ಸ್ವತಂತ್ರ ಚಿಂತನೆ…!
"ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್ವೀಕರಿಸಬಹುದು" - ಗೌತಮ ಬುದ್ಧ.
ಸಮೂಹ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಈ ಮಾತುಗಳು ಎಲ್ಲರೊಳಗೂ ಮೊಳಗಬೇಕಿದೆ. ಆದರೆ ಸತ್ಯ ಕಂಡುಕೊಳ್ಳಲು ಅನುಸರಿಸುವ ಮಾರ್ಗಗಳು, ಶ್ರಮ ಬಹಳ ಮುಖ್ಯವಾಗಬೇಕು. ಬುದ್ದ ಐಹಿಕ ಸುಖ ಭೋಗಗಳನ್ನು ತ್ಯಜಿಸಿ ದೇಹ ಮತ್ತು ಮನಸ್ಸನ್ನು ದಂಡಿಸಿ ಪಡೆದ ಸತ್ಯಕ್ಕಿಂತ ಮಹತ್ವದ ಸತ್ಯ ಅರಿವಾಗಬೇಕಾದರೆ ನಾವು ಸಹ ಬುದ್ದತ್ವದೆಡಗೆ ಸಾಗಬೇಕಾಗುತ್ತದೆ. ಇಲ್ಲದಿದ್ದರೆ ಸುಳ್ಳಗಳೇ ಸತ್ಯವಾಗಬಹುದು ಮತ್ತು ಮುಖವಾಡಗಳು ಪ್ರಾಮುಖ್ಯತೆ ಪಡೆಯಬಹುದು. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಜನ ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲಿ ಸಾಕಷ್ಟು ವೈವಿಧ್ಯತೆ ಇರುತ್ತದೆ.
ಕೆಲವರು ಯಾವುದೇ ಪಂಗಡಗಳಿಗೆ ಸೇರದೆ ತಮ್ಮ ಅರಿವಿನ ಮಿತಿಯಲ್ಲಿ ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ಒಂದು ನಿರ್ದಿಷ್ಟ ವಿಭಾಗದ ಪರವಾಗಿ ತಮ್ಮ ನಿಲುವುಗಳನ್ನು ಪ್ರಕಟಿಸುತ್ತಾರೆ. ಮತ್ತೆ ಕೆಲವರು ಹಣ ಪಡೆದು ಏಜೆಂಟುಗಳ ರೂಪದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇವುಗಳ ನಡುವೆ ಸಿಲುಕಿದ ಜನರ ಮಾನಸಿಕ ಸ್ಥಿತಿ ಗೊಂದಲದ ಗೂಡಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ನಮಗೆ ಅರ್ಥವಾದ ಸತ್ಯವನ್ನು ಹೇಳುವುದು ಸಹ ಕಷ್ಟವಾಗುತ್ತದೆ. ನ್ಯಾಯಾಲಯದಲ್ಲಿನ ಕಕ್ಷಿದಾರರ ಪರವಾದ ವಕೀಲರ ವಾದಗಳಂತೆ ಸಮರ್ಥನೆಗಳು ಮಾತ್ರ ಸತ್ಯಗಳಾಗುವ ಅಪಾಯಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಹೇಗೆ ಹೇಳುವುದು ಸತ್ಯವನ್ನು ಇನ್ನೊಬ್ಬರಿಗೆ ನೋವಾಗದ ಹಾಗೆ, ಹೇಗೆ ಹೇಳುವುದು ನಿಜವನ್ನು ಮತ್ತೊಬ್ಬರ ಭಾವನೆಗೆ ಧಕ್ಕೆ ಆಗದ ಹಾಗೆ, ಹೇಗೆ ಹೇಳುವುದು ಸರಿ ಯಾವುದೆಂದು ಜನರಿಗೆ ಬೇಸರವಾಗದ ಹಾಗೆ, ಹೇಗೆ ಹೇಳುವುದು ವಾಸ್ತವವನ್ನು ಎಲ್ಲರೂ ಮೆಚ್ಚುವ ಹಾಗೆ, ಭಗವದ್ಗೀತೆಯನ್ನು ಮೆಚ್ಚಿದರೆ ಬ್ರಾಹ್ಮಣನೆನ್ನುವಿರಿ, ಅಂಬೇಡ್ಕರ್ ಅವರನ್ನು ಪ್ರೀತಿಸಿದರೆ ದಲಿತನೆನ್ನುವಿರಿ, ಬಸವಣ್ಣನವರನ್ನು ಅನುಸರಿಸಿದರೆ ಲಿಂಗಾಯಿತನೆನ್ನುವಿರಿ, ಕೆಂಪೇಗೌಡರನ್ನು ಹೊಗಳಿದರೆ ಒಕ್ಕಲಿಗನೆನ್ನುವಿರಿ, ಕನಕದಾಸರನ್ನು ಹಾಡಿದರೆ ಕುರುಬನೆನ್ನುವಿರಿ, ವಾಲ್ಮೀಕಿಯನ್ನು ನೆನಪಿಸಿಕೊಂಡರೆ ಬೇಡನೆನ್ನುವಿರಿ, ವಿಶ್ವಕರ್ಮರನ್ನು ಜ್ಞಾಪಿಸಿಕೊಂಡರೆ ಆಚಾರಿ ಎನ್ನುವಿರಿ.
ವಚನಕಾರ ಮಾಚಯ್ಯನನ್ನು ಕೊಂಡಾಡಿದರೆ ಮಡಿವಾಳನೆನ್ನುವಿರಿ, ಬುದ್ಧರನ್ನು ಅಳವಡಿಸಿಕೊಂಡರೆ ಬೌದ್ಧನೆನ್ನುವಿರಿ, ಮಹಾವೀರರನ್ನು ಇಷ್ಟಪಟ್ಟರೆ ಜೈನನೆನ್ನುವಿರಿ, ಗುರುನಾನಾಕ್ ರನ್ನು ವೈಭವೀಕರಿಸಿದರೆ ಸಿಖ್ಖರೆನ್ನುವಿರಿ, ಯೇಸುಕ್ರಿಸ್ತರನ್ನು ಅರ್ಥಮಾಡಿಕೊಂಡರೆ ಕ್ರಿಶ್ಚಿಯನ್ ಎನ್ನುವಿರಿ, ಪೈಗಂಬರ್ ಅವರನ್ನು ನಂಬಿದರೆ ಮುಸ್ಲಿಂಮನೆನ್ನುವಿರಿ, ಉದ್ದ ನಾಮಕ್ಕೊಂದು ಜಾತಿ, ಅಡ್ಡನಾಮಕ್ಕೊಂದು ಜಾತಿ, ವಿಭೂತಿಗೊಂದು ಜಾತಿ, ಕುಂಕುಮಕ್ಕೊಂದು ಜಾತಿ, ಕತ್ತಿನ ಸರಕ್ಕೊಂದು ಜಾತಿ, ಸೊಂಟದಸರಕ್ಕೊಂದು ಜಾತಿ.ತುಪ್ಪ ತಿಂದರೆ ಒಂದು ಜಾತಿ, ಮಾಂಸ ತಿಂದರೆ ಇನ್ನೊಂದು ಜಾತಿ, ಎರಡೂ ಕೈ ಜೋಡಿಸಿ ಮುಗಿದರೆ ಒಂದು ಧರ್ಮ, ಎದೆಯ ಮೇಲೆ ಕೈಯಿಟ್ಟರೆ ಇನ್ನೊಂದು ಧರ್ಮ, ಬಗ್ಗಿದರೆ ಒಂದು ಧರ್ಮ, ಮಲಗಿದರೆ ಇನ್ನೊಂದು ಧರ್ಮ. ಹಸು ತಿಂದರೆ ಒಂದು ಧರ್ಮ, ಹಂದಿ ತಿಂದರೆ ಇನ್ನೊಂದು ಧರ್ಮ. ಸೆರಗು ಮುಚ್ಚಿಕೊಂಡರೆ ಒಂದು ಧರ್ಮ, ಮುಖ ಮುಚ್ಚಿಕೊಂಡರೆ ಇನ್ನೊಂದು ಧರ್ಮ, ಎಲ್ಲರ ದೇಹವೂ ರಕ್ತ, ಮೂಳೆ, ಮಾಂಸ, ಚರ್ಮದ ಹೊದಿಕೆ.
ನಮ್ಮ ಬದುಕೇ ಶಾಶ್ವತವಲ್ಲ, ಏಳಿ ಎದ್ದೇಳಿ - ಜಾತಿ - ಧರ್ಮ ಪಂಥಗಳಿಗೆ ಗುಲಾಮರಾಗದಿರಿ, ಸ್ವತಂತ್ರವಾಗಿ - ಕ್ರಿಯಾತ್ಮಕವಾಗಿ ಚಿಂತಿಸಿ, ಎಲ್ಲರೂ ಮಹಾನ್ ನಾಯಕರಾಗದಿದ್ದರು ಕನಿಷ್ಠ ಉತ್ತಮ ವ್ಯಕ್ತಿತ್ವದ ಮಾನವರಾರೂ ಆಗಬಹುದು. ಆ ಸಾಮರ್ಥ್ಯ ಶಕ್ತಿ ನಿಮಗಿದೆ. ಸಣ್ಣತನ ಅಳಿಯಲಿ ವಿಶಾಲತೆ ಮನೋಭಾವ ಬೆಳೆಯಲಿ, ಕೆಡವುವ ಮನಸ್ಸಿಗಿಂತ ಕಟ್ಟುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ.ನಿಮ್ಮ ಚಿಂತನಾ ಶಕ್ತಿಯನ್ನು ಮೇಲ್ದರ್ಜೆಗೆ ಏರಿಸಿಕೊಂಡಲ್ಲಿ,
ಜೀವನಮಟ್ಟವೂ ಸುಧಾರಿಸುತ್ತದೆ. ಸರಳವಾಗಿ, ಸಹಜವಾಗಿ ಬದುಕೋಣ, ಸೃಷ್ಟಿಗೆ ನಿಯತ್ತಾಗಿ. ಎಲ್ಲರೂ ಸಾಧ್ಯವಾದಷ್ಟು ವಿಷಯಗಳನ್ನು ಸಮಚಿತ್ತದಿಂದ, ವಿಶಾಲ ಮನೋಭಾವದಿಂದ, ಆತ್ಮಸಾಕ್ಷಿಗೆ ಅನುಗುಣವಾಗಿ ಚಿಂತಿಸಿ, ಅರ್ಥಮಾಡಿಕೊಂಡು ಪ್ರತಿಕ್ರಿಯಿಸಿದರೆ ಪರಿಸ್ಥಿತಿ ಸುಧಾರಿಸಬಹುದು.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ