ಸ್ವದೇಶಿ ಚಳವಳಿಗೆ ಸದಾ ನಮ್ಮ ಬೆಂಬಲ...

ಸ್ವದೇಶಿ ಚಳವಳಿಗೆ ಸದಾ ನಮ್ಮ ಬೆಂಬಲ...

ಇತ್ತೀಚಿನ ವರ್ಷಗಳಲ್ಲಿ ಚೀನಾ ದೇಶದಿಂದ ಆಗುತ್ತಿರುವ ಆಮದು ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದೆ. ಇತ್ತೀಚೆಗೆ ‌ಹೈದರಾಬಾದಿನಲ್ಲಿ ಉದ್ಘಾಟನೆಯಾದ ಪ್ರತಿಮೆಯೂ ಸೇರಿ ದಿನನಿತ್ಯದ ಅಗತ್ಯ ವಸ್ತುಗಳು ಚೀನಾ ಮೂಲದವೇ ಆಗಿರುತ್ತವೆ. ಇದಕ್ಕೆ ಕಾರಣವೇನು ? ಸ್ವಾವಲಂಬಿ ಭಾರತ ನಿರ್ಮಾಣದ ಮಾತನಾಡುವ ಆತ್ಮವಂಚಕ ಮನಸ್ಸುಗಳು.. ಮಾನವ ಸಂಪನ್ಮೂಲಗಳ ದುರುಪಯೋಗ. ಸೇವಾ ವಲಯದ ಅಭಿವೃದ್ಧಿಯ ಭರದಲ್ಲಿ ಉತ್ಪಾದಕ ವಲಯದ ನಿರ್ಲಕ್ಷ್ಯ. ಹೇಗಾದರೂ ಬೇಗ ದುಡ್ಡು ಮಾಡುವ ಯುವಕರ ಮನೋಭಾವಕ್ಕೆ ಪೂರಕ ವಾತಾವರಣದ ಸೃಷ್ಟಿ. ಶ್ರಮ ಸಂಸ್ಕೃತಿಯ ಜಾಗದಲ್ಲಿ ಅಡ್ಡ ದಾರಿಯ ರಹದಾರಿ...

***

ಸ್ವದೇಶಿ ವಸ್ತುಗಳಿಗೆ ಪುರಸ್ಕಾರ, ವಿದೇಶಿ ವಸ್ತುಗಳಿಗೆ ತಿರಸ್ಕಾರ. ಒಂದು ಅಭಿಯಾನ...

ಇದೇನು ಹೊಸದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಈ ಮಾತು ಕೇಳಿ ಬರುತ್ತಿದೆ ಮತ್ತು ಇದು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವದ ಎಲ್ಲಾ ಪ್ರಾಂತ್ಯಗಳ ಆಯ್ಕೆಯೂ ಸಾಮಾನ್ಯವಾಗಿ ಇದೇ ಆಗಿರುತ್ತದೆ. ನಮ್ಮ ಮನೆ, ನಮ್ಮ ಊರು, ನಮ್ಮ ಭಾಷೆ, ನಮ್ಮ ಧರ್ಮ, ನಮ್ಮ ದೇಶ, ನಮ್ಮ ಜನ ನಮ್ಮ ವಸ್ತುಗಳು ಇದು ಸಹಜವಾಗಿ ಎಲ್ಲರಲ್ಲೂ ಒಂದು ಅಭಿಮಾನ‌ ಸೃಷ್ಟಿಸುತ್ತದೆ. ಇದರಲ್ಲಿ ವಿಶೇಷವೇನು ಇಲ್ಲ.

ಈ ಕೊರೋನಾದ ಆರ್ಥಿಕ ಸಂಕಷ್ಟ ಸಮಯದಲ್ಲಿ ಇದನ್ನು ಹೆಚ್ಚು ಒತ್ತು ಕೊಟ್ಟು ಹೇಳುತ್ತಿರುವುದು ವಿಚಿತ್ರವೆನಿಸುತ್ತದೆ. ಆರ್ಥಿಕವಾಗಿ ಇದೊಂದು ಅತ್ಯಂತ ಸರಳ ಲೆಕ್ಕ. ನಮ್ಮ ದೇಶದ ನಮ್ಮ ವಸ್ತುಗಳನ್ನು ನಾವು ಖರೀದಿಸಿದರೆ ಅದರ ಸಂಪೂರ್ಣ ಲಾಭ ನಮ್ಮ ದೇಶಕ್ಕೆ ಸೇರುತ್ತದೆ. ವಿದೇಶಿ ವಸ್ತುಗಳನ್ನು ಖರೀದಿಸಿದರೆ ತೆರಿಗೆ ಮತ್ತು ಖರ್ಚು ನಂತರದ ಲಾಭ ವಿದೇಶಿಗಳಿಗೆ ಸೇರುತ್ತದೆ.

ಆದ್ದರಿಂದ ನಾವು ನಮ್ಮ ದೇಶದಲ್ಲಿ ತಯಾರಾದ ವಸ್ತುಗಳನ್ನು ಖರೀದಿಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಇಷ್ಟು ಸುಲಭ ವಿಷಯಕ್ಕೆ ಅಭಿಯಾನ ಏಕೆ ? ವಿಷಯ ಅಷ್ಟು ಸುಲಭವಿಲ್ಲ. ನಮ್ಮಲ್ಲಿ ಬಹುತೇಕರು ನನ್ನನ್ನೂ ಸೇರಿ ಮುಖವಾಡದ ಮರೆಯಲ್ಲಿ ಬದುಕುತ್ತಿರುವವರು. ಕನ್ನಡ  ತಾಯಿ ಭಾಷೆಯ ಉದಾಹರಣೆಯೇ ನಮ್ಮ ಮುಂದಿದೆಯಲ್ಲವೇ?

ಶ್ರೀಮಂತರು - ವಿದ್ಯಾವಂತರು ತಮ್ಮ ಮಕ್ಕಳನ್ನು ಆಂಗ್ಲ ಭಾಷೆಯ ಶಾಲೆಗಳಲ್ಲಿ ‌ಓದಿಸಿ ಹೆಚ್ಚಿನ ಸಂಬಳದ ಉದ್ಯೋಗ ಮತ್ತು ವಿದೇಶಿ ವಾಸ ಅನುಭವಿಸಿ ಕನ್ನಡದ ವಿಷಯ ಬಂದಾಗ ಸರ್ಕಾರಿ ಶಾಲೆಯ ಮಕ್ಕಳಿಗೆ ಕನ್ನಡ ಉಳಿಸುವ ಮತ್ತು ಬೆಳೆಸುವ ಅಭಿಮಾನದ ಮಾತನಾಡುವ ಆತ್ಮವಂಚಕರಲ್ಲವೇ ನಾವು. ಇಲ್ಲಿ ಕನ್ನಡ ಮಾಧ್ಯಮ ಒಳ್ಳೆಯದೇ ಇಂಗ್ಲೀಷ್ ಮಾಧ್ಯಮ ಒಳ್ಳೆಯದೇ ಎಂಬ ವಿಷಯ ಮುಖ್ಯವಲ್ಲ. ನಾವು ಇಷ್ಟಪಟ್ಟಂತೆ ಇರಲು ಸಾಧ್ಯವಾಗುವ ಸಾಮೂಹಿಕ ವಾತಾವರಣ ಇಲ್ಲ ಎಂಬುದು ಮುಖ್ಯ. ಮಾತಿನಂತೆ ಬದುಕಲು ‌ಸಾಧ್ಯವಾಗುತ್ತಿಲ್ಲ.

ಇದೇ ಪರಿಸ್ಥಿತಿ ಸ್ವದೇಶಿ ವಸ್ತುಗಳ ಖರೀದಿಯ ವಿಷಯದಲ್ಲೂ ಇದೆ. ನಾನು ಕಂಡಂತೆ ಬಹುತೇಕ ನಗರ ಪ್ರದೇಶದ ಮಧ್ಯಮ ಮತ್ತು ಶ್ರೀಮಂತ ಜನರ ಮನೆಗಳಲ್ಲಿ ಇಟಾಲಿಯನ್ ಕಿಚನ್ ಮತ್ತು ಇಟಾಲಿಯನ್ ಮಾರ್ಬಲ್ ಹಾಕಲಾಗಿರುತ್ತದೆ. ಮುದ್ದೆ ರೊಟ್ಟಿ ತಿನ್ನುವವರ ಮನೆಯಲ್ಲಿಯೇ ಇಟಾಲಿಯನ್ ಕಿಚನ್ ! ಸ್ಯಾನಿಟರಿ ವಸ್ತುಗಳು ಸಹ‌ ವಿದೇಶಿಯವೇ !

ನಾವು ಉಪಯೋಗಿಸುವ ಅನೇಕ ವಸ್ತುಗಳು ಮುಖ್ಯವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಶೂ, ಬಟ್ಟೆಗಳು, ಸ್ವಲ್ಪ ಮಟ್ಟಿಗೆ ನಾವು ಓಡಾಡುವ ವಾಹನಗಳು ಎಲ್ಲವೂ ನಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ  ವಿದೇಶಿ ‌ವಸ್ತುಗಳನ್ನೇ ಖರೀದಿಸುವ ಸಾಮಾನ್ಯ ಜೀವನಶೈಲಿಯನ್ನು ಕಾಣಬಹುದು. ಇನ್ನು ಬಡವರು ಸಹಜವಾಗಿಯೇ ಹಣದ ಕಾರಣಕ್ಕಾಗಿ ಸ್ಥಳೀಯ ವಸ್ತುಗಳನ್ನೇ ಖರೀದಿಸುವರು. ಆದರೆ ಚೀನಾ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ಅದರ ಗುಣಮಟ್ಟ ಉತ್ತಮ ಇಲ್ಲದಿದ್ದರೂ ಕಡಿಮೆ ಬೆಲೆಯ ಕಾರಣದಿಂದ ಬಡವರು ಅದನ್ನು ಖರೀದಿಸುವುದು ಹೆಚ್ಚಾಗಿದೆ. ಇರಲಿ ಬಡವರಿಗೆ ಆಯ್ಕೆಯ ಸ್ವಾತಂತ್ರ್ಯವೇ ಇರುವುದಿಲ್ಲ. ಬೆಲೆಯಷ್ಟೇ ಅವರಿಗೆ ಮುಖ್ಯ ಮತ್ತು ಒಟ್ಟು ಆರ್ಥಿಕತೆಯಲ್ಲಿ ಅವರ ಪಾಲು ಕಡಿಮೆ.

ಈಗ ಇದರಲ್ಲಿ ಮುಖ್ಯ ಪಾತ್ರವಿರುವುದು ಮಧ್ಯಮ ಮತ್ತು ಶ್ರೀಮಂತ ವರ್ಗದವರು, ವಿದ್ಯಾವಂತರು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವವರು ಅಧಿಕಾರಿಗಳು ಮುಂತಾದವರು. ಭಾವನಾತ್ಮಕತೆಯನ್ನು ಹೊರತುಪಡಿಸಿ ಇಲ್ಲಿ ಮತ್ತೊಂದು ಆಯಾಮವೂ ಇದೆ. ಸಿನಿಮಾ ಸಾಹಿತ್ಯ ಸಂಗೀತ ಉಡುಪು ಆಹಾರ ವೈದ್ಯಕೀಯ ಎಲ್ಲದರಲ್ಲೂ ಮನುಷ್ಯ ಜೀವಿಗೆ ತನ್ನದೇ ‌ಆಸೆ ಆಕಾಂಕ್ಷೆಗಳಿರುತ್ತದೆ. ಆತನ ದುಡಿಮೆ ಮತ್ತು ಜೀವನೋತ್ಸಾಹ ಅದರ ಮೇಲೆಯೇ ಅವಲಂಬಿತವಾಗಿರುತ್ತದೆ. ಹೊಟ್ಟೆ ಬಟ್ಟೆ ವಸತಿ ನಂತರ ‌ಆತನ ಕ್ರಿಯಾತ್ಮಕತೆ ಅಥವಾ ಆತನ ಆಸಕ್ತಿ ಬೇರೆಯಾಗುತ್ತದೆ.

ಒಂದು ವೇಳೆ ಅತ್ಯುತ್ತಮ ಗುಣಮಟ್ಟದ ವಿದೇಶಿ ವಸ್ತುವೊಂದು ಕಡಿಮೆ ಬೆಲೆಗೆ ದೊರೆಯುವಾಗ  ಅದೇ ವಸ್ತು ಭಾರತದಲ್ಲಿ ತಯಾರಾಗಿ ವಿದೇಶಿ ವಸ್ತುವಿಗಿಂತ ಕಡಿಮೆ ಗುಣಮಟ್ಟ ಹೊಂದಿರುವುದೂ ಅಲ್ಲದೇ ವಿದೇಶಿ ವಸ್ತುವಿಗಿಂತ ದುಬಾರಿ ಬೆಲೆ ಇರುವುದಾದರೆ ನಮ್ಮ ಆಯ್ಕೆ ಯಾವುದಿರಬೇಕು. ಮೊಬೈಲೇ ಇರಲಿ ಅಥವಾ ಬೇರೆ ಏನೇ ಇರಲಿ ಗುಣಮಟ್ಟ ನೋಡಬೇಕೆ, ದೀರ್ಘ ಬಾಳಿಕೆ ನೋಡಬೇಕೆ, ಉಪಯೋಗ ನೋಡಬೇಕೆ, ಬೆಲೆ ನೋಡಬೇಕೆ, ಸ್ವದೇಶಿ ಅಥವಾ ವಿದೇಶಿ ನೋಡಬೇಕೆ ಎಂಬ ಪ್ರಶ್ನೆಗೆ ವಾಸ್ತವ ನೆಲೆಯಲ್ಲಿ ಉತ್ತರ ಕಂಡುಕೊಳ್ಳಬೇಕಿದೆ. ನಮ್ಮ ರೀತಿಯೇ ಎಲ್ಲಾ ದೇಶಗಳ ಜನರು ವರ್ತಿಸಿದರೆ ಅದರಿಂದ ಆಗಬಹುದಾದ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳನ್ನು ಯೋಚಿಸಬೇಕಾಗುತ್ತದೆ. 

ಸ್ವದೇಶಿ ಚಳವಳಿಯಿಂದ ನಮಗೆ ಸಿಗುವ ಲಾಭಗಳು ಮತ್ತು ಅದರಿಂದಾಗಿಯೇ ನಾವು ಕಳೆದುಕೊಳ್ಳಬಹುದಾದ ಅನೇಕ ವಿಷಯ ವಸ್ತುಗಳು ಸಹ ಅಡಕವಾಗಿವೆ. ಎಲ್ಲವನ್ನೂ ತಿರಸ್ಕರಿಸುವುದು‌ ಸಾಧ್ಯವಿಲ್ಲ. ಶ್ರೀಮಂತ ದೇಶಗಳೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟ ಮತ್ತು ಬೆಲೆಯ ಸ್ಪರ್ಧೆ ಮಾಡಲು ಸಿದ್ದರಾಗಬೇಕಾದ ಸಂದರ್ಭದಲ್ಲಿ ರೈಲು ಹಳಿಯ ಮೇಲೆ ತಲೆಯಿಟ್ಟು ಮೈಮರೆತು ಮಲಗಿಕೊಳ್ಳುವ ಜನರೂ ಇರುವಾಗ ಸ್ವದೇಶಿ ಚಳವಳಿಯ ಮುಂಚೂಣಿಯಲ್ಲಿ ನಿಲ್ಲಬೇಕಿರುವುದು ನಿಜವಾಗಿಯೂ ಶ್ರೀಮಂತರು ಮತ್ತು ವಿದ್ಯಾವಂತರು. ಆದರೆ ಅವರುಗಳಿಗೆ ಇರುವ ವಿದೇಶಿ ವ್ಯಾಮೋಹ ಎಲ್ಲರಿಗೂ ತಿಳಿದಿದೆ. ವಿದೇಶಿ  ಸುಗಂಧ, ವಿದೇಶಿ ಕಾರು, ವಿದೇಶಿ ಶೈಲಿಯ ಬ್ಯೂಟಿ ಪಾರ್ಲರ್, ವಿದೇಶಿ ಕನ್ನಡಕ ಮುಂತಾದ ಎಲ್ಲವೂ ಒಂದು ಸಾಮಾಜಿಕ ಅಂತಸ್ತು ಎಂಬಂತೆ ಉಪಯೋಗಿಸಿ ಯಾರೋ ಬಡವರು ಉಪಯೋಗಿಸುವ ಹಲ್ಲು ಪುಡಿ ಸೋಪು ಬಟ್ಟೆಗಳನ್ನು ಸ್ವದೇಶಿ ಚಳವಳಿ ಎಂಬುದು ಹಾಸ್ಯಾಸ್ಪದವಾಗುತ್ತದೆ.

ಅಲ್ಲದೆ ನಮ್ಮ ದೇಶದ ವ್ಯವಸ್ಥೆಯಲ್ಲಿ ಮುಖ್ಯವಾಗಿ ಉತ್ಪಾದಕರಲ್ಲಿ ಇರುವ ಲಾಭದ ದುರಾಸೆ, ಕೆಲಸಗಾರರಲ್ಲಿ ಕಾಣುವ ವೃತ್ತಿ ನೈಪುಣ್ಯತೆಯ ಕೊರತೆ, ಸಂಗ್ರಹ ಮತ್ತು ಸಾಗಾಣಿಕೆಯ ಅದಕ್ಷತೆ, ಮಾರುಕಟ್ಟೆಯ ಅವ್ಯವಸ್ಥೆ, ಅಧಿಕ ಬಡ್ಡಿ ಮತ್ತು ಬಾಡಿಗೆ, ಭ್ರಷ್ಟಾಚಾರ ಎಲ್ಲವನ್ನೂ ಮೀರಿ ಗುಣಮಟ್ಟ ಮತ್ತು ಬೆಲೆ ನಿಯಂತ್ರಣ ಹೇಗೆ ಮಾಡುವುದು. ಕೇವಲ ಭಾವನಾತ್ಮಕವಾಗಿ ಸ್ವದೇಶಿ ಚಳವಳಿ ಕೆಲವು ಸಮಯ ಮಾತ್ರ ಇರಬಹುದು. ಅದು ಶಾಶ್ವತವಾಗಿ ನಮ್ಮ ಆರ್ಥಿಕ ವ್ಯವಸ್ಥೆಗೆ ಲಾಭ ತರಬೇಕಾದರೆ ನಾವು ಬೆಲೆ ಮತ್ತು ಗುಣಮಟ್ಟದಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆ ಎದುರಿಸಲೇಬೇಕು. ನಮ್ಮ ತಾಕತ್ತಿನಿಂದಲೇ ನಾವು ಗೆಲ್ಲಬೇಕೆ ಹೊರತು ದೇಶಪ್ರೇಮದ ಹೆಸರಿನಲ್ಲಿ ಬಡವರ ಮೇಲೆ ಒತ್ತಡ ಹೇರಿ ಇದನ್ನು ಸಾಧಿಸಲು ಸಾಧ್ಯವಿಲ್ಲ.

ಯಾರೂ ಆಸೆ ಪಟ್ಟು ಚೀನಾ ಅಥವಾ ಅಮೆರಿಕ ವಸ್ತುಗಳನ್ನು ಕೊಳ್ಳುವುದಿಲ್ಲ. ಅರಿವಿರುವ ಎಲ್ಲರಲ್ಲೂ ದೇಶದ ಅಭಿಮಾನ ರಕ್ತಗತವಾಗಿರುತ್ತದೆ. ಆದರೆ ಆಯ್ಕೆಯ ಸ್ವಾತಂತ್ರ್ಯ ಇರುವಾಗ ತಮ್ಮ ಅನುಕೂಲಕರ ವಸ್ತುಗಳನ್ನು ಖರೀದಿಸುವುದಕ್ಕೆ ಮೊದಲ ಆಧ್ಯತೆ ನೀಡುತ್ತಾರೆ. ಅದರ ಒಳ ಅರ್ಥ ಭಾರತದಲ್ಲಿ ‌ತಯಾರಾಗುವ ವಸ್ತುಗಳು ಜನರ ಅನುಕೂಲಕ್ಕೆ ತಕ್ಕಂತೆ ಇರಬೇಕು ಮತ್ತು ಅವರ ಮನ ಗೆಲ್ಲಬೇಕು. ಖಾದಿ ಬಟ್ಟೆಗಳೇ ಇರಲಿ, ಎಳನೀರೆ ಇರಲಿ, ಫೀಜಾ ಇರಲಿ, ರೊಟ್ಟಿ ಇರಲಿ, ಮುದ್ದೆ ಇರಲಿ, ಲಿಪ್ ಸ್ಟಿಕ್ ಇರಲಿ ಜನರಿಗೆ ಇಷ್ಟವಾಗುವಂತಿದ್ದರೆ ಅವರೇ ಮುಗಿಬಿದ್ದು ಕೊಳ್ಳುತ್ತಾರೆ. ಇಲ್ಲದಿದ್ದರೆ ಎಷ್ಟೇ ಅಭಿಯಾನ ಮಾಡಿದರು ಅದು ತಾತ್ಕಾಲಿಕ.

ನಾವು ಆತ್ಮವಂಚಕರಾಗದೆ, ಭಾವುಕರಾಗದೆ, ವಾಸ್ತವ ನೆಲೆಯಲ್ಲಿ ಒಳ್ಳೆಯ ಸಾಮರ್ಥ್ಯದ ವ್ಯಕ್ತಿತ್ವ ರೂಪಿಸಿಕೊಂಡರೆ ನಾವು ತಯಾರಿಸುವ ವಸ್ತುಗಳು ಸಹ ಉತ್ತಮ ಗುಣಮಟ್ಟ ಹೊಂದುತ್ತವೆ, ಮಾರುಕಟ್ಟೆಯೂ‌ ವಿಸ್ತಾರವಾಗುತ್ತದೆ, ಸ್ವದೇಶಿ ಚಳವಳಿಯೂ ಯಶಸ್ವಿಯಾಗುತ್ತದೆ. ಕೇವಲ ಬಾಯಿ ಮಾತಿನ ಮುಖವಾಡದಲ್ಲಿ ಎಲ್ಲವನ್ನೂ ಗೆಲ್ಲಲಾಗುವುದಿಲ್ಲ.   ಮಾನವೀಯ ಮುಖದ ಉತ್ತಮ ಗುಣಮಟ್ಟದ ವಿಶ್ವದರ್ಜೆಯ ಸ್ವದೇಶಿ ಚಳವಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ