ಸ್ವಪ್ನ ಸುಂದರಿ ( ಕವನ ಸಂಕಲನ)

ಸ್ವಪ್ನ ಸುಂದರಿ ( ಕವನ ಸಂಕಲನ)

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀಮತಿ ರತ್ನಾ ಭಟ್
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-575015
ಪುಸ್ತಕದ ಬೆಲೆ
ರೂ: 50/-, ಪುಟಗಳು:44, ಮುದ್ರಣ: 2024

ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ: ಬಂಟ್ವಾಳ ತಾಲೂಕಿನ ವಿಟ್ಲದ ಸಮೀಪ ಅಡ್ಯನಡ್ಕ ಎಂಬಲ್ಲಿ ವಾಸವಾಗಿರುವ ಶ್ರೀಮತಿ ರತ್ನಾ ಭಟ್ ರವರು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ. ಯಕ್ಷಗಾನ ಹವ್ಯಾಸದ ಜೊತೆಗೆ ಉತ್ತಮ ವಾಗ್ಮಿಯಾಗಿರುವ ಇವರು ಸಾಹಿತ್ಯದಲ್ಲೂ ಕೃಷಿ ಮಾಡಿ ಸಮರ್ಥರು ಎನಿಸಿಕೊಂಡಿದ್ದಾರೆ. ಹಲವಾರು ಪ್ರಕಾರಗಳಲ್ಲಿ ಬರೆಯಬಲ್ಲ ಈಕೆ ಸ್ವಪ್ನ ಸುಂದರಿ ಕವನ ಸಂಕಲನದ ಮೂಲಕ ಕೃತಿಕಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಸಂತಸದ ವಿಚಾರ. ಬಹಳಷ್ಟು ವರ್ಷಗಳಿಂದ ಬರೆಯುತ್ತಿದ್ದರೂ 2023 ರಲ್ಲಷ್ಟೇ ಇವರ ಚೊಚ್ಚಲ ಕೃತಿ ಪ್ರಕಟಗೊಂಡಿದ್ದು ತಡವಾದರೂ ಸಾಹಿತ್ಯ ಭಂಡಾರವನ್ನು ಮತ್ತಷ್ಟು ಶ್ರೀಮಂತಗೊಳಿಸಿತು. ಇವರ ಪತಿ ಶ್ರೀ ಕೃಷ್ಣ ಭಟ್ ರವರು ಕೂಡಾ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕರಾಗಿದ್ದು ಯಕ್ಷಗಾನ ಕಲಾವಿದರಾಗಿದ್ದು ರತ್ನಾ ಭಟ್ ರವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಂತಾಯಿತು. ಅದರಂತೆ ಈಗ 30 ಕವನಗಳನ್ನು ಒಳಗೊಂಡಿರುವ ಕೃತಿ ಸ್ವಪ್ನ ಸುಂದರಿ ಓದುಗರಿಗೆ ಲಭ್ಯವಾದುದು ವಿಶೇಷವೇ ಹೌದು.

ಈ ಸ್ವಪ್ನ ಸುಂದರಿ ಕೃತಿಯಲ್ಲಿನ ಆರಂಭದ ಕವನವು ಜೊತೆಯಾದೆ ಇನಿಯ ಶೀರ್ಷಿಕೆಯಡಿ ಬಹಳ ಸೊಗಸಾಗಿ ಮೂಡಿ ಬಂದಿರುವುದನ್ನು ಕಾಣಬಹುದು.

ಕವಿದಿರುವ ಇರುಳಲ್ಲಿ

ಹೊಂಗಿರಣ ಮೂಡಿಸಲು

ಕೈ ಹಿಡಿದು ನಡೆಸುತಲಿ

ಜೊತೆಯಾದೆ ಇನಿಯ...

ಎಂಬಲ್ಲಿ ಬಾಳಿನಲ್ಲಿ ಹೊಂಗಿರಣ ಮೂಡಿಸಿ ಬಾಳನ್ನು ಬೆಳಗಲು ನೀನು ನನ್ನ ಕೈ ಹಿಡಿದೆ, ಆ ಮೂಲಕ ನನ್ನ ನಡೆಸುತ್ತಾ ನನ್ನ ಜೊತೆಯಾದೆ ನೀನು ಎಂದು ಹೇಳುವಲ್ಲಿ ಮದುವೆ ಎಂಬ ಬಂಧದ ಮಹತ್ವ ಹಾಗೂ ಜೊತೆಯಾದ ಬಾಳಿನಲ್ಲಿ ಮೂಡುವ ಹೊಂಗಿರಣವನ್ನು ಕಣ್ಮುಂದೆ ಕಟ್ಟಿ ಕೊಟ್ಟಿದ್ದಾರೆ.

ಭಾರತೀಯರಾದ ನಾವು ದೇಶಭಕ್ತಿ ಮೆರೆಯದಿದ್ದರೆ ಹೇಗೆ? ಅದರಲ್ಲೂ ಕವಯಿತ್ರಿಯಾಗಿ ಲೇಖನಿ ಹಿಡಿದರೆ ತಾಯಿ ಭಾರತಿ ಕುರಿತಾಗಿ ಹಾಡು ತಂತಾನೇ ಹರಿದು ಬರುತ್ತದೆ ಎಂಬುದನ್ನು ಇಲ್ಲಿ ನಮ್ಮ ತಾಯಿ ಭಾರತಿ ಕವನದ ಮೂಲಕ ಸ್ಪಷ್ಟಪಡಿಸಿದ್ದಾರೆ. 

ನಮ್ಮ ದೇಶ ಭಾರತ ಕೂಗಿ ಕೂಗಿ ಹೇಳುತ

ನಲಿ ನಲಿದು ಪಾಡುತ ಹೆಮ್ಮೆಯಿಂದ ಬೀಗುತ

ಭರತ ಕುವರ ಆಳಿದ ಸಿಂಧೂ ನೆಲದ ಸಂಸ್ಕೃತಿ

ಸಂಸ್ಕಾರ ನೆಲ ಜಲದ ಪುಣ್ಯ ಭೂಮಿ ಸಹಮತ

ಎಂದು ಹೇಳುತ್ತಾ ದಾಸ್ಯವನ್ನು ಹೊಡೆದೋಡಿಸಿ ತಿರಂಗಾ ವನ್ನು ಹಾರಿಸಿ ಸ್ವಾತಂತ್ರ್ಯದ ಕೀರುತಿ ಮೆರೆಯುವೆವು ಎಂದು ಹೇಳಿದ್ದಾರೆ. ಅರ್ಥಪೂರ್ಣ ಕವನ.

ಸ್ವತಃ ಓರ್ವ ತಾಯಿಯಾಗಿ ಗುರುವಿನ ಸ್ಥಾನ ಏನು ಎಂಬುದನ್ನು ಚೆನ್ನಾಗಿ ಅರಿತಿರುವ ಇವರು ನಮನವೆನುವೆ ಗುರುವಿಗೆ ಎಂಬ ಕವನದ ಮೂಲಕ ತಾಯಿಯೇ ಮೊದಲ ಗುರು ಎಂದು ಬಹಳ ಸೊಗಸಾಗಿ ವರ್ಣಿಸಿದ್ದಾರೆ.

ಜನುಮಕೊಟ್ಟ ನನ್ನ ತಾಯಿ

ಮೊದಲ ಗುರುವು ಬಾಳಿಗೆ

ವಿದ್ಯೆ ಕಲಿಸಿ ಬುದ್ಧಿ ಪೇಳ್ದ

ನಮನವೆನುವೆ ಗುರುವಿಗೆ...

ಜನ್ಮ ಕೊಟ್ಟು ಬೆಳೆಸಿದ್ದು ಮಾತ್ರವಲ್ಲ, ಆರಂಭದಲ್ಲಿ ತೊದಲು ನುಡಿಗಳನ್ನು ಆಲಿಸಿ, ಸರಿ ತಪ್ಪುಗಳನ್ನು ಎತ್ತಿ ತೋರಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ ಅಲ್ಲವೇ?

ಈ ಜೀವನವೇ ಮೂರು ದಿನದ ಸಂತೆ ಆಗಿರುವಾಗ ಸುಮ್ಮನೆ ಹಾರಾಟ ಯಾಕೆ ಎಂದು ಕೇಳುತ್ತಾರೆ ಮೂರು ದಿನದ ನಾಟಕ ಕವನದಲ್ಲಿ,

ಮೂರು ದಿನದ ನಾಟಕದ ವೇದಿಕೆ

ಆರು ದಿನದ ಹಾರಾಟ ಯಾಕೆ

ನೀನು ನೀನಾಗಿ ನಾನು ನಾನಾಗಿ ಇದ್ದರೆ

ಬದುಕಿನ ಹಾದಿಯಲಿ ನೆಮ್ಮದಿಯ ಆಸರೆ....

ಹೌದು. ಈ ಬಾಳು ಎಂಬುದು ಮೂರುದಿನಗಳ ನಾಟಕ ಅಷ್ಟೇ.. ಈ ನರಜನ್ಮ ಎಂದಿಗೂ ಶಾಶ್ವತ ಅಲ್ಲ. ಹುಟ್ಟಿದವ ಸಾಯಲೇಬೇಕು ಹಾಗಿರುವಾಗ ನಾನು ನಾನು ಎಂದು ಹಾರಾಡಿದರೆ ಫಲವಿಲ್ಲ. ಇದ್ದದ್ದನ್ನು ಇದ್ದಂತೆ ಅನುಭವಿಸಿದರೆ ಮಾತ್ರ ನೆಮ್ಮದಿ ಸಿಗುತ್ತದೆ ಎಂಬ ತತ್ವವನ್ನೇ ಇಲ್ಲಿ ಪ್ರತಿಪಾದಿಸಿದ್ದಾರೆ. 

ಸಾಕ್ಷರ ದೀವಿಗೆ ಕವನದಲ್ಲಿ ಓದು ಎಷ್ಟು ಮುಖ್ಯ ಎಂಬುದನ್ನು ಸಾರಿದ್ದಾರೆ.

ಹೆಬ್ಬೆಟ್ಟು ಮುದ್ರೆಯ ಅಳಿಸೋಣ

ರುಜುವನು ಹಾಕುತ ನಲಿಯೋಣ

ಪುಸ್ತಕವೆಂದರೆ ಗೆಳೆಯನ ಹಾಗೆ

ಮಸ್ತಕದಲ್ಲಿ ತುಂಬುತ ಬಾಗೆ...

ಎಂದು ಹೇಳುತ್ತಾ ಅಭಿವೃದ್ಧಿ ಪಥದಲ್ಲಿ ಸಾಗಬೇಕು, ವಯಸ್ಸಿನ ಹಂಗು ಇಲ್ಲದೆ ಮಕ್ಕಳೊಂದಿಗೆ ಸೇರಿ ತಿಳಿಯಬೇಕು, ಪ್ರಗತಿಯಿಂದ ಜೀವನ ಸುಗಮವಾಗುವುದು, ಮೋಸ ಹೋಗುವುದನ್ನು ತಡೆಯಬಹುದು ಎಂದು ವಿಧ ವಿಧವಾಗಿ ಕಲಿಕೆಯನ್ನು ಪ್ರೋತ್ಸಾಹಿಸಿದ್ದಾರೆ.

ಹೀಗೆ ಇಲ್ಲಿರುವ ಎಲ್ಲಾ ಮೂವತ್ತು ರಚನೆಗಳು ಕೂಡ ವೈವಿಧ್ಯಮಯವಾಗಿ ಮೂಡಿ ಬಂದಿದ್ದು ಭಕ್ತಿ ರಚನೆಗಳಿಂದ ಆರಂಭಗೊಂಡು ದೇಶಭಕ್ತಿ, ವ್ಯಕ್ತಿ ಚಿತ್ರಣ, ರೈತ, ಮಾನವೀಯ ಮೌಲ್ಯಗಳು, ಪ್ರಕೃತಿಯ ಕುರಿತಾದ ಸುಂದರ ಕವನಗಳಿವೆ. ಇದು ಚೊಚ್ಚಲ ಕೃತಿಯಾದರೂ ಓದುಗರನ್ನು ತಣಿಸಬಲ್ಲುದು. ಈ ಕೃತಿಗೆ ಹಾ ಮ ಸತೀಶ ರವರು ಮುನ್ನುಡಿ ಬರೆದಿದ್ದು, ಪಿ. ವಿ ಪ್ರದೀಪ್ ಕುಮಾರ್ ಬೆನ್ನುಡಿ ಒದಗಿಸಿದ್ದಾರೆ. ಕಥಾಬಿಂದು ಪ್ರಕಾಶನದಿಂದ ಮುದ್ರಣಗೊಂಡು ಪ್ರಕಟವಾದ ಈ ಕೃತಿಯು ಕವಯಿತ್ರಿಗೆ ಯಶಸ್ಸನ್ನು ತಂದುಕೊಡಲಿ ಎಂದು ಹಾರೈಸುತ್ತೇನೆ..

-ಹರಿನರಸಿಂಹ ಉಪಾಧ್ಯಾಯ