ಸ್ವರ್ಗದಿಂದ ಭೂಮಿಗಿಳಿದ ಪಾರಿಜಾತ
ಪಾರಿಜಾತದ ಹೂವು ತುಂಬಾನೇ ವಿಭಿನ್ನ. ಈ ಪಾರಿಜಾತ ಸಸ್ಯಕ್ಕೆ ಸ್ವರ್ಗದಿಂದ ಭೂಮಿಗೆ ಬಂದ ಸಸ್ಯ ಎಂಬ ಹೆಸರಿದೆ. ಇದರ ಪೌರಾಣಿಕ ಹಿನ್ನಲೆಯ ಬಗ್ಗೆ ಹಾಗೂ ದೇಶದಲ್ಲಿರುವ ಏಕೈಕ ಪುರಾತನ ಪಾರಿಜಾತ ವೃಕ್ಷದ ಬಗ್ಗೆ ತಿಳಿದುಕೊಳ್ಳುವ. ಈ ವೃಕ್ಷವನ್ನು ಶ್ರೀಕೃಷ್ಣನು ತನ್ನ ಪತ್ನಿ ಸತ್ಯಭಾಮಾಳಿಗಾಗಿ ಸ್ವರ್ಗದಿಂದ ತಂದಿದ್ದನು ಎಂಬ ಪ್ರತೀತಿ ಇದೆ.
ಶ್ರೀಕೃಷ್ಣ ಸತ್ಯಭಾಮಾಳನ್ನು ಮದುವೆಯಾದ ಬಳಿಕ ಒಮ್ಮೆ ನಾರದ ಮುನಿಗಳು ದ್ವಾರಕೆಗೆ ಬರುತ್ತಾರೆ. ಅವರು ಬರುವಾಗ ಸ್ವರ್ಗದ ಪುಷ್ಪ ಎಂದೇ ಖ್ಯಾತಿ ಪಡೆದ ಪಾರಿಜಾತದ ಒಂದು ಹೂವನ್ನು ತಂದಿರುತ್ತಾರೆ. ಆ ಸ್ವರ್ಣ ಹೂವು ಬಹಳ ಆಕರ್ಷಕವಾಗಿರುತ್ತದೆ. ನಾರದ ಮುನಿಗಳು ಈ ಹೂವನ್ನು ಕೃಷ್ಣನಿಗೆ ಕೊಡುತ್ತಾರೆ. ಕೃಷ್ಣನು ಹೂವನ್ನು ತನ್ನ ಪತ್ನಿ ರುಕ್ಮಿಣಿಗೆ ಕೊಡುತ್ತಾನೆ. ನಂತರ ಕೃಷ್ಣನು ಸತ್ಯಭಾಮಾಳ ಅಂತಃಪುರಕ್ಕೆ ಹೋದಾಗ ಸತ್ಯಭಾಮೆ ಮುನಿಸಿಕೊಂಡಿರುತ್ತಾಳೆ. ಕಾರಣ ಕೇಳಲಾಗಿ ಸತ್ಯಭಾಮಾ ಹೇಳುತ್ತಾಳೆ" ನೀವು ಸ್ವರ್ಣ ಪುಷ್ಪವನ್ನು ಅಕ್ಕಳಾದ ರುಕ್ಮಿಣಿಗೆ ಕೊಟ್ಟಿರಿ. ನನಗೆ ಕೊಡಲಿಲ್ಲ. ನೀವು ನನಗಿಂತ ಜಾಸ್ತಿ ಅವರನ್ನೇ ಪ್ರೀತಿಸುವುದು ಎನ್ನುತ್ತಾಳೆ. ಕೃಷ್ಣನಿಗೋ ಉಭಯ ಸಂಕಟ. ಬಿಸಿ ತುಪ್ಪ ನುಂಗಿದ ಅನುಭವ . ಉಗುಳುವಂತಿಲ್ಲ, ನುಂಗುವಂತಿಲ್ಲ.
ತಾನು ಸ್ವರ್ಣ ಪಾರಿಜಾತವನ್ನು ರುಕ್ಮಿಣಿಗೆ ಕೊಟ್ಟದ್ದು ಸತ್ಯಭಾಮಾಳಿಗೆ ಇಷ್ಟು ಬೇಗ ಗೊತ್ತಾದದ್ದು ಹೇಗೆ? ಎಂದು ಅಚ್ಚರಿಯಾಗುತ್ತದೆ. ತನ್ನ ದಿವ್ಯ ದೃಷ್ಟಿಯಿಂದ ನೋಡಲಾಗಿ ಇದು ಕಲಹಪ್ರಿಯ ನಾರದ ಮುನಿಗಳದ್ದೇ ಕಾರುಬಾರು ಎಂದು ಅರ್ಥವಾಗುತ್ತದೆ. ಶ್ರೀಕೃಷ್ಣನಿಗೆ ಪಾರಿಜಾತ ಹೂವನ್ನು ನೀಡಿ ನಂತರ ಹಿಂದಿರುಗುವಾಗ ನಾರದ ಮುನಿಗಳು ಸತ್ಯಭಾಮಳ ಕಿವಿಗೆ ಈ ವಿಷಯವನ್ನು ಹೇಳಿಹೋಗಿದ್ದರು. ನಾರದ ಮುನಿಗಳು ಏನೇ ಮಾಡಲಿ ಅದರ ಹಿಂದೆ ಒಂದು ಕಾರಣ ಇದ್ದೇ ಇರುತ್ತದೆ. ಈ ವಿಷಯ ಗೊತ್ತಾಗಿ ಕೃಷ್ಣ ಸತ್ಯಭಾಮೆಗೆ ಸಮಾಧಾನ ಮಾಡುತ್ತಾ ‘ರುಕ್ಮಿಣಿಗೆ ನಾನು ಹೂವು ಮಾತ್ರ ಕೊಟ್ಟೆ. ನಿನ್ನ ತೋಟದಲ್ಲಿ ಅದರ ಗಿಡವನ್ನೇ ತಂದು ನೆಡುವೆ. ಇದರಿಂದ ನಿನಗೆ ದಿನಾಲೂ ಈ ಸುವರ್ಣ ಪಾರಿಜಾತ ಪುಷ್ಪವು ಪ್ರಾಪ್ತವಾಗುತ್ತದೆ.’ ಈ ಮಾತಿನಿಂದ ಸತ್ಯಭಾಮೆ ಪ್ರಸನ್ನಳಾಗುತ್ತಾಳೆ. ಈ ಪಾರಿಜಾತದ ಸಸ್ಯವು ಇಂದ್ರ ಲೋಕದಲ್ಲಿತ್ತು. ಕ್ಷೀರ ಸಾಗರ ಮಥನ (ಸಮುದ್ರ ಮಥನ) ದ ಸಂದರ್ಭದಲ್ಲಿ ಈ ಸಸ್ಯ ಉದ್ಭವವಾಗಿತ್ತು. ಇದನ್ನು ಇಂದ್ರನು ಸ್ವರ್ಗಕ್ಕೆ ತೆಗೆದುಕೊಂಡು ಹೋಗಿ ನೆಟ್ಟಿದ್ದನು. ಅವನು ಅಷ್ಟು ಸುಲಭದಲ್ಲಿ ಕೃಷ್ಣನಿಗೆ ಕೊಟ್ಟಾನೆಯೇ?
ಕೃಷ್ಣನು ತನ್ನ ವಾಹನವಾದ ಗರುಡನನ್ನು ಏರಿ ಸ್ವರ್ಗ ಲೋಕಕ್ಕೆ ಪ್ರಯಾಣ ಬೆಳೆಸುತ್ತಾನೆ. ಅಲ್ಲಿ ಇಂದ್ರನ್ನು ಭೇಟಿಯಾಗಿ ಪಾರಿಜಾತ ಸಸ್ಯ ತನಗೆ ನೀಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಇಂದ್ರನು ನಿರಾಕರಿಸುತ್ತಾನೆ. ಕಡೆಗೆ ಇಂದ್ರನ ಜೊತೆ ಯುದ್ಧ ಮಾಡಿ ಪಾರಿಜಾತ ಸಸ್ಯವನ್ನು ತಂದು ಸತ್ಯಭಾಮಳ ಉದ್ಯಾನದಲ್ಲಿ ನೆಡುತ್ತಾನೆ. ಹೀಗೆ ಪಾರಿಜಾತ ಸಸ್ಯ ಭೂಮಿಗೆ ಬರುತ್ತದೆ. ಹೀಗೆ ನೆಟ್ಟ ಗಿಡದ ಹೂವುಗಳು ಸತ್ಯಭಾಮಾಳ ಉದ್ಯಾನದ ಹತ್ತಿರದ ಅಂಗಣದೊಳಗೆ ಬೀಳುತ್ತವೆ. ಅದು ರುಕ್ಮಿಣಿಯ ಜಾಗವಾಗಿರುತ್ತದೆ. ಈಗಲೂ ನೀವು ಗಮನಿಸಿದರೆ ಪಾರಿಜಾತ ಹೂವು ಹತ್ತಿರ ಬದಿಯ ಆವರಣದೊಳಗೆ ಹೆಚ್ಚಿಗೆ ಬೀಳುತ್ತದೆ.
(ಪಾರಿಜಾತ ಸಸ್ಯವು ಭೂಮಿಗೆ ಬಂದ ಬಗ್ಗೆ ಹಲವಾರು ಕಥೆಗಳಿವೆ. ಕೆಲವು ಕಥೆಗಳ ಪ್ರಕಾರ ಅರ್ಜುನನು ಸ್ವರ್ಗದಿಂದ ತಂದ ಸಸ್ಯವಂತೆ, ಕೆಲವರ ಪ್ರಕಾರ ಕೃಷ್ಣನು ಸ್ವರ್ಗದಲ್ಲಿದ್ದ ಪಾರಿಜಾತ ಸಸ್ಯದ ಗೆಲ್ಲೊಂದನ್ನು ಮುರಿದು ತಂದು ಭೂಮಿಯಲ್ಲಿ ನೆಟ್ಟನಂತೆ, ಕೆಲವರ ಪ್ರಕಾರ ಕುಂತಿಯ ಮರಣಾ ನಂತರ ಅವಳನ್ನು ಸುಟ್ಟ ಮೇಲೆ ಉಳಿದ ಬೂದಿಯಿಂದ ಹುಟ್ಟಿದ ಸಸ್ಯವಂತೆ.)
ಕೃಷ್ಣನು ಆಗ ತಂದು ನೆಟ್ಟ ಸಸ್ಯ ಈಗ ಮರವಾಗಿ ಇನ್ನೂ ಬದುಕಿದೆ ಎಂದು ಕೆಲವೆಡೆ ನಂಬುತ್ತಾರೆ. ಈ ಮರವು ಕಿಂತೂರು (ಕಿಂಟೂರು) ಗ್ರಾಮದಲ್ಲಿದೆ. ಈ ಗ್ರಾಮವು ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಲಕ್ನೋದಿಂದ ೭೦ ಕಿ.ಮೀ ದೂರವಿದೆ. ಬಾರಬಂಕಿ ಎಂಬ ಊರಿನ ಹತ್ತಿರವಿರುವ ಈ ಗ್ರಾಮದಲ್ಲಿರುವ ಪಾರಿಜಾತ ಮರವು ಬೃಹದಾಕಾರವಾಗಿ ಬೆಳೆದಿದೆ. ಪಾಂಡವರ ತಾಯಿ ಕುಂತಿಯ ನೆನಪಿಗಾಗಿ ಈ ಊರಿಗೆ ಕಿಂತೂರು ಹೆಸರು ಬಂದಿದೆಯಂತೆ. ಇದನ್ನು ‘ಪರಿಜಾತ' ಮರವೆಂದೂ ಕರೆಯುತ್ತಾರೆ.
ಇಲ್ಲಿರುವ ಈ ಬೃಹದಾಕಾರ ಮರಕ್ಕೆ ದೈವಿಕ ಮಹತ್ವ ನೀಡಲಾಗಿದೆ. ಈ ಮರದಲ್ಲಿ ಹೂವು ಅರಳುವಾಗ ಬಿಳಿ ವರ್ಣದಲ್ಲಿದ್ದು, ಸಮಯ ಕಳೆದಂತೆ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಮರವು ಯಾವುದೇ ಹಣ್ಣು ಅಥವಾ ಬೀಜವನ್ನು ಉತ್ಪಾದಿಸುವುದಿಲ್ಲ. ಆದುದರಿಂದ ಈ ಮರದಿಂದ ಬೇರೆ ಸಸಿಗಳ ಬೆಳವಣಿಗೆಯಾಗುತ್ತಿಲ್ಲ. ಈ ಮರದ ಸುತ್ತಳತೆಯು ೫೦ ಅಡಿಗಳಷ್ಟು ಇದೆ. ಎತ್ತರ ಸುಮಾರು ೪೫ ಅಡಿಗಳಿವೆ. ಈ ಮರವು ಸುಮಾರು ೧೦೦೦- ೨೦೦೦ ವರ್ಷಗಳಷ್ಟು ಹಳೆಯದ್ದು ಎಂದು ನಂಬುತ್ತಾರೆ. ಇದೊಂದು ಬಹಳ ಹಳೆಯ ಮರವಾದುದರಿಂದ ಭಕ್ತಾದಿಗಳು ಇದರಲ್ಲಿ ದೈವಿಕ ಅಂಶಗಳಿವೆ ಎಂದು ಪೂಜೆ ಮಾಡುತ್ತಾರೆ. ಇಡೀ ವಿಶ್ವದಲ್ಲಿ ಈ ಪ್ರಜಾತಿಯ ಏಕೈಕ ಮರ ಇದಾಗಿದೆ ಎಂದು ಜನರು ನಂಬುತ್ತಾರೆ. ಪಾರಿಜಾತದ ಬೇರೆ ಬೇರೆ ವಿಧಗಳ ಸಸ್ಯಗಳು ಭಾರತ ದೇಶದಾದ್ಯಂತ ಕಂಡು ಬರುತ್ತವೆ. ಆದರೆ ಬೃಹತ್ ಮರದ ಗಾತ್ರಕ್ಕೆ ಬೆಳೆದ ಪಾರಿಜಾತ ತಳಿ ಇದೊಂದೇ ಇರಬೇಕು.
ವಿ.ಸೂ: ನಮ್ಮಲ್ಲಿ ಹಲವಾರು ಬಗೆಯ ಪಾರಿಜಾತ ತಳಿಗಳು ಇವೆಯೆಂದು ಕೇಳಿದ್ದೇನೆ. ಮೇಲೆ ತಿಳಿಸಿದ ಮರದ ಹೂವಿಗೂ, ನಾವು ಸಾಮಾನ್ಯವಾಗಿ ನೋಡುತ್ತಿರುವ ಪಾರಿಜಾತ ಹೂವಿಗೂ ವ್ಯತ್ಯಾಸವಿದೆ (ಚಿತ್ರವನ್ನು ಗಮನಿಸಿ). ಇದರ ಬಗ್ಗೆ ವಿವರಗಳನ್ನು ತಿಳಿದವರು ದಯವಿಟ್ಟು ಪ್ರತಿಕ್ರಿಯಿಸಬಹುದು. ಇದರಿಂದ ನಿಮ್ಮ ಜ್ಞಾನವನ್ನು ಹಂಚಿಕೊಳ್ಳುವುದರ ಜೊತೆಗೆ ನಮಗೂ ಅಧಿಕ ಮಾಹಿತಿ ದೊರೆತಂತಾಗುವುದು.
ಚಿತ್ರ ೧. ಪುರಾತನ ದೈವಿಕ ಪಾರಿಜಾತ ವೃಕ್ಷ.
೨. ಪುರಾತನ ವೃಕ್ಷದಲ್ಲಿ ಅರಳುವ ಹೂವು
೩. ನಾವು ಸ್ಥಳೀಯವಾಗಿ ಗಮನಿಸುವ ಪಾರಿಜಾತದ ಹೂವು