ಸ್ವಯಂ ಮೂಡಿದ ಪ್ರಜ್ಞೆ

ಸ್ವಯಂ ಮೂಡಿದ ಪ್ರಜ್ಞೆ

ಬೆಳಿಗ್ಗೆ ಬೇಗ ಬೇಗನೇ ಹೆಜ್ಜೆ ಹಾಕುತ್ತಾ ಶಾಲೆಗೆ ಬರುತ್ತಿದ್ದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಬೆಳಿಗ್ಗೆ ಬೇಗನೇ ಆರಂಭವಾಗುತ್ತದೆ. ಅಂದು ನನಗೆ ವಿಶೇಷ ತರಗತಿ ಇದ್ದುದರಿಂದ ನನ್ನ ನಡಿಗೆ ವೇಗವಾಗಿಯೇ ಇತ್ತು. ಶಾಲೆಯ ಎದುರಿನ ಮೆಟ್ಟಿಲು ಹತ್ತಿಕೊಂಡು ನಾನು ಒಳಗೆ ಪ್ರವೇಶಿಸುತ್ತಿದ್ದಂತೆ ಮುದ್ದೆಯಾದ ಕಾಗದದ ದೊಡ್ಡ ಚೂರೊಂದು ಮೆಟ್ಟಿಲ ಮೇಲೆ ಬಿದ್ದಿರುವುದನ್ನು ನೋಡಿದೆ. ಬಾಗಿ ಅದನ್ನು ಹೆಕ್ಕಲು ಹೋದವಳು ಯಾಕೋ ಬೇಡವೆಂದೆನಿಸಿ ಅದನ್ನು ಅಲ್ಲಿಯೇ ಬಿಟ್ಟು ಸೀದಾ ಸ್ಟಾಫ್ ರೂಮಿನ ಒಳಗೆ ಹೋದೆ. ಆ ಮೆಟ್ಟಿಲು ಹತ್ತಿಕೊಂಡು ಯಾವೆಲ್ಲ ವಿದ್ಯಾರ್ಥಿಗಳು ಬರುತ್ತಾರೆ? ಹಾಗೂ ಆ ಕಾಗದದ ಚೂರನ್ನು ಯಾರು ಹೆಕ್ಕುತ್ತಾರೆ? ನೋಡೇ ಬಿಡಬೇಕು ಎಂದು ಮೆಲ್ಲನೆ ಕಿಟಕಿಯಿಂದಲೇ ವೀಕ್ಷಣೆ ಮಾಡುತ್ತಾ ಕುಳಿತೆ. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬರುತ್ತಿರುವುದು ಕಾಣುತ್ತಿತ್ತು. ಒಬ್ಬ ಆ ಕಾಗದದ ಪಕ್ಕದಲ್ಲೇ ನಡೆದುಕೊಂಡು ಹೋದ. ಮತ್ತೊಬ್ಬನೂ, ಮತ್ತೊಬ್ಬಳೂ ಹೋದರು. ಕಸ ಮಾತ್ರ ಅಲ್ಲೇ ಇತ್ತು. ಹಾಗೆ ನಾನು ಅಲ್ಲೇ ಸ್ವಲ್ಪ ಹೊತ್ತು ಕುಳಿತೆ. ಇವತ್ತು ಈ ಕಸವನ್ನು ಯಾರು ಹೆಕ್ಕುತ್ತಾರೆ ನೋಡಲೇಬೇಕೆಂಬ ಕುತೂಹಲವೂ ನನ್ನ ಜೊತೆಯಾಯಿತು. ಯಾವುದೋ ಒಬ್ಬ ವಿದ್ಯಾರ್ಥಿ ನೋಟ್ಸ್ ತೆಗೆದುಕೊಳ್ಳಲು ಸ್ಟಾಫ್ ರೂಮಿನ ಒಳಗೆ ಬಂದ. ನನ್ನ ಗಮನ ಆ ಕಡೆ ಹೋಯಿತು. ಅವನಿಗೆ ನೋಟ್ಸ್ ಕೊಟ್ಟು ನಾನು ಕಿಟಕಿ ಕಡೆಗೆ ತಿರುಗುವಷ್ಟರಲ್ಲಿ ಆ ಕಸವನ್ನು ಯಾರೋ ಹೆಕ್ಕಿದ್ದರು. 

ಅದೇ ಹೊತ್ತಿಗೆ ನನ್ನ ಸಹೋದ್ಯೋಗಿ ಸ್ಟಾಫ್ ರೂಮಿನ ಒಳಗೆ ಬಂದರು. ನಾನು ಅವರಲ್ಲಿ 'ನೀವು ಅಲ್ಲಿ ಒಂದು ಕಾಗದದ ಚೂರನ್ನು ನೋಡಿದ್ರಾ? ಎಂದು ಕೇಳುವಾಗ 'ಇಲ್ಲ' ಎಂದು ಹೇಳಿದರು. ನಾನು ಆ ಮೆಟ್ಟಿಲ ಪಕ್ಕದಲ್ಲೇ ಇದ್ದ ತರಗತಿಯ ಕೋಣೆಯೊಳಗೆ ಹೋದೆ. ವಿದ್ಯಾರ್ಥಿಗಳೆಲ್ಲ ಬರೆಯುತ್ತಾ ಕುಳಿತಿದ್ದರು. ಆ ತರಗತಿಯ ಮೂಲೆಯಲ್ಲಿದ್ದ ಕಸದ ಬುಟ್ಟಿ ನೋಡಿದೆ. ಅರೆ! ಆ ಕಾಗದದ ಚೂರು ಅದರಲ್ಲಿತ್ತು. ವಿದ್ಯಾರ್ಥಿಗಳಲ್ಲಿ ನಾನು 'ಈ ಕಸವನ್ನು ಇಲ್ಲಿ ಯಾರು ತಂದು ಹಾಕಿದ್ದು ಮಕ್ಕಳೇ? ಎಂದು ಕಾಗದವನ್ನು ತೋರಿಸಿ ಕೇಳಿದಾಗ ಒಬ್ಬಳು ಹುಡುಗಿ 'ನಾನು ಟೀಚರ್' ಎನ್ನುತ್ತಾ ನಿಂತುಕೊಂಡಳು. "ನಿನಗೆ ಈ ಕಸ ಹೆಕ್ಕಲು ಯಾರು ಹೇಳಿದ್ದು?" ಎಂದು ಕೇಳಿದಾಗ "ಯಾರೂ ಹೇಳಿಲ್ಲ, ನಾನೇ ಹೆಕ್ಕಿದೆ ಟೀಚರ್" ಎಂದು ಹೇಳಿದಳು. 'ಕಸವನ್ನು ಕಂಡಾಗ ಹೆಕ್ಕಬೇಕೆಂಬ' ಸ್ವಯಂ ಮೂಡಿದ 'ಪ್ರಜ್ಞೆ' ಯನ್ನು ಕಂಡು ಆ ವಿದ್ಯಾರ್ಥಿನಿಯ ಮೇಲೆ ಪ್ರೀತಿ ಮಾತ್ರವಲ್ಲದೆ ಅಭಿಮಾನದ ಭಾವವೊಂದು ಆ ಕ್ಷಣಕ್ಕೆ ನನ್ನಲ್ಲಿ ಹುಟ್ಟಿಕೊಂಡಿತು. ಅಂದಿನ ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ಈ ವಿಷಯವನ್ನು ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಸ್ತಾಪಿಸಲಾಯಿತು. ಅವಳ ಪ್ರಜ್ಞೆಯನ್ನು ಗೌರವಿಸಿ ಒಂದು ಪೆನ್ ಅನ್ನು ಕಾಣಿಕೆಯಾಗಿ ನೀಡಲಾಯಿತು.

ಅಂದಿನ ಬೆಳಗು ಹೊಸ ಪ್ರಜ್ಞೆಯೊಂದನ್ನು ಎಲ್ಲರಲ್ಲಿಯೂ ಮೂಡಿಸಿತ್ತು. ಶಿಕ್ಷಕರಾದ ನಾವು ನಮ್ಮ ವಿದ್ಯಾರ್ಥಿಗಳ ಇಂತಹ ಸೂಕ್ಷ್ಮ ಪ್ರಜ್ಞೆಗಳನ್ನು ಗುರುತಿಸಿ ಆ 'ಪ್ರಜ್ಞೆ' ಯನ್ನು ಗೌರವಿಸೋಣ. ಧನ್ಯವಾದಗಳು. 

-ಹಸೀನ ಪರ್ವೀನ್ ಹೆಚ್ (ಹಸೀನ ಮಲ್ನಾಡ್), ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ