ಸ್ವತಂತ್ರ ಭಾರತವನ್ನು ರೂಪಿಸಿದ ಐದು ಬ್ರಾಂಡ್‌ಗಳು (ಭಾಗ 2)

ಸ್ವತಂತ್ರ ಭಾರತವನ್ನು ರೂಪಿಸಿದ ಐದು ಬ್ರಾಂಡ್‌ಗಳು (ಭಾಗ 2)

ನಿರ್ಮಾ ಡಿಟರ್ಜಂಟ್ ಬ್ರಾಂಡ್
ಭಾರತದಲ್ಲಿ 1980ರ ವರೆಗೆ ಹಳೆಯ ಬ್ರಾಂಡ್‌ಗಳ ಡಿಟರ್ಜಂಟುಗಳೇ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದವು. ಆಗ, ಗುಜರಾತಿನ ಅಹ್ಮದಾಬಾದಿನ ಕರ್ಸನ್ ಭಾಯ್ ಪಟೇಲರ ಡಿಟರ್ಜಂಟ್ ಬ್ರಾಂಡ್ ನಿರ್ಮಾ ಮಾರುಕಟ್ಟೆ ಪ್ರವೇಶಿಸಿ, ನೆಲೆಯೂರಿದ್ದ ಬ್ರಾಂಡ್‌ಗಳನ್ನು ಸಮರ್ಥವಾಗಿ ಎದುರಿಸಿ, ಮಣಿಸಿತು.

ಇದು ಹೇಗಾಯಿತು? ಜಾಹೀರಾತಿಗೆ ಹಣ ಸುರಿಯಲು ಉತ್ಪಾದಕರು ಹಿಂಜರಿಯುತ್ತಿದ್ದ ಕಾಲಮಾನದಲ್ಲಿ, ಟಿವಿ ಜಾಹೀರಾತಿಗಾಗಿ ನಿರ್ಮಾ ಲಕ್ಷಗಟ್ಟಲೆ ಹಣ ಸುರಿಯಿತು. ನಿರ್ಮಾದ ಜಿಂಗಲ್ ಭಾರೀ ಜನಪ್ರಿಯವಾಯಿತು. ಮತ್ತೆಮತ್ತೆ ನಿರ್ಮಾ ಎಂಬ ಹೆಸರನ್ನು ಉಚ್ಚರಿಸುವ ಮೂಲಕ ಅದು ಕೇಳುಗರ ನೆನಪಿನಲ್ಲಿ ದಾಖಲಾಗುವಂತೆ ಮಾಡುವುದೇ ಆ ಜಿಂಗಲಿನ ತಂತ್ರ. ಅದು ಎಷ್ಟು ಪರಿಣಾಮಕಾರಿಯಾದ ತಂತ್ರವೆಂದರೆ, ನಿರ್ಮಾ ಜಿಂಗಲ್ ಆಗ ಕೇಳಿದವರಿಗೆ ಈಗಲೂ ಅದನ್ನು ಮರೆಯಲಾಗುತ್ತಿಲ್ಲ! ಕಳೆದ ದಶಕದಲ್ಲಿ, ಹೊಸ ತಲೆಮಾರಿನವರು ಆ ಜಿಂಗಲನ್ನು ರಿಮಿಕ್ಸ್ ಮಾಡಿ, ಅದಕ್ಕೆ ಮರುಜೀವ ನೀಡಿದ್ದಾರೆ. ಅಂತೂ ಆ ಕಾಲದ ದೃಶ್ಯ ಮಾಧ್ಯಮವನ್ನು ಮಾರಾಟ ಹೆಚ್ಚಿಸಲು ಸಮರ್ಥವಾಗಿ ಬಳಸಿಕೊಂಡಿತು ನಿರ್ಮಾ.
ಜೊತೆಗೆ, ಗುಣಮಟ್ಟದಲ್ಲಿ ನಿರ್ಮಾ ರಾಜಿ ಮಾಡಿಕೊಳ್ಳಲಿಲ್ಲ. ಉತ್ತಮ ಡಿಟರ್ಜಂಟನ್ನು ಬಹಳ ಕಡಿಮೆ ಬೆಲೆಗೆ ಗ್ರಾಹಕರಿಗೆ ಒದಗಿಸಿತು. ಮಾತ್ರವಲ್ಲ, ಸುವ್ಯವಸ್ಥಿತ ಜಾಲದ ಮೂಲಕ ಡಿಟರ್ಜೆಂಟಿನ ವಿತರಣೆ ಮಾಡಿತು. ಈ ರೀತಿಯಲ್ಲಿ,  
ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಕ್ಕಾಗಿ ಕಾದಿದ್ದ ಲಕ್ಷಗಟ್ಟಲೆ ಗ್ರಾಹಕರ ವಿಶ್ವಾಸ ಗಳಿಸಿದ್ದು ನಿರ್ಮಾದ ಸಾಧನೆ. ಈಗ ಯಶಸ್ಸಿಗಾಗಿ ಕಾದಿರುವ ಭಾರತದ ಉದ್ಯಮಶೀಲ ಯುವಜನರ ನಿರೀಕ್ಷೆಗಳ ದ್ಯೋತಕವಾಗಿದೆ ನಿರ್ಮಾ.  
 
ಜಿಯೋ ಟೆಲಿಕಾಮ್
ರಿಲಯನ್ಸ್ ಇಂಡಸ್ಟ್ರೀಸ್ ಇದರ ಜಿಯೋ ಟೆಲಿಕಾಮ್ ಈಗ ಭಾರತದ "ನಂಬರ್ ವನ್” ಟೆಲಿಕಮ್ಯುನಿಕೇಷನ್ ಬ್ರಾಂಡ್. ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಮುಖೇಶ್ ಅಂಬಾನಿ 1916ರಲ್ಲಿ ಜಿಯೋ ಸೇವೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಭಾರತದ ಟೆಲಿಕಮ್ಯುನಿಕೇಷನ್ಸ್ ಸೇವೆಗಳ ಮಾರುಕಟ್ಟೆಯಲ್ಲಿ ಅದಾಗಲೇ ಕೆಲವು ದೊಡ್ಡ ಕಂಪೆನಿಗಳು ತಳವೂರಿದ್ದವು.

ಆದರೆ ಚತುರ ಕಾರ್ಯತಂತ್ರದ ಮೂಲಕ ಜಿಯೋ ಆ ಕಂಪೆನಿಗಳನ್ನೆಲ್ಲ ಹಿಂದಿಕ್ಕಿತು. ಮೊದಲ ಆರು ತಿಂಗಳು ಪುಕ್ಕಟೆ ಡೇಟಾ ಮತ್ತು ಪುಕ್ಕಟೆ ಫೋನ್ ಕರೆಗಳನ್ನು ನೀಡುವ ಮೂಲಕ ಲಕ್ಷಗಟ್ಟಲೆ ಗ್ರಾಹಕರನ್ನು ಸೆಳೆಯಿತು ಜಿಯೋ. ಇದರಿಂದಾಗಿ ಭಾರತದ ಟೆಲಿಕಮ್ಯುನಿಕೇಷನ್ಸ್ ಮಾರುಕಟ್ಟೆಯ ಚಿತ್ರಣವೇ ಬದಲಾಯಿತು. ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ನಂಬಲಾಗದ ವೇಗ ದಕ್ಕಿತು. ಇದರ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳನ್ನು ಅಂದಾಜಿಸುವುದು ಸುಲಭವಲ್ಲ.

ಎಪ್ರಿಲ್ 2020ರಲ್ಲಿ ಭಾರತದಲ್ಲಿ ಅತ್ಯಧಿಕ ಮೊಬೈಲ್ ಗ್ರಾಹಕರನ್ನು ಹೊಂದಿದ್ದ ಕಂಪೆನಿಗಳು:
ಮೊದಲ ಸ್ಥಾನ: ಜಿಯೋ - 389 ಮಿಲಿಯ
ಎರಡನೇ ಸ್ಥಾನ: ಭಾರತಿ ಏರ್-ಟೆಲ್ - 323 ಮಿಲಿಯ
ಮೂರನೇ ಸ್ಥಾನ: ವೊಡಫೋನ್/ ಐಡಿಯಾ - 315 ಮಿಲಿಯ
ನಾಲ್ಕನೇ ಸ್ಥಾನ: ಬಿಎಸ್‌ಎನ್‌ಎಲ್ - 120 ಮಿಲಿಯ
ಗಮನಿಸಿ: 1984ರ ವರೆಗೆ ಟೆಲಿಕಾಮ್ ಸೇವೆಯ ಏಕಸ್ವಾಮ್ಯ ಹೊಂದಿದ್ದ ಬಿಎಸ್‌ಎನ್‌ಎಲ್ ಮಾರುಕಟ್ಟೆಯ ತೀವ್ರಗತಿಯ ಬದಲಾವಣೆಗಳಿಗೆ ತಕ್ಕಂತೆ ಹೆಜ್ಜೆಯಿಡದ ಕಾರಣ ಇದೀಗ ನಾಲ್ಕನೆಯ ಸ್ಥಾನಕ್ಕೆ ಕುಸಿದಿದೆ.

ಮೇ 2021ರಲ್ಲೇ ಭಾರತದ ಒಟ್ಟು ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ 102 ಕೋಟಿ ದಾಟಿತ್ತು. ಇನ್ನು ಮೂರು ವರುಷಗಳಲ್ಲಿ, ಪ್ರತಿಯೊಬ್ಬ ಭಾರತೀಯನೂ ಮೊಬೈಲ್ ಫೋನ್ ಬಳಕೆದಾರ ಆಗಿರುತ್ತಾನೆ ಎಂದು ಅಂದಾಜಿಸಲಾಗಿದೆ.  

ಇದೀಗ ಜಾಗತಿಕ ತಂತ್ರಜ್ನಾನ ಕಂಪೆನಿಗಳಿಗೆ ಭಾರತದ ಡಿಜಿಟಲ್ ಪರಿಣತ ಜನಸಮುದಾಯ ದೊಡ್ಡ ಆಕರ್ಷಣೆ. ಯಾಕೆಂದರೆ, ಅವರ ಉತ್ಪನ್ನ ಮತ್ತು ಸೇವೆಗಳಿಗೆ ಈ ಮಹಾ ಗ್ರಾಹಕವರ್ಗ ಜಗತ್ತಿನ ಅತಿ ದೊಡ್ಡ ಮಾರುಕಟ್ಟೆ.