಿತು. ಬ್ರಿಟೀಷ್ ಸರಕಾರದ ಆಡಳಿತ ಇದ್ದ ಸಮಯವಾದುದರಿಂದ ಭಾರತೀಯರಿಗೆ ಔಷಧೋಪಚಾರಗಳ ಸಮಸ್ಯೆಯಿದ್ದವು. ಈ ಕಾರಣದಿಂದ ಲಕ್ಷ ಲಕ್ಷ ಜನರು ಪ್ಲೇಗ್ ರೋಗದಿಂದ ಸಾವನ್ನಪ್ಪಿದರು. ಬ್ರಿಟೀಷ್ ಸರಕಾರ ಪ್ಲೇಗ್ ರೋಗದಿಂದ ಜನರನ್ನು ರಕ್ಷಿಸಲು ಗುಂಪುಗೂಡದಂತೆ ನಿಯಮಾವಳಿಗಳನ್ನು ರಚಿಸಿದರು. ಈ ಕಾರಣದಿಂದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಪ್ರತಿಭಟನೆ, ಚಳುವಳಿಗಳಿಗೆ ಬ್ರೇಕ್ ಬಿದ್ದಂತಾಯಿತು. ಆದರೆ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಆರಲು ಬಿಡದ ಹಲವಾರು ನಾಯಕರು ಈ ಚಳುವಳಿಯನ್ನು ಜೀವಂತವಾಗಿಡಲು ಪ್ರಯತ್ನಿಸಿದರು.

ಪ್ಲೇಗ್ ಮಹಾಮಾರಿಯ ಕಾರಣದಿಂದ ಜನರು ಕಲಿತ ಒಂದು ವಿಷಯವೆಂದರೆ ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಬೇಕೆಂದು. ಈ ಕಾರಣದಿಂದ ಸ್ವಚ್ಛತೆಗೆ ಪ್ರಾಮುಖ್ಯತೆ ದೊರೆಯಿತು. ಚರಂಡಿಗಳನ್ನು ಕೊಳಚೆ ನೀರು ಸರಾಗವಾಗಿ ಹರಿದುಹೋಗುವಂತೆ ಸರಿ ಮಾಡಲಾಯಿತು. ಕಸಕಡ್ಡಿಗಳನ್ನು ಸರಿಯಾಗಿ ವಿಲೇವಾರಿ ಮಾಡಲಾಯಿತು. ಈ ಕಾರಣದಿಂದ ನಂತರದ ದಿನಗಳಲ್ಲಿ ಪ್ಲೇಗ್ ಮಹಾಮಾರಿ ಅಷ್ಟಾಗಿ ದೇಶದೆಲ್ಲಡೆ ಕಾಡಲಿಲ್ಲ. ಈ ರೋಗಕ್ಕೆ ಲಸಿಕೆಯೂ ಇರುವುದರಿಂದ ಈಗ ಪ್ಲೇಗ್ ಎಂಬುದು ಅಷ್ಟೊಂದು ಗಂಭೀರವಾದ ಕಾಯಿಲೆಯಾಗಿ ಉಳಿದಿಲ್ಲ. 

ಅಂತರ್ಜಾಲ ಚಿತ್ರ: ೧೪ನೇ ಶತಮಾನದಲ್ಲಿ ಇಟಲಿಯನ್ನು ಕಾಡಿದ ಪ್ಲೇಗ್ ರೋಗದ ಚಿತ್ರಣ.

(ಆಧಾರ)